Tamannaah Bhatia: ತಮನ್ನಾ ಮೇಲೆ ಲವ್ ಇದ್ರೆ ಸಿನಿಮಾ ಮಾಡಿ; ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಯುಕವೇ ಆಕ್ರೋಶ
Mysore Sandal Soap: ನಟಿ ತಮನ್ನಾ ಜತೆ ಕೆಎಸ್ಡಿಎಲ್ ಒಪ್ಪಂದವನ್ನು ರದ್ದು ಮಾಡದಿದ್ದರೆ ಕರವೇ ದೊಡ್ಡಮಟ್ಟದ ಹೋರಾಟ ಮಾಡಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಬೆಂಗಳೂರಿನ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಎದುರು ಯುವ ಕರ್ನಾಟಕ ವೇದಿಕೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರಿನ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಎದುರು ಯುವ ಕರ್ನಾಟಕ ವೇದಿಕೆ ಅಧ್ಯಕ್ಷ ರೂಪೇಶ್ ರಾಜಣ್ಣ ನೇತೃತ್ವದಲ್ಲಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ( ಫೋಟೋಗಳು-ಸುಧಾಕರ್ ದೇವರಾಜ್, ವಿಶ್ವವಾಣಿ)


ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL)ನ ಉತ್ಪನ್ನಗಳಿಗೆ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿರುವುದಕ್ಕೆ ಕನ್ನಡಪರ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ತಮನ್ನಾ ಜತೆ ಒಪ್ಪಂದವನ್ನು ರದ್ದು ಮಾಡದಿದ್ದರೆ ಕರವೇ ದೊಡ್ಡಮಟ್ಟದ ಹೋರಾಟ ಮಾಡಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಬೆಂಗಳೂರಿನ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಎದುರು ಯುವ ಕರ್ನಾಟಕ ವೇದಿಕೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕೆಎಸ್ಡಿಎಲ್ನ ಮೈಸೂರು ಸ್ಯಾಂಡಲ್ ಸೋಪ್ ಮತ್ತು ಇತರ ಉತ್ಪನ್ನಗಳಿಗೆ ಎರಡು ವರ್ಷಗಳ ಕಾಲ ಬ್ರಾಂಡ್ ಅಂಬಾಸಿಡರ್ ಆಗಿ ತಮನ್ನಾ ಆಯ್ಕೆಯಾಗಿದ್ದಾರೆ. ಇದಕ್ಕಾಗಿ ಅವರಿಗೆ 6.2 ಕೋಟಿ ರೂ. ಸಂಭಾವನೆ ನೀಡಲಾಗಿದೆ. ಆದರೆ, ಇಷ್ಟು ದೊಡ್ಡ ಮೊತ್ತದ ಹಣ ನೀಡಿ ಪರಭಾಷಾ ನಟಿಯನ್ನು ಕೆಎಸ್ಡಿಎಲ್ ರಾಯಭಾರಿ ಮಾಡಿರುವುದನ್ನು ಸಂಘಟನೆ ತೀವ್ರವಾಗಿ ಖಂಡಿಸಿದೆ.

ರದ್ದು ಮಾಡಿ ರದ್ದು ಮಾಡಿ ಕನ್ನಡ ವಿರೋಧಿ ಒಪ್ಪಂದ ರದ್ದು ಮಾಡಿ, ಕರ್ನಾಟಕದ ಅಸ್ಮಿತೆ ಮೈಸೂರು ಸ್ಯಾಂಡಲ್ ಸೋಪ್ಗೆ ಉತ್ತರ ಭಾರತದವರು ಬ್ರ್ಯಾಂಡ್ ಅಂಬಾಸಿಡರ್ ಆಗುವುದು ಬೇಡ, ಮಾಡೋದಾದ್ರೆ ಕನ್ನಡ ನಟಿಯರನ್ನೇ ರಾಯಭಾರಿ ಮಾಡಿ-ಇಲ್ಲದಿದ್ದರೆ ಒಪ್ಪಂದ ರದ್ದು ಮಾಡಿ ಎಂದು ಪ್ರತಿಭಟನೆ ವೇಳೆ ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಈ ವೇಳೆ ಕರವೇ ಮುಖಂಡ ರೂಪೇಶ್ ರಾಜಣ್ಣ ಅವರು ಮಾತನಾಡಿ, ಈ ಕನ್ನಡ ವಿರೋಧಿ ನೀತಿಯನ್ನು ನಾವು ಒಪ್ಪಲ್ಲ. ಮೈಸೂರು ಮಹಾರಾಜರು ಸ್ಥಾಪಿಸಿರುವ ಸ್ಯಾಂಡಲ್ ಸೋಪ್ ಬಗ್ಗೆ ಇಡೀ ದೇಶಕ್ಕೆ ಗೊತ್ತಿದೆ. ನೀವು ಯಾವುದೋ ನಟಿಯನ್ನು ಕರೆದುಕೊಂಡು ಬಂದು ರಾಯಭಾರಿ ಮಾಡಿದ್ದೀರಿ. ನಿಮಗೆ ಇಲ್ಲಿನ ಯಾವ ನಟಿಯರೂ ಸಿಗಲಿಲ್ಲವೇ? ಈ ಮೂಲಕ ಕನ್ನಡದವರಿಗೆ ಅವಮಾನ ಮಾಡುವ ಕೆಲಸ ಮಾಡಿದ್ದೀರಿ ಎಂದಿದ್ದಾರೆ.

ತಮನ್ನಾ ನೋಡಿ ಸೋಪ್ ತಗೋಳ್ತಾರಾ?
ತಮನ್ನಾ ನೋಡಿ ಸೋಪ್ ತಗೋಳ್ತಾರಾ? ನಿಮಗೆ ತಮನ್ನಾ ಮೇಲೆ ಅಷ್ಟೊಂದು ಲವ್ ಇದ್ರೆ ಅವರ ಜತೆ ಒಂದು ಸಿನಿಮಾ ಮಾಡಿ, ನಮಗೆ ಅವಶ್ಯಕತೆ ಇಲ್ಲ. ಸುದೀಪ್, ಯಶ್ ಹೀಗೆ ಕನ್ನಡದ ಹಲವು ನಟರಿದ್ದಾರೆ. ಅಲ್ಲದೇ ಇಲ್ಲಿನ ನಟಿಯರೂ ಸುಂದರವಾಗಿದ್ದಾರೆ. ಇವರನ್ನು ಬೇಕಾದರೆ ರಾಯಭಾರಿ ಮಾಡಿ ಎಂದು ಸಚಿವ ಎಂ.ಬಿ.ಪಾಟೀಲ್ ಹಾಗೂ ಕೆಎಸ್ಡಿಎಲ್ ಅಧ್ಯಕ್ಷರಿಗೆ ರೂಪೇಶ್ ರಾಜಣ್ಣ ಆಗ್ರಹಿಸಿದ್ದಾರೆ.
ಛಾಯಾಗ್ರಹಣ: ಸುಧಾಕರ್ ದೇವರಾಜ್