ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಕೋಟ್ಯಧಿಪತಿ ಎಂದು ತಿಳಿಯಬೇಡಿʼ-ವೈಭವ್‌ ಸೂರ್ಯವಂಶಿಗೆ ವೀರೇಂದ್ರ ಸೆಹ್ವಾಗ್‌ ವಾರ್ನಿಂಗ್!

ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ನಂತರ ವೀರೇಂದ್ರ ಸೆಹ್ವಾಗ್ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿಗೆ ಎಚ್ಚರಿಕೆ ನೀಡಿದ್ದಾರೆ. ಸ್ಥಿರವಾಗಿದ್ದು ಆಟದ ಮೇಲೆ ಗಮನಹರಿಸುವಂತೆ ಯುವ ಬ್ಯಾಟ್ಸ್‌ಮನ್‌ಗೆ ಸೆಹ್ವಾಗ್‌ ಸಲಹೆ ನೀಡಿದರು. ವಿರಾಟ್ ಕೊಹ್ಲಿಯಂತೆ 20 ವರ್ಷಗಳ ಕಾಲ ಐಪಿಎಲ್‌ನಲ್ಲಿ ಆಡುವ ಗುರಿಯನ್ನು ಹೊಂದುವಂತೆ ಅವರು ಸೂಚನೆ ನೀಡಿದ್ದಾರೆ.

IPL 2025: ವೈಭವ್‌ ಸೂರ್ಯವಂಶಿಗೆ ವೀರೇಂದ್ರ ಸೆಹ್ವಾಗ್‌ ವಾರ್ನಿಂಗ್!

ವೈಭವ್‌ ಸೂರ್ಯವಂಶಿಗೆ ಎಚ್ಚರಿಕೆ ನೀಡಿದ ವೀರೇಂದ್ರ ಸೆಹ್ವಾಗ್‌.

Profile Ramesh Kote Apr 25, 2025 8:20 PM

ನವದೆಹಲಿ: ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)ನಡುವಣ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದ (RCB vs RR) ಬಳಿಕ ಭಾರತ ತಂಡದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ (Virender Sehwag), ಯುವ ಬ್ಯಾಟರ್‌ ವೈಭವ್ ಸೂರ್ಯವಂಶಿ (Vaibhav Suryavanshi)ಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಕೋಟ್ಯಧಿಪತಿ ಎಂದು ಯೋಚಿಸಬೇಡಿ, ಒಂದು ವೇಳೆ ನೀವು ಈ ರೀತಿ ಯೋಚಿಸಿದರೆ ಮುಂದಿನ ವರ್ಷ ನೀವು ಐಪಿಎಲ್‌ ಆಡುವುದಿಲ್ಲ. ಸ್ಥಿರವಾಗಿ ಉತ್ತಮ ಪ್ರದರ್ಶನ ತೋರುವ ಕಡೆಗೆ ಗಮನ ಕೊಡಿ ಎಂದು 14ರ ಬಾಲಕನಿಗೆ ಸೆಹ್ವಾಗ್‌ ಸಲಹೆ ನೀಡಿದ್ದಾರೆ. ಗುರುವಾರ ನಡೆದಿದ್ದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಆರ್‌ಸಿಬಿ 11 ರನ್‌ಗಳಿಂದ ಮಣಿಸಿತು.

ಲಖನೌ ಸೂಪರ್ ಜಯಂಟ್ಸ್‌ ವಿರುದ್ದದ ಪಂದ್ಯದ ಮೊದಲನೇ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ವೈಭವ್‌ ಸೂರ್ಯವಂಶಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಭರ್ಜರಿಯಾಗಿ ಆರಂಭಿಸಿದ್ದರು. ಅವರು ಎಲ್‌ಎಸ್‌ಜಿ ವಿರುದ್ಧ ಕೇವಲ 20 ಎಸೆತಗಳಲ್ಲಿ 34 ರನ್ ಗಳಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಅವರು ಆರ್‌ಸಿಬಿ ವಿರುದ್ಧವೂ ತಮ್ಮ ಸಿಕ್ಸರ್ ಹೊಡೆಯುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು. ಯುವ ಕ್ರಿಕೆಟಿಗ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಅವರ ಮೇಲೆ ದಾಳಿ ನಡೆಸಿ ಎರಡು ಸಿಕ್ಸರ್‌ಗಳನ್ನು ಬಾರಿಸಿ ನಂತರ ಬೌಲ್ಡ್ ಆಗಿದ್ದರು.

IPL 2025: 14ರ ಪೋರ ವೈಭವ್‌ ಸೂರ್ಯವಂಶಿ ಭಯಮುಕ್ತ ಬ್ಯಾಟಿಂಗ್‌ಗೆ ಸುರೇಶ್‌ ರೈನಾ ಫಿದಾ!

ವೈಭವ್‌ ಸೂರ್ಯವಂಶಿ ಬಗ್ಗೆ ಸೆಹ್ವಾಗ್ ಹೇಳಿದ್ದೇನು?

ಕ್ರಿಕ್‌ಬಜ್‌ ಜೊತೆ ಮಾತನಾಡಿದ ಸೆಹ್ವಾಗ್, ಆಟದ ಮೇಲೆ ಗಮನ ಕಳೆದುಕೊಳ್ಳದೆ, ಸ್ಥಿರವಾಗಿರಲು ಯುವ ಆಟಗಾರನಿಗೆ ಸಲಹೆ ನೀಡಿದರು. ಕೇವಲ ಒಂದು ಅಥವಾ ಎರಡು ಪಂದ್ಯಗಳನ್ನು ಆಡಿದ ನಂತರ ಕ್ರಿಕೆಟಿಗರು ಆಟದ ಮೇಲಿನ ನಿಯಂತ್ರಣ ಕಳೆದುಕೊಂಡ ಹಲವಾರು ನಿದರ್ಶನಗಳನ್ನು ಅವರು ಉಲ್ಲೇಖಿಸಿದರು.

"ನೀವು ಚೆನ್ನಾಗಿ ಆಡಿದರೆ ಹೊಗಳುತ್ತಾರೆ ಹಾಗೂ ಚೆನ್ನಾಗಿ ಆಡಿಲ್ಲವಾದರೆ ಟೀಕಿಸುತ್ತಾರೆಂದು ಅರಿತು ಮೈದಾನಕ್ಕೆ ಹೋದರೆ, ನೀವು ತಂಡದಲ್ಲಿ ನೆಲೆ ಕಂಡುಕೊಳ್ಳುತ್ತೀರಿ. ನಾನು ಅನೇಕ ಆಟಗಾರರನ್ನು ನೋಡಿದ್ದೇನೆ, ಒಂದು ಅಥವಾ ಎರಡು ಪಂದ್ಯಗಳಿಂದ ಖ್ಯಾತಿಯನ್ನು ಪಡೆಯುತ್ತಾರೆ, ನಂತರ ಅವರು ತಾವು ಸ್ಟಾರ್ ಆಟಗಾರರಾಗಿದ್ದೇವೆ ಎಂದು ಭಾವಿಸಿ ಏನನ್ನೂ ಮಾಡುವುದಿಲ್ಲ," ಎಂದು ಸೆಹ್ವಾಗ್ ಹೇಳಿದರು.



20 ವರ್ಷ ಐಪಿಎಲ್‌ ಆಡುವುದು ಗುರಿಯಾಗಬೇಕು

ವಿರಾಟ್ ಕೊಹ್ಲಿಯಂತೆ ಸೂರ್ಯವಂಶಿ ಮುಂದಿನ 20 ವರ್ಷಗಳ ಕಾಲ ಐಪಿಎಲ್‌ನಲ್ಲಿ ಆಡುವ ಗುರಿಯನ್ನು ಹೊಂದಿರಬೇಕು ಎಂದು ಮಾಜಿ ಆಟಗಾರ ತಿಳಿಸಿದ್ದಾರೆ. ಅವನು ಇನ್ನೂ ತುಂಬಾ ಚಿಕ್ಕವನಾಗಿದ್ದು, ತನ್ನನ್ನು ತಾನು ಸದೃಢವಾಗಿಟ್ಟುಕೊಂಡು ಮುಂದುವರಿಯುವಲ್ಲಿ ಯಶಸ್ವಿಯಾದರೆ, ಮುಂಬರುವ ವರ್ಷಗಳಲ್ಲಿ ಅವರು ಅನೇಕ ದಾಖಲೆಗಳನ್ನು ಸೃಷ್ಟಿಸಬಹುದು. ಸೂರ್ಯವಂಶಿ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಸಾಮರ್ಥ್ಯವನ್ನು ತೋರಿಸಿದ್ದಾರೆ ಮತ್ತು ಈಗ ಎಲ್ಲವೂ ಅವರು ಇಲ್ಲಿಂದ ಮುಂದೆ ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಐಪಿಎಲ್‌ಗೆ ಪದಾರ್ಪಣೆ ಮಾಡಲು ವೈಭವ್‌ ಸೂರ್ಯವಂಶಿಯ ತಯಾರಿ ಹೇಗಿತ್ತು? ಬಾಲ್ಯದ ಕೋಚ್‌ ಹೇಳಿದ್ದಿದು!

"ಸೂರ್ಯವಂಶಿ ಐಪಿಎಲ್‌ನಲ್ಲಿ 20 ವರ್ಷ ಆಡುವ ಗುರಿ ಹೊಂದಿರಬೇಕು. ವಿರಾಟ್ ಕೊಹ್ಲಿಯನ್ನ ನೋಡಿ, ಅವರು 19 ನೇ ವಯಸ್ಸಿನಲ್ಲಿ ಆಡಲು ಪ್ರಾರಂಭಿಸಿದರು, ಈಗ ಅವರು 18 ಸೀಸನ್‌ಗಳನ್ನೂ ಆಡಿದ್ದಾರೆ. ಇದನ್ನೇ ಅವರು ಮಾಡಲು ಪ್ರಯತ್ನಿಸಬೇಕು. ಆದರೆ, ತಾನು ಕೋಟ್ಯಧಿಪತಿ ಎಂದು ಭಾವಿಸಿದ್ದರೆ, ಅವರ ಚೊಚ್ಚಲ ಪಂದ್ಯ ಅದ್ಭುತವಾಗಿತ್ತು, ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ್ದೇನೆಂದು ಅವರು ಭಾವಿಸಿದ್ದರೆ, ಬಹುಶಃ ನಾವು ಅವರನ್ನು ಮುಂದಿನ ವರ್ಷ ನೋಡದೇ ಇರಬಹುದು," ಎಂದು ವೀರೇಂದ್ರ ಸೆಹ್ವಾಗ್‌ ತಿಳಿಸಿದ್ದಾರೆ.