ʼಚಿನ್ನ ನಿನ್ನ ಮಗ ಪಾಸ್ ಆಗಿದ್ದಾನೆʼ; ದಿವಂಗತ ಪತ್ನಿ ನೆನಪಲ್ಲಿ ವಿಜಯ್ ರಾಘವೇಂದ್ರ ಪೋಸ್ಟ್
Vijay Raghavendra: 12ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ನಟ ವಿಜಯ್ ರಾಘವೇಂದ್ರ ಅವರ ಪುತ್ರ ಶೌರ್ಯ ವಿಜಯ್ ಪಾಸ್ ಆಗಿದ್ದು, ಈ ಸಂಭ್ರಮದಲ್ಲಿ ದಿವಂಗತ ಪತ್ನಿ ಸ್ಪಂದನಾ ಅವರನ್ನು ನೆನೆಯುತ್ತಾ ನಟ ವಿಜಯ್ ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.



ಐಸಿಎಸ್ಇ 10ನೇ ತರಗತಿ ಮತ್ತು ಐಎಸ್ಸಿ 12ನೇ ತರಗತಿ ಪರೀಕ್ಷಾ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಸ್ಯಾಂಡಲ್ವುಡ್ನ ಖ್ಯಾತ ನಟ ವಿಜಯ್ ರಾಘವೇಂದ್ರ (Vijay Raghavendra) ಅವರ ಪುತ್ರ ಶೌರ್ಯ ವಿಜಯ್ ಕೂಡ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸ್ ಆಗಿದ್ದಾರೆ. ಈ ಸಂಭ್ರಮವನ್ನು ನಟ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮುದ್ದಿನ ಮಗನ ಕೆನ್ನೆಗೆ ವಿಜಯ್ ರಾಘವೇಂದ್ರ ಹಾಗೂ ಪತ್ನಿ ಸ್ಪಂದನಾ ವಿಜಯ್ ಮುತ್ತಿಡುವ ಹಳೆಯ ಫೋಟೋವನ್ನು ವಿಜಯ್ ರಾಘವೇಂದ್ರ ಶೇರ್ ಮಾಡಿದ್ದು, ಚಿನ್ನ, ನಿನ್ನ ಮಗ ಪಾಸ್ ಆಗಿದ್ದಾನೆ ಎಂದು ಪತ್ನಿಯನ್ನು ನೆನೆಯುತ್ತಾ ಪೋಸ್ಟ್ ಮಾಡಿದ್ದಾರೆ.

ಶೌರ್ಯ ವಿಜಯ್ ಐಎಸ್ಸಿ 12ನೇ ತರಗತಿಯಲ್ಲಿ ಓದುತ್ತಿದ್ದರು. ಇವರಿಗೆ ಪರೀಕ್ಷೆಯಲ್ಲಿ ಎಷ್ಟು ಪರ್ಸೆಂಟೇಜ್ ಬಂದಿದೆ. ಯಾವ ಸ್ಕೂಲ್ ನಲ್ಲಿ ಓದುತ್ತಿದ್ದರು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ ನಟ ತಮ್ಮ ಮಗನ ಯಶಸ್ಸನ್ನು ಹಂಚಿಕೊಳ್ಳುವ ಮೂಲಕ ತಾವೂ ಸಂಭ್ರಮಿಸಿದ್ದಾರೆ.

ಮಗನ ಪರೀಕ್ಷೆಯ ಸಮಯದಲ್ಲಿ ವಿಜಯ್ ರಾಘವೇಂದ್ರ ಕಾಳಜಿಯಿಂದ ಮಗನ ಜೊತೆಯಾಗಿ ನಿಂತು ಆತನಿಗೆ ಧೈರ್ಯ ತುಂಬಿದ್ದರು. ಮಗನ ಪರೀಕ್ಷೆ ಮುಗಿಯುತ್ತಿದ್ದಂತೆ ನಟ ಆತನನ್ನು ಕರೆದುಕೊಂಡು ಸಮ್ಮರ್ ವೆಕೇಶನ್ ಎಂಜಾಯ್ ಮಾಡಲು ಗೋವಾಕ್ಕೆ ತೆರಳಿದ್ದರು.

ಇನ್ನು ನಿನ್ನೆಯಷ್ಟೇ ಶೌರ್ಯ ಅಮ್ಮ ಸ್ಪಂದನಾ ವಿಜಯ್ ಅವರ ಹಳೆಯ ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಲ್ಯಾಪ್ಟಾಪ್ನಲ್ಲಿ ನನ್ನ ಫೋಟೋಗಳನ್ನು ಸ್ಕ್ರೋಲ್ ಮಾಡಿದಾಗ ಈ ಚಿತ್ರಗಳು ಸಿಕ್ಕವು...ಇದನ್ನೆಲ್ಲಾ ನೋಡಿ ಎಂದು ಬರೆದುಕೊಂಡಿದ್ದರು.

ವಿಜಯ್ ರಾಘವೇಂದ್ರ ಹಾಕಿರುವ ಫೋಟೊ ನೋಡಿ, ಅಭಿಮಾನಿಗಳು ಸಹ ಶೌರ್ಯನಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ರಾಘು ನಿಮ್ಮ ಪರಿಶ್ರಮ . ನಿಮ್ಮ ಮಗ ನಿಮ್ಮ ಆಸೆನಾ ನೆರೆವೇರಿಸುತ್ತಾನೆ. ದೇವರು ಇಬ್ಬರಿಗೂ ಆರೋಗ್ಯ ಆಯುಷ್ ಕೊಡಲಿ ಎಂದು ಶುಭ ಕೋರಿದ್ದಾರೆ.

2023ರಲ್ಲಿ ಫ್ಯಾಮಿಲಿ ಜೊತೆ ಬ್ಯಾಂಕಾಕ್ಗೆ ತೆರಳಿದ್ದ ಸ್ಪಂದನಾ, ಹೃದಯಾಘಾತದಿಂದ ಮಲಗಿದ್ದಲ್ಲೇ ಸಾವನ್ನಪ್ಪಿದ್ದರು. ಹಲವು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ವಿಜಯ್ ರಾಘವೇಂದ್ರ ಪ್ರೀತಿಯ ಪತ್ನಿ ಇಲ್ಲದೇ ಒಬ್ಬಂಟಿಯಾದರು. ಮಗ ಶೌರ್ಯ ಕೂಡ ಇವತ್ತಿಗೂ ಅಮ್ಮನನ್ನು ಮಿಸ್ ಮಾಡಿಕೊಳ್ಳುತ್ತಲೇ ಇದ್ದಾರೆ.