ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ದೆಹಲಿಯ 5 ರೆಸ್ಟೋರೆಂಟ್‌ಗಳ ಮೇಲೆ ದೂರು ದಾಖಲು; ಸಿ.ಸಿ.ಪಿ.ಎ. ಕಟ್ಟುನಿಟ್ಟಿನ ಕ್ರಮ: ಜೋಶಿ ಮಾಹಿತಿ

ಗ್ರಾಹಕರಿಗೆ ಕಡ್ಡಾಯ ಸೇವಾ ಶುಲ್ಕ ವಿಧಿಸದಂತೆ ದೆಹಲಿ ಹೈಕೋರ್ಟ್‌ ಆದೇಶ ನೀಡಿದ್ದರೂ ಅದನ್ನು ನಿರ್ಲಕ್ಷಿಸಿದ 5 ರೆಸ್ಟೋರೆಂಟ್‌ಗಳ ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಕ್ರಮ ಕೈಗೊಂಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಸೇವಾ ಶುಲ್ಕ ಮರುಪಾವತಿಸದ ದೆಹಲಿಯ 5 ರೆಸ್ಟೋರೆಂಟ್‌ಗಳ ಮೇಲೆ ದೂರು ದಾಖಲು

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

Profile Siddalinga Swamy Apr 29, 2025 4:54 PM

ನವದೆಹಲಿ: ಗ್ರಾಹಕರಿಗೆ ಕಡ್ಡಾಯ ಸೇವಾ ಶುಲ್ಕ ವಿಧಿಸದಂತೆ ದೆಹಲಿ ಹೈಕೋರ್ಟ್‌ ಆದೇಶ ನೀಡಿದ್ದರೂ ಅದನ್ನು ನಿರ್ಲಕ್ಷಿಸಿದ 5 ರೆಸ್ಟೋರೆಂಟ್‌ಗಳ ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಕ್ರಮ ಕೈಗೊಂಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi)‌ ತಿಳಿಸಿದ್ದಾರೆ. ಗ್ರಾಹಕರಿಗೆ ಒತ್ತಾಯ ಪೂರ್ವಕವಾಗಿ ಸೇವಾ ಶುಲ್ಕ ವಿಧಿಸದಂತೆ ಹೈಕೋರ್ಟ್‌ ಸ್ಪಷ್ಟ ನಿರ್ದೇಶನ ನೀಡಿದ್ದರೂ ಸಹ ಕೇರ್‌ ಮಾಡದ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ರಾಷ್ಟ್ರ ರಾಜಧಾನಿಯ 5 ರೆಸ್ಟೋರೆಂಟ್‌ಗಳ ಮೇಲೆ ದೂರು ದಾಖಲಿಸಿ ಕ್ರಮಕ್ಕೆ ಮುಂದಾಗಿದೆ ಎಂದರು.

ಕಡ್ಡಾಯ ಸೇವಾ ಶುಲ್ಕ ವಿಧಿಸುವಿಕೆ ಮತ್ತು ಸೇವಾ ಶುಲ್ಕದ ಮೊತ್ತ ಮರುಪಾವತಿಸದ ಬಗ್ಗೆ ರೆಸ್ಟೋರೆಂಟ್‌ಗಳ ವಿರುದ್ಧ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ದೂರುಗಳನ್ನು ಸ್ವೀಕರಿಸಿದೆ. ದೆಹಲಿ ಹೈಕೋರ್ಟ್ ತೀರ್ಪಿನ ಹೊರತಾಗಿಯೂ ಕಡ್ಡಾಯ ಸೇವಾ ಶುಲ್ಕ ಮರುಪಾವತಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ CCPA ಬಿಗಿ ಕ್ರಮ ಕೈಗೊಂಡಿದೆ. ದೆಹಲಿಯ ಮಖ್ನಾ ಡೆಲಿ, ಕ್ಸೆರೋ ಕೋರ್ಟ್ಯಾರ್ಡ್, ಕ್ಯಾಸಲ್ ಬಾರ್ಬೆಕ್ಯೂ, ಚಾಯೋಸ್ ಮತ್ತು ಫಿಯೆಸ್ಟಾ ಬೈ ಬಾರ್ಬೆಕ್ಯೂ ನೇಷನ್ ರೆಸ್ಟೋರೆಂಟ್‌ಗಳಿಗೆ ಗ್ರಾಹಕ ರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ನೋಟಿಸ್‌ ನೀಡಿದ್ದು, ಕಡ್ಡಾಯ ಸೇವಾ ಶುಲ್ಕದ ಮೊತ್ತವನ್ನು ಮರುಪಾವತಿಸುವಂತೆ ನಿರ್ದೇಶನ ನೀಡಲಾಗಿದೆ.

ಯಾವುದೇ ನೆಪದಲ್ಲೂ ಸೇವಾ ಶುಲ್ಕ ವಿಧಿಸುವಂತಿಲ್ಲ

ಯಾವುದೇ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕಕ್ಕೆ ಗ್ರಾಹಕರನ್ನು ಒತ್ತಾಯಿಸಬಾರದು ಹಾಗೂ ಮತ್ತಿನ್ಯಾವುದೇ ರೂಪದಲ್ಲಿ ಗ್ರಾಹಕರಿಂದ ಸೇವಾಶುಲ್ಕ ಸಂಗ್ರಹಿಸಬಾರದು. ಬಿಲ್‌ನಲ್ಲಿ ಸ್ವಯಂ ಚಾಲಿತವಾಗಿ ಅಥವಾ ಪೂರ್ವ ನಿಯೋಜಿತವಾಗಿ ಸೇವಾ ಶುಲ್ಕ ಸೇರಿಸಬಾರದು ಎಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ 2022ರಲ್ಲೇ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ದೆಹಲಿ ಹೈಕೋರ್ಟ್‌ ಸಹ ಇದನ್ನು ಎತ್ತಿ ಹಿಡಿದಿದೆ.

ಈ ಸುದ್ದಿಯನ್ನೂ ಓದಿ | Pralhad Joshi: ಸಿಎಂ ದರ್ಪ, ಡಿಸಿಎಂ ಧಮ್ಕಿ ಎಲ್ಲೆ ಮೀರಿದೆ: ಪ್ರಲ್ಹಾದ್‌ ಜೋಶಿ ಆಕ್ರೋಶ

ಹೈಕೋರ್ಟ್‌ ಆದೇಶದ ಹೊರತಾಗಿಯೂ ಕೆಲವು ರೆಸ್ಟೋರೆಂಟ್‌ಗಳು ಗ್ರಾಹಕರಿಂದ ಪೂರ್ವಾನುಮತಿ ಪಡೆಯದೆ ಕಡ್ಡಾಯ ಸೇವಾ ಶುಲ್ಕ ಪಡೆಯುತ್ತಿರುವ ಬಗ್ಗೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (1915) ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ಹಕ್ಕುಗಳ ನಿರ್ಲಕ್ಷ್ಯ ಮತ್ತು ಗ್ರಾಹಕ ರಕ್ಷಣಾ ಕಾಯ್ದೆ 2019ರ ಉಲ್ಲಂಘನೆ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.