ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಆಪರೇಷನ್ ಸಿಂದೂರ್‌ನಲ್ಲಿ ಬಳಕೆಯಾದ ಮಾನವರಹಿತ ವಿಮಾನ ಪಾಕ್‌ನ ದಾರಿ ತಪ್ಪಿಸಿದ್ದು ಹೇಗೆ ಗೊತ್ತೆ?

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಉಗ್ರರ ಸಂಹಾರಕ್ಕೆ ಮುಂದಾದ ಭಾರತೀಯ ಸೇನೆ ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿದೆ. ಪಾಕಿಸ್ತಾನ ಸೇನೆಗೆ ಗೊಂದಲವನ್ನು ಉಂಟು ಮಾಡಲು ಭಾರತ ಮಾನವರಹಿತ ನಕಲಿ ವಿಮಾನಗಳನ್ನು ಬಳಸಿದೆ. ಇದು ಹೇಗಿತ್ತು, ಯಾವ ರೀತಿ ಕಾರ್ಯನಿರ್ವಹಿಸಿತ್ತು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಆಪರೇಷನ್ ಸಿಂದೂರ್ ವೇಳೆ ಪಾಕಿಸ್ತಾನದ ದಾರಿ ತಪ್ಪಿಸಿದ್ದು ಯಾರು?

ನವದೆಹಲಿ: ಪಹಲ್ಗಾಮ್‌ನಲ್ಲಿ (Pahalgam) ನಡೆದ ಭಯೋತ್ಪಾದಕ ದಾಳಿಗೆ (Terror attack) ಪ್ರತಿಯಾಗಿ ಉಗ್ರರ ಸಂಹಾರಕ್ಕೆ ಮುಂದಾದ ಭಾರತೀಯ ಸೇನೆಯು (Indian army) ನಡೆಸಿದ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ಸಮಯದಲ್ಲಿ ಪಾಕಿಸ್ತಾನ ಸೇನೆಗೆ ಗೊಂದಲವನ್ನು ಉಂಟು ಮಾಡಲು ಭಾರತ ಮಾನವರಹಿತ ನಕಲಿ ವಿಮಾನಗಳನ್ನು ಬಳಸಿರುವುದಾಗಿ ತಿಳಿದು ಬಂದಿದೆ. ಭಾರತೀಯ ವಾಯುಪಡೆಯು (Indian Air Force) ಫೈಟರ್ ಜೆಟ್‌ಗಳ ರೀತಿಯಲ್ಲಿದ್ದ ನಕಲಿ ವಿಮಾನಗಳು ಆಪರೇಷನ್ ಸಿಂದೂರ್ ಕಾರ್ಯಚರಣೆ ವೇಳೆ ಪಾಕಿಸ್ತಾನದ ಚೀನಾ ಸರಬರಾಜು ವಾಯು ರಕ್ಷಣಾ ವ್ಯವಸ್ಥೆಗಳನ್ನು ಆಕರ್ಷಿಸುವಲ್ಲಿ ಮತ್ತು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದೆ.

ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸಾರಂ ಕಣಿವೆಯಲ್ಲಿ ಏಪ್ರಿಲ್ 22ರಂದು ನಡೆದ ಮಾರಕ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಅನಂತರ ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಭಾರತೀಯ ಸಶಸ್ತ್ರ ಪಡೆಗಳು ಪಾಕ್ ಸೇನೆಯ ಕೈಗೆ ಸಿಕ್ಕಿಲ್ಲ. ಇದಕ್ಕೆ ಮುಖ್ಯ ಕಾರಣ ಒಂದು ಪರಿಪೂರ್ಣ ಯೋಜನೆಯೇ ಆಗಿತ್ತು.

ಉನ್ನತ ಸ್ಥಾನದ ರಕ್ಷಣಾ ಮೂಲಗಳ ಪ್ರಕಾರ ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತೀಯ ವಾಯುಪಡೆ ಪಾಕಿಸ್ತಾನದ ಚೀನಾ ಸರಬರಾಜು ವಾಯು ರಕ್ಷಣಾ ವ್ಯವಸ್ಥೆಗಳನ್ನು ಆಕರ್ಷಿಸಲು ಮತ್ತು ನಿಷ್ಕ್ರಿಯಗೊಳಿಸಲು ಫೈಟರ್ ಜೆಟ್‌ಗಳ ಮಾದರಿಯ ನಕಲಿ ವಿಮಾನಗಳನ್ನು ಬಳಸಿದೆ ಎನ್ನಲಾಗಿದೆ.

ಮೇ 9- 10ರ ನಡುವಿನ ರಾತ್ರಿ ಕೂಡ ಭಾರತೀಯ ಸೇನೆಯು ಪಾಕಿಸ್ತಾನದ 12 ಪ್ರಮುಖ ನೆಲೆಗಳ ಮೇಲೆ ನಿಖರವಾಗಿ ದಾಳಿ ಮಾಡಿತು. ಆದರೆ ಈ ದಾಳಿಯ ವೇಳೆ ಭಾರತೀಯ ವಾಯುಪಡೆಯ ನಿಜವಾದ ಯುದ್ಧ ವಿಮಾನಗಳನ್ನು ಮರೆಮಾಡಲು ಮಾನವರಹಿತ ವಿಮಾನಗಳನ್ನು ಕಳುಹಿಸಿತ್ತು. ಇದು ಪಾಕಿಸ್ತಾನದ ರಾಡಾರ್‌ಗಳ ದಾರಿ ತಪ್ಪಿಸಿತ್ತು. ಪಾಕಿಸ್ತಾನದ ಪಡೆ ಇದನ್ನೇ ಭಾರತದ ಯುದ್ಧ ವಿಮಾನಗಳೆಂದು ನಂಬಿ ಹೊಡೆದುರುಳಿಸಲು ಪರದಾಡಿತ್ತು. ಇದರ ಪರಿಣಾಮವಾಗಿ ಅವರ ಎಚ್ ಕ್ಯೂ -9 ಕ್ಷಿಪಣಿ ವ್ಯವಸ್ಥೆ ಸಕ್ರಿಯಗೊಂಡು ಅವುಗಳ ನಿಖರ ಸ್ಥಳಗಳನ್ನು ಬಹಿರಂಗಪಡಿಸಿದವು ಮತ್ತು ಅವುಗಳಿಗೆ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಪಾಕಿಸ್ತಾನ ವಾಯುಪಡೆಯು ತನ್ನ ಎಚ್ ಕ್ಯೂ -9 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಲಾಂಚರ್‌ ಮತ್ತು ರಾಡಾರ್‌ಗಳ ಸಂಪೂರ್ಣ ತಂಡವನ್ನು ವಿವಿಧ ಸ್ಥಳಗಳಿಗೆ ಸಜ್ಜುಗೊಳಿಸಿತ್ತು. ಅವುಗಳಲ್ಲಿ ಕೆಲವನ್ನು ಹೊಸ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು. ಆದರೆ ಎಲ್ಲವೂ ಸಕ್ರಿಯವಾಗಿದ್ದರಿಂದ ಅವುಗಳನ್ನು ಪತ್ತೆ ಹಚ್ಚುವುದು ಭಾರತೀಯ ವಾಯುಪಡೆಗೆ ಕಷ್ಟವಾಗಲಿಲ್ಲ.

ಇದನ್ನೂ ಓದಿ: Air ambulance crash: ಕೇದಾರನಾಥದಲ್ಲಿ ಏರ್ ಆಂಬ್ಯುಲೆನ್ಸ್ ಅಪಘಾತ- ಮೂವರು ಅಪಾಯದಿಂದ ಪಾರು

ಭಾರತೀಯ ವಾಯುಪಡೆಯು ಪಾಕಿಸ್ತಾನದ ವಾಯುನೆಲೆಗಳ ಮೇಲೆ ದೀರ್ಘ-ಶ್ರೇಣಿಯ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಇದರಲ್ಲಿ ಬ್ರಹ್ಮೋಸ್ ಮತ್ತು ಸ್ಕಲ್ಪ್ ಕ್ಷಿಪಣಿಗಳು ಸೇರಿವೆ. ಈ ದಾಳಿಗೆ ಸುಮಾರು 15 ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಸ್ಕಲ್ಪ್, ರಾಂಪೇಜ್ ಮತ್ತು ಕ್ರಿಸ್ಟಲ್ ಮೇಜ್ ಕ್ಷಿಪಣಿಗಳನ್ನು ಬಳಸಲಾಗಿದೆ.

ಭಾರತೀಯ ವಾಯುಪಡೆಯು ಪಾಕಿಸ್ತಾನದ ವಾಯುನೆಲೆಗಳ ಮೇಲೆ ನಡೆಸಿದ ದಾಳಿಗಳು ಎಷ್ಟು ನಿಖರವಾಗಿತ್ತೆಂದರೆ ಅವರಿಗೆ ಶರಣಾಗುವುದು ಬಿಟ್ಟು ಬೇರೆ ಆಯ್ಕೆಯೇ ಇರಲಿಲ್ಲ. ಹೀಗಾಗಿ ತಮ್ಮ ಎಲ್ಲ ಯೋಜನೆಗಳನ್ನು ಕೈಬಿಟ್ಟು ಕದನ ವಿರಾಮಕ್ಕೆ ಒಪ್ಪಿಕೊಂಡು ಮಾತುಕತೆಗಳನ್ನು ನಡೆಸಲು ಮುಂದಾದರು.