War anxiety: ನಮ್ಮ ಮನಸ್ಸಿನ ಭದ್ರತೆಗೆ ನಾವೇನು ಮಾಡಬಹುದು?
ಸಿಂದೂರ್ ಕಾರ್ಯಾಚರಣೆಯ ಸುದ್ದಿಗಳು ಟಿವಿ ಪರದೆಯ ಮೇಲೆ ಕುಣಿಯುತ್ತಿದ್ದಂತೆ, ದೇಶದೆಲ್ಲ ಜೀವಗಳು ತಮ್ಮದೇ ಆದ ರೀತಿಯಲ್ಲಿ ಆತಂಕಕ್ಕೆ ಒಳಗಾಗುತ್ತಿವೆ; ಒಂದಿಲ್ಲೊಂದು ರೀತಿಯಲ್ಲಿ ಭಾವನಾತ್ಮಕವಾಗಿ ಈ ಸಂದರ್ಭದ ಕುರಿತು ಪ್ರತಿಕ್ರಿಯಿಸುತ್ತಿವೆ..ಇಂಥ ಸನ್ನಿವೇಶದಲ್ಲಿ, ಯುದ್ಧದ ಆತಂಕವನ್ನು ನಿಯಂತ್ರಿಸಿಕೊಂಡು ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ?


ನವದೆಹಲಿ: ಯುದ್ಧದ ಸುದ್ದಿ ಕೇಳುತ್ತಿದ್ದಂತೆಯೇ ತಮ್ಮೆಲ್ಲರ ತಲೆಯಲ್ಲೊಂದು ರಣಭೂಮಿ ಸೃಷ್ಟಿಯಾಗಿರುತ್ತದೆ. ಎಲ್ಲೊ ಎಂದೋ ಕೇಳಿದ್ದು, ನೋಡಿದ್ದು, ಓದಿದ್ದೆಲ್ಲ ಸೇರಿಸಿಕೊಂಡು ನಮ್ಮದೇ ಒಂದು ಪ್ರತ್ಯೇಕ ಕಲ್ಪನೆ ತಯಾರಾಗುತ್ತದೆ. ಈಗಲೂ ಹಾಗೆಯೇ, ಸಿಂದೂರ್ ಕಾರ್ಯಾಚರಣೆಯ ಸುದ್ದಿಗಳು ಟಿವಿ ಪರದೆಯ ಮೇಲೆ ಕುಣಿಯುತ್ತಿದ್ದಂತೆ, ದೇಶದೆಲ್ಲ ಜೀವಗಳು ತಮ್ಮದೇ ಆದ ರೀತಿಯಲ್ಲಿ ಆತಂಕಕ್ಕೆ ಒಳಗಾಗುತ್ತಿವೆ; ಒಂದಿಲ್ಲೊಂದು ರೀತಿಯಲ್ಲಿ ಭಾವನಾತ್ಮಕವಾಗಿ ಈ ಸಂದರ್ಭದ ಕುರಿತು ಪ್ರತಿಕ್ರಿಯಿಸುತ್ತಿವೆ. ಅದು ಗಡಿ ಕಾಯುವ ಯೋಧರ ಸುರಕ್ಷತೆಗಾಗಿ ಪ್ರಾರ್ಥನೆ ಇರಬಹುದು; ದುಷ್ಟರ ನಾಶಕ್ಕಾಗಿ ಹಂಬಲ ಇರಬಹುದು; ಆ ಪ್ರದೇಶದಲ್ಲಿ ಸಿಲುಕಿರುವ ಅಮಾಯಕರ ಬಗೆಗಿನ ಮರುಕವೇ ಇರಬಹುದು ಅಥವಾ ಮುಂದೇನು ಎಂಬ ಆತಂಕವೇ ಇರಬಹುದು- ಅಂತೂ ಮನದ ಮೇಲೊಂದು ತಳಮಳದ ಗುಡ್ಡ ಒತ್ತಿ ಕೂರುತ್ತಿದೆ. ಯುದ್ಧ ನಡೆಯುವ ಸ್ಥಳಕ್ಕೆ ಹತ್ತಿರವಿರಬೇಕೆಂದಿಲ್ಲ, ಗಡಿಯಲ್ಲಿ ನಮಗೆ ಬೇಕಾದವರಾರೋ ಇರಬೇಕೆಂದೂ ಇಲ್ಲ- ಆದರೂ ಎದೆ ಹೊಡೆದು ಕೊಳ್ಳುವ, ಹೊಟ್ಟೆಯಲ್ಲಿ ಕುಟ್ಟುವ ಅನುಭವ ನಿಲ್ಲುವುದಿಲ್ಲ. ಇಂಥ ಸನ್ನಿವೇಶದಲ್ಲಿ, ಯುದ್ಧದ ಆತಂಕವನ್ನು(War anxiety) ನಿಯಂತ್ರಿಸಿ ಕೊಂಡು ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ?
ಯುದ್ಧದ ಕುರಿತಾಗಿ ಸುದ್ದಿ ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಲಗಾಮಿಲ್ಲದಂತೆ ಹರಿದಾಡುತ್ತಿವೆ. ಈಗೇನಾಗುತ್ತಿದೆ, ಇನ್ನೇನಾಗಬಹುದು ಎಂಬ ತಳಮಳದಲ್ಲಿ ಕ್ಷಣಕ್ಷಣಕ್ಕೂ ಫೋನ್ ಗೀರುತ್ತಿದ್ದೇವೆ, ಟಿವಿ ಚಾನೆಲ್‌ಗಳನ್ನು ಬದಲಿಸುತ್ತಿದ್ದೇವೆ. ಫ್ಯಾಮಿಲಿ ಗ್ರೂಪ್‌ಗಳಿಂದ ಹಿಡಿದು ಎಲ್ಲ ಕಡೆಯೂ ಬರೀ ಇದೇ ಸುದ್ದಿಗಳು ಚರ್ಚೆಯಾಗುತ್ತಿವೆ. ಊಟದ ಮೇಜು, ಮಲಗುವ ಹಾಸಿಗೆ-ದಿಂಬನ್ನೂ ಬಿಡದಂತೆ ಸುದ್ದಿ-ಕ್ಷಿಪಣಿಗಳ ಸುರಿಮಳೆಯಾಗುತ್ತಿದೆ. ಹಾಗೆಂದೇ ಅಗತ್ಯಕ್ಕಿಂತ ಹೆಚ್ಚಿನ ದಿನಸಿ ಖರೀದಿಸುತ್ತೇವೆ, ಔಷಧಿಗಳನ್ನು ತಂದಿಟ್ಟುಕೊಳ್ಳುತ್ತೇವೆ, ಯಾವುದಕ್ಕೂ ಇರಲಿ ಎಂದು ಗಾಡಿಗೆ ಪೆಟ್ರೋಲ್ ಭರ್ತಿ ಮಾಡುತ್ತೇವೆ, ಯಾವುದೋ ಸುದ್ದಿಯನ್ನು ಸತ್ಯಾಸತ್ಯತೆ ತಿಳಿಯುವ ಮುನ್ನವೇ ಫಾರ್ವರ್ಡ ಮಾಡುತ್ತೇವೆ- ಇವೆಲ್ಲ ಯಾವುದಕ್ಕಾಗಿ? ನಮ್ಮ ಮಾನಸಿಕ ಆತಂಕದ ಕಾರಣಕ್ಕೇ ಅಲ್ಲವೇ? ಇಂಥ ಕಠಿಣ ಸಂದರ್ಭದಲ್ಲಿ ನಮ್ಮ ಮಾನಸಿಕ ಸ್ಥಿಮಿತವನ್ನು ಕಾಯ್ದುಕೊಳ್ಳುವುದು ಹೇಗೆ?
ಯುದ್ಧ ನಮ್ಮ ಬಾಗಿಲಿಗೆ ಬಂದಂಥ ಈ ಅನುಭವದಿಂದ ಮುಗಿಯದ ಆತಂಕ, ಒಂದು ಬಗೆಯ ಅಸಹಾಯಕ ಭೀತಿ, ಕಟ್ಟೆಚ್ಚರ ದಲ್ಲಿ ಇರುವಂಥ ಮನಸ್ಥಿತಿ, ನಿದ್ರೆ ಬಾರದಿರುವುದು, ತಲೆನೋವು, ಹಸಿವಿಲ್ಲದಿರುವುದು, ಹೆದರಿಕೆ, ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗದ ಅವಸ್ಥೆಗಳು ಬಹಳಷ್ಟು ಮಂದಿಯನ್ನು ಕಾಡಬಹುದು. ಇದನ್ನೇ ಯುದ್ಧದ ಕುರಿತಾದ ತಳಮಳ ಅಥವಾ ವಾರ್ ಆಂಕ್ಸೈಟಿ ಎಂದು ಕರೆಯುವುದು. ಯುದ್ಧದಂಥ ರಾಷ್ಟ್ರೀಯ ತುರ್ತಿನ ಸಂದರ್ಭಗಳಲ್ಲಿ, ದೈಹಿಕವಾಗಿ ನಮ್ಮ ಸುರಕ್ಷತೆ ಎಷ್ಟು ಮುಖ್ಯವೋ ಮಾನಸಿಕ ಭದ್ರತೆಯೂ ಅಷ್ಟೇ ಮುಖ್ಯ. ಸದಾ ಕಾಲ ದೊಡ್ಡ ದನಿಯಲ್ಲಿ ಪರದೆಯ ಮೇಲೆ ಬಿತ್ತರಿಸಲಾಗುವ ಮುಖ್ಯಾಂಶಗಳನ್ನು ನೋಡುತ್ತಲೇ ಇದ್ದಾಗ, ಅಳಿವು-ಉಳಿವಿನ ಮನಸ್ಥಿತಿಗೆ ತಲುಪುತ್ತೇವೆ- ಯುದ್ಧಭೂಮಿಯಿಂದ ಎಷ್ಟೇ ದೂರದಲ್ಲಿದ್ದರೂ!
ಲಕ್ಷಣಗಳೇನು?: ಯುದ್ಧಭೂಮಿಯಿಂದ ದೂರದಲ್ಲಿದ್ದರೂ ಸೈರನ್ ಮೊಳಗಿದಂತೆ ಕೇಳುವುದು, ಸಣ್ಣ ಸದ್ದಿಗೂ ಬೆಚ್ಚುವುದು, ದಾಳಿಯಾದರೇನು ಮಾಡುವುದು ಎಂದು ಮನದಲ್ಲೇ ಲೆಕ್ಕಾಚಾರ ಮಾಡುವುದು, ಪದೇಪದೆ ಸುದ್ದಿಗಳನ್ನು ನೋಡುತ್ತಿ ರುವುದು, ನಿದ್ದೆ ಬಾರದಿರುವುದು, ಹಸಿವಿಲ್ಲ ಅಥವಾ ತಿಂದರೂ ಜೀರ್ಣವಾಗದಿರುವುದು, ಯಾವ ಕೆಲಸದಲ್ಲೂ ಮನಸ್ಸು ತೊಡಗದಿರುವುದು, ಸುಸ್ತು, ತಲೆನೋವು, ಕಿರಿಕಿರಿ, ಹತಾಶೆಯ ಭಾವ ಇಂಥವೆಲ್ಲ ಯುದ್ಧ ಆತಂಕದ ದೈಹಿಕ, ಮಾನಸಿಕ ಲಕ್ಷಣಗಳು.
ಏನಿದರ ಅರ್ಥ?: ಹಾಗಾದರೆ ನಮ್ಮ ತಾಯ್ನೆಲದ ಬಗ್ಗೆ ಇಷ್ಟಾದರೂ ನಮ್ಮ ಭಾವಗಳು ಕೆರಳಬೇಡವೇ? ನಮ್ಮ ದೇಶಕ್ಕಾಗಿ ನಾವು ಮಿಡಿಯುವುದು ತಪ್ಪೇ? ಅಲ್ಲ, ತಪ್ಪಲ್ಲ. ಯುದ್ಧದ ತಳಮಳವನ್ನು ದೂರ ಮಾಡುವುದೆಂದರೆ ಯುದ್ಧದ ಪರಿಸ್ಥಿತಿಯಿಂದ ಹೆದರಿ ದೂರ ಓಡುವುದು ಎಂದಲ್ಲ, ಬದಲಿಗೆ ಪರಿಸ್ಥಿತಿಗೆ ಸೂಕ್ತವಾಗಿ, ವಿವೇಕದಿಂದ ವರ್ತಿಸುವಂಥ ಮಾನಸಿಕ ಸ್ಥಿತಿಯನ್ನು ಕಾಪಾಡಿಕೊಳ್ಳುವುದು. ನಮ್ಮ ದೇಶ ಎದುರಿಸುತ್ತಿರುವ ಸ್ಥಿತಿಗೆ ಪ್ರತಿಕ್ರಿಯಿಸುವ ಬದಲು, ಸೂಕ್ತವಾಗಿ ಸ್ಪಂದಿಸುವುದು. ಇದಕ್ಕಾಗಿ ನಮ್ಮ ಮನಸ್ಸು ಮೊದಲಿಗೆ ಸ್ಥಿಮಿತದಲ್ಲಿ ಇರಬೇಕು. ಹಾಗಾಗಿ ಅಸ್ಥಿರತೆ, ಅಭದ್ರತೆ, ಅನಿಶ್ಚಿತತೆಯ ಭಾವದಿಂದ ಬಿಡಿಸಿಕೊಂಡು, ನಂಬಿಕೆಯನ್ನು ಬೆಳೆಸಿಕೊಳ್ಳುವುದು ಈ ಹೊತ್ತಿನ ಅಗತ್ಯಗಳಲ್ಲಿ ಒಂದು.
ಇದನ್ನು ಓದಿ: Health Tips: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಏನು ನಂಟು?
ಏನು ಮಾಡಬೇಕು?: ಇಂಥ ಮನೋದೈಹಿಕ ಸ್ಥಿತಿಯಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು?
- ಸುದ್ದಿ ಮಾಧ್ಯಮಗಳನ್ನು ಅತಿಯಾಗಿ ಜಾಲಾಡುವುದನ್ನು ಕಡಿಮೆ ಮಾಡಿ. ನಿಮ್ಮ ವಿಶ್ವಾಸದ ಒಂದೆರಡು ಮಾಧ್ಯಮಗಳನ್ನು ಮಾತ್ರವೇ ಪರಿಶೀಲಿಸಿ, ಸಾಕು.
- ಸಾಮಾಜಿಕ ಮಾಧ್ಯಮಗಳ ಸಂಕೋಲೆಯಿಂದ ಹೊರಬನ್ನಿ. ಸುಳ್ಳಿನ ಸರಮಾಲೆಗಳನ್ನು ಪೋಣಿಸುವ ಗ್ರೂಪ್‌ಗಳನ್ನು ಫೋನ್‌ನಿಂದ ಕಿತ್ತು ಬಿಸಾಡಿ.
- ದೀರ್ಘವಾಗಿ ಉಸಿರಾಡಿ, ಲಘು ವ್ಯಾಯಾಮಗಳ್ನು ಮಾಡಿ, ಇನ್ನಾವುದೇ ದೈಹಿಕ ಚಟುವಟಿಕೆಗಳನ್ನು ಮಾಡಿ- ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ನಿದ್ರೆ ಬರುತ್ತದೆ.
- ಮನೆಯ ಇತರ ಸದಸ್ಯರೊಂದಿಗೆ ಮಾತಾಡಿ, ಅವರ ಮನದಲ್ಲೂ ಇಂಥದ್ದೇ ಆತಂಕವಿದ್ದರೆ ಅದನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳಿ. ಹಂಚಿಕೊಳ್ಳುವುದರಿಂದ ಮನಸ್ಸು ಹಗುರವಾಗುತ್ತದೆ.
- ನಿಮ್ಮಿಷ್ಟದ ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಗಾರ್ಡನಿಂಗ್, ಪೇಟಿಂಗ್, ಹಾಡುವುದು, ಓದುವುದು, ಹೊಸರುಚಿ ಮಾಡುವುದು- ಏನಾದರೂ ಸರಿ, ಮನಸ್ಸನ್ನು ತೊಡಗಿಸಿ.