Self Harming: ರಾಜ್ಯದಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ; ಫೇಸ್‌ಬುಕ್‌ನಲ್ಲಿ ವಿಡಿಯೋ ಮಾಡಿ ನೇಣಿಗೆ ಶರಣು!
Self Harming: ಆನೇಕಲ್‌ನ ಎಸ್‌ವಿಎಂ ಸ್ಕೂಲ್ ಬಳಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಗೌಡ ಬೇಲೂರು (35) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ರಾತ್ರಿ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಆನೇಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಬೆಂಗಳೂರು: ಬೆಂಗಳೂರಿನ ನಾಗವಾರದಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ (Self Harming) ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಪ್ರವೀಣ್ ಗೌಡ ಎಂಬುವವರು ಫೇಸ್ ಬುಕ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನೇಕಲ್‌ನ ಎಸ್‌ವಿಎಂ ಸ್ಕೂಲ್ ಬಳಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಗೌಡ ಬೇಲೂರು (35) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೇಸ್‌ಬುಕ್ ವಿಡಿಯೋ ಮಾಡಿ ಹಲವರ ಹೆಸರುಗಳನ್ನು ಪ್ರಸ್ತಾಪಿಸಿರುವ ಪ್ರವೀಣ್, ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಪ್ರವೀಣ್ ಗೌಡ ತಮ್ಮ ಫೇಸ್ ಬುಕ್ ವಿಡಿಯೋದಲ್ಲಿ ಹಲವರ ಮೇಲೆ ವಂಚನೆ ಮತ್ತು ಹಲ್ಲೆ ಆರೋಪ ಹೊರಿಸಿದ್ದು, ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜುಗೌಡ ಹಾಗೂ ಕೌನ್ಸಿಲರ್ ಭಾಗ್ಯಮ್ಮ ಮತ್ತು ಶ್ರೀನಿವಾಸ್ ವಿರುದ್ಧವೂ ಆರೋಪ ಮಾಡಿದ್ದಾರೆ. ಪ್ರಮುಖವಾಗಿ ತಮ್ಮ ಸಾವಿಗೆ ಇವರೇ ಕಾರಣ ಎಂದು ಹಲವರನ್ನು ಹೆಸರಿಸಿರುವ ಅವರು, ಆ ಪೈಕಿ ಕಿರಣ್ ಎಂಬಾತನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ವಿಡಿಯೋದಲ್ಲೇನಿದೆ?
ಸಮಂದೂರ್ ಕಿರಣ್, ಗೋಕುಲ್ ಫ್ಯಾಷನ್ ಹರೀಶ, ಭಾಸ್ಕರ್, ನಾರಾಯಣಪ್ಪ, ದೊಡ್ಡಹಾಗಡೆ ಮಧುಗೌಡ, ಸರವಣ ಇವರೇ ನನ್ನ ಸಾವಿಗೆ ಕಾರಣ. ಯಾರನ್ನು ಬಿಟ್ಟರೂ ಕಿರಣ್ನನ್ನು ದಯವಿಟ್ಟು ಬಿಡಬೇಡಿ. ಕಿರಣ್ ಹಲವು ಹೆಣ್ಣು ಮಕ್ಕಳಿಗೆ ಫೋನ್ ಮಾಡಿ ಟಾರ್ಚರ್ ಕೊಡುತ್ತಿದ್ದಾನೆ. ಕಿರಣ್ ಮಾಡಿರುವ ಇಂತಹ ಕೆಲಸಗಳೆಲ್ಲಾ ನನ್ನ ಮೇಲೆ ಬಂದಿವೆ. ಹಣದ ವಿಚಾರವಾಗಿ ಮಾತುಕತೆಗೆ ಕರೆಸಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಪ್ರವೀಣ್ ಫೇಸ್‌ಬುಕ್ ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಅಂತೆಯೇ ಆನೇಕಲ್ ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜುಗೌಡ ವಿರುದ್ಧವೂ ಪ್ರವೀಣ್ ಗಂಭೀರ ಆರೋಪ ಮಾಡಿದ್ದು, 'ಬಿಜೆಪಿ ಮುಖಂಡ ನಾಯನಹಳ್ಳಿ ಮುನಿರಾಜು ಮನೆಗೆ ಕರೆದಿದ್ದರು. ಆ ಸಂದರ್ಭದಲ್ಲಿ ಆನೇಕಲ್ ಕೌನ್ಸಿಲರ್ ಭಾಗ್ಯಮ್ಮ ಹಾಗೂ ಆಕೆಯ ಪತಿ ಶ್ರೀನಿವಾಸ್ ಇದ್ದರು. ಏಕಾಏಕಿ ಹತ್ತಾರು ಮಂದಿಯನ್ನು ಕರೆಸಿಕೊಂಡಿದ್ದ ಭಾಗ್ಯಮ್ಮ ಶ್ರೀನಿವಾಸ್, ಮೊಬೈಲ್ ಕಿತ್ತುಕೊಂಡು 2 ಗಂಟೆಗಳ ಕಾಲ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ | Viral video: ಬೆಂಗಳೂರಿನ ನಡುರಸ್ತೆಯಲ್ಲಿ ಕುಳಿತು ಟೀ ಕುಡಿಯುತ್ತ ರೀಲ್ಸ್ ಮಾಡಿದವನು ಪೊಲೀಸರಿಂದ ಲಾಕ್
ಮನಸೋ ಇಚ್ಛೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನಾನು ಸತ್ತ ಮೇಲೆ ನನ್ನ ದೇಹದ ಮೇಲಿರುವ ಗಾಯದ ಗುರುತುಗಳನ್ನು ಪರಿಶೀಲಿಸಿ. ಪೊಲೀಸರು ನನಗೆ ನ್ಯಾಯ ಕೊಡಿಸಬೇಕು ಎಂದು ಪ್ರವೀಣ್ ವಿಡಿಯೋದಲ್ಲಿ ಕೋರಿದ್ದಾರೆ. ಗುರುವಾರ ರಾತ್ರಿ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಆನೇಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.