ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kalaburagi Stampede: ಗುರುಪೂರ್ಣಿಮೆ ಪ್ರಯುಕ್ತ ಕಲಬುರಗಿ ಗಾಣಗಾಪುರ ದತ್ತನ ಸನ್ನಿಧಿಯಲ್ಲಿ ನೂಕು ನುಗ್ಗಲು; ಕಾಲ್ತುಳಿತಕ್ಕೆ ಮಹಿಳೆ ಬಲಿ?

Kalaburagi News: ಗುರು ಪೂರ್ಣಿಮೆ ಪವಿತ್ರ ದಿನ (ಜು. 10) ಗಾಣಗಾಪುರದ ದತ್ತಾತ್ರೇಯ ದೇವರ ದರ್ಶನ ಪಡೆಯಲು ಆಗಮಿಸಿದ ಮಹಿಳೆಯೊಬ್ಬರು ಕಾಲ್ತುಳಿತಕ್ಕೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ಮೂಲದ ಕಲಾವತಿ (50) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.

ಕಲಬುರಗಿ ಗಾಣಗಾಪುರ ದತ್ತನ ಸನ್ನಿಧಿಯಲ್ಲಿ ಕಾಲ್ತುಳಿತ; ಮಹಿಳೆ ಬಲಿ?

Profile Ramesh B Jul 10, 2025 8:33 PM

ಕಲಬುರಗಿ: ಗುರು ಪೂರ್ಣಿಮೆ ಪವಿತ್ರ ದಿನ (ಜು. 10) ಗಾಣಗಾಪುರದ ದತ್ತಾತ್ರೇಯ ದೇವರ ದರ್ಶನ ಪಡೆಯಲು ಆಗಮಿಸಿದ ಮಹಿಳೆಯೊಬ್ಬರು ಕಾಲ್ತುಳಿತಕ್ಕೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ (Kalaburagi Stampede). ಬೀದರ್ ಜಿಲ್ಲೆಯ ಬಸವಕಲ್ಯಾಣ ಮೂಲದ ಕಲಾವತಿ (50) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ (Kalaburagi News). ಗುರುವಾರ ಹುಣ್ಣಿಮೆ ಹಿನ್ನೆಲೆಯಲ್ಲಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರಕ್ಕೆ ಸಾವಿರಾರು ಜನರು ದತ್ತನ ಸನ್ನಿಧಿಗೆ ಆಗಮಿಸಿ ದರ್ಶನ ಪಡೆಯಲು ಮುಂದಾದಾಗ ಜನದಟ್ಟಣೆಯಿಂದಾಗಿ ಕಾಲ್ತುಳಿತ ಸಂಭವಿಸಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಿಂದ ಅಪಾರ ಪ್ರಮಾಣದಲ್ಲಿ ಭಕ್ತರು ದತ್ತಾತ್ರೇಯನ ದರ್ಶನಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿ ಮಹಿಳೆ ಕುಸಿದು ಬಿದ್ದು ದಾರುಣವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ: Kalaburagi News: ಸಿಸಿ ರಸ್ತೆ ಕಾಮಗಾರಿ ಬಿಲ್ ಮಂಜೂರು ಮಾಡಲು ಕಮಿಷನ್‌ಗೆ ಬೇಡಿಕೆ; ಇಬ್ಬರು ಅಧಿಕಾರಿಗಳ ಅಮಾನತು

ಜನಸಂದಣಿ ನಿರ್ವಹಣೆಗೆ ಎಸ್‌ಒಪಿ ರೂಪಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಬೃಹತ್ ಕಾರ್ಯಕ್ರಮಗಳು, ಸಭೆ ಹಾಗೂ ವಿಜಯೋತ್ಸವಗಳಲ್ಲಿ ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ರೂಪಿಸಲಿದೆ ಎಂದು ಇತ್ತೀಚೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಜನಸಂದಣಿ ನಿರ್ವಹಣೆಗಾಗಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (SOP-Standard operating procedure) ಪೊಲೀಸ್‌ ಇಲಾಖೆ ರೂಪಿಸಿದ್ದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಸಂಬಂಧಿಸಿದ ಅಧಿಕಾರಿಗಳಿಗೆ ರಾಜ್ಯ ಡಿಜಿ-ಐಜಿಪಿ ಡಾ. ಎಂ.ಎ.ಸಲೀಂ ಸೂಚಿಸಿದ್ದಾರೆ.

ಈ ಬಗ್ಗೆ ಡಿಜಿ-ಐಜಿಪಿ ಕೆಲವು ದಿನಗಳ ಹಿಂದೆ ಸುತ್ತೋಲೆ ಹೊರಡಿಸಿದ್ದು, ಜನಸಂದಣಿ ನಿರ್ವಹಣೆಗಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಎಸ್‌ಒಪಿಯಲ್ಲಿ ತಿಳಿಸಲಾಗಿದೆ.

ಎಸ್‌ಒಪಿ ಮಾರ್ಗಸೂಚಿಯಲ್ಲೇನಿದೆ?

  • ಜನಸಂದಣಿ ನಿರ್ವಹಣೆಗೆ ಪೂರ್ವ ಸಿದ್ಧತೆ, ಆಯೋಜಕರ ಜತೆ ಸಮನ್ವಯ ಹಾಗೂ ಪೊಲೀಸ್‌ ಬಂದೋಬಸ್ತ್‌ಗೆ ಅಗತ್ಯ ಕ್ರಮ ವಹಿಸಬೇಕು.
  • ಜನಸಮೂಹದ ವರ್ತನೆ ಪರಿಶೀಲಿಸುವುದು, ಬಾಟಲ್‌ ನೆಕ್‌ಗಳು, ಎಕ್ಸಿಟ್‌ಗಳನ್ನು ಗುರುತಿಸುವ ಮೂಲಕ ಲಭ್ಯವಿರುವ ಪರಿಕರಗಳನ್ನು ಬಳಸಿಕೊಂಡು ಸಂಭಾವ್ಯ ಅವಘಡ ತಡೆಯವುದು.
  • ಸ್ಥಳ ಸಾಮರ್ಥ್ಯದ ಮಿತಿಗಳು, ಪ್ರವೇಶ/ನಿರ್ಗಮನ ಮಾರ್ಗಗಳು, ತುರ್ತು ಸ್ಥಳಾಂತರಿಸುವ ಯೋಜನೆಗಳು ಮತ್ತು ಸಂವಹನ ಮೂಲಸೌಕರ್ಯ ಸೇರಿ ಸುರಕ್ಷತಾ ಮಾನದಂಡ ಖಚಿತಪಡಿಸಿಕೊಳ್ಳಬೇಕು.
  • ಸುರಕ್ಷತಾ ಪರಿಶೀಲನೆಯಲ್ಲಿ ವಿಫಲವಾದ ಸ್ಥಳಗಳಲ್ಲಿ ಬೃಹತ್ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಬೇಕು.
  • ಕಾರ್ಯಕ್ರಮಗಳಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಬೇಕು. ಆಂಬ್ಯುಲೆನ್ಸ್, ಪಾರ್ಕಿಂಗ್ ಪ್ರದೇಶ ಮತ್ತು ನಿಯಂತ್ರಣ ಕೊಠಡಿ ಮತ್ತಿತರ ವ್ಯವಸ್ಥೆ ಮಾಡಲು ಸೂಚಿಸುವುದು.
  • ಬೆಂಕಿ, ಕಾಲ್ತುಳಿತ ಇನ್ನಿತರ ಅವಘಡಗಳ ನಿಯಂತ್ರಣಕ್ಕೆ ತುರ್ತು ಸಿದ್ಧತೆ ಮಾಡಿಕೊಳ್ಳುವುದು. ಇದಕ್ಕಾಗಿ ತರಬೇತಿ ಮತ್ತು ಮಾಕ್‌ ಡ್ರಿಲ್‌ ಕೈಗೊಳ್ಳುವುದು.
  • ಜನಸಂದಣಿ ನಿಯಂತ್ರಿಸಲು ಅಥವಾ ಚದುರಿಸಲು ಎಚ್ಚರಿಕೆ ನೀಡಿದ ನಂತರವೇ ಪೊಲೀಸ್‌ ಸಿಬ್ಬಂದಿ ಬಳಸಬೇಕು ಮತ್ತು ಅನಗತ್ಯವಾಗಿ ಬಂಧನಕ್ಕೆ ಮುಂದಾಗಬಾರದು.
  • ಭವಿಷ್ಯದ ಸುಧಾರಣೆಗಾಗಿ, ಜನಸಂದಣಿಯ ಸಂಚಾರ, ತೆಗೆದುಕೊಂಡ ನಿರ್ಧಾರಗಳು ಮತ್ತು ನೀಡಿದ ಎಚ್ಚರಿಕೆಗಳನ್ನು ಆಡಿಯೋ/ವಿಡಿಯೋ ದಾಖಲೆಗಳ ಮೂಲಕ ದಾಖಲಿಸಬೇಕು.