ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

International Space Station: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಬಗ್ಗೆ ನಿಮಗೆಷ್ಟು ಗೊತ್ತು? ಅದು ಎಲ್ಲಿದೆ?

International Space Station: ಐಎಸ್‌ಎಸ್‌ ಬಹಳ ಸಂಕೀರ್ಣವಾದ ಒಂದು ತಾಣ. ಇದು ಒಂದೇ ದೇಶದ ಒಡೆತನದ್ದಲ್ಲ. ಇದರ ನಿರ್ಮಾಣದಲ್ಲಿ 15 ದೇಶಗಳ ಯೋಗದಾನವಿದೆ. 1998ರಲ್ಲಿ ಶುರುವಾಗಿ 2011ರ ವರೆಗೆ ಇದರ ಕಟ್ಟುವಿಕೆ ನಡೆಯತ್ತಲೇ ಇತ್ತು. ಅಮೆರಿಕದ ನಾಸಾ, ಯುರೋಪಿಯನ್ ಸ್ಪೇಸ್ ಏಜೆನ್ಸಿ, ಜಪಾನಿನ ಜಾಕ್ಸಾ, ರಷ್ಯಾದ ರಾಸ್ಕಾಸ್ಮಾಸ್‌, ಕೆನಡಾದ ಸಿಎಸ್‌ಎ ಇದರ ಹಿನ್ನೆಲೆಯಲ್ಲಿ ಕೆಲಸ ಮಾಡಿದವು.

ISS ಬಗ್ಗೆ ನಿಮಗೆ ಈ ಸಂಗತಿಗಳು ಗೊತ್ತೆ?

Profile Rakshita Karkera Mar 20, 2025 12:32 PM

ನವದೆಹಲಿ: ಸುನಿತಾ ವಿಲಿಯಮ್ಸ್‌(Sunita Williams) ಬರೋಬ್ಬರಿ 286 ದಿನಗಳ ಕಾಲ ಬಾಹ್ಯಾಕಾಶ ವಾಸವನ್ನು ಮುಗಿಸಿ ಭೂಮಿಗೆ ಮರಳಿದ್ದಾರೆ. ಇಷ್ಟು ಸುದೀರ್ಘ ಕಾಲ ಅವರು ಇದ್ದುದು ಭೂಗ್ರಹದಿಂದ 400 ಕಿಲೋಮೀಟರ್‌ ದೂರದ, ಕಕ್ಷೆಯಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ(International Space Station)ದಲ್ಲಿ. ಸುನಿತಾ ಅವರ ಬದುಕು, ಸಾಧನೆಯ ಬಗ್ಗೆ ಇರುವ ಕುತೂಹಲವೇ ಈಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಬಗ್ಗೆಯೂ ಜನರಿಗೆ ಮೂಡಿದೆ. ಹಾಗಿದ್ರೆ ಈ ವಿಸ್ಮಯಕಾರಿ ಐಎಸ್‌ಎಸ್‌ ಎಲ್ಲಿದೆ? ಇದರ ನಿರ್ಮಾಣ ಹೇಗಾಯ್ತು? ಸದ್ಯ ಅಲ್ಲಿ ಎಷ್ಟು ಗಗನಯಾತ್ರಿಗಳಿದ್ದಾರೆ ಎಂಬೆಲ್ಲಾ ಮಾಹಿತಿ ಇಲ್ಲಿದೆ.

ಎಲ್ಲಿದೆ ಬಾಹ್ಯಾಕಾಶ ಕೇಂದ್ರ?

ಐಎಸ್‌ಎಸ್‌ ಬಹಳ ಸಂಕೀರ್ಣವಾದ ಒಂದು ತಾಣ. ಇದು ಒಂದೇ ದೇಶದ ಒಡೆತನದ್ದಲ್ಲ. ಇದರ ನಿರ್ಮಾಣದಲ್ಲಿ 15 ದೇಶಗಳ ಯೋಗದಾನವಿದೆ. 1998ರಲ್ಲಿ ಶುರುವಾಗಿ 2011ರ ವರೆಗೆ ಇದರ ಕಟ್ಟುವಿಕೆ ನಡೆಯತ್ತಲೇ ಇತ್ತು. ಅಮೆರಿಕದ ನಾಸಾ, ಯುರೋಪಿಯನ್ ಸ್ಪೇಸ್ ಏಜೆನ್ಸಿ, ಜಪಾನಿನ ಜಾಕ್ಸಾ, ರಷ್ಯಾದ ರಾಸ್ಕಾಸ್ಮಾಸ್‌, ಕೆನಡಾದ ಸಿಎಸ್‌ಎ ಇದರ ಹಿನ್ನೆಲೆಯಲ್ಲಿ ಕೆಲಸ ಮಾಡಿದವು. ಭೂಮಿಯ ಮೇಲೆ ಇದರ ಒಂದೊಂದು ಭಾಗವನ್ನೂ ಸೂಕ್ಷ್ಮವಾಗಿ ನಿರ್ಮಿಸಿ, ಅದನ್ನು ಯಾವುದೇ ದೋಷವಿಲ್ಲದಂತೆ ಪರೀಕ್ಷಿಸಿ, ಅವುಗಳನ್ನು ಗಗನನೌಕೆಗಳ ಮೂಲಕ ಐಎಎಸ್‌ಎಸ್‌ನತ್ತ ಉಡಾಯಿಸಿ, ಅಲ್ಲಿ ಅವುಗಳನ್ನು ನಿಲ್ದಾಣಕ್ಕೆ ಜೋಡಿಸಿ ಸಿದ್ಧಪಡಿಸಲಾಗಿದೆ. ಈ ನಿಲ್ದಾಣ ಭೂಮಿಯಿಂದ 370-460 ಕಿಲೋಮೀಟರ್‌ಗಳ ನಡುವೆ ಉಯ್ಯಾಲೆಯಾಡುತ್ತಿರುತ್ತದೆ.

ಒಂದು ಫುಟ್‌ಬಾಲ್‌ ಗ್ರೌಂಡ್‌ನಷ್ಟು ಉದ್ದವಾಗಿದ್ದು, 110 ಆನೆಗಳ ಭಾರವನ್ನು ಹೊಂದಿರುವ ಇದು ಗಂಟೆಗೆ 28,000 ಕಿಲೋಮೀಟರ್‌ ವೇಗದಲ್ಲಿ ಭೂಮಿಗೆ ಸುತ್ತು ಹಾಕುತ್ತಿರುತ್ತದೆ. 90 ನಿಮಿಷಕ್ಕೊಮ್ಮೆ ಭೂಮಿಗೆ ಒಂದು ಸುತ್ತು ಬರುತ್ತದೆ. ಅಂದರೆ ದಿನದಲ್ಲಿ ಸುಮಾರು 16 ಸುತ್ತು. ಈ ನಿಲ್ದಾಣದ ನಿರ್ವಹಣೆಗೆ ವರ್ಷಕ್ಕೆ 300 ಕೋಟಿ ಡಾಲರ್‌ ವೆಚ್ಚವಾಗುತ್ತದೆ. ಇದು ಮಾನವನ ಬಾಹ್ಯಾಕಾಶ ಯಾನ ಸಾಹಸದ ಒಟ್ಟಾರೆ ಬಜೆಟ್‌ನ ಸರಿಸುಮಾರು ಮೂರನೇ ಒಂದು ಭಾಗ. ಇಲ್ಲಿ ರಷ್ಯಾ, ಅಮೆರಿಕ, ಯುರೋಪುಗಳ ಯಾತ್ರಿಗಳಿಗೆ ಅವರವರದೇ ಭಾಗವಿದೆ. ಇಲ್ಲಿಯವರೆಗೂ ಅಮೆರಿಕದ ಜೊತೆ ರಷ್ಯಾ ಹೊಂದಿಕೊಂಡು ಹೋಗಿದೆ. ಆದರೆ ಈಗ, ತಾನು 2028ರ ಬಳಿಕ ಈ ನಿಲ್ದಾಣದಿಂದ ಕಳಚಿಕೊಳ್ಳುತ್ತೇನೆ, ಬೇರೆಯದೇ ತಾಣವನ್ನು ಕಟ್ಟುತ್ತೇನೆ ಎಂದು ರಷ್ಯಾ ಹೇಳಿದೆ.

ಗಗನಯಾತ್ರಿಗಳು ಅಲ್ಲಿ ಏನು ಮಾಡ್ತಾರೆ?

ಅಲ್ಲಿ ಅವರಿಗೆ ಬಾಹ್ಯಾಕಾಶ ಕೇಂದ್ರದ ನಿರ್ವಹಣೆಯ ಹೊಣೆಯನ್ನು ವಹಿಸಿರುತ್ತಾರೆ. ಫುಟ್ಬಾಲ್ ಮೈದಾನದ ಗಾತ್ರದಲ್ಲಿರುವ ಈ ನಿಲ್ದಾಣಕ್ಕೆ ನಿರಂತರ ನಿರ್ವಹಣೆ ಅಗತ್ಯ. ಶುಚಿಯಾಗಿ ಇಟ್ಟುಕೋಬೇಕು. ಅಲ್ಲೆಲ್ಲೂ ಹೀಲಿಯಂ ಲೀಕ್‌ ಆಗದ ಹಾಗೆ, ಎಲ್ಲೂ ಒಳಗಿನ ಒತ್ತಡದ ವಾತಾವರಣ ಬದಲಾಗದ ಹಾಗೆ ನೋಡ್ಕೋಬೇಕು. ಅಲ್ಲಿರುವ ಹಳೆಯ ಉಪಕರಣಗಳನ್ನು ಬದಲಾಯಿಸಬೇಕು. ಆಹಾರವನ್ನು ಶೇಖರಿಸುವುದು, ತ್ಯಾಜ್ಯವನ್ನು ಮರಳಿ ಭೂಮಿಗೆ ಕಳಿಸಲು ಪ್ಯಾಕ್‌ ಮಾಡುವುದು, ಭೂಮಿಯಿಂದ ಆಗಾಗ ಬರುವ ಸಂದೇಶಗಳನ್ನು ರಿಸೀವ್‌ ಮಾಡುವುದು ಇವೆಲ್ಲವುಗಳ ಜೊತೆಗೆ ಹಲವು ವೈಜ್ಞಾನಿಕ ಪ್ರಯೋಗಗಳಲ್ಲಿ ಸಕ್ರಿಯರಾಗಿರಬೇಕು. ಬಾಹ್ಯಾಕಾಶದಲ್ಲಿ ಮನುಷ್ಯನ ದೇಹ ಮನಸ್ಸುಗಳು ಹೇಗೆ ವರ್ತಿಸುತ್ತವೆ, ಅಲ್ಲಿ ಗಿಡಗಳನ್ನು ಬೆಳೆಸುವುದು ಹೇಗೆ, ಅಲ್ಲಿ ವ್ಯಾಕ್ಸಿನ್‌ಗಳು ಮತ್ತು ಮೆಡಿಸಿನ್‌ಗಳು ದೇಹದ ಮೇಲೆ ಹೇಗೆ ಕೆಲಸ ಮಾಡುತ್ತವೆ- ಇತ್ಯಾದಿ ಪ್ರಯೋಗಗಳು ನಡೆಯುತ್ತವೆ.

ಐಎಸ್‌ಎಸ್‌ನಲ್ಲಿ ಈಗೆಷ್ಟು ಜನರಿದ್ದಾರೆ?

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ISS) ಈಗಲೂ 7 ಜನ ಇದ್ದಾರೆ. ವರ್ಷದುದ್ದಕ್ಕೂ ಅಲ್ಲಿ ಕನಿಷ್ಠ ನಾಲ್ಕು ಮಂದಿ, ಗರಿಷ್ಠ 13 ಮಂದಿ ಇದ್ದೇ ಇರುತ್ತಾರೆ. ಒಬ್ಬರೋ ಇಬ್ಬರೋ ಮರಳಿ ಬಂದಾಗ ಅವರ ಜಾಗವನ್ನು ಬೇರೊಬ್ಬರು ಭೂಮಿಯಿಂದ ಹೋಗಿ ತುಂಬುತ್ತಾರೆ. ಸುನೀತಾಳನ್ನು ಕರೆತರಲು ಅಲ್ಲಿಗೆ ಹೋದ ಸ್ಪೇಸ್‌ಎಕ್ಸ್‌ ಡ್ರ್ಯಾಗನ್‌ನಲ್ಲಿ ಅಮೆರಿಕದ (NASA) ಆನ್ನೆ ಮೆಕ್ಲೇನ್, ನಿಕೋಲ್‌ ಅಯೇರ್ಸ್‌, ಜಪಾನಿನ (JAXA) ತಕುಯಾ ಒನಿಶಿ, ರಷ್ಯಾದ (Roscosmos) ಕಿರಿಲ್‌ ಪೆಶ್ಕೋವ್‌ ಹೋಗಿದ್ದಾರೆ. ಅವರು ಅಲ್ಲಿ ಹಲವು ತಿಂಗಳ ಕಾಲ ಇರಲಿದ್ದಾರೆ. ಐಎಸ್‌ಎಸ್‌ನಲ್ಲಿದ್ದ ಏಳು ಮಂದಿಯಲ್ಲಿ ಈಗ ಭೂಮಿಗೆ ಮರಳಿದ ನಾಲ್ವರು ಸುನೀತಾ ವಿಲಿಯಮ್ಸ್, ಬುಚ್‌‌ ವಿಲ್‌ಮೋರ್, ಅಮೆರಿಕದ ನಿಕ್‌ ಹೇಗ್‌ ಮತ್ತು ರಷ್ಯದ ಅಲೆಕ್ಸಾಂಡರ್‌ ಗೊರ್ಬುನೊವ್.‌ ಅಲ್ಲಿ‌ ಈಗಾಗಲೇ ಇರುವವರು ಡಾನ್‌ ಪೆಟಿಟ್‌, ಅಲೆಕ್ಸಿ ಒವಿಚಿನಿನ್‌ ಮತ್ತು ಇವಾನ್‌ ವ್ಯಾಗ್ನರ್.‌ ಇವರಲ್ಲಿ ಡಾನ್‌ ಪೆಟಿಟ್‌ಗೆ 69 ವರ್ಷವಾಗಿದೆ, ಅನುಭವಿ. ಇವರು ಮೂವರೂ ಅಲ್ಲಿಗೆ ಹೋಗಿ 6 ತಿಂಗಳು ಕಳೆದಿವೆ. ಮರಳಿ ಬರುವ ದಿನ ಫಿಕ್ಸ್‌ ಆಗಿಲ್ಲ.

ಐಎಸ್‌ಎಸ್‌ನಲ್ಲಿ ಸುದೀರ್ಘ ಕಾಲ ಇದ್ದರೆ ಏನಾಗುತ್ತೆ?

ಇಲ್ಲಿ ದೀರ್ಘಕಾಲ ಉಳಿಯುವುದು ಗಗನಯಾತ್ರಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅವರ ಸ್ನಾಯುಗಳು ದುರ್ಬಲವಾಗುತ್ತವೆ. ಬಾಹ್ಯಾಕಾಶದಲ್ಲಿ ಕಡಿಮೆ ಗುರುತ್ವಾಕರ್ಷಣ ಶಕ್ತಿ ಇರುವುದರಿಂದ ತಿಂಗಳಿಗೆ ಸರಿಸುಮಾರು 1- 2% ರಷ್ಟು ಸ್ನಾಯು ಸಾಂದ್ರತೆ ನಷ್ಟವಾಗುತ್ತದೆ. ಬಾಹ್ಯಾಕಾಶದಲ್ಲಿ ಹೃದಯವು ಗುರುತ್ವಾಕರ್ಷಣೆಯ ವಿರುದ್ಧ ರಕ್ತವನ್ನು ಪಂಪ್ ಮಾಡುವ ಅಗತ್ಯವಿಲ್ಲದ ಕಾರಣ ಕಡಿಮೆ ಕೆಲಸ ಮಾಡುತ್ತದೆ. ರಕ್ತದ ಪರಿಚಲನೆ ಕೂಡ ಸರಾಗವಾಗುವುದಿಲ್ಲ. ಇದರಿಂದಾಗಿ ಅವರ ಮುಖ ಊದಿಕೊಂಡಿರುತ್ತದೆ ಹಾಗೂ ಕೈಕಾಲುಗಳು ಸಣ್ಣದಾಗಿರುತ್ತವೆ. ತಲೆಯಲ್ಲಿ ದ್ರವಗಳು ಸಂಗ್ರಹವಾಗುತ್ತವೆ. ಭೂಮಿಗೆ ಬಂದಾಗ ಇವೆಲ್ಲವೂ ಮೊದಲಿನ ಸ್ಥಿತಿಗೆ ಬರಬೇಕಾಗುತ್ತದೆ. ಅನೇಕ ಗಗನಯಾತ್ರಿಗಳು ತಲೆಯಲ್ಲಿ ದ್ರವದ ಶೇಖರಣೆಯಿಂದಾಗಿ ದೃಷ್ಟಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಸ್ಪೇಸ್‌ಫ್ಲೈಟ್-ಅಸೋಸಿಯೇಟೆಡ್ ನ್ಯೂರೋ-ಆಕ್ಯುಲರ್ ಸಿಂಡ್ರೋಮ್ (SANS) ಎಂದು ಕರೆಯಲ್ಪಡುವ ಸ್ಥಿತಿಯಿಂದಾಗಿ ದೃಷ್ಟಿ ಮಂದವಾಗಬಹುದು ಮತ್ತು ಶಾಶ್ವತವಾಗಿ ಕನ್ನಡಕ ಧರಿಸಬೇಕಾಗಬಹುದು. ಇವರ ಚರ್ಮ ಮೃದುವಾಗುತ್ತದೆ ಮತ್ತು ಹೆಚ್ಚು ಸೂಕ್ಷ್ಮವಾಗುತ್ತದೆ. ಮಾನಸಿಕ ಮತ್ತು ಭಾವನಾತ್ಮಕ ಸವಾಲುಗಳು ಸಹ ಇರುತ್ತವೆ.

ಚೀನಾದ ಬಾಹ್ಯಾಕಾಶ ಕೇಂದ್ರ!

ಇದಲ್ಲದೇ ಐಎಸ್‌ಎಸ್‌ನಷ್ಟೇ ಎತ್ತರದಲ್ಲಿ ಇನ್ನೂ ಒಂದು ಬಾಹ್ಯಾಕಾಶ ಕೇಂದ್ರವಿದೆ. ಅದು ಚೀನಾದ್ದು- ತಿಯಾಂಗಾಂಗ್‌ ಬಾಹ್ಯಾಕಾಶ ನಿಲ್ದಾಣ (Tiangong space station). ಅದರಲ್ಲಿ ಮೂವರು ಗಗನಯಾತ್ರಿಗಳಿದ್ದಾರೆ. ಕಾಯ್‌ ಸುಜೆ, ಸಾಂಗ್‌ ಲಿಂಗ್‌ಡಾಂಗ್‌ ಮತ್ತು ವಾಂ ಹಾವೋಸೆ. ಇದು ಚೀನಾದ ಸ್ವಾಯತ್ತ ಕೇಂದ್ರ.

ಅಪಾಯಕಾರಿ ಸ್ಪೇಸ್‌ವಾಕ್‌

ಐಎಸ್‌ಎಸ್‌ನಲ್ಲಿರುವವರು ಆಗಾಗ ಸ್ಪೇಸ್‌ವಾಕ್‌ ಅಥವಾ ವ್ಯೋಮ ನಡಿಗೆ ಮಾಡಬೇಕಾಗುತ್ತದೆ. ಐಎಸ್‌ಎಸ್‌ನ ಹೊರಗಿನ ಯಾವುದಾದರೂ ಭಾಗ ಹಾಳಾದರೆ ಇವರೇ ರಿಪೇರಿ ಮಾಡಬೇಕು. ಈ ಸ್ಪೇಸ್‌ವಾಕ್‌ ಬಹಳ ರಿಸ್ಕೀ ಕೆಲಸ. ವೇಗವಾಗಿ ಸುತ್ತು ಹಾಕುತ್ತಿರುವ ಐಎಸ್‌ಎಸ್‌ಗೆ ಹೊರಗಡೆಯಿಂದ ಅಂಟಿಕೊಂಡೇ ಗಗನಯಾತ್ರಿ ಕೆಲಸ ಮಾಡಬೇಕಾಗುತ್ತದೆ. ಒಂದು ವೇಳೆ ಆತ ಐಎಸ್‌ಎಸ್‌ನಿಂದ ಸಂಪರ್ಕ ಕಡಿದುಕೊಂಡರೆ, ನಿರಂತರವಾಗಿ ಅಲ್ಲೇ ನಿಂತು ಸುತ್ತು ಹಾಕುವ ಅಂತರಪಿಶಾಚಿಯಾಗಬೇಕಾಗುತ್ತದೆ. ಅದಕ್ಕೂ ಮೊದಲೇ ನಿರ್ವಾತ, ವಿಕಿರಣ ಹಾಗೂ ಉಷ್ಣತೆಗಳು ಆತನನ್ನು ಕೊಲ್ಲುತ್ತವೆ. ಹೀಗಾಗಿಯೇ ಸ್ಪೇಸ್‌ವಾಕ್‌ ಮಾಡುವವರು ಅದಕ್ಕಾಗಿಯೇ ವಿನ್ಯಾಸಗೊಳಿಸಲಾದ ಸ್ಪೇಸ್‌ಸೂಟ್‌ ಹಾಗೂ ಆಕ್ಸಿಜನ್‌ ಅಂಡೆ ಕಟ್ಟಿಕೊಂಡು ಓಡಾಡುವುದು.

ಈ ಸುದ್ದಿಯನ್ನೂ ಓದಿ: Sunita Williams: ಹ್ಯಾಟ್ಸ್‌ ಆಫ್‌ ಟು ಯೂ ಸುನಿತಾ- ಗಗನತಾರೆಯ ಬಗ್ಗೆ ಇಲ್ಲಿದೆ ರೋಚಕ ಸಂಗತಿ!

ಒಳಗಡೆ ಹೇಗಿದೆ?

ಐಎಸ್‌ಎಸ್‌ನ ಹೆಚ್ಚಿನ ಭಾಗ ಯಂತ್ರಗಳು. ಇಲ್ಲಿನ ಮಲಗುವ ಕೋಣೆಗಳು ಸಾಮಾನ್ಯವಾಗಿ ಸಣ್ಣ ಬಂಕ್ ಹಾಸಿಗೆಗಳು. ಗಗನಯಾತ್ರಿಗಳು ತಮ್ಮನ್ನು ಗೋಡೆಗೆ ಕಟ್ಟಿಕೊಂಡು ಮಲಗುತ್ತಾರೆ ಅಥವಾ ವಾಲಿಕೊಂಡೇ ನಿದ್ರೆ ಮಾಡುತ್ತಾರೆ. ಮುಕ್ತವಾಗಿ ತೇಲಿಕೊಂಡೂ ಇರಬಹುದು. ಐಎಸ್‌ಎಸ್‌ಗೆ ಈಗ ಮೀಡಿಯಾ ಸಂಪರ್ಕವಿದೆ. 2009ರಲ್ಲಿ ಗಗನಯಾತ್ರಿ ಮೈಕ್ ಮಾಸ್ಸಿಮಿನೊ ಬಾಹ್ಯಾಕಾಶದಿಂದ ಮೊದಲ ಟ್ವೀಟ್ ಮಾಡಿದರು. ಸುನಿತಾ ಇಲ್ಲಿಂದ ಲೈವ್‌ ಉಪನ್ಯಾಸ ಕೊಟ್ಟಿದ್ದುಂಟು.

ಅಪಘಾತಗಳಾಗಿಲ್ಲವೆ?

ಐಎಸ್‌ಎಸ್‌ನಲ್ಲಿ ಅಪಘಾತಗಳೇ ಆಗಿಲ್ಲ ಎಂದಲ್ಲ. ಹಲವಾರು ಆಗಿವೆ. ಆದರೆ ಎಲ್ಲವೂ ಸಣ್ಣ ಪ್ರಮಾಣದವು ಮತ್ತು ತಕ್ಷಣವೇ ಸರಿಪಡಿಸಲಾಗಿದೆ. ಸ್ಪೇಸ್‌ವಾಕ್‌ಗೆಂದು ಹೊರಗೆ ಹೋದ ಒಬ್ಬ ಗಗನಯಾತ್ರಿಯ ಸ್ಪೇಸ್‌ಸೂಟ್‌ನ ಹೆಲ್ಮೆಟ್‌ನೊಳಗೆ ಕೂಲೆಂಟ್‌ನಿಂದ ಜಿನುಗಿದ ನೀರು ತುಂಬಿಕೊಂಡು ಆತ ಸಾಯುವ ಪರಿಸ್ಥಿತಿ ಬಂದಿತ್ತು. ಒಂದು ಸಿಬ್ಬಂದಿಯೇ ಇಲ್ಲದೇ ಹೋದಾಗ ಇಡೀ ನಿಲ್ದಾಣದ ಕೋನವೇ ತುಸು ಜರುಗಿದ್ದೂ ಉಂಟು. ಸಣ್ಣಪುಟ್ಟ ಆಕ್ಸಿಜನ್‌ ಲೀಕೇಜ್‌ಗಳು, ಪ್ರೆಶರ್‌ ಇಳಿತಗಳು ಆಗುತ್ತಲೇ ಇರುತ್ತವೆ.