ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Panchkula Tragedy: ಉದ್ಯಮದಲ್ಲಿ ನಷ್ಟ, 20 ಕೋಟಿ ರೂ. ಸಾಲ...ಹರಿಯಾಣದಲ್ಲಿ ಒಂದೇ ಕುಟುಂಬದ 7 ಜನರ ಆತ್ಮಹತ್ಯೆಗೆ ಕಾರಣವಾಯ್ತು ಆರ್ಥಿಕ ಮುಗ್ಗಟ್ಟು

ಹರಿಯಾಣದ ಪಂಚಕುಲದಲ್ಲಿ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಈ ಕುಟುಂಬಕ್ಕೆ ಬರೋಬ್ಬರಿ 20 ಕೋಟಿ ರೂ. ಇತ್ತು. ಇದೇ ಕಾರಣಕ್ಕೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಒಂದೇ ಕುಟುಂಬದ 7 ಜನರ ಆತ್ಮಹತ್ಯೆಗೆ ಕಾರಣವಾಯ್ತು 20 ಕೋಟಿ ರೂ. ಸಾಲ

ಮೃತದೇಹ ಕಂಡುಬಂದ ಕಾರು.

Profile Ramesh B May 27, 2025 7:36 PM

ಚಂಡೀಗಢ: ಹರಿಯಾಣದ ಪಂಚಕುಲದಲ್ಲಿ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರ ಬೆಳಕಿಗೆ ಬಂದಿದೆ (Panchkula Tragedy). ಉತ್ತರಾಖಂಡದ ಡೆಹ್ರಾಡೂನ್‌ ಮೂಲದ ಈ ಕುಟುಂಬ ಬರೋಬ್ಬರಿ 20 ಕೋಟಿ ರೂ. ಸಾಲ ಹೊಂದಿದ್ದು, ಇದೇ ಕಾರಣಕ್ಕೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ. ಸೋಮವಾರ (ಮೇ 26) ರಾತ್ರಿ ಪ್ರವೀಣ್‌ ಮಿತ್ತಲ್‌ ಮತ್ತು ಅವರ ಕುಟುಂಬದ 6 ಸದಸ್ಯರು ಸಾವಿಗೆ ಶರಣಾಗಿದ್ದಾರು. ಮೃತರನ್ನು ಪ್ರವೀಣ್‌ ಮಿತ್ತಲ್‌, ಅವರ ಪತ್ನಿ, ಹೆತ್ತವರು ಮತ್ತು ಮೂವರು ಮಕ್ಕಳು ಎಂದು ಗುರುತಿಸಲಾಗಿದೆ. ಡೆತ್‌ನೋಟ್‌ನಲ್ಲಿ ಅಂತ್ಯಕ್ರಿಯೆಯನ್ನು ಪ್ರವೀಣ್‌ ಅವರ ಸಹೋದರ ಸಂಬಂಧಿ ಸಂದೀಪ್‌ ಅಗರ್ವಾಲ್‌ ನೆರವೇರಿಸಬೇಕೆಂದು ಉಲ್ಲೇಖಿಸಲಾಗಿದೆ.

ಕೆಲವು ವರ್ಷಗಳ ಹಿಂದೆ ಮಿತ್ತಲ್ ಹಿಮಾಚಲ ಪ್ರದೇಶದ ಬಡ್ಡಿಯಲ್ಲಿ ಸ್ಕ್ರ್ಯಾಪ್ ಕಾರ್ಖಾನೆಯೊಂದನ್ನು ಸ್ಥಾಪಿಸಿದ್ದರು. ಆದರೆ ಸಾಲ ತೀರಿಸದ ಕಾರಣ ಬ್ಯಾಂಕ್ ಈ ಕಾರ್ಖಾನೆಯನ್ನು ಮುಟ್ಟುಗೋಲು ಹಾಕಿಕೊಂಡಿತು. ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದ ಪ್ರವೀಣ್‌ ಮಿತ್ತಲ್ ಪಂಚಕುಲವನ್ನು ತೊರೆದು ಡೆಹ್ರಾಡೂನ್‌ಗೆ ತೆರಳಿದ್ದರು. ಹೀಗೆ ಅವರು ಸುಮಾರು 6 ವರ್ಷಗಳ ಕಾಲ ಕುಟುಂಬದ ಸಂಪರ್ಕದಿಂದ ದೂರವಿದ್ದರು.



ಪ್ರವೀಣ್‌ ಒಟ್ಟು 20 ಕೋಟಿ ರೂ. ಸಾಲವನ್ನು ಹೊಂದಿದ್ದರು ಎಂದು ಸಂದೀಪ್ ಅಗರ್ವಾಲ್ ವಿವರಿಸಿದ್ದಾರೆ. ಡೆಹ್ರಾಡೂನ್‌ನಿಂದ ಅವರು ಪಂಜಾಬ್‌ನ ಖರಾರ್‌ ಮತ್ತು ಹರಿಯಾಣದ ಪಿಂಜೋರ್‌ಗೂ ಸ್ಥಳಾಂತರಗೊಂಡಿದ್ದರು. 1 ತಿಂಗಳ ಹಿಂದೆಯಷ್ಟೇ ಅವರು ಹರಿಯಾಣದ ಪಂಚಕುಲಕ್ಕೆ ಮರಳಿದ್ದರು. ಹಿಸಾರ್‌ನ ಬರ್ವಾಲಾ ಮೂಲದ ಮಿತ್ತಲ್ ಪಂಚಕುಲದ ಸಕೇತ್ರಿಯಲ್ಲಿ ಟ್ಯಾಕ್ಸಿ ಚಾಲಕರಾಗಿದ್ದರು.

ಸಾಲದ ಹೊರೆ ಹೆಚ್ಚಾದ ಕಾರಣ ಬ್ಯಾಂಕ್ ಅವರ 2 ಫ್ಲಾಟ್‌ ಮತ್ತು ವಾಹನಗಳನ್ನೂ ಮುಟ್ಟುಗೋಲು ಹಾಕಿಕೊಂಡಿದೆ.

ಈ ಸುದ್ದಿಯನ್ನೂ ಓದಿ: Haryana Crime: ಬದುಕನ್ನೇ ನುಂಗಿದ ಸಾಲದ ಹೊರೆ... ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ..!

ಘಟನೆಯ ವಿವರ

ಪ್ರವೀಣ್ ಮಿತ್ತಲ್ (42) ತಮ್ಮ ಕುಟುಂಬದೊಂದಿಗೆ ಪಂಚಕುಲದ ಬಾಗೇಶ್ವರ್ ಧಾಮ್‌ನಲ್ಲಿ ನಡೆದ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುವಾಗ ವಿಷ ಸೇವಿಸಿದ್ದರು. ಸ್ಥಳೀಯ ನಿವಾಸಿ ಪುನೀತ್ ರಾಣಾ ಉತ್ತರಾಖಂಡದ ನಂಬರ್ ಪ್ಲೇಟ್ ಹೊಂದಿರುವ ಕಾರನ್ನು ಗಮನಿಸಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಪ್ರವೀಣ್ ಮಿತ್ತಲ್ ಕಾರಿನ ಹೊರಗೆ ಕುಳಿತಿದ್ದರು.

ʼʼಈ ಬಗ್ಗೆ ವಿಚಾರಿಸಿದಾಗ ಡೆಹ್ರಾಡೂನ್‌ನಿಂದ ಕುಟುಂಬ ಸಮೇತ ಬಂದಿದ್ದಾಗಿಯೂ ಲಾಡ್ಜ್‌ ಸಿಗದೆ ಕಾರನ್ನು ಇಲ್ಲಿ ಪಾರ್ಕ್‌ ಮಾಡಿದ್ದಾಗಿ ತಿಳಿಸಿದ್ದರು. ಕಾರನ್ನು ಬೇರೆಡೆ ಪಾರ್ಕ್‌ ಮಾಡುವಂತೆ ಸೂಚಿಸಿದೆವು. ಆತ ಕಷ್ಟಪಟ್ಟು ಎದ್ದು ಕಾರನ್ನು ಸ್ವಲ್ಪ ಮುಂದಕ್ಕೆ ಕೊಂಡೊಯ್ದ. ಈ ನಡೆ ಯಾಕೋ ಸಂಶಯ ತರಿಸಿತ್ತು. ಬಳಿಕ ಕಾರಿನ ಒಳಗೆ ನೋಡಿದಾಗ ಎಲ್ಲರೂ ಸೀಟಿಗೆ ಒರಗಿಕೊಂಡಿರುವುದು ಕಾಣಿಸಿತು. ಅದಕ್ಕೆ ಆತ ಎಲ್ಲರೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿಯೂ, ಸ್ವಲ್ಪ ಹೊತ್ತಿನಲ್ಲಿ ತಾನೂ ಮೃತಪಡುವುದಾಗಿಯೂ ತಿಳಿಸಿದ್ದ.‌ ತಕ್ಷಣ ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಯಿತಾದರೂ ಅದು ಬರುವಾಗ ತಡವಾಗಿತ್ತು. ಆಸ್ಪತ್ರೆಗೆ ತಲುಪಿದಾಗ ಎಲ್ಲರೂ ಮೃತಪಟ್ಟಿದ್ದರುʼʼ ಎಂದು ಪುನೀತ್ ರಾಣಾ ಘಟನೆಯನ್ನು ವಿವರಿಸಿದ್ದಾರೆ.