Shivaram Hebbar: ಪಕ್ಷ ವಿರೋಧಿ ಚಟುವಟಿಕೆಗೆ ಬಿಜೆಪಿ ಮುಖಂಡರೇ ಕಾರಣ: ಶಿವರಾಮ್ ಹೆಬ್ಬಾರ್ ಕಿಡಿ
Shivaram Hebbar: ಪಕ್ಷ ನೋಟಿಸ್ ನೀಡಿದಾಗ ನಾನು 16 ಪುಟದ ಉತ್ತರ ನೀಡಿದ್ದೇನೆ. ಪಕ್ಷ ನಿರ್ಣಯದಿಂದ ಆಶ್ಚರ್ಯವೂ ಆಗಿದೆ, ಸಂತೋಷವೂ ಆಗಿದೆ. ಪಕ್ಷ ಏನೇ ನಿರ್ಣಯ ತೆಗೆದುಕೊಂಡರೂ ಸ್ವಾಗತಿಸುತ್ತೇನೆ ಎಂದಿದ್ದೇನೆ ಎಂದು ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.


ಶಿರಸಿ: ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗೆ ಬಿಜೆಪಿ ಮುಖಂಡರೇ ಕಾರಣ. ಅಂದಿನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಹಿರಿಯ ನಾಯಕರ ಗಮನಕ್ಕೆ ತಂದರೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ನಾಯಕರಿಗೆ ಪಕ್ಷದ ಪ್ರಮುಖ ಸ್ಥಾನ ನೀಡಿದರು. ಹೀಗಾಗಿ ಪಕ್ಷದಲ್ಲಿ ತಟಸ್ಥವಾಗಿದ್ದೆ. ಪಕ್ಷದ ನಿರ್ಣಯದಿಂದ ಆಶ್ಚರ್ಯವೂ ಆಗಿದೆ, ಸಂತೋಷವೂ ಆಗಿದೆ ಎಂದು ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಬಿಜೆಪಿಯಿಂದ ಉಚ್ಚಾಟಿಸಿರುವ ಬಗ್ಗೆ ಯಲ್ಲಾಪುರದಲ್ಲಿ ಮಾತನಾಡಿರುವ ಅವರು, ಪಕ್ಷ ನೋಟಿಸ್ ನೀಡಿದಾಗ ನಾನು 16 ಪುಟದ ಉತ್ತರ ನೀಡಿದ್ದೇನೆ. ಪಕ್ಷ ನಿರ್ಣಯದಿಂದ ಆಶ್ಚರ್ಯವೂ ಆಗಿದೆ, ಸಂತೋಷವೂ ಆಗಿದೆ. ಪಕ್ಷ ಏನೇ ನಿರ್ಣಯ ತೆಗೆದುಕೊಂಡರೂ ಸ್ವಾಗತಿಸುತ್ತೇನೆ ಎಂದಿರುವುದಾಗಿ ತಿಳಿಸಿದ್ದಾರೆ.
ನಾನು ಯಾವ ಪಕ್ಷದಲ್ಲಿ ಚುನಾವಣೆ ನಿಂತಾಗಲೂ ಮುಖಂಡರು ವಿರೋಧ ಮಾಡಿದರೇ ಹೊರತು, ಕಾರ್ಯಕರ್ತರು ವಿರೋಧ ಮಾಡಿಲ್ಲ. ಬಿಜೆಪಿಯಲ್ಲಿ ಮುಖಂಡರು ವಿರೋಧ ಮಾಡಿದರೂ ಕಾರ್ಯಕರ್ತರು ಮಾಡಿಲ್ಲ. ಬಿಜೆಪಿಯಲ್ಲಿ ಎಷ್ಟು ಜನರನ್ನು ಉಚ್ಚಾಟನೆ ಮಾಡಲು ಕಾದಿದ್ದಾರೋ ಗೊತ್ತಿಲ್ಲ, ಮಾಡುತ್ತನೇ ಇರಲಿ. ನಮಗೆ ಹೇಗೆ ರಾಜಕಾರಣ ಮಾಡಬೇಕು ಗೊತ್ತಿದೆ, ಮಾಡುತ್ತೇವೆ ಎಂದು ಹೇಳಿದ್ದಾರೆ.
ನಮ್ಮ ಬಗ್ಗೆ ಮಾತನಾಡಿದರೇ ನಾನು ಹಾಗೂ ಎಸ್.ಟಿ ಸೋಮಶೇಖರ್ ಬೆಂಗಳೂರಿನಲ್ಲಿ ಅವರ ಹಣೆಬರಹ ಬಿಚ್ಚಿಡುತ್ತೇವೆ. ನನ್ನ ಬಿಜೆಪಿಗೆ ತೆಗೆದುಕೊಳ್ಳುವಾಗ ನಾನು ಕಾಂಗ್ರೆಸ್‌ನಲ್ಲಿ ಇದ್ದೇನೆ ಎಂಬ ಸತ್ಯ ಸಂಗತಿ ಬಿಜೆಪಿಗೆ ಗೊತ್ತಿತ್ತು ತಾನೇ, ನನ್ನನ್ನು ಏಕೆ ತೆಗೆದುಕೊಂಡರು. ನಾನು ಮಂತ್ರಿ ಸ್ಥಾನಕ್ಕಾಗಿ ಬಂದೆ ಎಂದರು, ಆದರೇ ನಾನು ಬಂದು ಮಂತ್ರಿಯಾದಾಗ ಯಾರೆಲ್ಲಾ ಮಂತ್ರಿಯಾದರು ಎಂಬುದು ಗೊತ್ತಿಲ್ಲವೇ? ಯಡಿಯೂರಪ್ಪ ಹೇಗೆ ಮುಖ್ಯಮಂತ್ರಿಯಾದರು ಅಂತ ಸತ್ಯ ಸಂಗತಿ ಬಿಚ್ಚಿಡಬೇಕು ಎಂದು ಆಗ್ರಹಿಸಿದ್ದಾರೆ.
ನನಗೆ ಪಕ್ಷ ನಡೆಸಿಕೊಂಡ ರೀತಿಯ ಬಗ್ಗೆ ಬೇಜಾರಿದೆ. ಅವಕಾಶ ಇದ್ದಾಗ ಬಳಸಿಕೊಂಡರು, ಅವಕಾಶ ಇಲ್ಲದಿದ್ದಾಗ ಬಿಟ್ಟರು. ಒಬ್ಬ ವ್ಯಕ್ತಿಯನ್ನು ಚುನಾವಣೆಗೆ ನಿಂತಾಗ ಸೋಲಿಸುವ ಯತ್ನಮಾಡಿದರಲ್ಲ ಅದಕ್ಕಿಂತ ಬೇರೇನು ಬೇಕಿಲ್ಲ. ನನ್ನ ತಲೆದಂಡ ಆಗಿದೆ ಎಂದು ನಾನು ಒಪ್ಪಿಕೊಳ್ಳುವುದಿಲ್ಲ, ನನ್ನ ತಲೆದಂಡ ಮಾಡುವವರು ನನ್ನ ಕ್ಷೇತ್ರದ ಮತದಾರ ಪ್ರಭುಗಳು ಎಂದು ಹೇಳಿದ್ದಾರೆ.
ಕಾರ್ಯಕರ್ತರು ಎಲ್ಲದಕ್ಕೂ ಕಾದು ನೋಡಿ, ಎಲ್ಲರೊಂದಿಗೆ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳುತ್ತೇವೆ. ನಾವು ಕೊಟ್ಟ ದೂರನ್ನು ಕಸದ ಬುಟ್ಟಿಗೆ ಹಾಕಿದರು. ಪಕ್ಷ ನಿರ್ಣಯ ತೆಗೆದುಕೊಳ್ಳಬೇಕಿತ್ತು, ತೆಗೆದುಕೊಳ್ಳಲಿಲ್ಲ. ರಾಜಕಾರಣದಲ್ಲಿ ಶಾಶ್ವತ ಶತ್ರುಗಳು ಇಲ್ಲ, ಮಿತ್ರರೂ ಇಲ್ಲ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | S T Somashekar: ಪಕ್ಷಕ್ಕೆ ಮುಜುಗರ ಆಗುವ ಕೆಲಸ ಮಾಡಿಲ್ಲ, ಉಚ್ಚಾಟನೆಯಿಂದ ಒಳ್ಳೇದಾಯ್ತು ಎಂದ ಎಸ್.ಟಿ. ಸೋಮಶೇಖರ್