Muthappa Rai: ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ, ಆಸ್ಪತ್ರೆಗೆ ದಾಖಲು
ದಾಳಿ ವೇಳೆ ರಿಕ್ಕಿ ರೈ ಮೂಗು, ಕೈ ಭಾಗಕ್ಕೆ ಗಂಭೀರವಾದ ಗಾಯವಾಗಿದೆ. ತಕ್ಷಣವೇ ಆತನನ್ನು ಬಿಡದಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮಧ್ಯರಾತ್ರಿ 12.30ರ ಸುಮಾರಿಗೆ ಘಟನೆ ನಡೆದಿದೆ.


ಬೆಂಗಳೂರು: ರಾಮನಗರ (Ramanagara) ತಾಲೂಕಿನ ಬಿಡದಿ ಗೇಟ್ ಬಳಿ ಮಾಜಿ ಡಾನ್ ಮುತ್ತಪ್ಪ ರೈ (Muthappa Rai) ಪುತ್ರ ರಿಕ್ಕಿ ರೈ (Ricky Rai) ಮೇಲೆ ಗುಂಡಿನ (Shoot out) ದಾಳಿಯಾಗಿದೆ. ರಾತ್ರಿ ಮನೆ ಗೇಟ್ ಬಳಿ ಮುತ್ತಪ್ಪ ರೈ ಪುತ್ರನ ಮೇಲೆ ಫೈರಿಂಗ್ ಆಗಿದ್ದು, ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ರಿಕ್ಕಿ ರೈ ಮೇಲೆ ಒಂದು ಸುತ್ತು ಫೈರಿಂಗ್ ನಡೆಸಿ ದುಷ್ಕರ್ಮಿ ಪರಾರಿಯಾಗಿದ್ದಾನೆ. ಡ್ರೈವರ್ ಹಾಗೂ ಗನ್ ಮ್ಯಾನ್ ಜೊತೆಗೆ ಬಿಡದಿ ಮನೆಯಿಂದ ಬೆಂಗಳೂರಿಗೆ (Bengaluru) ತೆರಳುತ್ತಿದ್ದ ವೇಳೆ ಗುಂಡಿನ ದಾಳಿಯಾಗಿದೆ.
ದಾಳಿ ವೇಳೆ ರಿಕ್ಕಿ ರೈ ಮೂಗು, ಕೈ ಭಾಗಕ್ಕೆ ಗಂಭೀರವಾದ ಗಾಯವಾಗಿದೆ. ತಕ್ಷಣವೇ ಆತನನ್ನು ಬಿಡದಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮಧ್ಯರಾತ್ರಿ 12.30ರ ಸುಮಾರಿಗೆ ಘಟನೆ ನಡೆದಿದೆ. ಸ್ಥಳಕ್ಕೆ ಬಿಡದಿ ಠಾಣೆ ಪೊಲೀಸರು, ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ಮತ್ತು ಡಿವೈಎಸ್‌ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ದಾಳಿಯ ಹಿಂದಿನ ಕಾರಣ, ದುಷ್ಕರ್ಮಿಗಳ ಗುರುತು ಮತ್ತು ಈ ಘಟನೆಯ ಹಿನ್ನೆಲೆಯನ್ನು ಪತ್ತೆಹಚ್ಚಲು ತೀವ್ರ ಪ್ರಯತ್ನ ನಡೆಯುತ್ತಿದೆ.
ಇದು ರಿಕ್ಕಿ ರೈ ಗುಂಪಿನ ಒಳಗಿನವರೇ ನಡೆಸಿದ ದಾಳಿಯೇ, ವೃತ್ತಿ ದ್ವೇಷಿಗಳು ನಡೆಸಿದ ದಾಳಿಯೇ, ವೈಯಕ್ತಿಕ ದ್ವೇಷ ಇದರ ಹಿಂದಿದೆಯಾ ಎಂಬ ಎಲ್ಲ ಆಯಾಮಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ರಿಕ್ಕಿ ರೈ ಕೂಡ ತಂದೆ ಮುತ್ತಪ್ಪ ರೈಯಂತೆಯೇ ಸಾರ್ವಜನಿಕವಾಗಿ ಅತಿ ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಈತನ ಸುತ್ತ ಮುತ್ತ ಬಾಡಿಗಾರ್ಡ್‌ಗಳು, ಅಂಗರಕ್ಷಕರು ಸದಾ ಇರುವುದನ್ನು ಕಾಣಬಹುದು. ಈತ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಾನೆ ಎನ್ನಲಾಗಿದೆ.
ಮನೆಯ ಮುಂಭಾಗದ ಮುಖ್ಯ ರಸ್ತೆಗೆ ಕಾರು ಪ್ರವೇಶಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆದಿದೆ. ಎರಡು ದಿನಗಳ ಹಿಂದಷ್ಟೇ ರಷ್ಯಾದಿಂದ ವಾಪಸಾಗಿದ್ದ ರಿಕ್ಕಿ ರೈ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಕ್ರಿಯವಾಗಿದ್ದರು. ಚಾಲಕ ರಾಜು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಿಡದಿ ಇನ್ಸ್ಪೆಕ್ಟರ್ ಶಂಕರ್ ನಾಯಕ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಸದ್ಯ, ಘಟನಾ ಸ್ಥಳದಲ್ಲಿ ಸೀನ್ ಆಫ್ ಕ್ರೈಂ ಆಫೀಸರ್ಸ್ (SOCO) ಮತ್ತು FSL ತಂಡವು ಪರಿಶೀಲನೆ ನಡೆಸುತ್ತಿದೆ. ರಿಕ್ಕಿ ರೈ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಇದನ್ನೂ ಓದಿ: ED Raid: 50 ಕೋಟಿ ರೂ. ಪಾವತಿಸಿ ಶ್ವಾನ ಖರೀದಿಸಿದ್ದಾಗಿ ಘೋಷಿಸಿದ್ದ ಬೆಂಗಳೂರು ವ್ಯಕ್ತಿಗೆ ಇಡಿ ಶಾಕ್; ಮನೆ ಮೇಲೆ ದಾಳಿ