ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಭಾರತದ ನಿಖರ ದಾಳಿಗೆ ಉಗ್ರರ ತಾಣ, ಪಾಕ್‌ ವಾಯು ನೆಲೆ ಛಿದ್ರ ಛಿದ್ರ; ಇಲ್ಲಿದೆ ಸ್ಯಾಟ್‌ಲೈಟ್‌ ಚಿತ್ರಗಳು

ಭಾರತದ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳು ಮೇ 10ರಂದು ಪ್ರಮುಖ ಪಾಕಿಸ್ತಾನಿ ವಾಯುನೆಲೆಗಳ ಮೇಲೆ ಭಾರತ ನಡೆಸಿದ ನಿಖರ ದಾಳಿಗಳ ಸರಣಿಯನ್ನು ದೃಢಪಡಿಸಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ತಾಣಗಳಲ್ಲಿ ಆಪರೇಷನ್ ಸಿಂದೂರ್‌ ಬಳಿಕ ಉಂಟಾದ ವಿನಾಶದ ದೃಶ್ಯ ಪುರಾವೆಗಳನ್ನು ಬಹಿರಂಗಪಡಿಸುವ ಉಪಗ್ರಹ ಚಿತ್ರಗಳಲ್ಲಿ ಇದು ಸ್ಪಷ್ಟಪಡಿಸಲಾಗಿದೆ.

ಭಾರತದ ನಿಖರ ದಾಳಿಗೆ ಉಗ್ರರ ತಾಣ, ಪಾಕ್‌ ವಾಯು ನೆಲೆ ಛಿದ್ರ ಛಿದ್ರ

Profile Ramesh B May 12, 2025 1:51 PM

ಹೊಸದಿಲ್ಲಿ: ಭಾರತದ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳು ಮೇ 10ರಂದು ಪ್ರಮುಖ ಪಾಕಿಸ್ತಾನಿ ವಾಯುನೆಲೆಗಳ ಮೇಲೆ ಭಾರತ ನಡೆಸಿದ ನಿಖರ ದಾಳಿಗಳ ಸರಣಿಯನ್ನು ದೃಢಪಡಿಸಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (POK)ದ ಭಯೋತ್ಪಾದಕ ತಾಣಗಳಲ್ಲಿ ಆಪರೇಷನ್ ಸಿಂದೂರ್‌ (Operation Sindoor) ಬಳಿಕ ಉಂಟಾದ ವಿನಾಶದ ದೃಶ್ಯ ಪುರಾವೆಗಳನ್ನು ಬಹಿರಂಗಪಡಿಸುವ ಉಪಗ್ರಹ ಚಿತ್ರಗಳಲ್ಲಿ ಇದು ಸ್ಪಷ್ಟಪಡಿಸಲಾಗಿದೆ. ಈ ದೃಶ್ಯಗಳು ಉಗ್ರರ 2 ಪ್ರಮುಖ ತಾಣಗಳಾದ ಮುರಿಡ್ಕೆ ಮತ್ತು ಬಹವಾಲ್ಪುರ ಯಾವ ರೀತಿ ಛಿದ್ರವಾಗಿದೆ ಎನ್ನುವುದನ್ನು ವಿವರಿಸಿದೆ.

ಏ. 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಂಡ ಭಾರತ ಮೇ 7ರಂದು ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ, ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಾದ್ಯಂತ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇವು ಲಷ್ಕರ್-ಎ-ತೈಬಾ (ಎಲ್‌ಇಟಿ), ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನ ಕಾರ್ಯಾಚರಣಾ ಕೇಂದ್ರಗಳ ನೆಲೆಯಾಗಿದ್ದವು. ಭಾರತೀಯ ಸಶಸ್ತ್ರ ಪಡೆಗಳು 9 ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದವು. ಇದರಲ್ಲಿ ಪಾಕಿಸ್ತಾನದ 4 (ಬಹವಾಲ್ಪುರ, ಮುರಿಡ್ಕೆ, ಸರ್ಜಲ್ ಮತ್ತು ಮೆಹಮೂನಾ ಜೋಯಾ) ಮತ್ತು ಪಿಒಜೆಕೆಯ 5 (ಸವಾಯಿ ನಲಾ -ಮುಜಫರಾಬಾದ್, ಸೈಯದ್ನಾ ಬಿಲಾಲ್- ಮುಜಫರಾಬಾದ್, ಗುಲ್ಪುರ್- ಕೋಟ್ಲಿ, ಬರ್ನಾಲಾ- ಭಿಂಬರ್ ಮತ್ತು ಅಬ್ಬಾಸ್- ಕೋಟ್ಲಿ) ತಾಣಗಳು ಸೇರಿದ್ದು, ಇವು ನಾಮಾವಶೇಷವಾಗಿದೆ.



Muridke

ಈ ಸುದ್ದಿಯನ್ನೂ ಓದಿ: Operation Sindoor: ಕಾರ್ಯಾಚರಣೆ ವೇಳೆ ಪಾಕಿಸ್ತಾನದ 40 ಯೋಧರ ಸಾವು; ಡಿಜಿಎಂಒ ರಾಜೀವ್‌ ಘಾಯ್‌

ಪ್ರಮುಖ ವಾಣಿಜ್ಯ ಕೇಂದ್ರವಾದ ಮುರಿಡ್ಕೆ, ಲಷ್ಕರ್-ಎ-ತೊಯ್ಬಾದ (LeT) ಪ್ರಧಾನ ಕಚೇರಿಯಾಗಿತ್ತು. ಇದನ್ನು ಪಾಕಿಸ್ತಾನದ ಭಯೋತ್ಪಾದಕಕ ನರ್ಸರಿ ಎಂದೂ ಕರೆಯಲಾಗುತ್ತದೆ. ಎಲ್‌ಇಟಿಯ ಪ್ರಧಾನ ಕಚೇರಿಯು ಸುಮಾರು 200 ಎಕರೆಗಳಷ್ಟು ವಿಸ್ತಾರವಾಗಿದ್ದು, ಭಯೋತ್ಪಾದಕ ತರಬೇತಿ ಶಿಬಿರ ಮತ್ತು ಇತರ ಮೂಲಸೌಕರ್ಯಗಳನ್ನು ಹೊಂದಿದೆ ಎನ್ನಲಾಗಿದೆ.

ಪಾಕಿಸ್ತಾನದ ಪಂಜಾಬ್‌ನ ಬಹವಾಲ್ಪುರ ಗುರಿಯಾಗಿಸಿಕೊಂಡೂ ನಡೆದ ಈ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್‌ನ ನೆಲೆಯೂ ಛಿದ್ರವಾಗಿದೆ. ಮಸೂದ್ ಅಜರ್ ನೇತೃತ್ವದ ಈ ಭಯೋತ್ಪಾದಕ ಸಂಘಟನೆಯು 2008ರಲ್ಲಿ ಮುಂಬೈನಲ್ಲಿ ನಡೆದ 26/11 ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎನ್ನಲಾಗಿದೆ.

Muridke 2

Muridke 3

ಪಾಕಿಸ್ತಾನದ ವಾಯುನೆಲೆಗಳ ಮೇಲೂ ಆಪರೇಷನ್ ಸಿಂದೂರ್

ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಭಾರತ ಭಯೋತ್ಪಾದಕ ತಾಣಗಳ ಮೇಲೆ ನಿಖರವಾದ ಕ್ರೂಸ್ ಕ್ಷಿಪಣಿ ದಾಳಿಗಳನ್ನು ನಡೆಸಿದ ನಂತರ, ಪಾಕಿಸ್ತಾನವು ಡ್ರೋನ್‌ ಮೂಲಕ ಭಾರತದ ನಾಗರಿಕರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದ ಆಯ್ದ ಮಿಲಿಟರಿ ತಾಣಗಳಾದ ರಾಡಾರ್, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಮತ್ತು ರಫಿಕಿ, ಚಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಸಿಯಾಲ್‌ಕೋಟ್‌ನಲ್ಲಿನ ಮದ್ದುಗುಂಡು ಡಿಪೋಗಳ ಮೇಲೆ ದಾಳಿ ನಡೆಸಿತು.

"ನೂರ್ ಖಾನ್, ರಫೀಕಿ, ಮುರಿದ್, ಸುಕ್ಕೂರ್, ಸಿಯಾಲ್ಕೋಟ್, ಪಸ್ರೂರ್, ಚುನಿಯನ್, ಸರ್ಗೋಧಾ, ಸ್ಕರು, ಭೋಲಾರಿ ಮತ್ತು ಜಕೋಬಾಬಾದ್ ಸೇರಿದಂತೆ 11 ವಾಯು ನೆಲೆಗಳ ಮೇಲೆ ದಾಳಿ ಮಾಡಲಾಯಿತು" ಎಂದು ಏರ್ ಮಾರ್ಷಲ್ ಎ.ಕೆ. ಭಾರ್ತಿ ವಿವರಿಸಿದ್ದಾರೆ. ಸದ್ಯ ಈ ತಾಣಗಳೆಲ್ಲ ನಾಶವಾಗಿರುವ ಸ್ಯಾಟ್‌ಲೈಟ್‌ ಚಿತ್ರಗಳನ್ನು ರಿಲೀಸ್‌ ಮಾಡಲಾಗಿದೆ.