Vinayak V Bhat Column: ಸಾಮರಸ್ಯ-ಸಹಿಷ್ಣುತೆ ಇಂದಿನ ಅನಿವಾರ್ಯತೆ
ಮಣಿಮಂಜರಿ ಎಂಬ ಶುದ್ಧಾಂಗ ಅಪಲಾಪ’ ಎಂಬ ನನ್ನ ಲೇಖನಕ್ಕೆ (ನ.14) ಅನೇಕ ಉತ್ತಮ ಪ್ರತಿಕ್ರಿಯೆ ಗಳು ಬಂದವು. ಶಂಕರಾಚಾರ್ಯರ ಅವಹೇಳನ ಮಾಡುವ ತಾಮಸಿಕ ಮನಸ್ಥಿತಿಗಳನ್ನು ಸಾತ್ವಿಕವಾಗಿ ವಿರೋಧಿಸಿರು ವುದು, ಲೋಕಹಿತದ ದೃಷ್ಟಿಯಿಂದ ಮತಸಾಮರಸ್ಯದ ಅಗತ್ಯವನ್ನು ಎತ್ತಿ ಹೇಳಿರು ವುದು ಅನೇಕ ಓದುಗರ ಮನಮುಟ್ಟಿದೆಯೆಂದು ತಿಳಿದು ಸಂತಸವಾಯಿತು.

ವಿದ್ಯಮಾನ
ವಿನಾಯಕ ವೆಂ ಭಟ್ಟ, ಅಂಬ್ಲಿಹೊಂಡ
ಮಣಿಮಂಜರಿ ಎಂಬ ಶುದ್ಧಾಂಗ ಅಪಲಾಪ’ ಎಂಬ ನನ್ನ ಲೇಖನಕ್ಕೆ (ನ.14) ಅನೇಕ ಉತ್ತಮ ಪ್ರತಿಕ್ರಿಯೆಗಳು ಬಂದವು. ಶಂಕರಾಚಾರ್ಯರ ಅವಹೇಳನ ಮಾಡುವ ತಾಮಸಿಕ ಮನಸ್ಥಿತಿಗಳನ್ನು ಸಾತ್ವಿಕವಾಗಿ ವಿರೋಧಿಸಿರು ವುದು, ಲೋಕಹಿತದ ದೃಷ್ಟಿಯಿಂದ ಮತಸಾಮರಸ್ಯದ ಅಗತ್ಯವನ್ನು ಎತ್ತಿ ಹೇಳಿರುವುದು ಅನೇಕ ಓದುಗರ ಮನಮುಟ್ಟಿದೆಯೆಂದು ತಿಳಿದು ಸಂತಸವಾಯಿತು.
ಶ್ರೀ ಶಂಕರರನ್ನು ಅಕಾರಣವಾಗಿ ಅವಹೇಳನಮಾಡುವ, ದೂಷಿಸುವ ಯತ್ನಗಳು ಇಂದು ನಿನ್ನೆಯದಲ್ಲ. ‘ತಾವುಮಾತ್ರ ಸರಿ’ ಎನ್ನುವ ಮೂಲಭೂತವಾದಿಗಳು ಸಣ್ಣ ಪ್ರಮಾಣದಲ್ಲಾದರೂ ಸಮಾಜದಲ್ಲಿ ಇದ್ದೇ ಇರುತ್ತಾರೆ. ಇಂಥ ಹೀನ ಮನಸ್ಥಿತಿಯ ಜನನವಾಗಿದ್ದೆಲ್ಲಿಂದ ಎಂದು ನೋಡುವಾಗ, ‘ಮಣಿಮಂಜರಿ’ಯಂಥ ‘ಅವಹೇಳನ ಭೂಯಿಷ್ಠ’ಪುಸ್ತಕಗಳು, ಅದರ ಪಾಠ-ಪ್ರವಚನ ಇತ್ಯಾದಿಗಳೇ ಎಂಬುದು ಗೊತ್ತಾಗುತ್ತದೆ. ಯಾವುದೋ ಕೀರ್ತಿ ಕಾಮನೆ ಯಿಂದಲೋ, ಆ ಕಾಲಕ್ಕೆ ಯಾರನ್ನೋ ಮೆಚ್ಚಿಸಲೋ, ಖ್ಯಾತರನ್ನು ಸಾರ್ವಜನಿಕವಾಗಿ ನಿಂದಿಸಿದರೆ ತಾನು ದೊಡ್ಡವ ಎನಿಸಿಕೊಳ್ಳಬಹುದು ಎಂಬ ಭಾವನೆಯಿಂದಲೋ ರಚಿತವಾದ ಇಂಥ ಪುಸ್ತಕಗಳು ಎರಡು ಮತಗಳ ನಡುವೆ ಅದೆಂಥಾ ಕಂದಕವನ್ನು ಸೃಷ್ಟಿಸಬಹುದು ನೋಡಿ? ಅಕ್ಷರಕ್ಕಿರುವ ತಾಕತ್ತದು. ಹಾಗಾಗಿ, ಏನನ್ನಾದರೂ ಬರೆದು ಪ್ರಕಟಿಸುವ ಮುನ್ನ ಸಮಾಜದ ಮೇಲಾಗುವ ಪರಿಣಾಮವನ್ನು ಲೇಖಕ ಮುನ್ನಂದಾಜಿಸಲೇಬೇಕಾಗುತ್ತದೆ. ‘ನಮ್ಮ ದೇವರನ್ನು- ಆಚಾರ್ಯರನ್ನು ಆರಾಧಿಸುವವರಷ್ಟೇ ನಮ್ಮವರು, ಉಳಿದವರೆಲ್ಲಾ ಕಾಫಿರರು; ಕಾಫಿರರಿಗೆ ಭೂಮಿಯಲ್ಲಿ ಬದುಕುವ ಹಕ್ಕಿಲ್ಲ’ ಎನ್ನುವುದು ಬೇರೆಯದ್ದೇ ಚಿಂತನೆ.
‘ನಮ್ಮ ಸನಾತನ ಸಂಸ್ಕೃತಿ ಹಾಗಲ್ಲ’ ಎಂಬುದು, ತ್ರಿಮತಗಳ-ತ್ರಿಮತಾಚಾರ್ಯರುಗಳ ಕುರಿತು ಪರಸ್ಪರ ಕ್ಷುಲ್ಲಕ ವಾಗಿ ಚಿಂತಿಸುವ ತಥಾಕಥಿತ ವಿದ್ವಾಂಸರಿಗೆ ಅರ್ಥವಾಗಬೇಕಾದ ಸತ್ಯ. ನನ್ನ ಲೇಖನಕ್ಕೆ ಪ್ರತಿಸ್ಪಂದನೆಯಾಗಿ ಕಳೆದ ವಾರ ‘ವಿಶ್ವವಾಣಿ’ಯಲ್ಲಿ ವಿದ್ವಾನ್ ಹೃಷೀಕೇಶಾಚಾರ್ಯ ಮಠದ ಇವರ ‘ಮಣಿಮಂಜರಿ ಎಂಬುದು ಪ್ರಾಮಾಣಿಕ ಕೃತಿ, ಅದರ ಬಗ್ಗೆ ಅಪಲಾಪ ಸಲ್ಲ’ ಎಂಬ ಲೇಖನ ಪ್ರಕಟವಾಯಿತು. ಇದನ್ನೋದುವ ಮೊದಲು, ‘ಈ ಲೇಖನದಲ್ಲಿ ಒಂದು ಸಾತ್ವಿಕ ಪ್ರತಿಸ್ಪಂದನೆಯಿರಬಹುದು’ ಎಂಬ ನಿರೀಕ್ಷೆಯಿತ್ತು. ಆದರೆ ಓದಿದ ಮೇಲೆ, ‘ಇದು ಶ್ರೀ ಶಂಕರರನ್ನು ಅವಹೇಳನ ಮಾಡುವ ನಾರಾಯಣ ಪಂಡಿತರ ಪರಂಪರೆಯ ಮುಂದುವರಿದ ಭಾಗವಷ್ಟೇ’ ಎನಿಸಿ ನಿರಾಶೆ ಯಾಯಿತು. ಈ ಲೇಖನದ ಮನೋಧರ್ಮದ ಅರಿವಾಗಿ, ಅದನ್ನು ಬರೆದ ವಿದ್ವಾಂಸರ ಕುರಿತು ಪಶ್ಚಾತ್ತಾಪ ವಾಯಿತು.
‘ಶಾಂತಂ ಪಾಪಂ’ ಎನ್ನುತ್ತಾ ಉದಾಸೀನ ಮಾಡುವುದೇ ಯೋಗ್ಯವೆನಿಸಿದರೂ, ‘ಹೇಳಬಾರದ್ದನ್ನು ಹೇಳಿದರೆಪಾಪವಾಗುವ ಹಾಗೆ, ಹೇಳಬೇಕಾದ್ದನ್ನು ಹೇಳದೆ ಸುಮ್ಮನಿರುವುದೂ ಪಾಪವೇ’ ಎಂಬ ನ್ಯಾಯದಿಂದ ಮತ್ತೆನಾಲ್ಕಕ್ಷರ ಬರೆಯಬೇಕೆನ್ನಿಸಿತು. ಶತಾವಧಾನಿ ಗಣೇಶರ ಮಾತಲ್ಲಿ ನಂಬಿಕೆಯಿಟ್ಟು ‘ಮಣಿಮಂಜರಿ’ಯ ಕೆಲ ಪುಟಗಳನ್ನು ತಿರುವಿಹಾಕಿ ಈ ಲೇಖನವನ್ನು ನಾನು ಪ್ರಸ್ತುತಪಡಿಸಿರುವೆ ಎಂಬ ಸಂಶಯ ಹೃಷೀಕೇಶಾಚಾರ್ಯ ರದ್ದು. ಈ ಅಸಾತ್ವಿಕ ಗ್ರಂಥವನ್ನು ನಾನು ಎಷ್ಟು ಓದಿರುವೆ ಎಂಬುದನ್ನು ನನ್ನ ಲೇಖನವೇ ಅಭಿವ್ಯಕ್ತಿಸಿದೆ, ಓದುಗರು ಅದನ್ನು ಸ್ವೀಕರಿಸಿಯಾಗಿದೆ. ಹಾಗಾಗಿ ನನ್ನ ಓದಿನ ಆಳ-ಅಗಲಗಳ ಬಗ್ಗೆ ಹೃಷೀಕೇಶಾಚಾರ್ಯರಿಗೆಲೆಕ್ಕ ಕೊಡುವ ಅಗತ್ಯವಿಲ್ಲ ಎಂದುಕೊಂಡಿರುವೆ.
‘ಮನೀಷಿಣಃ ಸಂತಿ ನತೋ ಹಿತೈಷಿಣಃ, ಹಿತೈಷಿಣಃ ಸಂತಿನತೋ ಮನೀಷಿಣಃ’- ವಿದ್ವಾಂಸರುಗಳೆಲ್ಲಾ ವಿವೇಕಿಗಳಾಗ ಬೇಕಿಲ್ಲ, ವಿವೇಕಿಗಳು ವಿದ್ವಾಂಸರೇ ಆಗಿರಬೇಕು ಅಂತಲೂ ಇಲ್ಲ. ನಾನು 2ನೇ ಗುಂಪಿಗೆ ಸೇರಿದವನು ಎನ್ನಲು ಹೆಮ್ಮೆಯಿದೆ; ಕಾರಣ, ನನಗೆ ಲೋಕಹಿತದ ಕಾಳಜಿಯಷ್ಟೇ ಇದೆ. ಮುಂದೆ ಅವರು, ‘ಗರುಡ ಪುರಾಣ’ದ ಯಾವುದೋ ವಾಕ್ಯಾರ್ಥವನ್ನು ಉಲ್ಲೇಖಿಸುತ್ತಾರೆ (‘ಮಣಿಮನ್ನಾಮ ದೈತ್ಯಸ್ತು ಸಂಕರಾಖ್ಯೋ ಭವಿಷ್ಯತಿ). ಸಂಸ್ಕೃತದಲ್ಲಿ ‘ಸಂಕರ’ ಮತ್ತು ‘ಶಂಕರ’ ಬೇರೆ ಬೇರೆ ಶಬ್ದಗಳು; ‘ಶಂಕರೋತಿ ಇತಿ ಶಂಕರಃ’ ಎಂಬುದು ‘ಶಂಕರ’ ಶಬ್ದದ ನಿಷ್ಪತ್ತಿ. ಶುಭ ವನ್ನೂ, ಮಂಗಳವನ್ನೂ ಉಂಟುಮಾಡುವವನು ಶಂಕರ ಎಂಬುದು ಇದರರ್ಥ. ಶ್ರೀ ಶಂಕರರಿಗೆ ಈ ಹೆಸರು ಅನ್ವರ್ಥವಾಗಿದೆ. ಹೃಷೀಕೇಶಾಚಾರ್ಯರಿಗೆ ಈ ಎರಡು ಶಬ್ದಗಳ ಅರ್ಥ ಭೇದದ ಅರಿವಿಲ್ಲವೆಂತಲ್ಲ.
ಆದರೆ, ಶಂಕರರನ್ನು ದೂಷಿಸುವುದೇ ಉದ್ದೇಶವಾದ್ದರಿಂದ, ‘ಮಣಿಮಂಜರಿ’ಯ ಮಾಯೆ ಅವರನ್ನಾವರಿಸಿ ರುವುದರಿಂದ, ಈ ಎರಡೂ ಶಬ್ದಗಳು ಅವರಿಗೆ ಒಂದೇ ಆಗಿ ಕಂಡಿರಬಹುದು. ಅವರು ಮುಂದುವರಿದು, ‘ಶಂಕರರು ರಚಿಸಿದ ಅನೇಕ ಲೋಕಪ್ರಸಿದ್ಧ ಸೋತ್ರಗಳು ಅವರು ರಚಿಸಿದ್ದೇ ಅಲ್ಲ, ಬೇರೆ ಯಾರೋ ಬರೆದು ಶಂಕರರ ಹೆಸರಲ್ಲಿ ಪ್ರಸಿದ್ಧ ಮಾಡಿದ್ದಾರೆ’ ಎಂಬ ಬಾಲಿಶ ವಾದವನ್ನು ಮಂಡಿಸುತ್ತಾರೆ. ಇದಕ್ಕೆ ಏನನ್ನುವುದು? ಇಂಥವರು ನಾಳೆ “ವಾಲ್ಮೀಕಿ-ವ್ಯಾಸರ ‘ರಾಮಾಯಣ -ಮಹಾಭಾರತ’ ಮಹಾಕಾವ್ಯಗಳೂ ಅವರದ್ದಲ್ಲ, ಪ್ರಸಿದ್ಧಿಗೆಂದು ಅವರ ಹೆಸರು ಉಲ್ಲೇಖಿಸಲಾಗಿದೆ" ಎಂದರೂ ಅಚ್ಚರಿಯಿಲ್ಲ.
‘ವೇದಗಳು ಅನಿತ್ಯ, ಅವಕ್ಕೆ ನಾಶವಿದೆ, ದೇವರೆಲ್ಲಾ ಸುಳ್ಳು, ಬ್ರಹ್ಮವೊಂದೇ ಸತ್ಯವೆಂದು ಶಂಕರರು ಹೇಳಿದ್ದಾರೆ’ ಎಂದೆಲ್ಲಾ ಒಂದಕ್ಕೊಂದು ಸಂಬಂಧವಿಲ್ಲದ ಸಂಗತಿಗಳನ್ನೇ, ‘ಮಣಿಮಂಜರಿ’ಯಂಥ ಪುಸ್ತಕಗಳ ಪಾಠದಿಂದ ಬೆಳೆಸಿಕೊಂಡ ‘ಶ್ರೀ ಶಂಕರ-ವಿರೋಧಿ’ ಪೂರ್ವಗ್ರಹದ ಮನಸ್ಥಿತಿಯನ್ನೇ ಇಲ್ಲಿ ಅನಾವರಣಗೊಳಿಸಲುಯತ್ನಿಸಿದ್ದಾರಷ್ಟೇ.
‘ಶತಾವಧಾನಿ ಗಣೇಶರು, ವಿನಾಯಕ ಭಟ್ಟರು, ಶಂಕರ ಪರಂಪರೆಯವರು ಹೇಳುವುದೆಲ್ಲವೂ ಸುಳ್ಳು; ನಮ್ಮಲ್ಲಿ ಅನೇಕ ದಾಖಲೆಗಳಿವೆ, ಯಾವುದೇ ಸಂದರ್ಭದಲ್ಲಿ ಉತ್ತರಿಸಲು ಸಿದ್ಧ’ ಎಂಬ ಯುದ್ಧೋನ್ಮಾದದ ಮಾತಿನೊಂದಿಗೆ ತಮ್ಮ ಲೇಖನವನ್ನು ಮುಗಿಸಿದ್ದಾರೆ. ಸಮರ್ಥನೆ ಮಾಡಬಾರದ, ಲೋಕದಲ್ಲಿ ಅಸಮಾಧಾನ ಸೃಷ್ಟಿಸಲೆಂದೇ ಹುಟ್ಟಿದ ಇಂಥ ವಿವಾದಾತ್ಮಕ ಕೃತಿಗಳ ಅಧ್ಯಯನಕ್ಕೆ ಸಮಯ ವ್ಯರ್ಥಮಾಡಿ ಅದರ ಪರ ಪ್ರಚಾರ ಮಾಡುವ ಬದಲು, ಶ್ರೀ ಮಧ್ವರ ಮತ್ತು ಮಧ್ವ ಸಂಪ್ರದಾಯದ ಇತರ ಉತ್ತಮ ಗ್ರಂಥಗಳ ಅಧ್ಯಯನದಲ್ಲಿ ಅವರು ಹೆಚ್ಚು ವ್ಯಸ್ತರಾಗಲಿ ಎಂದು ಹಾರೈಸುತ್ತ, ಅವರ ಒಳ್ಳೆಯದಕ್ಕೆ ಈಶ್ವರನಲ್ಲಿ ಪ್ರಾರ್ಥಿಸುತ್ತೇನೆ. ಈಶ್ವರೋ ರಕ್ಷತು!
ಲೇಖನ ಪ್ರಕಟವಾದ ಒಂದೆರಡು ದಿನಗಳಲ್ಲಿ ಮೈಸೂರಿನ ಓದುಗಮಿತ್ರ ಶ್ರೀಧರ್ ವಿಡಿಯೋ ತುಣುಕೊಂದನ್ನುಕಳಿಸಿದ್ದರು. ಅದರಲ್ಲಿ ಮಂತ್ರಾಲಯದ ಇಂದಿನ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತ್ರಿಮತಾಚಾರ್ಯರಬಗ್ಗೆ ಅರ್ಥವತ್ತಾಗಿ ಮಾತಾಡಿರುವ ಪರಿ ಹೀಗಿದೆ: “ಸನಾತನ ಹಿಂದೂಧರ್ಮವನ್ನು ಅನುಸರಿಸುತ್ತಿರುವವರು ಜಗತ್ತಿನಲ್ಲಿ ಅಲ್ಪಸಂಖ್ಯಾತರಾಗುತ್ತಿದ್ದ, ವೇದವಿದ್ಯೆಗಳು ನಶಿಸುತ್ತಿದ್ದ ಸಂದರ್ಭದಲ್ಲಿ ಶಂಕರಾಚಾರ್ಯರು ಅವತರಿಸಿ ವೈದಿಕ ಸಂಸ್ಕೃತಿಯನ್ನು ವ್ಯವಸ್ಥಿತಗೊಳಿಸಿ ಸಂರಕ್ಷಿಸದಿದ್ದಿದ್ದರೆ, ಮುಂದೆ ರಾಮಾನುಜರು ಮತ್ತು ಮಧ್ವರು ಅವತರಿಸುವ, ಶಂಕರರ ಕಾರ್ಯವನ್ನು ಮುಂದುವರಿಸುವ ಅವಕಾಶವೇ ಇರುತ್ತಿರಲಿಲ್ಲ.
ಹಾಗಾಗಿ, ನಮ್ಮ ಸನಾತನ ಸಂಸ್ಕೃತಿಯನ್ನು ಗೌರವಿಸುವ ಯಾರೇ ಆದರೂ, ಮೊದಲು ಭಕ್ತಿ-ಗೌರವ ಪುರಸ್ಸರವಾಗಿ ಸ್ಮರಣೆ ಮಾಡಬೇಕಾದ್ದು ಶ್ರೀ ಶಂಕರರನ್ನು, ಆಮೇಲೆ ಶ್ರೀ ರಾಮಾನುಜರು ಮತ್ತು ಶ್ರೀ ಮಧ್ವರನ್ನು. ಹಾಗಾಗಿ ನಾವು ಶ್ರೀ ಶಂಕರರಿಗೆ ಸದಾ ಕೃತಜ್ಞರಾಗಿರಬೇಕು". ಸ್ವತಃ ವೈಷ್ಣವ ಪರಂಪರೆಯ ಈ ಶ್ರೀಗಳು, ಸಮಂಜಸವಾದ-ಸತ್ಯವಾದ ಮಾತನ್ನು ಹೀಗೆ ಪ್ರಾಂಜಲ ಮನಸ್ಸಿನಿಂದ ಆಡಿರುವುದು ಕೇಳಿ, ‘ಸನಾತನ ಸಂತತಿಯ ಸಾಮರಸ್ಯವನ್ನುಬಯಸುವ ಮಹಾತ್ಮರು ಇನ್ನೂ ಇದ್ದಾರೆ’ ಎಂಬುದು ಅರಿವಾಗಿ ಸಮಾಧಾನವಾಯಿತು.
ನಮ್ಮ ನಂಬಿಕೆ, ಆಸ್ಥೆ, ತಿಳಿವಳಿಕೆಗಳನ್ನು ಪ್ರೀತಿಸುತ್ತಾ, ಅನ್ಯ ನಂಬಿಕೆಗಳನ್ನು ಗೌರವಿಸುವುದೇ ನಮ್ಮ ಸನಾತನ ಪರಂಪರೆಯ ಧೋರಣೆ. ‘ಸಹನಾ ವವತು, ಸಹನೌ ಭುನಕ್ತು, ಸಹ ವೀರ್ಯಂ ಕರವಾವಹೈ’ ಎಂಬ ಶಾಂತಿಮಂತ್ರದ ಮೂಲಕ ಜಗತ್ತಿಗೆ ಶಾಂತಿ-ಸಹಿಷ್ಣುತೆಯನ್ನು ಮೊದಲು ಸಾರಿದ ಸನಾತನ ಸಂಸ್ಕೃತಿಯಿದು. ಶ್ರೀ ಮಧ್ವರು ಮತ್ತು ಶ್ರೀರಾಮಾನುಜರನ್ನು ಹೊಗಳಲು ಬೇಕಾದಷ್ಟು ಕಾರಣಗಳಿವೆ, ಶ್ರೀ ಶಂಕರರನ್ನು ದೂರಿಯೇ ಆ ಕೆಲಸ ಮಾಡ ಬೇಕೆಂದೇನೂ ಇಲ್ಲ, ಶಂಕರರನ್ನು ಧಿಕ್ಕರಿಸಿಯೇ ಮಧ್ವರನ್ನು ಪುರಸ್ಕರಿಸಬೇಕಾಗಿಲ್ಲ ತಾನೇ? ವಸ್ತುಸ್ಥಿತಿಯನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಮಂತ್ರಾಲಯದ ಶ್ರೀಗಳಂಥವರಿಗೆ, ತ್ರಿಮತಗಳನ್ನೂ ಸತ್ವಭೂಯಿಷ್ಠವಾಗಿ ಅಧ್ಯಯನ ಮಾಡಿ ಸನಾತನ ಸಂಸ್ಕೃತಿಯ ಹಿತಬಯಸುವ ನಿಜಾರ್ಥದ ವಿದ್ವಾಂಸರಿಗೆ, ಸಮನ್ವಯವೇ ಕಾಣುತ್ತದೆ.
ಅರ್ಧಂಬರ್ಧ ಓದಿಕೊಂಡು ತಪ್ಪಾಗಿ ಅರ್ಥೈಸುವ ತಥಾಕಥಿತ ವಿದ್ವಾಂಸರಿಗೆ ಮಾತ್ರ ಎಲ್ಲೆಡೆಯೂ ಭೇದವೇ ಕಾಣುವುದು. ‘ಅಲ್ಪವಿದ್ಯಾತ್ ಭಿಭೇತ್ ವೇದಃ’ ಎಂದಿರುವುದು ಇದಕ್ಕೇ ಇರಬೇಕು. ತನ್ನನ್ನು ಓದದಿರುವವರಿಗಿಂತ ಅರ್ಧಂಬರ್ಧ ಓದಿಕೊಂಡಿರುವವರನ್ನು ಕಂಡರೆ ವೇದಮಾತೆಗೂ ಭಯವಂತೆ! ೨೦೧೫ರ ಡಿಸೆಂಬರ್‌ನಲ್ಲಿ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನವು ನಡೆಸಿದ ‘ಬನ್ನಂಜೆ ೮೦ರ ಸಂಭ್ರಮ’ ಎಂಬ ಅರ್ಥಪೂರ್ಣ ಕಾರ್ಯಕ್ರಮವು ಉತ್ತಮ ‘ಮತ-ಸಾಮರಸ್ಯ’ಕ್ಕೆ ಇನ್ನೊಂದು ಉದಾಹರಣೆ.
ಅಲ್ಲಿ ನಾಡಿನ ಅನೇಕ ಮಠಾಧಿಪತಿಗಳು, ವಿದ್ವಾಂಸರು, ಚಿಂತಕರು ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಂಡು ವಿಚಾರ ವಿನಿಮಯ ಮಾಡಿಕೊಂಡಿದ್ದರು. 5ನೇ ದಿನದ ೨ನೇ ಗೋಷ್ಠಿ ಅತ್ಯಂತ ವಿಶೇಷವಾದುದಾಗಿತ್ತು. ಡಾ.ಮಣಿದ್ರಾವಿಡ ಶಾಸ್ತ್ರಿಗಳು ‘ಶಂಕರ ದರ್ಶನ’ವನ್ನೂ, ಮೇಲುಕೋಟೆಯ ಡಾ.ರಾಮಸ್ವಾಮಿ ಅಯ್ಯಂಗಾರರು ‘ರಾಮಾನುಜ ದರ್ಶನ’ವನ್ನೂ, ಬನ್ನಂಜೆ ಗೋವಿಂದಾಚಾರ್ಯರು ‘ಪೂರ್ಣಪ್ರಜ್ಞ ದರ್ಶನ’ವನ್ನೂ ಸ್ಥೂಲವಾಗಿ ಪರಿಚಯಿಸಿದರು. ಸ್ವತಃ ಶತಾವಧಾನಿ ಗಣೇಶರು ಈ ಗೋಷ್ಠಿಯನ್ನು ನಡೆಸಿಕೊಟ್ಟು ಕೊನೆಯಲ್ಲಿ, “ಭಗವಾನ್ ವೇದವ್ಯಾಸರೇ ಈ ತ್ರಿಮತಗಳ ಪ್ರತಿಪಾದಕರಿಗೆ ಗುರುಗಳಾಗಿದ್ದಾರೆ, ತ್ರಿಮತಗಳಿಗೆ ಮೂಲವಸ್ತುಗಳಾದ ವೇದೋಪನಿಷತ್ತುಗಳು, ಗೀತೆ ಮತ್ತು ಸೂತ್ರಗಳೂ ಒಂದೇ ಆಗಿವೆ.
ಹಾಗಾಗಿ ತ್ರಿಮತಗಳಲ್ಲಿ ಭೇದವಿರುವುದು ಉಪಾಧಿಯಲ್ಲಿಯೇ ಹೊರತು, ಆನಂದ ಎಂಬ ಉಪೇಯದಲ್ಲಿ ಅಲ್ಲ; ಇಲ್ಲಿ ಯಾರ ದರ್ಶನವು ಇನ್ನಾರ ದರ್ಶನಕ್ಕೆ ಅDIನ ಎಂಬ ಪ್ರಶ್ನೆಯೇ ಇಲ್ಲ, ಎಲ್ಲವೂ ಸ್ವತಂತ್ರವಾಗಿವೆ" ಎನ್ನುವ ಸುಂದರ ಸಮನ್ವಯವನ್ನು ಹೇಳಿ ಗೋಷ್ಠಿಯನ್ನು ಮುಗಿಸಿದ್ದರು. “ಸಾಧಕರಿಗೆ ಅವರವರ ಆಚಾರ್ಯರ ತತ್ವಗಳನ್ನು ಸರಿ ಯಾಗಿ ತಿಳಿದು ರೂಢಿಸಿಕೊಳ್ಳುವುದಕ್ಕೆ ನೆರವಾಗಲು ಇಂಥ ಗೋಷ್ಠಿ ನಡೆಯುತ್ತಿರುವುದು. ನಮ್ಮ ನಮ್ಮ ಆಚಾರ್ಯರ ಉಪದೇಶಗಳನ್ನು ಅಧ್ಯಯನ ಮಾಡಿ, ಗ್ರಹಿಸಿ, ಜೀವನಾನ್ವಯ ಮಾಡಿಕೊಂಡಾಗ ಮಾತ್ರ ನಾವು ದ್ವೈತಿಗಳು, ಅದ್ವೈತಿಗಳು ಅಥವಾ ವಿಶಿಷ್ಟಾದ್ವೈತಿಗಳಾಗಲು ಸಾಧ್ಯವಿದೆ. ನನ್ನ ತಂದೆ ಅದ್ವೈತಿಯಾಗಿದ್ದರೆಂಬ ಕಾರಣಕ್ಕೆ ನಾನೂ ಅದ್ವೈತಿಯಾಗುವುದಲ್ಲ.
ಈಗ ನಾವು, ದ್ವೈತಿ-ಅದ್ವೈತಿ-ವಿಶಿಷ್ಟಾದ್ವೈತಿಗಳು ಅಂತ ಅಥವಾ ‘ನಮ್ಮದೇ ಸರಿಯಾದದ್ದು’ ಎಂದು ಜಗಳವಾಡುವಮೊದಲು ಎಲ್ಲವನ್ನೂ ಅಧ್ಯಯನ ಮಾಡಿ ನಮಗೆ ಸರಿಯೆನಿಸಿದ್ದನ್ನು ಅನುಸರಿಸಬಹುದು" ಎಂದು ಬನ್ನಂಜೆ ಯವರು ಅಲ್ಲಿ ಅಭಿಪ್ರಾಯಪಟ್ಟಿದ್ದರು. ಭಾರತೀಯ ಸನಾತನ ಶ್ರೀಮಂತಿಕೆಗೆ ಶಂಕರರ ಕೊಡುಗೆಯನ್ನು ಉಪನ್ಯಾಸ ದುದ್ದಕ್ಕೂ ಕೊಂಡಾಡಿದ್ದ ಬನ್ನಂಜೆಯವರ ಮಾತು ಕೇಳಿದಾಗ, ‘ಶಂಕರರ ನಿಂದನೆಯಲ್ಲೇ ಅನ್ನಾಹಾರ ಕಂಡು ಕೊಳ್ಳುತ್ತಿರುವ ಕೆಲವರು ಮಧ್ವರನ್ನು ಸರಿಯಾಗಿ ಓದಿಕೊಂಡಿಲ್ಲ, ಹೀಗೆ ಸಾರವತ್ತಾದ ಅಧ್ಯಯನ ಮಾಡಿದವರು ಶಂಕರರನ್ನು ಅವಹೇಳನ ಮಾಡುವುದಿಲ್ಲ’ ಎಂಬುದು ಅರ್ಥವಾಗುತ್ತದೆ.
ಪಾಲ್ಗೊಂಡಿದ್ದ ಮೂರೂ ವಿದ್ವಾಂಸರು ಗೋಷ್ಠಿಯುದ್ದಕ್ಕೂ ಶಾಂತಚಿತ್ತದಿಂದ, ಕಠಿಣಾತಿಕಠಿಣ ವಿಷಯವನ್ನು ಕೇಳುಗರಿಗಾಗಿ ಸಮರಸಗೊಳಿಸಿದ್ದು ವಿಶೇಷವಾಗಿತ್ತು. ಅವರಲ್ಲಿ ಪರಸ್ಪರ ಪ್ರೀತಿ-ಗೌರವಗಳಿದ್ದವು. ಮುಂದೆ ನನ್ನ ಲೇಖನದ ಕುರಿತು, ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿ.ವಿ.ಯ ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿಯವರ ‘ಸಮನ್ವಯ-ಪ್ರತಿಪಾದಕ’ ಪ್ರತಿಸ್ಪಂದನೆಯೂ ‘ವಿಶ್ವವಾಣಿ’ಯಲ್ಲಿ ಪ್ರಕಟವಾಯಿತು.
ಅದರಲ್ಲಿ ಅವರು ಸನಾತನ ಸಮಾಜದ ಉಳಿವಿಗಾಗಿ ವ್ಯಕ್ತಪಡಿಸಿದ ಕಾಳಜಿ ಮನಮುಟ್ಟುವಂತಿತ್ತು. ಈ ವಿವಾದಕ್ಕೆ ಸರಳ- ಸುಂದರ-ಶಾಶ್ವತ ಪರಿಹಾರವನ್ನೂ ಅವರು ಸೂಚಿಸಿರುವುದನ್ನು ನೋಡಿದಾಗ, ಅವರ ಮೇಲಿನ ಪ್ರೀತಿ-ಗೌರವ ಹೆಚ್ಚಾದವು. ಅವರ ಈ ಸಮಯೋಚಿತ ಪ್ರತಿಸ್ಪಂದನೆಗೆ ನನ್ನ ಗೌರವ-ಪುರಸ್ಸರ ಅಭಿವಾದನೆಗಳು.
ನಿನ್ನೆ, ಶತಾವಧಾನಿ ಗಣೇಶರೂ, ‘ಮಣಿಮಂಜರಿ’ ಕುರಿತು ತಾವಾಡಿದ ಮಾತುಗಳ ಹಿನ್ನೆಲೆ ಮತ್ತು ಕಾರಣಗಳ ಕುರಿತು‘ವಿಶ್ವವಾಣಿ’ಯಲ್ಲಿ ಸ್ಪಷ್ಟೀಕರಿಸಿ, ಸಂಶಯಗ್ರಸ್ತ ಮನಸ್ಸುಗಳಿಗೆ ಸಮಾಧಾನ ನೀಡಿದ್ದಾರೆ. ಜತೆಗೆ, ಲೋಕದಲ್ಲಿನ ವಿವಿಧ ‘ಶ್ರೀ ಶಂಕರ ದಿಗ್ವಿಜಯ’ಗಳ ಕುರಿತು ಹೇಳುತ್ತ, ಶ್ರೀ ಸಚ್ಚಿದಾನೇಂದ್ರ ಸರಸ್ವತೀ ಸ್ವಾಮಿಗಳ ‘ಶ್ರೀ ಶಂಕರಭಗವತ್ಪಾದ ವೃತ್ತಾಂತ ಸಾರಸರ್ವಸ್ವ’ ಮತ್ತು ವಿದ್ವಾನ್ ಎಸ್.ರಂಗನಾರ್ಥ ಶರ್ಮರ ‘ಮಾಧವೀಯ ಶಂಕರ ವಿಜಯ’ದ ಕನ್ನಡಾನುವಾದದ ಉಲ್ಲೇಖ ಮಾಡಿ ಆಸಕ್ತರಿಗೆ ಉಪಕರಿಸಿದ್ದಾರೆ. ಎಲ್ಲ ಮತದವರಿಗೂ ಆಸರೆಯಾದ ಸನಾತನಕ್ಕೆ, ಅದರ ಆಧಾರವಾದ ನಮ್ಮೀ ದೇಶಕ್ಕೆ ಒಳಿತಾಗಲಿ ಎಂದು ಹಾರೈಸಿರುವ ಅವರ ಸುಮನಸ್ಸಿಗೆ ನನ್ನ ಶರಣು.
‘ದೌರ್ಲಭ್ಯಾತ್ ಶುದ್ಧಬುದ್ಧೀನಾಂ, ಬಾಹುಳ್ಯಾತ್ ಅಲ್ಪವೇದಿನಾಂ, ದುರಾಗ್ರಹ ಗ್ರಹೀತತ್ವಾತ್ ವರ್ತಂತೆ ಸಮಯಾಃ ಸ್ಸದಾ’ ಎಂಬ ಮಧ್ವರ ಮಾತು ಇಂದಿಗೂ ಪ್ರಸ್ತುತ. ಶುದ್ಧಬುದ್ಧಿಯುಳ್ಳವರ ಕೊರತೆ, ಅರ್ಧಂಬರ್ಧ ತಿಳಿವಳಿಕೆ ಯವರ ಮತ್ತು ದುರಾಗ್ರಹಪೀಡಿತರ ಬಾಹುಳ್ಯ ಎಂಬುದು ಎಲ್ಲ ಕಾಲದಲ್ಲೂ ಇದ್ದದ್ದೇ. ಹಾಗಂತ ಸಾತ್ವಿಕರು ಅಂಜಬೇಕಿಲ್ಲ. ಶ್ರೀ ಸುಬುಧೇಂದ್ರ ತೀರ್ಥರು, ಶತಾವಧಾನಿ ಗಣೇಶರು, ಪ್ರೊ.ಶ್ರೀನಿವಾಸ ವರಖೇಡಿಯವರು ಮತ್ತು ಬನ್ನಂಜೆ ಗೋವಿಂದಾಚಾರ್ಯರೇ ಮೊದಲಾದ ಸಮ್ಯಕ್ ಜ್ಞಾನಿಗಳು ಸಮಾಜದಲ್ಲಿ ಆಗಾಗ ಹುಟ್ಟಿ ವೈಚಾರಿಕ ಸಮತೋಲನಕ್ಕೆ ಕಾರಣರಾಗುತ್ತಾರೆ ಎಂಬ ನಂಬಿಕೆ ನನ್ನದು.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)
ಇದನ್ನೂ ಓದಿ: Vinayaka V Bhatta Column: ಮಣಿಮಂಜರಿ ಎಂಬ ಶುದ್ಧಾಂಗ ಅಪಲಾಪ