ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalagam Terror Attack: ಉಗ್ರರ ದಾಳಿಯ ಭಯಾನಕ ಕ್ಷಣಗಳ ಬಗ್ಗೆ ವಿವರಿಸಿದ 10 ವರ್ಷದ ಬಾಲಕ

10 ವರ್ಷದ ನಕ್ಷ್ ಕಲತಿಯಾ, ಮುಂಬೈನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯ 44 ವರ್ಷದ ವ್ಯವಸ್ಥಾಪಕ ಶೈಲೇಶ್ ಕಲತಿಯಾ ಅವರ ಪುತ್ರ. ಶೈಲೇಶ್ ತಮ್ಮ ಪತ್ನಿ, ಇಬ್ಬರು ಮಕ್ಕಳು ಮತ್ತು ಸಹೋದ್ಯೋಗಿಯ ಕುಟುಂಬದೊಂದಿಗೆ ರಜೆಯನ್ನು ಆನಂದಿಸಲು ಪಹಲ್ಗಾಮ್‌ಗೆ ತೆರಳಿದ್ದಾಗ, ಮಂಗಳವಾರ ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾದರು. ಈ ಘಟನೆಯ ನಂತರ, ಹಲವಾರು ಮಾಧ್ಯಮ ಪ್ರತಿನಿಧಿಗಳು ಕುಟುಂಬವನ್ನು ಭೇಟಿಯಾಗಿ ಈ ಕ್ರೂರ ದಾಳಿಯ ಭಯಾನಕ ವಿವರಗಳನ್ನು ರಾಷ್ಟ್ರಕ್ಕೆ ತಿಳಿಸಲು ಪ್ರಯತ್ನಿಸಿದ್ದಾರೆ.

ಉಗ್ರರ ದಾಳಿಯ ಭಯಾನಕ ಕ್ಷಣಗಳ ಬಗ್ಗೆ ವಿವರಿಸಿದ 10 ವರ್ಷದ ಬಾಲಕ

Profile Sushmitha Jain Apr 25, 2025 10:34 PM

ನವದೆಹಲಿ: ಜಮ್ಮು-ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ (Pahalgam) ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ (Terrorist Attack) ತನ್ನ ತಂದೆಯನ್ನು ಕಳೆದುಕೊಂಡ 10 ವರ್ಷದ ಬಾಲಕ ನಕ್ಷ್ ಕಲತಿಯಾ ಅವರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 'ಎಲ್ಲರ ಕಣ್ಣುಗಳೂ ಪಹಲ್ಗಾಮ್ ಮೇಲೆ' ಎಂಬ ಚರ್ಚೆಯೊಂದಿಗೆ, ಕೆಲವರು ಬಾಲಕನನ್ನು "ಮಾಧ್ಯಮಗಳಿಗಿಂತಲೂ ಕಠಿಣ ಪ್ರಶ್ನೆಗಳನ್ನು ಕೇಳಿದ್ದಾನೆ” ಎಂದು ಶ್ಲಾಘಿಸಿದರೆ, ಇತರರು ಅಪ್ರಾಪ್ತ ಬಾಲಕನನ್ನು ಮಾಧ್ಯಮಗಳು ತೀವ್ರವಾಗಿ ಪ್ರಶ್ನಿಸಿರುವುದು ಮತ್ತು "ಧರ್ಮದ ಬಗ್ಗೆ ಮಾತನಾಡುವಂತೆ ಮಾಡಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

10 ವರ್ಷದ ನಕ್ಷ್ ಕಲತಿಯಾ, ಮುಂಬೈನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯ 44 ವರ್ಷದ ವ್ಯವಸ್ಥಾಪಕ ಶೈಲೇಶ್ ಕಲತಿಯಾ ಅವರ ಪುತ್ರ. ಶೈಲೇಶ್ ತಮ್ಮ ಪತ್ನಿ, ಇಬ್ಬರು ಮಕ್ಕಳು ಮತ್ತು ಸಹೋದ್ಯೋಗಿಯ ಕುಟುಂಬದೊಂದಿಗೆ ರಜೆಯನ್ನು ಆನಂದಿಸಲು ಪಹಲ್ಗಾಮ್‌ಗೆ ತೆರಳಿದ್ದಾಗ, ಮಂಗಳವಾರ ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾದರು. ಈ ಘಟನೆಯ ನಂತರ, ಹಲವಾರು ಮಾಧ್ಯಮ ಪ್ರತಿನಿಧಿಗಳು ಕುಟುಂಬವನ್ನು ಭೇಟಿಯಾಗಿ ಈ ಕ್ರೂರ ದಾಳಿಯ ಭಯಾನಕ ವಿವರಗಳನ್ನು ರಾಷ್ಟ್ರಕ್ಕೆ ತಿಳಿಸಲು ಪ್ರಯತ್ನಿಸಿದ್ದಾರೆ.

ಒಂದು ವಿಡಿಯೋದಲ್ಲಿ, 10ಕ್ಕೂ ಹೆಚ್ಚು ಮೈಕ್‌ಗಳಿಂದ ಸುತ್ತುವರಿಯಲ್ಪಟ್ಟ ನಕ್ಷ್, ಆಗಾಗ ಕಳವಳಗೊಂಡಂತೆ ಕಾಣುತ್ತಾ ಶಾಂತವಾಗಿ ಉತ್ತರಿಸುತ್ತಾನೆ. ಮಾಧ್ಯಮಗಳು ಅವನಿಗೆ "ನೀವು ಮತ್ತೆ ಪಹಲ್ಗಾಮ್‌ಗೆ ಭೇಟಿ ನೀಡುತ್ತೀರಾ?" ಎಂದು ಕೇಳಿದಾಗ, 10 ವರ್ಷದ ಬಾಲಕ "ಇಲ್ಲ" ಎಂದು ಖಡಾಖಂಡಿತವಾಗಿ ಉತ್ತರಿಸಿದ. "ಪಟ್ಟಣದಲ್ಲಿ ಸೇನಾ ಸಿಬ್ಬಂದಿ ಇದ್ದರೂ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಯಾರಿಗೂ ತಿಳಿದಿರಲಿಲ್ಲವೇಕೆ?" ಎಂದು ಅವನು ಪ್ರಶ್ನಿಸಿದ. 96,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿರುವ ಮತ್ತು 74,000 ಬಾರಿ ಶೇರ್‌ ಮಾಡಿರುವ ಈ 35 ಸೆಕೆಂಡ್‌ಗಳ ಕ್ಲಿಪ್‌ಗೆ ಕೆಲವರು ಮಾಧ್ಯಮಗಳನ್ನು ಟೀಕಿಸಿದ್ದಾರೆ.

ಕೆಲ ನೆಟ್ಟಿಗರು "ಮಗುವನ್ನು ಬಿಟ್ಟುಬಿಡಿ... ಆತ ತನ್ನ ತಂದೆಯ ನೆನಪಿನಲ್ಲಿ ಕಳೆದುಹೋಗಿದ್ದಾನೆ" ಎಂದಿದ್ದಾರೆ. ಮತ್ತೊಬ್ಬರು, "ಮಗು ತನ್ನ ತಂದೆಯನ್ನು ಕಳೆದುಕೊಂಡಿದ್ದಾನೆ, ಈಗ ಮಾಧ್ಯಮದ ಒತ್ತಡದಲ್ಲಿ ಪ್ರಶ್ನೆಗಳನ್ನು ಕೇಳಿ ಆತನನ್ನು ಆಘಾತಕ್ಕೊಳಗಾಗಿಸಬೇಡಿ. ಆತ ತುಂಬಾ ಚಿಕ್ಕವನು, ದಯವಿಟ್ಟು ಆತನಿಗೆ ದುಃಖವನ್ನು ಎದುರಿಸಲು ಬಿಡಿ" ಎಂದು ಟೀಕಿಸಿದ್ದಾರೆ.

ಸುರತ್‌ನ ನಿವಾಸಿಯಾದ ನಕ್ಷ್, "ಒಬ್ಬ ಭಯೋತ್ಪಾದಕನು ಇತರ ಗನ್‌ಮೆನ್‌ಗಳಿಗೆ ಪುರುಷರನ್ನು ಮುಸ್ಲಿಮರು ಮತ್ತು ಹಿಂದೂಗಳೆಂದು ವಿಂಗಡಿಸಲು ಆದೇಶಿಸಿದ್ದನ್ನು ಕೇಳಿದೆ. ನಂತರ ಎಲ್ಲಾ ಹಿಂದೂ ಪುರುಷರನ್ನು ಗುಂಡಿಕ್ಕಿ ಕೊಂದರು," ಎಂದು ವಿವರಿಸಿದ. "ನಾವು ಪಹಲ್ಗಾಮ್‌ನ 'ಮಿನಿ ಸ್ವಿಟ್ಜರ್‌ಲ್ಯಾಂಡ್' ಪಾಯಿಂಟ್‌ನಲ್ಲಿದ್ದಾಗ ಗುಂಡಿನ ಸದ್ದು ಕೇಳಿತು. ಭಯೋತ್ಪಾದಕರು ಪ್ರದೇಶಕ್ಕೆ ಬಂದಿರುವುದನ್ನು ಅರಿತು ನಾವು ಅಡಗಿಕೊಂಡೆವು. ಆದರೆ, ಅವರು ನಮ್ಮನ್ನು ಕಂಡುಹಿಡಿದರು. ಇಬ್ಬರು ಭಯೋತ್ಪಾದಕರನ್ನು ನಾನು ಕಂಡೆ," ಎಂದು ಬಾಲಕ ಹೇಳಿದ್ದಾನೆ.

ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನಿಯರು ಗೂಗಲ್‌ನಲ್ಲಿ ಹುಡುಕಿದ್ದು ಏನು ಗೊತ್ತೇ ?

"ಭಯೋತ್ಪಾದಕರು ಪುರುಷರಿಗೆ 'ಕಲ್ಮಾ'ವನ್ನು ಮೂರು ಬಾರಿ ಓದಲು ಆದೇಶಿಸಿದರು.ಯಾರಿಗೆ ಓದಲು ಸಾಧ್ಯವಾಗಲಿಲ್ಲವೋ ಅವರನ್ನು ಗುಂಡಿಕ್ಕಿ ಕೊಂದರು," ಎಂದು ವಿವರಿಸಿದ್ದಾನೆ. "ಭಯೋತ್ಪಾದಕರು ಹೋದ ನಂತರ, ಸ್ಥಳೀಯರು ಬಂದು ಬದುಕುಳಿದವರೆಲ್ಲರೂ ತಕ್ಷಣ ಕೆಳಗಿಳಿಯಬೇಕು ಎಂದರು. ನಾವು ಆ ಸ್ಥಳದಿಂದ ಕೆಳಗಿಳಿದ ಸುಮಾರು ಒಂದು ಗಂಟೆಯ ನಂತರ ಸೇನೆ ಆಗಮಿಸಿತು. ಭಯೋತ್ಪಾದಕರು ನನ್ನ ತಂದೆಗೆ ಮಾತನಾಡಲು ಅವಕಾಶವೇ ನೀಡಲಿಲ್ಲ. ಅವರು ನನ್ನ ತಾಯಿಗೆ ಏನೂ ಹೇಳಲಿಲ್ಲ. ಒಬ್ಬ ಭಯೋತ್ಪಾದಕನಿಗೆ ಗಡ್ಡವಿತ್ತು, ತಲೆಗೆ ಕ್ಯಾಮೆರಾ ಕಟ್ಟಿಕೊಂಡಿದ್ದ. ಅವರು ಮಹಿಳೆಯರು ಮತ್ತು ಮಕ್ಕಳನ್ನು ಬಿಟ್ಟರು," ಎಂದು ಬಾಲಕ ವಿವರಿಸಿದ್ದಾನೆ.

ಗುರುವಾರ, ಶೈಲೇಶ್‌ ಅಂತ್ಯಕ್ರಿಯೆಯಲ್ಲಿ ಗೌರವ ಸಲ್ಲಿಸಲು ಆಗಮಿಸಿದ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರ ಮೇಲೆ ನಕ್ಷ್‌ ಅವರ ತಾಯಿ ಶೀತಲ್ ಕಲತಿಯಾ ಆಕ್ರೋಶ ವ್ಯಕ್ತಪಡಿಸಿದರು. ಶೀತಲ್ ನ್ಯಾಯಕ್ಕಾಗಿ ಒತ್ತಾಯಿಸಿ, "ಪ್ರವಾಸಿಗರಿಗೆ ಭದ್ರತೆ ಒದಗಿಸದ" ಸರ್ಕಾರವನ್ನು ಟೀಕಿಸಿದರು. "ಕಾಶ್ಮೀರದಲ್ಲಿ ಯಾವುದೇ ಸಮಸ್ಯೆ ಇಲ್ಲ, ಸಮಸ್ಯೆ ಭದ್ರತಾ ವ್ಯವಸ್ಥೆಯದ್ದು. ಪಹಲ್ಗಾಮ್‌ನ ಪ್ರವಾಸಿ ತಾಣದಲ್ಲಿ ಒಬ್ಬ ಸೈನಿಕನೂ ಇರಲಿಲ್ಲ, ಯಾವುದೇ ವೈದ್ಯಕೀಯ ಸೌಲಭ್ಯವೂ ಇರಲಿಲ್ಲ," ಎಂದು ಅವರು ವಿಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.