ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Attack: ಪ್ರವಾಸಿಗರ ನರಮೇಧಕ್ಕೆ ದಿಟ್ಟ ಪ್ರತೀಕಾರ; ಮತ್ತೆ ಐವರು ಉಗ್ರರ ಮನೆಗಳು ಧ್ವಂಸ

Terrorists House Demolished: ಪಹಲ್ಗಾಮ್‌ನಲ್ಲಿ ನಡೆದ ಪ್ರವಾಸಿಗರ ನರಮೇಧಕ್ಕೆ ಪ್ರತೀಕಾರವಾಗಿ ಜಮ್ಮು ಕಾಶ್ಮೀರದಲ್ಲಿ ಸಕ್ರಿಯರಾಗಿರುವ ಉಗ್ರರ ಮನೆಗಳನ್ನು ಧ್ವಂಸ ಮಾಡಲಾಗುತ್ತಿದೆ. ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಸೇರಿದಂತೆ ಐದು ಭಯೋತ್ಪಾದಕರ ಮನೆಗಳು ನಾಶಗೊಂಡಿವೆ. ಅಧಿಕಾರಿಗಳ ಪ್ರಕಾರ, ಶೋಪಿಯಾನ್, ಕುಲ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಎಲ್‌ಇಟಿ ಕಾರ್ಯಕರ್ತರು ಮತ್ತು ಪಹಲ್ಗಾಮ್‌ ದಾಳಿಗೆ ಸಂಬಂಧಿಸಿದ ಶಂಕಿತರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿವೆ.

ಮತ್ತೆ ಐವರು ಉಗ್ರರ ಮನೆಗಳು ಪುಡಿ-ಪುಡಿ

Profile Rakshita Karkera Apr 26, 2025 9:24 AM

ಶ್ರೀನಗರ: ಬರೋಬ್ಬರಿ 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ(Pahalgam Terror Attack) ಬೆನ್ನಲ್ಲೇ, ಉಗ್ರರ ಬೇಟೆಗಿಳಿದಿರುವ ಭಾರತೀಯ ಸೇನೆ, ಶುಕ್ರವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಸೇರಿದಂತೆ ಐದು ಭಯೋತ್ಪಾದಕರ ಮನೆಗಳನ್ನು ಪುಡಿಗಟ್ಟಿದೆ(Terrorists House Demolished). ಅಧಿಕಾರಿಗಳ ಪ್ರಕಾರ, ಶೋಪಿಯಾನ್, ಕುಲ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಎಲ್‌ಇಟಿ ಕಾರ್ಯಕರ್ತರು ಮತ್ತು ಪಹಲ್ಗಾಮ್‌ ದಾಳಿಗೆ ಸಂಬಂಧಿಸಿದ ಶಂಕಿತರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿವೆ. ಶೋಪಿಯಾನ್‌ನ ಚೋಟಿಪೋರಾ ಗ್ರಾಮದಲ್ಲಿ, ಎಲ್‌ಇಟಿ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟೆ ಮನೆಯನ್ನು ನೆಲಸಮ ಮಾಡಲಾಗಿದೆ. ಕುಟ್ಟೆ ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ ಭಯೋತ್ಪಾದನಾ ಸಂಬಂಧಿತ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದಾನೆ ಮತ್ತು ರಾಷ್ಟ್ರವಿರೋಧಿ ಕಾರ್ಯಾಚರಣೆಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಲ್ಗಾಮ್‌ನ ಮಾತಲಂ ಪ್ರದೇಶದಲ್ಲಿ ಸಕ್ರಿಯ ಭಯೋತ್ಪಾದಕ ಜಾಹಿದ್ ಅಹ್ಮದ್ ಮತ್ತೊಂದು ಮನೆಯನ್ನು ಕೆಡವಲಾಯಿತು. ಪುಲ್ವಾಮಾದ ಮುರ್ರಾನ್ ಪ್ರದೇಶದಲ್ಲಿ, ಭಯೋತ್ಪಾದಕ ಅಹ್ಸಾನ್ ಉಲ್ ಹಕ್ ಮನೆಯನ್ನು ಸ್ಫೋಟಗೊಳಿಸಿ ನೆಲಸಮ ಮಾಡಲಾಯಿತು. 2018 ರಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದನಾ ತರಬೇತಿ ಪಡೆದಿದ್ದ ಅಹ್ಸಾನ್ ಇತ್ತೀಚೆಗೆ ಕಣಿವೆಗೆ ಮತ್ತೆ ಎಂಟ್ರಿ ಕೊಟ್ಟು ಸಕ್ರಿಯನಾಗಿದ್ದ ಎನ್ನಲಾಗಿದೆ. ಜೂನ್ 2023 ರಿಂದ ಸಕ್ರಿಯವಾಗಿರುವ ಎಲ್‌ಇಟಿ ಭಯೋತ್ಪಾದಕ ಎಹ್ಸಾನ್ ಅಹ್ಮದ್ ಶೇಖ್‌ನ ಮತ್ತೊಂದು ಎರಡು ಅಂತಸ್ತಿನ ಮನೆಯನ್ನು ಕೆಡವಲಾಯಿತು. ಪುಲ್ವಾಮಾದ ಕಚಿಪೋರಾ ಪ್ರದೇಶದಲ್ಲಿ ನಡೆದ ಸ್ಫೋಟದಲ್ಲಿ 2023 ರಿಂದ ಸಕ್ರಿಯವಾಗಿರುವ ಐದನೇ ಭಯೋತ್ಪಾದಕ ಹರಿಸ್ ಅಹ್ಮದ್‌ನ ನಿವಾಸವನ್ನು ಧ್ವಂಸಗೊಳಿಸಲಾಯಿತು. ಎಲ್ಲಾ ಭಯೋತ್ಪಾದಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಡಿಯೋ ಇಲ್ಲಿದೆ



ಈ ಸುದ್ದಿಯನ್ನೂ ಓದಿ: Pahalgam terror Attack: ಪಹಲ್ಗಾಂ ದಾಳಿ ಸಮರ್ಥಿಸಿಕೊಂಡ ಮಂಗಳೂರಿನ ವ್ಯಕ್ತಿಯ ಬಂಧನ

ಗುರುವಾರ ರಾತ್ರಿ, ಪಹಲ್ಗಾಮ್ ದಾಳಿಯ ಹಿಂದಿನ ಇಬ್ಬರು ಎಲ್‌ಇಟಿ ಭಯೋತ್ಪಾದಕರಾದ ಆದಿಲ್ ಹುಸೇನ್ ಥೋಕರ್ ಮತ್ತು ಆಸಿಫ್ ಶೇಖ್ ಮನೆಗಳು ಪ್ರತ್ಯೇಕ ಸ್ಫೋಟಗಳಲ್ಲಿ ಧ್ವಂಸಗೊಂಡಿದ್ದವು. ಕೆಲವು ಸ್ಫೋಟಕಗಳನ್ನು ಉಗ್ರರ ಮನೆಗಳಲ್ಲಿ ಇರಿಸಿ ಅದನ್ನು ಸ್ಫೋಟಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತ ಥೋಕರ್ ಮತ್ತು ಇತರ ಇಬ್ಬರು ಭಯೋತ್ಪಾದಕರ ರೇಖಾಚಿತ್ರಗಳನ್ನು ಅನಂತನಾಗ್ ಪೊಲೀಸರು ಗುರುವಾರ ಬಿಡುಗಡೆ ಮಾಡಿದ್ದರು. ಇತರ ಇಬ್ಬರು ಶಂಕಿತರಾದ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಮತ್ತು ಅಲಿ ಭಾಯ್ ಅಲಿಯಾಸ್ ತಲ್ಹಾ ಭಾಯ್ ಪಾಕಿಸ್ತಾನಿ ಪ್ರಜೆಗಳಾಗಿದ್ದು, ಅವರ ಬಂಧನಕ್ಕೆ ತಲಾ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಅಧಿಕಾರಿಗಳು ಘೋಷಿಸಿದ್ದಾರೆ.