Goa stampede: ದೇವಿ ಲೈರೈ ಜಾತ್ರೆಯ ವಿಶೇಷತೆಗಳೇನು? ಕಾಲ್ತುಳಿತ ಸಂಭವಿಸಿದ್ದಾದರೂ ಹೇಗೆ?
ಉತ್ತರ ಗೋವಾದ ಶಿರ್ಗಾವ್ ದೇವಸ್ಥಾನದ ಜಾತ್ರಾ ಮಹೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 7 ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 30 ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಗೋವಾ ವೈದ್ಯಕೀಯ ಕಾಲೇಜು (ಜಿಎಂಸಿ) ಮತ್ತು ಮಾಪುಸಾದ ಉತ್ತರ ಗೋವಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.


ಪಣಜಿ: ಉತ್ತರ ಗೋವಾದ (Goa Stampede) ಶಿರ್ಗಾವ್ ದೇವಸ್ಥಾನದ ಜಾತ್ರಾ ಮಹೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 7 ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 30 ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಗೋವಾ ವೈದ್ಯಕೀಯ ಕಾಲೇಜು (ಜಿಎಂಸಿ) ಮತ್ತು ಮಾಪುಸಾದ ಉತ್ತರ ಗೋವಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ನಂತರ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಪರಿಸ್ಥಿತಿಯನ್ನು ಅವಲೋಕಿಸಲು ಉತ್ತರ ಗೋವಾ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದರು ಮತ್ತು ಬೆಳಿಗ್ಗೆ ಬಿಚೋಲಿಮ್ ಆಸ್ಪತ್ರೆಗೆ ಸಹ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಶುಕ್ರವಾರದಂದು ಜಾತ್ರೆ ಆರಂಭವಾಗಿತ್ತು. ಗೋವಾದ ಶಿರ್ಗಾವೊದಲ್ಲಿರುವ ಶ್ರೀ ಲೈರೈ ದೇವಿ ದೇವಸ್ಥಾನದಲ್ಲಿ ಆಚರಿಸಲಾಗುವ ಶ್ರೀ ಲೈರೈ ಜತ್ರಾ ಅತ್ಯಂತ ಪೂಜ್ಯ ವಾರ್ಷಿಕ ಉತ್ಸವವಾಗಿದೆ. ಪಾರ್ವತಿ ದೇವಿಯ ರೂಪವೆಂದು ನಂಬಲಾದ ಲೈರೈ ದೇವಿಯನ್ನು ಪೂಜಿಸಲು ಗೋವಾ ಮಾತ್ರವಲ್ಲದೆ ನೆರೆಯ ಕರ್ನಾಟಕ ಹಾಗೂ ಮಹಾರಾಷ್ಟ್ರಗಳಿಂದಲೂ ಜನರು ಆಗಮಿಸುತ್ತಾರೆ. ಶಿರಗಾವ್ ಜಾತ್ರಾ ಅಥವಾ ಲೈರೈ ಜಾತ್ರಾ ಗೋವಾದ ಅತ್ಯಂತ ಪ್ರಮುಖ ಉತ್ಸವಗಳಲ್ಲಿ ಒಂದಾಗಿದೆ, ಇದನ್ನು ಬಿಚೋಲಿಮ್‌ನ ಶಿರಗಾವ್ ಗ್ರಾಮದಲ್ಲಿ ಲೈರೈ ದೇವಿಯ ಗೌರವಾರ್ಥವಾಗಿ ನಡೆಸಲಾಗುತ್ತದೆ. ಈ ಭವ್ಯವಾದ ಕಾರ್ಯಕ್ರಮವು ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುತ್ತದೆ, ದಿನಾಂಕಗಳನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ನಿರ್ಧರಿಸಲಾಗುತ್ತದೆ.
ಈ ಸುದ್ದಿಯನ್ನೂ ಓದಿ: Hubballi Encounter: ಬಾಲಕಿಯ ಕೊಲೆಗಾರನ ಎನ್‌ಕೌಂಟರ್: ದೇಹದ ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್ ಆದೇಶ
ಈ ಜಾತ್ರೆಯ ಪ್ರಮುಖ ಆಚರಣೆ ಎಂದರೆ ನಿಗಿನಿಗಿ ಕೆಂಡದ ಮೇಲೆ ನಡೆಯುವುದು. ಅಲ್ಲಿ ಇದನ್ನು ಧೋಂಡ್ ಎಂದು ಕರೆಯುತ್ತಾರೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಕೆಂಡದ ಮೇಲೆ ನಡೆಯುತ್ತಾರೆ. ಸದ್ಯ ಜಾತ್ರೆಯ ಸಂದರ್ಭದಲ್ಲಿ ದುರ್ಘಟನೆಯೊಂದು ನಡೆದಿದೆ. ಕಾಲ್ತುಳಿತಕ್ಕೆ ನಿಖರವಾದ ಕಾರಣ ಏನು ಎಂದು ಇನ್ನೂ ತಿಳಿದುಬಂದಿಲ್ಲ. ಆದರೆ, ಅತಿಯಾದ ಜನಸಂದಣಿ ಮತ್ತು ಜನರನ್ನು ನಿಯಂತ್ರಿಸಲು ಸಾಧ್ಯವಾಗದೇ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ಅಂದಾಜಿಸಿವೆ. ನಿಖರ ಕಾರಣದ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಘಟನೆಯಾದ ಕೂಡಲೇ ತಕ್ಷಣವೇ ರಕ್ಷಣಾ ತಂಡ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು.