RCB vs LSG: ಲಖನೌ ವಿರುದ್ಧದ ಪಂದ್ಯದಲ್ಲಿ ಟಿಮ್ ಡೇವಿಡ್ ಏಕೆ ಆಡುತ್ತಿಲ್ಲ? ಇಲ್ಲಿದೆ ಕಾರಣ!
ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜಯಂಟ್ಸ್ ನಡುವಣ ಪಂದ್ಯದಲ್ಲಿ ಆರ್‌ಸಿಬಿ ಸ್ಟಾರ್ ಆಲ್‌ರೌಂಡರ್ ಟಿಮ್ ಡೇವಿಡ್ ಆಡುತ್ತಿಲ್ಲ. ಇವರ ಬದಲು ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಆಡುತ್ತಿದ್ದಾರೆ.

ಲಖನೌ ಪಂದ್ಯಕ್ಕೆ ಟಿಮ್ ಡೇವಿಡ್ ಅಲಭ್ಯ.

ಲಖನೌ: ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ 70ನೇ ಹಾಗೂ ಕೊನೆಯ ಲೀಗ್ ಪಂದ್ಯದಲ್ಲಿ (RCB vs LSG) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಿಮ್ ಡೇವಿಡ್ (Tim David) ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇವರ ಬದಲು ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್‌ಗೆ ಅವಕಾಶವನ್ನು ನೀಡಲಾಗಿದೆ. ರಜತ್ ಪಾಟಿದಾರ್ ಗಾಯದಿಂದ ಇನ್ನೂ ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಅವರನ್ನು ಈ ಪಂದ್ಯದಲ್ಲಿಯೂ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸಲಾಗುತ್ತಿದೆ. ಹಾಗಾಗಿ ಜಿತೇಶ್ ಶರ್ಮಾ ಅವರೇ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಜಿತೇಶ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಂತರ ಅವರು ತಂಡದ ಪ್ಲೇಯಿಂಗ್ XI ಬಗ್ಗೆ ಮಾಹಿತಿ ನೀಡಿದರು. ಆರ್‌ಸಿಬಿ ಈ ಪಂದ್ಯಕ್ಕೆ ಎರಡು ಬದಲಾವಣೆಯನ್ನು ಮಾಡಿಕೊಂಡಿದೆ. ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ನಿಮಿತ್ತ ದಕ್ಷಿಣ ಆಫ್ರಿಕಾ ವೇಗಿ ಲುಂಗಿ ಎನ್ಗಿಡಿ ತವರಿಗೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಸ್ಥಾನಕ್ಕೆ ಶ್ರೀಲಂಕಾ ವೇಗಿ ನುವಾನ್ ತುಷಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ಟಿಮ್ ಡೇವಿಡ್ ಅವರ ಬದಲು ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್‌ಗೆ ಅವಕಾಶ ನೀಡಲಾಗಿದೆ.
RCB vs LSG: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು!
ಟಿಮ್ ಡೇವಿಡ್ ಏಕೆ ಆಡುತ್ತಿಲ್ಲ?
ಮೇ23 ರಂದು ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ದದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಟಿಮ್ ಡೇವಿಡ್ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಹಾಗಾಗಿ ಬಹುಶಃ ಅವರು ಇನ್ನೂ ಸಂಪೂರ್ಣ ಫಿಟ್ ಇಲ್ಲ ಎಂದು ಕಾಣುತ್ತಿದೆ. ಈ ಕಾರಣದಿಂದ ಅವರು ಲಖನೌ ಪಂದ್ಯದಿಂದ ಹೊರಗುಳಿದಿದ್ದಾರೆ. ಇವರ ಜೊತೆಗೆ ಜಾಶ್ ಹೇಝಲ್‌ವುಡ್ ಕೂಡ ಆಡುತ್ತಿಲ್ಲ. ಈ ಪಂದ್ಯವನ್ನು ಗೆದ್ದರೆ ಪಂಜಾಬ್ ಕಿಂಗ್ಸ್ ವಿರುದ್ಧ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಈ ಇಬ್ಬರೂ ಆಟಗಾರರು ಆಡಬಹುದು.
🪙 Back-2️⃣-back toss wins, and we choose to bowl first! 🤩
— Royal Challengers Bengaluru (@RCBTweets) May 27, 2025
Team News: 📰 ⬇️
2️⃣ changes from the last game! 🙌
Liam 🔄 Tim David (injured)
Thushara 🔄 Ngidi (not available)#PlayBold #ನಮ್ಮRCB #IPL2025 @qatarairways pic.twitter.com/rSuKkGNzBa
ಭುಜದ ಗಾಯದ ಕಾರಣ ಕಳೆದ ಎರಡು ಪಂದ್ಯಗಳಿಗೆ ಜಾಶ್ ಹೇಝಲ್‌ವುಡ್ ಅಲಭ್ಯರಾಗಿದ್ದರು. ಏಪ್ರಿಲ್ 27 ರಿಂದ ಇಲ್ಲಿಯವರೆಗೂ ಹೇಝಲ್‌ವುಡ್ ಆರ್‌ಸಿಬಿಗೆ ಆಡಿಲ್ಲ. ಆಸ್ಟ್ರೇಲಿಯಾ ವೇಗದ ಬೌಲರ್ ಭಾರತಕ್ಕೆ ಮರಳಿದ್ದಾರೆ ಹಾಗೂ ಅವರು ಪ್ಲೇಆಫ್ಸ್ ಪಂದ್ಯಗಳಲ್ಲಿಆಡಲಿದ್ದಾರೆ. ಆದರೆ, ಟಿಮ್ ಡೇವಿಡ್ ಅಲಭ್ಯತೆ ಆರ್‌ಸಿಬಿಗೆ ಭಾರಿ ಹಿನ್ನಡೆಯನ್ನು ತಂದಿದೆ. ಆರ್‌ಸಿಬಿ ಈ ಸೀಸನ್‌ನಲ್ಲಿ ಯಶಸ್ವಿಯಾಗಲು ಟಿಮ್ ಡೇವಿಡ್ ಕೂಡ ಕಾರಣವಾಗಿದೆ. 29ರ ಪ್ರಾಯದ ಬ್ಯಾಟ್ಸ್‌ಮನ್ ಆಡಿದ 9 ಇನಿಂಗ್ಸ್‌ಗಳಿಂದ 185.14ರ ಸ್ಟ್ರೈಕ್ ರೇಟ್‌ನಲ್ಲಿ 187 ರನ್‌ಗಳನ್ನು ಕಲೆ ಹಾಕಿದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ ಶರ್ಮಾ (ನಾಯಕ, ವಿ.ಕೀ), ರೊಮ್ಯಾರಿಯೊ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ನುವಾನ್ ತುಷಾರ
ಲಖನೌ ಸೂಪರ್ ಜಯಂಟ್ಸ್: ಮಿಚೆಲ್ ಮಾರ್ಷ್, ಮ್ಯಾಥ್ಯೂ ಬ್ರೀಟ್ಜ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ, ವಿ.ಕೀ), ಆಯುಷ್ ಬದೋನಿ, ಅಬ್ದುಲ್ ಸಮದ್, ಹಿಮತ್ ಸಿಂಗ್, ಶಹಬಾಝ್ ಅಹ್ಮದ್, ದಿಗ್ವೇಶ್ ಸಿಂಗ್, ಆವೇಶ್ ಖಾನ್, ವಿಲಿಯಮ್ ರೌರ್ಕಿ