Vijay Deverakonda : ಬುಡಕಟ್ಟು ಜನರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ ; ದಯವಿಟ್ಟು ಕ್ಷಮಿಸಿ ಎಂದ ವಿಜಯ್ ದೇವರಕೊಂಡ
ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Deverakonda) ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬುಡಕಟ್ಟು ಸಮುದಾಯದ ಬಗ್ಗೆ ನಟ ವಿಜಯ್ ದೇವರಕೊಂಡ ಅವರು ಮಾಡಿದ ಹೇಳಿಕೆಯಿಂದಾಗಿ ಕಾನೂನು ಸಂಕಷ್ಟ ಎದುರಾಗಿದೆ.


ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Deverakonda) ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬುಡಕಟ್ಟು ಸಮುದಾಯದ ಬಗ್ಗೆ ನಟ ವಿಜಯ್ ದೇವರಕೊಂಡ ಅವರು ಮಾಡಿದ ಹೇಳಿಕೆಯಿಂದಾಗಿ ಕಾನೂನು ಸಂಕಷ್ಟ ಎದುರಾಗಿದೆ. ಹೈದರಾಬಾದ್ ಜೆಆರ್‌ಸಿ ಕನ್ವೆಂಷನ್ ಸೆಂಟರ್‌ನಲ್ಲಿ ರೆಟ್ರೋ ಚಲನಚಿತ್ರದ ಫ್ರೀ ರಿಲೀಸ್ ಕಾರ್ಯಕ್ರಮ ನಡೆದಿತ್ತು. ಈ ವೇಳೆ ವಿಜಯ್ ದೇವರಕೊಂಡ ಮಾತನಾಡುತ್ತಾ, ಪಹಲ್ಗಾಮ್ ಭಯೋತ್ಪಾದಕ ದಾಳಿ ನೂರಾರು ವರ್ಷಗಳ ಹಿಂದಿನ ಬುಡಕಟ್ಟು ಸಮುದಾಯಗಳ ನಡುವಿನ ಘರ್ಷಣೆಗಳಿಗೆ ಹೋಲುತ್ತವೆ ಎಂದು ಹೇಳಿದ್ದಾರೆ.
ಸದ್ಯ ನಟ ಹೇಳಿದ್ದ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರ ಹೇಳಿಕೆ ಬುಡಕಟ್ಟು ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿದೆ ಎಂದು ಆರೋಪಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೀಗ ನಟ ಆ ಹೇಳಿಕೆ ಕುರಿತು ಸ್ಫಷ್ಟನೆ ನೀಡಿ ಕ್ಷಮೆ ಕೇಳಿದ್ದಾರೆ. ಯಾವುದೇ ಸಮುದಾಯವನ್ನು, ವಿಶೇಷವಾಗಿ ಪರಿಶಿಷ್ಟ ಪಂಗಡಗಳನ್ನು ಅಪರಾಧ ಮಾಡುವ ಉದ್ದೇಶ ತಮಗೆ ಇರಲಿಲ್ಲ ಎಂದು ದೇವರಕೊಂಡ ತಿಳಿಸಿದ್ದಾರೆ.
ತಮ್ಮ ಇತ್ತೀಚಿನ ಹೇಳಿಕೆಗಳಿಗೆ ವ್ಯಕ್ತವಾದ ಪ್ರತಿಕ್ರಿಯೆಗೆ ಪ್ರತಿಕ್ರಿಯಿಸುತ್ತಾ, ನಟ "ರೆಟ್ರೋ ಆಡಿಯೋ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ನಾನು ಮಾಡಿದ ಒಂದು ಹೇಳಿಕೆಯು ಕೆಲವು ಸಾರ್ವಜನಿಕರಲ್ಲಿ ಕಳವಳವನ್ನುಂಟುಮಾಡಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ನಾನು ಪ್ರಾಮಾಣಿಕವಾಗಿ ಸ್ಪಷ್ಟಪಡಿಸಲು ಬಯಸುತ್ತೇನೆ, ಯಾವುದೇ ಸಮುದಾಯವನ್ನು, ವಿಶೇಷವಾಗಿ ನಮ್ಮ ಪರಿಶಿಷ್ಟ ಪಂಗಡಗಳನ್ನು ನೋಯಿಸುವ ಅಥವಾ ಗುರಿಯಾಗಿಸುವ ಯಾವುದೇ ಉದ್ದೇಶವಿರಲಿಲ್ಲ, ಅವರನ್ನು ಗೌರವಿಸುತ್ತೇನೆ. ನಾನು ಏಕತೆಯ ಬಗ್ಗೆ ಮಾತನಾಡುತ್ತಿದ್ದೆ. ಭಾರತೀಯರೆಲ್ಲರೂ ಒಂದು. ಯಾರನ್ನೂ ಇಲ್ಲಿ ತಾರತಮ್ಯ ಮಾಡಲಾಗುವುದಿಲ್ಲ. ಅವರೆಲ್ಲರನ್ನೂ ನಾನು ನನ್ನ ಕುಟುಂಬ ಎಂದು ನೋಡುತ್ತೇನೆ, ನನ್ನ ಸಹೋದರರಂತೆ," ಎಂದು ಅವರು ಸ್ಪಷ್ಟಪಡಿಸಿದರು.
ಈ ಸುದ್ದಿಯನ್ನೂ ಓದಿ: Rashmika Mandanna: ಒಮನ್ ಟ್ರಿಪ್‌ನಲ್ಲಿರೋ ರಶ್ಮಿಕಾ ಮತ್ತಷ್ಟು ಫೋಟೋಗಳು ವೈರಲ್- ದೇವರಕೊಂಡ ಕ್ಲಿಕ್ಕಿಸಿದ ಫೋಟೋ ಎಂದ ಫ್ಯಾನ್ಸ್
ನಾನು ಬಳಸಿದ "ಬುಡಕಟ್ಟು" ಎಂಬ ಪದವು ಐತಿಹಾಸಿಕ ಮತ್ತು ನಿಘಂಟಿನ ಅರ್ಥದಲ್ಲಿದೆ - ಶತಮಾನಗಳ ಹಿಂದೆ ಮಾನವ ಸಮಾಜವು ಜಾಗತಿಕವಾಗಿ ಬುಡಕಟ್ಟುಗಳು ಮತ್ತು ಕುಲಗಳಾಗಿ ಸಂಘಟಿತವಾಗಿದ್ದ, ಆಗಾಗ್ಗೆ ಸಂಘರ್ಷದಲ್ಲಿದ್ದ ಸಮಯವನ್ನು ಉಲ್ಲೇಖಿಸುತ್ತದೆ. ಇದು ಎಂದಿಗೂ ಪರಿಶಿಷ್ಟ ಪಂಗಡಗಳ ವರ್ಗೀಕರಣದ ಉಲ್ಲೇಖವಾಗಿರಲಿಲ್ಲ, ಇದನ್ನು ವಸಾಹತುಶಾಹಿ ಮತ್ತು ವಸಾಹತುಶಾಹಿ ನಂತರದ ಭಾರತದಲ್ಲಿ ಪರಿಚಯಿಸಲಾಯಿತು ಎಂದು ಅವರು ಸಮರ್ಥಿಸಿಕೊಂಡರು. ನಾನು ಹೇಳಿರುವುದು ಯಾರಿಗಾದರೂ ನೋವುಂಟಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ನಟ ಹೇಳಿದರು.