RCB vs CSK: ʻ14 ಎಸೆತಗಳಲ್ಲಿ 53 ರನ್ʼ-ಎರಡನೇ ವೇಗದ ಅರ್ಧಶತಕ ಬಾರಿಸಿದ ರೊಮ್ಯಾರಿಯೊ ಶೆಫರ್ಡ್!
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಕೇವಲ 14 ಎಸೆತಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟರ್ ರೊಮ್ಯಾರಿಯೊ ಶೆಫರ್ಡ್ ಅರ್ಧಶತಕ ಬಾರಿಸಿದರು. ಆ ಮೂಲಕ ಐಪಿಎಲ್ ಇತಿಹಾಸದ ಎರಡನೇ ವೇಗದ ಅರ್ಧಶತಕವನ್ನು ಬಾರಿಸಿದರು.



ಎಂ ಚಿನ್ನಸ್ವಾಮಿಯಲ್ಲಿ ಶೆಫರ್ಡ್ ಅಬ್ಬರ
ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ರೌಂಡರ್ ರೊಮ್ಯಾರಿಯೊ ಶೆಫರ್ಡ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದರು. ಆ ಮೂಲಕ ತವರು ಅಂಗಣದಲ್ಲಿ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಿದರು.

14 ಎಸೆತಗಳಲ್ಲಿ 53 ರನ್
ಆರ್ಸಿಬಿ ಪರ ಏಳನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ರೊಮ್ಯಾರಿಯೊ ಶೆಫರ್ಡ್, ಸಿಎಸ್ಕೆ ಬೌಲರ್ಗಳನ್ನು ಭರ್ಜರಿಯಾಗಿ ದಂಡಿಸಿದರು. ಅವರು ಆಡಿದ ಕೇವಲ 14 ಎಸೆತಗಳಲ್ಲಿ 53 ರನ್ ಸಿಡಿಸಿದರು. ಇದರಲ್ಲಿ ಅವರು ಭರ್ಜರಿ 6 ಸಿಕ್ಸರ್ ಹಾಗೂ 4 ಬೌಂಡರಿಗಳನ್ನು ಬಾರಿಸಿದರು.

ಎರಡನೇ ವೇಗದ ಅರ್ಧಶತಕ
14 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸುವ ಮೂಲಕ ರೊಮ್ಯಾರಿಯೊ ಶೆಫರ್ಡ್, ಐಪಿಎಲ್ ಟೂರ್ನಿಯಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಎರಡನೇ ವೇಗದ ಅರ್ಧಶತಕವನ್ನು ಬಾರಿಸಿದ್ದಾರೆ.

ಅಗ್ರ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್
ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ದಾಖಲೆ ರಾಜಸ್ಥಾನ್ ರಾಯಲ್ಸ್ ಆರಂಭಿಕ ಯಶಸ್ವಿ ಜೈಸ್ವಾಲ್ ಹೆಸರಿನಲ್ಲಿದೆ. ಅವರು ಕೋಲ್ಕತಾ ನೈಟ್ ರೈಡರ್ಸ್ ಎದುರು 2023ರ ಐಪಿಎಲ್ ಪಂದ್ಯದಲ್ಲಿ 13 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದರು.

ಜಂಟಿ ಎರಡನೇ ಸ್ಥಾನ
ಸನ್ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೆಎಲ್ ರಾಹುಲ್ ಕೂಡ 14 ಎಸೆತಗಳಲ್ಲಿ ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದೀಗ ಇವರ ಜೊತೆ ಎರಡನೇ ಜಂಟಿ ಸ್ಥಾನವನ್ನು ಶೆಫರ್ಡ್ ಪಡೆದಿದ್ದಾರೆ.

19ನೇ ಓವರ್ನಲ್ಲಿ 33 ರನ್ ಚಚ್ಚಿದ ಶೆಫರ್ಡ್
ಆರ್ಸಿಬಿ ಇನಿಂಗ್ಸ್ನ 19ನೇ ಓವರ್ನಲ್ಲಿ ಖಲೀಲ್ ಅಹ್ಮದ್ಗೆ ರೊಮ್ಯಾರಿಯೊ ಶೆಫರ್ಡ್ 33 ರನ್ಗಳನ್ನು ಸಿಡಿಸಿದ್ದರು. ಈ ಓವರ್ನಲ್ಲಿ ಅವರು 4 ಸಿಕ್ಸರ್ ಹಾಗೂ 2 ಬೌಂಡರಿಗಳನ್ನು ಬಾರಿಸಿದ್ದರು.