Viral News: ಒಂದು ಫೋನ್ ಕಾಲ್‌ನಿಂದ ಮುರಿದೇ ಬಿತ್ತು ಮದುವೆ; ಅಷ್ಟಕ್ಕೂ ಆಗಿದ್ದೇನು?
ಮದುವೆ ಸಮಾರಂಭದಲ್ಲಿ ಸಪ್ತಪದಿ ತುಳಿಯುತ್ತಿದ್ದ ವರನಿಗೆ ಫೋನ್ ಕಾಲ್‌ವೊಂದು ಬಂದಿದೆ. ನಂತರ ಮದ್ವೆಯೇ ಬೇಡ ಎಂದು ಹಠ ಹಿಡಿದಿದ್ದಾನೆ. ಇದರಿಂದ ವಧುವಿನ ಕಡೆಯವರು ಕೋಪಗೊಂಡು ವರನ ಕಡೆಯವರ ಜೊತೆ ಗಲಾಟೆ ಮಾಡಿದ್ದಾರೆ. ಈ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯ ನಡೋಟಿ ತಹಸಿಲ್‌ನಲ್ಲಿ ನಡೆದಿದ್ದು ಇದೀಗ ಸುದ್ದಿ ವೈರಲ್(Viral News) ಆಗಿದೆ.


ಜೈಪುರ: ಮದುವೆ ಸಮಾರಂಭದಲ್ಲಿ ಜಗಳ, ಹೊಡೆದಾಟ ನಡೆದು ಮದುವೆ ರದ್ದಾದಂತಹ ರಾದ್ಧಾಂತಗಳು ಈ ಹಿಂದೆ ಸೋಶಿಯಲ್ ಮೀಡಿಯಾಗಳಲ್ಲಿ ವರದಿಯಾಗಿತ್ತು. ಅದರ ವಿಡಿಯೊಗಳು ಸಹ ವೈರಲ್ ಆಗಿತ್ತು. ಇದೀಗ ರಾಜಸ್ಥಾನದಲ್ಲಿ ನಡೆದ ಮದುವೆಯೊಂದು ವಿಚಿತ್ರ ಕಾರಣಕ್ಕೆ ರದ್ದಾಗಿದೆ ಎಂಬುದಾಗಿ ವರದಿಯಾಗಿದೆ. ಶನಿವಾರ (ಮೇ 10) ರಾತ್ರಿ ನಡೆದ ವಿವಾಹ ಸಮಾರಂಭದಲ್ಲಿ ಸಪ್ತಪದಿ ತುಳಿಯುತ್ತಿದ್ದ ವರನಿಗೆೆ ಫೋನ್ ಕರೆ ಬಂದ ನಂತರ ಈ ಮದುವೆ ನಾಟಕೀಯ ತಿರುವು ಪಡೆದುಕೊಂಡಿದೆ. ಫೋನ್ ಕರೆ ಬೆನ್ನಲ್ಲೇ ಮದುವೆಯೇ ಬೇಡ ಎಂದು ವರ ಹಠ ಹಿಡಿದಿದ್ದಾನೆ. ಇದರಿಂದ ಕೋಪಗೊಂಡ ವಧುವಿನ ಕುಟುಂಬವು ಗಲಾಟೆ ಮಾಡಿ ಪೊಲೀಸ್ ದೂರು ನೀಡಿದ್ದು, ವರ, ಅವನ ತಂದೆ ಮತ್ತು ಅವನ ಕುಟುಂಬ ಸದಸ್ಯರು ಅರೆಸ್ಟ್ ಆಗಿದ್ದಾರೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ.
ರಾಜಸ್ಥಾನದ ಕರೌಲಿ ಜಿಲ್ಲೆಯ ನಡೋಟಿ ತಹಸಿಲ್‌ನಲ್ಲಿ ಈ ಘಟನೆ ನಡೆದಿದ್ದು, ಈ ಗಲಾಟೆಯ ಬಗ್ಗೆ ವರದಿಗಳು ಬಂದ ಕೂಡಲೇ ಪೊಲೀಸರು ಅಲ್ಲಿಗೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಆದರೆ ಇದು ಮದುವೆಯ ವಿಚಾರದಲ್ಲಿ ಬಂದ ಸಮಸ್ಯೆಯಾದ್ದರಿಂದ ಪೊಲೀಸರು ಯಾವುದೇ ಕಾನೂನು ಕ್ರಮ ಕೈಗೊಳ್ಳಲು ನಿರಾಕರಿಸಿದ್ದಾರೆ. ಮತ್ತು ಈ ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿಯನ್ನು ಸ್ಥಳೀಯ ಪಂಚಾಯತ್ ಮತ್ತು ಸಮುದಾಯದ ಹಿರಿಯ ಪಂಚ ಪಟೇಲ್ ನೇತೃತ್ವಕ್ಕೆ ವಹಿಸಿದ್ದಾರೆ ಎನ್ನಲಾಗಿದೆ. ಇನ್ನು ವರನಿಗೆ ಕರೆ ಮಾಡಿದವರು ಯಾರು? ಅವರು ಏನು ಹೇಳಿದ್ದರು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ವರದಿಗಳ ಪ್ರಕಾರ, ವಧುವಿನ ಕುಟುಂಬವು ಮದುವೆಗೆ ಸುಮಾರು 56 ಲಕ್ಷ ರೂ.ಗಳನ್ನು ಖರ್ಚು ಮಾಡಿದೆ. ಈ ಮೊತ್ತವನ್ನು ವರನ ಕಡೆಯವರು ಹಿಂದಿರುಗಿಸಬೇಕಾ ಅಥವಾ ಬೇಡವೇ ಎಂಬುದನ್ನು ಪಂಚಾಯತ್ ನಿರ್ಧರಿಸಲಿದೆಯಂತೆ. ಇನ್ನು ಈ ಮದುವೆ ನಿಲ್ಲಲು ಮುಖ್ಯ ಕಾರಣವೇನೆಂದ್ರೆ ಫೋನ್ ಕರೆಯಂತೆ! ಗ್ರಾಮಸ್ಥರು ತಿಳಿಸಿದ ಪ್ರಕಾರ, ಮದುವೆ ಆಚರಣೆಯ ವೇಳೆ ವರನಿಗೆ ಹುಡುಗಿಯೊಬ್ಬಳಿಂದ ಕರೆ ಬಂದಿದ್ದು, ಇದರಿಂದ ಅವನು ಮದುವೆಯಿಂದ ಹಿಂದೆ ಸರಿಯಲು ನಿರ್ಧಾರಕ್ಕೆ ಬಂದನಂತೆ . ಈ ನಡುವೆ ಪಂಚಾಯತ್ ಮಟ್ಟದಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಗಳು ನಡೆಯುತ್ತಿರುವ ಕಾರಣ ಯಾವ ರೀತಿಯ ಅಹಿತಕರ ಘಟನೆಗಳನ್ನು ನಡೆಯದಂತೆ ಪೊಲೀಸರು ಕಟ್ಟೆಚ್ಚರವನ್ನು ವಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ರೈಲಿನಲ್ಲಿ ಪ್ರಯಾಣಿಸುವಾಗ ಎಚ್ಚರ... ಎಚ್ಚರ! ಈ ವಿಡಿಯೊ ನೋಡಿದ್ರೆ ಬೆಚ್ಚಿ ಬೀಳ್ತೀರಿ
ಈ ರೀತಿಯ ವಿಚಿತ್ರ ಕಾರಣಕ್ಕೆ ಮದುವೆ ರದ್ದಾಗಿದ್ದು ಇದೇ ಮೊದಲಲ್ಲ. ಈ ಹಿಂದೆ ಮದುವೆ ಮನೆಯ ಡಿಜೆಯಲ್ಲಿ ರಣಬೀರ್ ಕಪೂರ್ ಅವರ ಎಮೋಷನಲ್ ಟ್ರ್ಯಾಕ್ ಚನ್ನಾ ಮೇರಿಯಾವನ್ನು ಹಾಕಿದ್ದರಿಂದ ಅದನ್ನು ಕೇಳಿದ ವರನಿಗೆ ತನ್ನ ಮಾಜಿ ಗೆಳತಿಯ ನೆನಪು ಕಾಡಿ ಮದುವೆಯನ್ನು ರದ್ದುಮಾಡಿದ್ದನು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಪೋಸ್ಟ್‌ಗೆ ಹೆಚ್ಚಿನ ಜನರು ಕಾಮೆಂಟ್ ಮಾಡಿ ಮದುವೆಗೆ ಮುಂಚಿತವಾಗಿ ವರನು ತನ್ನ ನಿಜವಾದ ಭಾವನೆಗಳನ್ನು ಅರಿತುಕೊಳ್ಳಲು ಸಹಾಯ ಮಾಡಿದ್ದಕ್ಕಾಗಿ ಅನೇಕ ನೆಟ್ಟಿಗರು ಡಿಜೆಗೆ ಧನ್ಯವಾದ ಅರ್ಪಿಸಿದ್ದರು.