Kajal Aggarwal: ಹಿರಿದಾಗುತ್ತಿದೆ ʼರಾಮಾಯಣʼ ತಾರಾಬಳಗ; ಚಿತ್ರಕ್ಕೆ ಕಾಜಲ್ ಅಗರ್ವಾಲ್ ಎಂಟ್ರಿ: ಯಾವ ಪಾತ್ರ?
Ramayana Movie: ರಾಕಿಂಗ್ ಸ್ಟಾರ್ ಯಶ್ ಮೊದಲ ಬಾರಿಗೆ ಬಾಲಿವಿಡ್‌ನಲ್ಲಿ ನಟಿಸುತ್ತಿರುವ ಚಿತ್ರ ʼರಾಮಾಯಣʼ. ಜನಪ್ರಿಯ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ಈಗಾಗಲೇ ಗಮನ ಸೆಳೆದಿದೆ. ಇದೀಗ ಈ ಚಿತ್ರಕ್ಕೆ ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಆಯ್ಕೆಯಾಗಿದ್ದಾರೆ.

ಯಶ್ ಮತ್ತು ಕಾಜಲ್ ಅಗರ್ವಾಲ್.

ಮುಂಬೈ: ಸದ್ಯ ಜಾಗತಿಕ ಸಿನಿಪ್ರೇಮಿಗಳ ಗಮನ ಸೆಳೆದ ಚಿತ್ರ ಬಾಲಿವುಡ್‌ನ ʼರಾಮಾಯಣʼ (Ramayana). ಹಿಂದಿಯ ಜನಪ್ರಿಯ ನಿರ್ದೇಶಕ, ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿತೇಶ್ ತಿವಾರಿ (Nitesh Tiwari) ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ದೇಶ ಮಾತ್ರವಲ್ಲಿ ವಿದೇಶದಲ್ಲಿಯೂ ಕುತೂಹಲ ಕೆರಳಿಸಿದೆ. ಚಿತ್ರತಂಡ ಈಗಾಗಲೇ ಅಖಾಡಕ್ಕೆ ಇಳಿದೆ. ಭಾರತದ ಶ್ರೇಷ್ಠ ಮಹಾಕಾವ್ಯ ಆಧಾರಿತ ಚಿತ್ರ, ʼಕೆಜಿಎಫ್ʼ ಮೂಲಕ ಗಮನ ಸೆಳೆದ ಯಶ್ ಅಭಿನಯಿಸುತ್ತಿರುವ ಮೊದಲ ಹಿಂದಿ ಚಿತ್ರ, ಯಶ್ ಅವರ ಚೊಚ್ಚಲ ಪೌರಾಣಿಕ ಚಿತ್ರ, ಅದ್ಧೂರಿ ಮೇಕಿಂಗ್, ಬಹುತಾರಾಗಣ...ಹೀಗೆ ಅನೇಕ ಕಾರಣಗಳಿಂದ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ. ಇದೀಗ ಬಹುಭಾಷಾ ನಟಿ ಕಾಜಲ್ ಅಗರ್ವಾಲ್ (Kajal Aggarwal) ಚಿತ್ರತಂಡವನ್ನು ಸೇರಿಕೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಅವರು ಯಾವ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.
ʼರಾಮಾಯಣʼದಲ್ಲಿ ರಾವಣನಾಗಿ ಯಶ್ ಅಬ್ಬರಿಸಲಿದ್ದು, ಮೊದಲ ಬಾರಿಗೆ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಬಣ್ಣ ಹಚ್ಚಲಿದ್ದು, ಸಾಯಿ ಪಲ್ಲವಿ ಸೀತೆಯಾಗಲಿದ್ದಾರೆ.
ಕಾಜಲ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: Ramayana Movie: ಹಿರಿದಾಗುತ್ತಿದೆ 'ರಾಮಾಯಣ' ಪಾತ್ರವರ್ಗ; ಯಶ್ ತಾಯಿ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಎಂಟ್ರಿ
ಮಂಡೋದರಿಯಾಗಿ ಕಾಜಲ್ ಅಗರ್ವಾಲ್
ಮೂಲಗಳ ಪ್ರಕಾರ ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಈ ಚಿತ್ರದಲ್ಲಿ ರಾವಣನ ಪತ್ನಿ ಮಂಡೋದರಿ ಪಾತ್ರದಲ್ಲಿ ನಟಿಸಲಿದ್ದಾರೆ. ʼರಾಮಾಯಣʼದಲ್ಲಿ ಮಂಡೋದರಿ ಪಾತ್ರಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ. ಪುರಾಣಗಳ ಮಹಾ ಪತಿವ್ರತೆಯರಲ್ಲಿ ಮಂಡೋದರಿ ಕೂಡ ಒಬ್ಬರು. ʼರಾಮಾಯಣʼ ಕೃತಿಯಲ್ಲಿ ಇವರ ಪಾತ್ರ ಸೀಮಿತವಾಗಿ ಕಂಡು ಬಂದರೂ ಇಂದಿಗೂ ಬಹಳಷ್ಟು ಜನರು ನೆನಪಿಸಿಕೊಳ್ಳುತ್ತಾರೆ. ಅಂತಹ ಪರಿಣಾಮಕಾರಿ ಪಾತ್ರದಲ್ಲಿ ಕಾಜಲ್ ಯಾವ ರೀತಿ ಅಭಿನಯಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.
ಯಶ್ ಮತ್ತು ಕಾಜಲ್ ಇದೇ ಮೊದಲ ಬಾರಿಗೆ ಜತೆಯಾಗಿ ನಟಿಸುವ ಕಾರಣಕ್ಕೂ ಕುತೂಹಲ ಕೆರಳಿಸಿದೆ. ತೆಲುಗು, ತಮಿಳು ಜತೆಗೆ ಹಿಂದಿ ಚಿತ್ರರಂಗದಲ್ಲಿಯೂ ಕಾಜಲ್ ಬಹು ಜನಪ್ರಿಯ ನಟಿ. ಈಗಾಗಲೇ ಪ್ರಮುಖ ಸ್ಟಾರ್‌ಗಳಿಗೆ ಜೋಡಿಯಾಗಿ ಅಭಿನಯಿಸಿರುವ ಅವರು ಈ ಹಿಂದೆ ಸ್ಯಾಂಡಲ್‌ವುಡ್‌ಗೂ ಬಂದು ಹೋಗಿದ್ದಾರೆ. ಆದರೆ ನಾಯಕಿಯಾಗಲ್ಲ, ಗಾಯಕಿಯಾಗಿ. 2016ರಲ್ಲಿ ತೆರೆಕಂಡ ಕನ್ನಡ ಚಿತ್ರ ʼಚಕ್ರವ್ಯೂಹʼದಲ್ಲಿ ಅವರು 1 ಹಾಡಿಗೆ ಧ್ವನಿ ನೀಡಿದ್ದರು. ಪುನೀತ್ ರಾಜ್‌ಕುಮಾರ್-ರಚಿತಾ ರಾಮ್ ನಟನೆಯ ಈ ಚಿತ್ರಕ್ಕೆ ಎಸ್.ತಮನ್ ಸಂಗೀತ ನಿರ್ದೇಶನ ನೀಡಿದ್ದರು. ಇದರಲ್ಲಿನ ʼಏನಾಯ್ತುʼ ಹಾಡು ಕಾಜಲ್ ಕಂಠಸಿರಿಯಲ್ಲಿ ಮೂಡಿಬಂದಿದ್ದು, ಹಿಟ್ ಲಿಸ್ಟ್‌ಗೆ ಸೇರಿತ್ತು. ಇಂದಿಗೂ ಕನ್ನಡ ಚಿತ್ರಪ್ರೇಮಿಗಳು ಈ ಹಾಡನ್ನು ಗುನುಗುತ್ತಿದ್ದಾರೆ. ಅವರು ಹಾಡಿದ ಒಂದೇ ಒಂದು ಹಾಡು ಇದು ಎನ್ನುವುದು ವಿಶೇಷ.
ಬಹುತಾರಾಗಣ
ವರದಿಯೊಂದರ ಪ್ರಕಾರ ರವಿ ದುಬೆ ಲಕ್ಷ್ಮಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ, ಲಾರಾ ದತ್ತ ಕೈಕೇಯಿ ಆಗಿ ನಟಿಸಲಿದ್ದಾರೆ. ಇನ್ನು ಯಾರೆಲ್ಲ ಅಭಿನಯಿಸಲಿದ್ದಾರೆ ಎನ್ನುವ ಸಂಪೂರ್ಣ ಗುಟ್ಟನ್ನು ಚಿತ್ರತಂಡ ಬಿಟ್ಟು ಕೊಟ್ಟಿಲ್ಲ.
ʼರಾಮಾಯಣʼ 2 ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗ 2026ರ ದೀಪಾವಳಿ ಮತ್ತು 2ನೇ ಭಾಗ 2027ರ ದೀಪಾವಳಿಯಂದು ರಲೀಸ್ ಆಗಲಿದೆ. ನಟನೆಯ ಜತೆಗೆ ಯಶ್ ನಿರ್ಮಾಣದಲ್ಲಿಯೂ ಕೈಜೋಡಿಸಿದ್ದಾರೆ.