Dr Sadhanashree Column: ಬೇಸಗೆಯ ಬೇಗೆಗೆ ಬೇಯದೆ ಬದುಕುವ ಬಗೆ
ಇನ್ನು ದಕ್ಷಿಣಾಯನವೆಂಬ ವಿಸರ್ಗ ಕಾಲದಲ್ಲಿ ಸೂರ್ಯನು ಪೃಥ್ವಿಗೆ ನೀರನ್ನು ಬಿಟ್ಟು ಕೊಡುತ್ತಾನೆ. ಈ ಕಾಲದಲ್ಲಿ ಮನುಷ್ಯನ ದೇಹದಲ್ಲಿ ಶಕ್ತಿ, ಬಲ ಮತ್ತು ವೀರ್ಯಗಳು ವೃದ್ಧಿ ಯಾಗುತ್ತದೆ. ಅಂದರೆ ವರ್ಷ ಋತುವಿನಲ್ಲಿ ಅತ್ಯಂತ ಕಡಿಮೆಯಿದ್ದ ಬಲವು ಹೇಮಂತ ಋತುವಿನಲ್ಲಿ ಅತ್ಯಧಿಕವಾಗುತ್ತದೆ.


ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
‘ಯುಗಾದಿ’ ಎಂದರೆ ಹೊಸ ವರುಷದ ಪ್ರಾರಂಭ. ನೂತನ ಸಂವತ್ಸರವನ್ನು ಸ್ವಾಗತ ಮಾಡುವ ಸುಸಂದರ್ಭ. ಕಾಲಚಕ್ರದ ಪ್ರಭಾವವು ನಮ್ಮ ಜೀವನದ ಮೇಲೆ ಅಗಾಧ. ಆತ್ಮೋನ್ನತಿಯಲ್ಲಿ ಕಾಲದ ಪ್ರಭಾವವನ್ನು ನಮ್ಮ ವೇದಗಳು ಗಾಢವಾಗಿ ವಿಶ್ಲೇಷಿಸಿರುವಂತೆ, ಆಯುರ್ವೇದವು ಸ್ವಾಸ್ಥ್ಯ ದ ಮೇಲಾಗುವ ಕಾಲದ ಪ್ರಭಾವವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದೆ. ಅಚ್ಚುಕಟ್ಟಾಗಿ ವಿವರಿಸುತ್ತಾ, ಒಂದು ಸಂವತ್ಸರದಲ್ಲಿ ಆರು ಋತುಗಳನ್ನು ಗುರುತಿಸಿದೆ. ಹೇಮಂತ ಋತು ಮತ್ತು ಶಿಶಿರ ಋತುಗಳು ಚಳಿಗಾಲವಾದರೆ, ನಂತರ ಬರುವ ವಸಂತ ಋತುವು ಪ್ರಕೃತಿಯಲ್ಲಿ ಚಿಗುರೊಡೆಯುವ ಕಾಲ. ಗ್ರೀಷ್ಮ ಋತು ಬೇಸಗೆಯಾದರೆ, ವರ್ಷ ಋತುವು ಮಳೆಗಾಲ. ಮುಂದಿನ ಶರತ್ ಋತುವು ಮಳೆಗಾ ಲದ ನಂತರ ಬರುವ ಬಿಸಿಲುಗಾಲ.
ಅಂತೆಯೇ, ಒಂದು ಸಂವತ್ಸರವನ್ನು ಉತ್ತರಾಯಣ ಮತ್ತು ದಕ್ಷಿಣಾಯನಗಳಾಗಿ ವಿಭಾಗಿಸಿದೆ. ಉತ್ತರಾಯಣದಲ್ಲಿ ಸೂರ್ಯನು ತನ್ನ ಸ್ಥಾನದಿಂದ ಉತ್ತರಾಭಿಮುಖವಾಗಿ ಸಂಚರಿಸುತ್ತಾನೆ. ಈ ಕಾಲದಲ್ಲಿ ಮೂರು ಋತುಗಳನ್ನು ಕಾಣಬಹುದು- ಶಿಶಿರ, ವಸಂತ ಮತ್ತು ಗ್ರೀಷ್ಮ. ಇನ್ನು ದಕ್ಷಿಣಾಯನವೆಂದರೆ ಸೂರ್ಯನು ತನ್ನ ಸ್ಥಾನದಿಂದ ದಕ್ಷಿಣಾಭಿಮುಖವಾಗಿ ಸಂಚರಿಸುವುದು.
ಇದರಲ್ಲಿ ಬರುವ ಮೂರು ಋತುಗಳೆಂದರೆ- ವರ್ಷ, ಶರತ್ ಮತ್ತು ಹೇಮಂತ. ಉತ್ತರಾಯಣವೆಂಬ ಆದಾನ ಕಾಲದಲ್ಲಿ ಪೃಥ್ವಿಯಿಂದ ಸೂರ್ಯನು ನೀರನ್ನು ಹೀರುತ್ತಾನೆ. ಈ ಕಾಲದಲ್ಲಿ ಮನುಷ್ಯರ ಶಕ್ತಿ, ಬಲ ಮತ್ತು ವೀರ್ಯಗಳು ಕ್ರಮೇಣ ಕ್ಷೀಣವಾಗುತ್ತವೆ. ಅಂದರೆ ಶಿಶಿರ ಋತುವಿನಲ್ಲಿ ಅಧಿಕವಾ ಗಿದ್ದ ದೇಹ ಬಲವು ಗ್ರೀಷ್ಮ ಋತು ಬರುವಷ್ಟರಲ್ಲಿ ಅತ್ಯಂತ ಕ್ಷಯವಾಗುತ್ತದೆ.
ಇದನ್ನೂ ಓದಿ: Dr Sadhanashree Column: ನಿಮ್ಮ ನೇತ್ರಗಳ ಶತ್ರು- ಮಿತ್ರರ ಬಗ್ಗೆ ಬಲ್ಲಿರಾ... ?
ಇನ್ನು ದಕ್ಷಿಣಾಯನವೆಂಬ ವಿಸರ್ಗ ಕಾಲದಲ್ಲಿ ಸೂರ್ಯನು ಪೃಥ್ವಿಗೆ ನೀರನ್ನು ಬಿಟ್ಟು ಕೊಡು ತ್ತಾನೆ. ಈ ಕಾಲದಲ್ಲಿ ಮನುಷ್ಯನ ದೇಹದಲ್ಲಿ ಶಕ್ತಿ, ಬಲ ಮತ್ತು ವೀರ್ಯಗಳು ವೃದ್ಧಿ ಯಾಗುತ್ತದೆ. ಅಂದರೆ ವರ್ಷ ಋತುವಿನಲ್ಲಿ ಅತ್ಯಂತ ಕಡಿಮೆಯಿದ್ದ ಬಲವು ಹೇಮಂತ ಋತುವಿನಲ್ಲಿ ಅತ್ಯಧಿಕವಾಗುತ್ತದೆ.
ಹಾಗಾದರೆ, ಕಾಲದ ಮತ್ತು ಋತುಗಳ ಬಗ್ಗೆ ಆಯುರ್ವೇದದಲ್ಲಿ ವಿವರಿಸುವ ಅಗತ್ಯವೇನಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಮಾನವನ ಶರೀರವು ಈ ಸೃಷ್ಟಿಯ ಪ್ರತಿಬಿಂಬ. ಸೃಷ್ಟಿಯಗುವ ಎಲ್ಲಾ ಏರಿಳಿತ ಗಳನ್ನೂ ಮಾನವನ ಶರೀರದಲ್ಲಿ ಕಾಣಬಹುದು. ಸಂವತ್ಸರವು ಉರುಳಿದಂತೆ, ಕಾಲದ ಪ್ರಭಾವದಿಂದ ಹೊರಗಿನ ವಾತಾವರಣದಗುವ ಏರುಪೇರುಗಳನ್ನು ನಮ್ಮ ಶರೀರದ ಆಂತರಿಕ ವಾತಾವರಣದಲ್ಲಿ ಕಾಣಬಹುದು.
ಹಾಗಾಗಿಯೇ, ಋತು ಬದಲಾವಣೆಯ ನೇರ ಪ್ರಭಾವವು ನಮ್ಮ ಸ್ವಾಸ್ಥ್ಯದ ಮೇಲಾಗುವುದನ್ನು ನಾವೆಲ್ಲರೂ ಗಮನಿಸಿಯೇ ಇರುತ್ತೇವೆ. ‘ಕಾಲಕ್ಕೆ ತಕ್ಕಂತೆ ನಡೆಯಬೇಕು’ ಎನ್ನುವ ಸಾರವನ್ನು ಆಯುರ್ವೇದದ ಋತುಚರ್ಯೆಯು ಸಾರುತ್ತದೆ. ಪ್ರತಿಯೊಂದು ಋತುವಿಗೂ ಅದರದ್ದೇ ಆದ ಋತುಚರ್ಯೆಯಿದೆ. ಆ ಋತುವಿನಲ್ಲಿ ಶರೀರದಲ್ಲಿ ಆಗುವ ಏರುಪೇರುಗಳನ್ನು ಸರಿ ಮಾಡುವಂಥ, ದೇಹದಲ್ಲಿ ಹೆಚ್ಚು ಕಡಿಮೆಯಾಗಿರುವ ದೋಷಗಳನ್ನು ಸಮ ಅವಸ್ಥೆಗೆ ತರುವ, ಶಾರೀರಿಕ ಮತ್ತು ಅಗ್ನಿಯ ಬಲಗಳನ್ನು ಸರಿದೂಗಿಸುವಂಥ ಆಹಾರ - ವಿಹಾರಗಳನ್ನು ಈ ಋತುಚರ್ಯೆಗಳಲ್ಲಿ ನೋಡಬಹುದು.

ಪ್ರಸ್ತುತ ನಡೆಯುತ್ತಿರುವುದು ಗ್ರೀಷ್ಮ ಋತು- ಬೇಸಗೆ/ಬಿಸಿಲುಗಾಲ. ಹಾಗಾದರೆ, ಆಯುರ್ವೇದದ ‘ಗ್ರೀಷ್ಮ ಋತು’ವಿನ ಚರ್ಯೆಯನ್ನು ಸಂಕ್ಷಿಪ್ತವಾಗಿ ಅರ್ಥೈಸಿಕೊಳ್ಳೋಣ. ವಸಂತ ಋತುವಿನಲ್ಲಿ ಪ್ರಾರಂಭವಾಗುವ ಬಿಸಿಲು, ಕ್ರಮೇಣ ಹೆಚ್ಚುತ್ತಾ ಗ್ರೀಷ್ಮ ಋತುವಿನಲ್ಲಿ ಮತ್ತಷ್ಟು ಹೆಚ್ಚಿ, ಅತಿ ಪ್ರಬಲವಾಗುತ್ತದೆ. ಇಂಥ ಸುಡುವ ಬಿಸಿಲಿನ ತಾಪದಿಂದ ವಾತಾವರಣದಲ್ಲಿರುವ ಸ್ನಿಗ್ಧಾಂಶವು ಮತ್ತು ನೀರಿನ ಅಂಶವು ಕಡಿಮೆಯಾಗಿ ಅತಿ ರೂಕ್ಷಗೊಂಡು ವಾತಾವರಣವು ಒಣ ಭೂಮಿಯಂತೆ ಗೋಚರಿಸುತ್ತದೆ.
ಹಾಗೆಯೇ, ನಮ್ಮ ದೇಹದಲ್ಲಿಯೂ ಸ್ನಿಗ್ಧತೆಯು ಕಡಿಮೆಯಾಗಿ, ವಾತ ದೋಷವು ಹೆಚ್ಚಾಗಿ ರೂಕ್ಷತೆಯಿಂದ ಮೈ ಕೈ ಎಲ್ಲಾ ಒಣಗುತ್ತದೆ. ಹಸಿವೆ ಕಡಿಮೆಯಾಗಿ ಶರೀರವು ಸೋತಂತೆ ಎನಿಸಿ ಕೂತಿದ್ದರೂ ಆಯಾಸವಾಗುತ್ತದೆ. ಬಲವೇ ಇಲ್ಲದೆ ದೇಹವು ಸೊರಗುತ್ತದೆ. ಈ ಋತುವಿನ ಪ್ರಭಾವ ದಿಂದ ದೈಹಿಕ ಬಲವು ಕ್ಷೀಣವಾಗಿ, ಅಗ್ನಿ ಬಲವೂ ಕುಂದುತ್ತದೆ.
ಜೀರ್ಣಶಕ್ತಿ ಕಡಿಮೆಯಾಗಿ, ಊಟವೇ ಬೇಡಪ್ಪ ಎನ್ನುವ ಸ್ಥಿತಿಯನ್ನು ತಲುಪುತ್ತದೆ. ಬಿಸಿಲಿನ ಧಗೆ ಮತ್ತು ಬೆವರುಗಳಿಂದ ಮಾನಸಿಕ ಕಿರಿಕಿರಿ ಹೆಚ್ಚಾಗಿ ಅದು ನಿದ್ರೆಯ ಮೇಲೂ ಪ್ರಭಾವ ಬೀರುತ್ತದೆ. ಹಾಗಾಗಿ ಬೇಸಗೆಯಲ್ಲಿ ಬಹಳಷ್ಟು ಜನರಿಗೆ ನಿದ್ರೆಯ ವ್ಯತ್ಯಾಸ ಕಾಣತೊಡಗುತ್ತದೆ. ಬಿಸಿಲುಗಾಲ ದಲ್ಲಿ ಬಿಸಿಲಿನ ತಾಪಕ್ಕೆ ಶಾರೀರಿಕ ಬಲವು ಕುಗ್ಗುವುದರಿಂದ ಬಲವರ್ಧಕವಾಗಿರುವಂಥ, ಜಿಡ್ಡಿನಂಶ ದಿಂದ ಕೂಡಿದ ಸಿಹಿಯಾದ ಆಹಾರ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು.
ಉದಾಹರಣೆಗೆ, ಬೂದು ಗುಂಬಳದ ಸಿಹಿ ಹಲ್ವಾ, ಹಾಲಿನಿಂದ ತಯಾರಿಸಿದ ಪಾಯಸ, ತುಪ್ಪ ಬೆಲ್ಲದಿಂದ ಮಾಡಿದ ಅರಳಿನ ಉಂಡೆ ಇತ್ಯಾದಿ. ಬಿಸಿಲಿನ ತಾಪಕ್ಕೆ ಬೇಯುತ್ತಿರುವ ಶರೀರವನ್ನು ಖಾರ, ಹುಳಿ, ಉಪ್ಪುಗಳಿಂದ ಮತ್ತಷ್ಟು ಬೇಯಿಸುವ ಪ್ರಯತ್ನ ಬೇಡ. ಉಪ್ಪು, ಖಾರ, ಹುಳಿಗಳನ್ನು ಹೆಚ್ಚಾಗಿ ಸೇವಿಸಿದರೆ ದೇಹದ ಬಲಕ್ಕೆ ಮತ್ತಷ್ಟು ಹಾನಿಯಾಗುತ್ತದೆ.
ಸುಸ್ತು ಸಂಕಟಗಳು ಹೆಚ್ಚಾಗುತ್ತವೆ. ಉರಿ ಮೂತ್ರ ಉಂಟಾಗಿ, ನಿದ್ರಾಕ್ಷಯವಾಗುತ್ತದೆ. ಬೇಸಗೆಯಲ್ಲಿ ಮೆಣಸಿನ ಕಾಯಿ ಬಜ್ಜಿ, ಬೋಂಡಾ, ಉಪ್ಪಿನಕಾಯಿ, ಎಣ್ಣೆಯಲ್ಲಿ ಕರಿದ ಖಾದ್ಯಗಳು, ಗರಂ ಮಸಾಲೆ ಯಿಂದ ತಯಾರಿಸಿದ ಅಡುಗೆ, ಹೆಚ್ಚಾಗಿ ಹಸಿಮೆಣಸು, ಶುಂಠಿ ಬೆಳ್ಳುಳ್ಳಿಯ ಬಳಕೆ, ಟೊಮೆಟೋ ಗಳಿಂದ ತಯಾರಿಸಿದ ಪದಾರ್ಥಗಳನ್ನು ಸರ್ವಥಾ ವರ್ಜಿಸಬೇಕು.
ಬೇಸಗೆಯ ತಾಪಕ್ಕೆ ಶರೀರವು ದ್ರವವನ್ನು ಹೆಚ್ಚಾಗಿ ಬೇಡುತ್ತದೆ. ಎಷ್ಟು ನೀರು ಕುಡಿದರೂ ಸ್ವಲ್ಪ ಸಮಯದ ಅದು ಬೆವರಿನ ಮೂಲಕ ಆವಿಯಾಗಿ ಬಿಡುತ್ತದೆ. ಬಿಸಿಲಿನ ತಾಪಕ್ಕೆ ಕೆರೆ ಬಾವಿಗಳೇ ಬರಿದಾಗುವಾಗ, ನಮ್ಮ ದೇಹವು ಯಾವ ಲೆಕ್ಕ? ಹಾಗಾಗಿ ಸರಿಯಾದ ವಿಧಾನದಲ್ಲಿ ದೇಹಕ್ಕೆ ದ್ರವಾಂಶವನ್ನು ಪೂರೈಸಬೇಕು.
ಇಲ್ಲವಾದರೆ, ಅದರಿಂದ ತೊಂದರೆಯಾಗಿ ಆರೋಗ್ಯವು ಹದಗೆಡುತ್ತದೆ. ಬಾಯಾರಿಕೆಯನ್ನು ತಣಿಸಲು ಮುಂದೆ ತಿಳಿಸಿರುವ ಆಯುರ್ವೇದದ ಕೆಲವು ಉಪಾಯಗಳನ್ನು ಬಳಸಬಹುದು:
? ಹಾಲಿಗೆ, ಸಕ್ಕರೆ ತುಪ್ಪವನ್ನು ಹಾಕಿಕೊಂಡು ಕುಡಿಯಬಹುದು. ರಾತ್ರಿ ಹೊತ್ತು ನಿದ್ರೆಯ ಸಮಸ್ಯೆ ಇರುವವರು ಬೇರೆ ಆಹಾರವನ್ನು ವರ್ಜಿಸಿ, ಇದನ್ನೇ ರಾತ್ರಿಯ ಆಹಾರ ಕಾಲದಲ್ಲಿ ಸೇವಿಸಿದರೆ ದೇಹವು ತಂಪಾಗಿ ಉತ್ತಮವಾದ ನಿದ್ರೆಯು ಲಭಿಸುತ್ತದೆ.
? ಚೆನ್ನಾಗಿ ಕುದಿಸಿ ಆರಿಸಿದ ನೀರನ್ನು ಮಡಕೆಯಲ್ಲಿ ಹಾಕಿ, ಅದಕ್ಕೆ ತಣ್ಣೀರಿನ ಬಟ್ಟೆಯನ್ನು ಸುತ್ತಿಟ್ಟು, ಬಾಯಾರಿಕೆಯಾದಾಗ ಸೇವಿಸಬಹುದು. ಆದರೆ ನೆನಪಿಡಿ, ಕುದಿಸಿದ ನೀರನ್ನು ಅಂದೇ ಬಳಸತಕ್ಕದ್ದು. ಆಹಾರವು ಹೇಗೆ ಹಳಸುತ್ತದೆಯೋ, ಹಾಗೆಯೇ ಕುದಿಸಿದ ನೀರು ರಾತ್ರಿ ಕಳೆದಂತೆ ಮುಂದಿನ ದಿನಕ್ಕೆ ಹಳಸುತ್ತದೆ. ಇದರ ಬಳಕೆ ಒಳ್ಳೆಯದಲ್ಲ.
? ಲಾವಂಚ, ಕೊನ್ನಾರಿಗೆಡ್ದೆ ಅಥವಾ ದ್ರಾಕ್ಷಿಯನ್ನು ಹಾಕಿ ಕುದಿಸಿ ಆರಿಸಿದ ನೀರನ್ನು ಕುಡಿಯ ಬಹುದು. ಇದು ವಿಶೇಷವಾಗಿ ಹಸಿವೆ ಕಮ್ಮಿ ಇದ್ದವರಿಗೆ ಪರಿಣಾಮಕಾರಿ ಆಗುತ್ತದೆ. ಬಾಯಾರಿಕೆ ಯನ್ನು ನೀಗುತ್ತದೆ.
? ಬಿಸಿಲುಗಾಲದಲ್ಲಿ ಬೆಲ್ಲದ ನೀರನ್ನು ಸೇವಿಸುವುದು ಶ್ರಮಹರ, ಮೂತ್ರಲ ಮತ್ತು ತೃಷ್ಣಾಹರ.
? ಸಿಹಿ ರುಚಿ ಇರುವ ಹಣ್ಣುಗಳ ಪಾನೀಯವನ್ನು ಸೇವಿಸುವುದು ಒಳ್ಳೆಯದು. ಉದಾಹರಣೆಗೆ- ಕಬ್ಬಿನ ಹಾಲು, ಕಲ್ಲಂಗಡಿ ಹಣ್ಣಿನ ರಸ, ಕರಬೂಜ ಪಾನಕ, ಎಳನೀರು ಇತ್ಯಾದಿ. ದ್ರವಗಳನ್ನು ಬಳಸುವಾಗ ಹಸಿವೆ-ಬಾಯಾರಿಕೆಗಳನ್ನು ಗಮನವಿಟ್ಟು ಬಳಸ ತಕ್ಕದ್ದು. ಅತಿಯಾಗಿ ಸೇವಿಸುವುದು/ಕೇವಲ ದ್ರವವನ್ನೇ ಸೇವಿಸುವುದು ಅಥವಾ ಫ್ರಿಜ್ಜಿನಲ್ಲಿ ಇಟ್ಟಂಥ ತಂಪಾದ ಪಾನೀಯಗಳನ್ನೇ ಸೇವಿಸುವುದು ಅಗ್ನಿಯನ್ನು ಹಾಳು ಮಾಡಿ ಕೆಮ್ಮು, ನೆಗಡಿ, ಜ್ವರಗಳನ್ನು ನೀಡುತ್ತದೆ.
? ಹಣ್ಣಿನ ರಸಗಳನ್ನು ಸೇವಿಸುವಾಗ ಅತಿಯಾಗಿ ಹುಳಿ ಇರುವ ಹಣ್ಣುಗಳ ಪಾನೀಯವನ್ನು ಸೇವಿಸುವುದು ಒಳ್ಳೆಯದಲ್ಲ. ಆದರೆ ಸಿಹಿ ಮತ್ತು ಹುಳಿರಸ ಇರುವಂಥ ಪಾನೀಯವನ್ನು ಬೇಸಗೆ ಯಲ್ಲಿ ಸೇವಿಸಬಹುದು. ಹುಳಿ ರಸವಿರುವ ಹಣ್ಣುಗಳಿಗೆ ಹಾಲನ್ನು ಎಂದಿಗೂ ಬೆರೆಸಿ ಸೇವಿಸ ಬಾರದು. ಆರೆಂಜ್ ಮಿಲ್ಕ್ ಶೇಕ್, ಸ್ಟ್ರಾಬೆರಿ ಮಿಲ್ಕ ಶೇಕ್ಗಳು ಆರೋಗ್ಯಕರವಲ್ಲ.
? ಐಸ್ ಕ್ರೀಮ್ ಅನ್ನು ಮಧ್ಯಾಹ್ನದ ಹೊತ್ತು ಆಹಾರಕ್ಕಿಂತ ಮುಂಚೆ ಹಿತಮಿತವಾಗಿ ಸೇವಿಸ ಬಹುದು. ರಾತ್ರಿಯ ವೇಳೆಯಲ್ಲಿ ಅದೂ ಊಟವಾದ ನಂತರ ಸೇವಿಸುವುದು ಅನಾರೋಗ್ಯವನ್ನು ಆಹ್ವಾನಿಸಿದಂತೆ.
? ಅರಳಿನ ಪುಡಿ/ರಾಗಿ ಹಿಟ್ಟು/ಗೋಽ ಹಿಟ್ಟಿನ ಜತೆಗೆ ಸ್ವಲ್ಪ ಸಕ್ಕರೆ, ಹಾಲು, ನೀರು- ಇವೆಲ್ಲವನ್ನೂ ಬೆರೆಸಿ, ಕುದಿಸಿ, ನೀರಾಗಿ ಪಾನೀಯವನ್ನು ತಯಾರಿಸಿಕೊಂಡು ಕುಡಿಯಬಹುದು. ಒಣದ್ರಾಕ್ಷಿ, ಖರ್ಜೂರ, ಜೇಷ್ಠ ಮಧುಗಳಿಂದ ತಯಾರಿಸಿದ ಪಾನೀಯವೂ ಈ ಋತುವಿನಲ್ಲಿ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಒಳ್ಳೆಯದು.
? ಗ್ರೀಷ್ಮ ಋತುವಿನಲ್ಲಿ ನೆನಪಿಡಬೇಕಾದ ಒಂದು ಮುಖ್ಯ ಅಂಶವೆಂದರೆ ಮೊಸರಿನ ಬಳಕೆಯ ಬಗೆಗಿನದು. ಮೊಸರು ನಾವೆಲ್ಲರೂ ತಿಳಿದುಕೊಂಡಿರುವ ಹಾಗೆ ಶರೀರಕ್ಕೆ ತಂಪಲ್ಲ. ಇದು ಸ್ಪರ್ಶಕ್ಕೆ ತಂಪೆನಿಸಿದರೂ ಜೀರ್ಣವಾದ ಮೇಲೆ ದೇಹದಲ್ಲಿ ಉಷ್ಣಾಂಶವನ್ನು ಉತ್ಪತ್ತಿ ಮಾಡುತ್ತದೆ.
ಅಂತೆಯೇ ಸ್ರೋತಸ್ಸುಗಳನ್ನು ಇದು ಅವರೋಧಿಸಿ, ವಿವಿಧ ರೀತಿಯ ತೊಂದರೆಗಳನ್ನು ನೀಡುತ್ತದೆ. ಹಾಗಾಗಿ ಬೇಸಗೆ ಕಾಲದಲ್ಲಿ ಮೊಸರಿನ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮೊಸರಿನ ಬದಲು ಮಜ್ಜಿಗೆಯ ಬಳಕೆ ಹಿತಕರ. ಹುಳಿ ಇರದ, ಫ್ರಿಜ್ನಲ್ಲಿ ಇಟ್ಟು ತಣ್ಣಗಿರದ ಮೊಸರನ್ನು ಸಮಭಾಗದಲ್ಲಿ ಅಥವಾ ಅರ್ಧ ಅಂಶ ಕಾದಾರಿದ ನೀರಿನ ಜತೆ ಚೆನ್ನಾಗಿ ಕಡೆದು ಒಗ್ಗರಣೆಯನ್ನು ಕೊಟ್ಟು ಸೇವಿಸಬಹುದು.
ಸಿಹಿಯಾದ ಮಜ್ಜಿಗೆಗೆ ಸಕ್ಕರೆಯನ್ನು ಹಾಕಿಕೊಂಡು ಸೇವಿಸಬಹುದು. ಆದರೆ ಅತಿಯಾದ ಮಜ್ಜಿಗೆಯ ಸೇವನೆಯೂ ಒಳ್ಳೆಯದಲ್ಲ- ಕಾರಣ ಮಜ್ಜಿಗೆಯೂ ದೇಹದಲ್ಲಿ ಉಷ್ಣಾಂಶವನ್ನು ಉತ್ಪತ್ತಿ ಮಾಡುತ್ತದೆ. ಆದರೆ ಹಿತಮಿತವಾದ ಬಳಕೆಯಿಂದ ತೊಂದರೆ ಇಲ್ಲ.
? ಇನ್ನು ಬೇಸಗೆಯ ವಿಹಾರಗಳ ಬಗ್ಗೆ ಚರ್ಚಿಸಬೇಕಾ ದರೆ, ಗ್ರೀಷ್ಮ ಋತುವಿನಲ್ಲಿ ನಮ್ಮ ಆರೋಗ್ಯ ದ ರಕ್ಷಣೆಗಾಗಿ ಮಾಡಲೇಬೇಕಾದಂಥ ಬಹಳ ಮುಖ್ಯ ಕರ್ಮವೆಂದರೆ ‘ಅಭ್ಯಂಗ’. ಪ್ರತಿದಿನವೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೈಗೆ ಕೊಬ್ಬರಿ ಎಣ್ಣೆಯನ್ನು ಸವರಿಕೊಂಡು 10 ನಿಮಿಷ ಬಿಟ್ಟು, ತಣ್ಣೀರಿನಿಂದ ಅಥವಾ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಅತ್ಯಂತ ಹಿತಕರ. ಇದು ಶರೀರದದ ವಾತ-ಪಿತ್ತಗಳ ಏರಿಳಿತವನ್ನು ಸರಿದೂಗಿಸಿ, ಉತ್ತಮ ಜೀರ್ಣಶಕ್ತಿಯನ್ನು ನೀಡಿ, ಮಲಪ್ರವೃತ್ತಿಯನ್ನು ಸರಾಗಗೊಳಿಸಿ, ಒಳ್ಳೆಯ ನಿದ್ರೆಯನ್ನು ಸಹ ನೀಡು ತ್ತದೆ.
ಮನಸ್ಸನ್ನು ಶಾಂತಗೊಳಿಸಿ ಬೇಸಗೆಯ ಕಿರಿಕಿರಿಯನ್ನು ನಿವಾರಿಸುತ್ತದೆ. ಸ್ನಾನದ ನಂತರ, ಶೀತ ಸುಗಂಧ ದ್ರವ್ಯಗಳನ್ನು ಲೇಪನ ಮಾಡಿಕೊಳ್ಳುವುದು ಶರೀರವನ್ನು ಪೂರ್ತಿ ದಿನ ತಂಪಾಗಿರಿಸುತ್ತದೆ. ಉದಾಹರಣೆಗೆ- ಚಂದನ ಲೇಪವು ಬೇಸಗೆಯಲ್ಲಿ ಬಹಳ ಹಿತ.
? ಇನ್ನು, ವಸದ ವಿಷಯಕ್ಕೆ ಬಂದರೆ ಸದಾ ತೆಳುವಾದ, ತಿಳಿ ಬಣ್ಣಗಳ, ಹತ್ತಿ ಬಟ್ಟೆಯನ್ನು ಧರಿಸಿ ಕೊಳ್ಳುವುದು ಅವಶ್ಯಕ. ಸುಗಮವಾಗಿ ಗಾಳಿ ಆಡುವ, ದೇಹವನ್ನು ತಂಪಾಗಿರಿಸಿರುವ ಉಡುಪುಗಳು ಹಿತಕರ.
? ಹೊರಗಡೆ ಬಿಸಿಲಿನಲ್ಲಿ ಹೋಗುವಾಗ ಅಥವಾ ಕೆಲಸ ಮಾಡುವಾಗ, ಶಿರಸ್ಸನ್ನು ರಕ್ಷಿಸಿ ಕೊಳ್ಳುವುದು ಬಹಳ ಮುಖ್ಯ. ತಲೆಗೆ ಬಟ್ಟೆಯನ್ನು ಕಟ್ಟಿ ಕೊಳ್ಳುವುದು/ ಛತ್ರಿಯನ್ನು ಉಪಯೋಗಿ ಸುವುದು ಒಳ್ಳೆಯದು. ಹೆಚ್ಚಿನ ಸಮಯ ಬಿಸಿಲಿನಲ್ಲಿ ಇರಬೇಕಾದ ಪರಿಸ್ಥಿತಿಯಲ್ಲಿ, ತಲೆಗೆ ಬಟ್ಟೆ ಕಟ್ಟಿ ತಣ್ಣೀರಿನಿಂದ ಅದನ್ನು ಆಗಾಗ್ಗೆ ಒz ಮಾಡಿಕೊಳ್ಳುವುದು ಒಳಿತು.
? ಸಾಮಾನ್ಯವಾಗಿ, ಆಯುರ್ವೇದದಲ್ಲಿ ‘ದಿವಾಸ್ವಪ್ನ’ ಅಂದರೆ ಹಗಲು ನಿದ್ರೆ ವರ್ಜ್ಯ. ಆದರೆ, ಗ್ರೀಷ್ಮ ಋತುವಿನಲ್ಲಿ ಶರೀರದ ವಾತದೋಷವು ಪ್ರಕುಪಿತಗೊಂಡಾಗ, ಸ್ವಲ್ಪ ಸಮಯ ಹಗಲು ನಿದ್ರೆ ಮಾಡುವುದರಿಂದ ಇಂದ್ರಿಯಗಳು ಆಯಾಸವನ್ನು ನಿವಾರಿಸಿ ಕೊಂಡು, ದೇಹವು ವಲವಿಕೆಯಿಂದ ಇರಲು ಅದು ಸಹಾಯಕಾರಿ. ಆದರೆ, ನೆನಪಿಡಿ- ಊಟವಾದ ಕೂಡಲೇ ಹಗಲು ನಿದ್ರೆ ಮಾಡುವುದು ಒಳ್ಳೆಯದಲ್ಲ. ಊಟಕ್ಕೆ ಮುನ್ನ, ಹೊಟ್ಟೆ ಖಾಲಿಯಿದ್ದಾಗ ಸ್ವಲ್ಪ ಸಮಯದ ಹಗಲು ನಿದ್ರೆ ಲಾಭಕಾರಿ.
? ಸಂಜೆಯ ವೇಳೆ ನೀರಿನ ತೊಟ್ಟಿ/ಸ್ವಿಮ್ಮಿಂಗ್ ಪೂಲ್ ಅಥವಾ ಕಾರಂಜಿಯ ಬಳಿ ಸ್ವಲ್ಪ ಸಮಯ ವಿಹರಿಸುವುದು ಆಹ್ಲಾದಕರ. ಬೆಳದಿಂಗಳಲ್ಲಿ ಸಮಯ ಕಳೆಯುವುದರಿಂದ ದೇಹದ ತಾಪ ನಿವಾರಣೆಯಾಗಿ ಮನಸ್ಸಿಗೆ ಉಸ ದೊರೆಯುತ್ತದೆ.
? ರಾತ್ರಿ ಮಲಗುವ ಮುನ್ನ ತಣ್ಣೀರಿನಲ್ಲಿ ಪಾದಗಳನ್ನು ಚೆನ್ನಾಗಿ ತೊಳೆದು, ಅಂಗೈಗಳನ್ನು ತೊಳೆದು, ಕಣ್ಣುಗಳನ್ನು ತೊಳೆದು, ನಂತರ ಕೊಬ್ಬರಿ ಎಣ್ಣೆ ಅಥವಾ ಸ್ವಲ್ಪ ತುಪ್ಪವನ್ನು ಎರಡು ಅಂಗಾಲುಗಳಿಗೆ ಸವರಿಕೊಂಡು ಮಲಗುವುದು ಒಳ್ಳೆಯ ನಿದ್ರೆಯನ್ನು ನೀಡುತ್ತದೆ.
? ನೆಲವನ್ನು ಚೆನ್ನಾಗಿ ಒದ್ದೆ ಬಟ್ಟೆಯಲ್ಲಿ ಒರೆಸಿ, ತೆಳುವಾದ ಹೊದಿಗೆಯನ್ನು ಹಾಸಿ ಅದರ ಮೇಲೆ ಮಲಗುವುದು ದೇಹಕ್ಕೆ ತಂಪೆರೆದು ನಿದ್ರೆ ಬರಲು ಸಹಕಾರಿಯಾಗುತ್ತದೆ.
? ಬೇಸಗೆಯಲ್ಲಿ ಮದ್ಯವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಕಾಫಿ -ಟೀಗಳ ಅನಿಯಮಿತ ಸೇವನೆಯೂ ತೊಂದರೆಕಾರಕ.
? ಅಂತೆಯೇ, ಅತಿಯಾದ ಶ್ರಮ ಮತ್ತು ಅತಿಯಾದ ವ್ಯಾಯಾಮವನ್ನು ಬಿಡಬೇಕು. ಬೇಸಗೆಯಲ್ಲಿ ನಮ್ಮ ಶರೀರಬಲವು ಅತ್ಯಂತ ಕಡಿಮೆಯಿರುವ ಕಾರಣ ಮೃದು ವ್ಯಾಯಾಮ ಮಾಡತಕ್ಕದ್ದು.
? ರಾತ್ರಿ ಜಾಗರಣೆಯಿಂದ ದೇಹವು ಮತ್ತಷ್ಟು ಕ್ಷೀಣಿಸುತ್ತದೆ.
? ಬೇಸಗೆಯಲ್ಲಿ ಪದೇ ಪದೆ ಮೈಥುನದಲ್ಲಿ ತೊಡಗುವುದು ಅನಾರೋಗ್ಯಕರ. 15 ದಿನಕ್ಕೊಮ್ಮೆ ತೊಡಗಿದರೆ ಒಳಿತು. ಇದು ಆಯುರ್ವೇದೋಕ್ತ ಗ್ರೀಷ್ಮ ಋತುಚರ್ಯಾ.
ಸ್ನೇಹಿತರೆ, ಬೇಸಗೆಯಲ್ಲಿ ಆಯುರ್ವೇದದ ಈ ಸೂತ್ರಗಳನ್ನು ಪಾಲಿಸಿ, ನಮ್ಮನ್ನು ನಾವು ರಕ್ಷಿಸಿ ಕೊಳ್ಳೋಣ. ನಮ್ಮ ಸುಖದಿಂದ ಪ್ರಾರಂಭವಾಗುವುದು ನಮ್ಮ ಸಂಸಾರದ ಸುಖ. ಸಂಸಾರದ ಸುಖವೇ ಸಮಾಜದ ಸುಖಕ್ಕೆ ಬುನಾದಿ. ಸಾಮಾಜಿಕ ಸುಖದಿಂದಲೇ ರಾಷ್ಟ್ರದ ಸೌಖ್ಯ. ರಾಷ್ಟ್ರದ ಸೌಖ್ಯವೇ ನಮ್ಮೆಲ್ಲರ ಪರಮೋದ್ದೇಶವಾಗಲಿ!