Paresh Rawal: ನಟ ಪರೇಶ್ ರಾವಲ್ 'ಹೇರಾ ಫೇರಿ 3' ಸಿನಿಮಾದಿಂದ ಹೊರನಡೆಯಲು ಈ ಸ್ಟಾರ್ ನಟನೇ ಕಾರಣ
ʼಹೇರಾ ಫೇರಿ 3ʼ ಚಿತ್ರದಿಂದ ನಟ ಪರೇಶ್ ರಾವಲ್ ದಿಢೀರನೆ ನಿರ್ಗಮಿಸಿದ್ದು ಅಭಿಮಾನಿಗಳಿಗೂ ಶಾಕ್ ಆಗಿತ್ತು. ಇದರಿಂದ ನಿರ್ಮಾಪಕರಿಗೂ ತೊಂದರೆಯಾಗಿದೆ. ಹಾಗಾಗಿ ನಷ್ಟ ಮೊತ್ತ ಭರಿಸಬೇಕು ಎಂದು ಸಹ ನಿರ್ಮಾಪಕ, ನಟ ಅಕ್ಷಯ್ ಕುಮಾರ್ ಪರೇಶ್ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ್ದಾರೆ. ಇದರ ಬೆನ್ನಲ್ಲೇ ಪರೇಶ್ ರಾವಲ್ ಈ ಆರೋಪಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅವರೇನು ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.

Paresh Rawal Hera Pheri 3 Exit Controversy

ನವದೆಹಲಿ: ಬಾಲಿವುಡ್ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ʼಹೇರಾ ಫೇರಿʼ ಎಂದಾಗ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ, ಪರೇಶ್ ರಾವಲ್ ಅವರ ಕಾಮಿಡಿ ಸಿಕ್ವೆನ್ಸ್ ನೆನಪಾಗುತ್ತವೆ. ʼಹೇರಾ ಫೇರಿʼ, ʼಫಿರ್ ಹೇರಾ ಫೇರಿʼ ಸಕ್ಸಸ್ ಬಳಿಕ ʼಹೇರಾ ಫೇರಿ 3ʼ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿದೆ. ಆದರೆ ಇದೀಗ ʼಹೇರಾ ಫೇರಿ 3ʼ ಚಿತ್ರದಿಂದ ನಟ ಪರೇಶ್ ರಾವಲ್ (Paresh Rawal) ದಿಢೀರನೆ ನಿರ್ಗಮಿಸಿದ್ದು, ಅಭಿಮಾನಿಗಳಿಗೆ ಶಾಕ್ ಆಗಿದೆ. ನಟ ಪರೇಶ್ ರಾವಲ್ ಸಿನಿಮಾದಿಂದ ನಿರ್ಗಮಿಸಿದ್ದು ನಿರ್ಮಾಪಕರಿಗೆ ತೊಂದರೆಯಾಗಿದೆ. ಹಾಗಾಗಿ ನಷ್ಟ ಮೊತ್ತ ಭರಿಸಬೇಕು ಎಂದು ಸಹ ನಿರ್ಮಾಪಕ, ನಟ ಅಕ್ಷಯ್ ಕುಮಾರ್ ಅವರು ಪರೇಶ್ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ್ದಾರೆ. ಇದರ ಬೆನ್ನಲ್ಲೇ ಪರೇಶ್ ರಾವಲ್ ಈ ಆರೋ ಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ʼಹೇರಾ ಫೇರಿ 3ʼ ಸಿನಿಮಾದಿಂದ ಹೊರ ನಡೆದ ನಟ ಪರೇಶ್ ರಾವಲ್ ತನ್ನ ಮೇಲೆ ಹೊರಿಸಲಾದ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ನಟ ಪರೇಶ್ ರಾವಲ್ ನಿರ್ಮಾಣ ಸಂಸ್ಥೆಯಿಂದ 11 ಲಕ್ಷ ರೂಪಾಯಿ ಅಡ್ವಾನ್ಸ್ ಮೊತ್ತ ಪಡೆದಿದ್ದು ಅದನ್ನು ವಾಪಾಸ್ ನೀಡಿದ್ದಾರೆ. 11 ಲಕ್ಷ ರೂಪಾಯಿಗೆ 15% ಬಡ್ಡಿ ಸೇರಿಸಿ ಹಣ ವಾಪಸ್ ನೀಡಿದ್ದಾರೆ ಎಂದು ತಮ್ಮ ವಕೀಲರ ಮೂಲಕ ನೊಟೀಸ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೇ 25ರಂದು ಈ ಬಗ್ಗೆ ನಟ ಪರೇಶ್ ರಾವಲ್ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ʼʼನನ್ನ ವಕೀಲ ಅಮಿತ್ ನಾಯಕ್ ʼಹೇರಾ ಫೇರಿ 3ʼ ಚಿತ್ರದಿಂದ ನಾನು ನಿರ್ಗಮಿಸಿರುವ ಬಗ್ಗೆ ಸೂಕ್ತ ಪ್ರತಿಕ್ರಿಯೆಯನ್ನು ಸಂಬಂಧಿಸಿದವರಿಗೆ (ಅಕ್ಷಯ್ ಕುಮಾರ್, ಚಿತ್ರತಂಡಕ್ಕೆ) ನೀಡಿದ್ದಾರೆ. ನನ್ನ ಪ್ರತಿಕ್ರಿಯೆಯನ್ನು ಓದಿದ ಬಳಿಕ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿ: My Hero Movie: ಮೇ 30 ರಿಂದ ಅಮೇಜಾನ್ ಪ್ರೈಮ್‌ನಲ್ಲಿ ʼಮೈ ಹೀರೋʼ ಪ್ರದರ್ಶನ
ಪರೇಶ್ ರಾವಲ್ ಮಾರ್ಚ್‌ನಲ್ಲಿ ʼಭೂತ್ ಬಾಂಗ್ಲಾʼ ಚಿತ್ರೀಕರಣದಲ್ಲಿದ್ದಾಗ ನಟ ಅಕ್ಷಯ್ ಕುಮಾರ್ ಆಗಮಿಸಿ ʼಹೇರಾ ಫೇರಿ 3ʼ ಚಿತ್ರಕ್ಕಾಗಿ ಸಹಿ ಹಾಕಲು ಅಗ್ರಿಮೆಂಟ್ ಕಾಪಿ ನೀಡಿದ್ದಾರೆ. ಆ ಅಗ್ರಿಮೆಂಟ್ ಕಾಪಿಯಲ್ಲಿ ಬಹುತೇಕ ವಿಚಾರಗಳು ಇರಲಿಲ್ಲ, ಅದನ್ನು ಪರೇಶ್ ಪ್ರಶ್ನೆ ಮಾಡಿದ್ದಕ್ಕೆ ಪೂರ್ಣ ಒಪ್ಪಂದವು ನಂತರ ಬರಲಿದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದರಂತೆ. ಹೀಗಾಗಿ ಅಗ್ರಿಮೆಂಟ್ ಕಾನೂನು ಬದ್ಧತೆಗಳನ್ನು ಪರಿಗಣಿಸದೆ, ನಂಬಿಕೆಯಿಂದ ನಟ ಪರೇಶ್ ಸಹಿ ಹಾಕಿದ್ದರಂತೆ. ಇನ್ನು ಚಿತ್ರದ ಶೀರ್ಷಿಕೆಯ ಮಾಲೀಕತ್ವದ ಬಗ್ಗೆ ಫಿರೋಜ್ ನಾಡಿಯಾದ್ವಾಲಾ ಮತ್ತು ಅಕ್ಷಯ್ ಕುಮಾರ್ ನಡುವೆ ಕಾನೂನು ವಿವಾದ ನಡೆಯುತ್ತಿದ್ದು, ಈವರೆಗೆ ಚಿತ್ರದ ಸ್ಕ್ರಿಪ್ಟ್ ಕೂಡ ರೆಡಿ ಆಗಿರಲಿಲ್ಲ. ಇದು ಕೂಡ ಪರೇಶ್ ಗಮನಕ್ಕೆ ಬಂದಿದೆ. ಈ ಎಲ್ಲ ಕಾರಣದಿಂದ ಪರೇಶ್ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ.
ʼಹೇರಾ ಫೇರಿ 3ʼ ಸಿನಿಮಾದಲ್ಲಿ ಮೊದಲಿಗೆ ಅಕ್ಷಯ್ ಕುಮಾರ್ ನಟಿಸುವುದಿಲ್ಲ ಎಂದು ಹಿಂದೆ ಸರಿದಿದ್ದರಂತೆ. ಆಗ ಸಹ ನಟ ಸುನೀಲ್ ಶೆಟ್ಟಿ ಇನ್ನಿತರರು ಸೇರಿ ಅವರ ಮನ ವೊಲಿಸಿದ್ದಾರೆ. ಕೊನೆಗೆ ಅಕ್ಷಯ್ ಕುಮಾರ್ ನಟನೆ ಜತೆಗೆ ನಿರ್ಮಾಣ ಮಾಡುವ ಷರತ್ತು ವಿಧಿಸಿ ಸಿನಿಮಾಕ್ಕೆ ಒಪ್ಪಿಗೆ ನೀಡಿದ್ದರು. ಆದರೆ ಪರೇಶ್ ರಾವಲ್ ಈ ಸಿನಿಮಾದಿಂದ ಹೊರ ಹೋಗಿದ್ದು ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದಂತಾಗಿದೆ.