ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayak V Bhat Column: ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಭಾರತದ ಚತುರ ನಡೆ

ಮುಂಬರುವ ಫೆಬ್ರವರಿಯಲ್ಲಿ ಪಾಕ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಅಲ್ಲಿಗೆ ತೆರಳುವ ಸಂದರ್ಭ ಮತ್ತೆ ಬಂದಿದೆಯಾದರೂ, ಅದು ಸಾಕಾರಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ‘ಭಾರತ ಸರಕಾರದ ಸಲಹೆಯ ಮೇರೆಗೆ ನಮ್ಮ ತಂಡವು ಪಾಕಿಸ್ತಾನಕ್ಕೆ ಬರುತ್ತಿಲ್ಲ’ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಪಿಸಿಬಿಗೆ ಸ್ಪಷ್ಟವಾಗಿ ತಿಳಿಸಿದೆ.

ವಿದ್ಯಮಾನ

ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ

ಮುಂಬರುವ ಫೆಬ್ರವರಿಯಲ್ಲಿ ಪಾಕ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಅಲ್ಲಿಗೆ ತೆರಳುವ ಸಂದರ್ಭ ಮತ್ತೆ ಬಂದಿದೆಯಾದರೂ, ಅದು ಸಾಕಾರಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ‘ಭಾರತ ಸರಕಾರದ ಸಲಹೆಯ ಮೇರೆಗೆ ನಮ್ಮ ತಂಡವು ಪಾಕಿಸ್ತಾನಕ್ಕೆ ಬರುತ್ತಿಲ್ಲ’ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಪಿಸಿಬಿಗೆ ಸ್ಪಷ್ಟವಾಗಿ ತಿಳಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಂತೆ ಇನ್ನಾವುದೇ ಕ್ರಿಕೆಟ್ ಪಂದ್ಯವೂ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವುದಿಲ್ಲ. ಉಭಯ ರಾಷ್ಟ್ರಗಳ ನಡುವಿನ ಈ ತೀವ್ರ ಸ್ಪರ್ಧೆಯು ದೇಶ ವಿಭಜನೆಯ ಕಾಲದಿಂದಲೂ ಇದೆ. ಇದು ಭಾವನಾತ್ಮಕ, ರಾಜಕೀಯ ಮತ್ತು ರಾಷ್ಟ್ರೀಯ ಹೆಮ್ಮೆಯ ವಿಷಯವಾಗಿ ಪರಿಗಣಿತವಾಗುವುದರಿಂದ, ಪಂದ್ಯದ ಫಲಿತಾಂಶವು ಕ್ರೀಡೆಯನ್ನೂ ದಾಟಿ ತನ್ನ ಪರಿಣಾಮಗಳನ್ನು ಬೀರುತ್ತದೆ. ಹಾಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕುರಿತಾದ ತಕರಾರುಗಳನ್ನು ಗಮನದಲ್ಲಿರಿಸಿ ಈ ‘ಕ್ರಿಕೆಟ್ ರಾಜತಾಂತ್ರಿಕತೆ’ಯ ಇತಿಹಾಸವನ್ನೊಮ್ಮೆಅವಲೋಕಿಸೋಣ.

1993ರಲ್ಲಿ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯವನ್ನು ಪಾಕಿಸ್ತಾನ ವಹಿಸಿಕೊಳ್ಳಬೇಕಾಗಿತ್ತು. ಆದರೆಆಗ ಭಾರತ-ಪಾಕ್ ನಡುವಿನ ರಾಜತಾಂತ್ರಿಕ ಸಂಬಂಧಗಳು ಹಳಸಿಹೋಗಿದ್ದರಿಂದ ಅದು ಸಾಧ್ಯವಾಗಲಿಲ್ಲ.ಆದರೆ, ೨೦೦೮ರಲ್ಲಿ ಪಾಕಿಸ್ತಾನ ಈ ಪಂದ್ಯಾವಳಿಯ ಆತಿಥ್ಯ ವಹಿಸಿದಾಗ ಧೋನಿ ನಾಯಕತ್ವದ ಭಾರತ ತಂಡ ಬಹಳ ಕಾಲದ ನಂತರ ಪಾಕ್‌ಗೆ ತೆರಳಿ ಆಡಿತ್ತು. ಅಲ್ಲಿಂದೀಚೆಗೆ, ಅಂದರೆ ಸುದೀರ್ಘ 16 ವರ್ಷಗಳ ಕಾಲ ವಿವಿಧಕಾರಣಗಳಿಂದಾಗಿ ನಮ್ಮ ಕ್ರಿಕೆಟಿಗರು ಪಾಕ್‌ಗೆ ತೆರಳಿ ಆಡಲೇ ಇಲ್ಲ. ಐಸಿಸಿ ಅಡಿ ನಡೆಯುವ ವಿವಿಧ ಪಂದ್ಯಾವಳಿ ಗಳಲ್ಲಿ ಪಾಕ್ ವಿರುದ್ಧ ಆಡುವ ಸಂದರ್ಭ ಬಂದಾಗೆಲ್ಲ, ಭಾರತ ತಂಡ ತನ್ನ ನೆಲದಲ್ಲೇ ಅಥವಾ ಯಾವುದಾದರೂ ತಟಸ್ಥ ಮೈದಾನಗಳಲ್ಲಿ ಆಡಿದೆ.

ಮುಖಾಮುಖಿಯ ಟೆಸ್ಟ್ ಅಥವಾ ಏಕದಿನ ಸರಣಿಗಳನ್ನಂತೂ ಪಾಕ್‌ನ ಜತೆಗೆ ಆಡಿಯೇ ಇಲ್ಲ. ವಿಶ್ವಕಪ್ ಮುಂತಾದ ಪಂದ್ಯಾವಳಿಗಳಲ್ಲಿ ಪಾಕ್ ತಂಡ ಭಾರತಕ್ಕೆ ಬಂದು ಆಡಿದ್ದರೂ, ನಮ್ಮವರು ಮಾತ್ರ ಅಲ್ಲಿಗೆ ತೆರಳಿ ಆಡಿದ ಉದಾ ಹರಣೆಯಿಲ್ಲ. 2008ರ ಏಷ್ಯಾ ಕಪ್ ಆಡಿದ ಧೋನಿ ನೇತೃತ್ವದ ತಂಡವು, ಕ್ರಿಕೆಟ್ ಗಾಗಿ ಗಡಿದಾಟಿ ಪಾಕ್‌ಗೆ ತೆರಳಿದ ಕೊನೆಯ ಭಾರತೀಯ ತಂಡವೆನ್ನಬಹುದು. ಇದಕ್ಕೆ ಕಾರಣ ಸ್ಪಷ್ಟ- ಭದ್ರತೆ ಮತ್ತು ಹಳಸಿದ ರಾಜತಾಂತ್ರಿಕ ಸಂಬಂಧ. ಹಾಗಂತ, ಕ್ರಿಕೆಟ್ ಮೂಲಕ ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಿಸುವ ಯತ್ನಗಳು ಭಾರತದ ಕಡೆಯಿಂದ ಅನೇಕ ಬಾರಿ ನಡೆದಿದ್ದರೂ, ಅಲ್ಲಿನ ಆಡಳಿತ ಮಾತ್ರ ಪ್ರತಿಸಲ ದ್ರೋಹವೆಸಗುತ್ತಲೇ ಬಂದಿದ್ದರಿಂದ ಅದು ಅಷ್ಟು ಫಲಕಾರಿಯಾಗಲಿಲ್ಲ.

ಮುಂಬರುವ ಫೆಬ್ರವರಿಯಲ್ಲಿ ಪಾಕ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಅಲ್ಲಿಗೆತೆರಳುವ ಸಂದರ್ಭ ಮತ್ತೆ ಬಂದಿದೆಯಾದರೂ, ಅದು ಸಾಕಾರಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಭದ್ರತೆಯ ಕಾರಣ ದಿಂದ ಭಾರತ ಅದಕ್ಕೆ ಒಪ್ಪುತ್ತಿಲ್ಲ. ಪಂದ್ಯಾವಳಿಯಲ್ಲಿ ಭಾರತ ತಂಡ ಪಾಲ್ಗೊಳ್ಳಲಿದೆಯೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಿರೀಕ್ಷೆಯಿಟ್ಟುಕೊಂಡಿತ್ತು; ಆದರೆ, ‘ಭಾರತ ಸರಕಾರದ ಸಲಹೆಯ ಮೇರೆಗೆ ನಮ್ಮ ತಂಡವು ಪಾಕಿಸ್ತಾನಕ್ಕೆ ಬರುತ್ತಿಲ್ಲ’ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಪಿಸಿಬಿಗೆ ಸ್ಪಷ್ಟವಾಗಿ ತಿಳಿಸುವ ಮೂಲಕ ಅದರ ನಿರೀಕ್ಷೆಗೆ ತಣ್ಣೀರೆರಚಿದೆ.

ಹಿಂದೊಮ್ಮೆ ಏಷ್ಯಾ ಕಪ್‌ಗಾಗಿ ಪಾಕ್‌ನಲ್ಲಿ ಆಡಲು ಭಾರತ ನಿರಾಕರಿಸಿದ್ದಕ್ಕೆ, ಹೈಬ್ರಿಡ್ ಮಾದರಿ ಅಳವಡಿಸಿ ಕೊಳ್ಳಬೇಕಾಯಿತು. ಭಾರತದ ಭಾವನೆಗಳಿಗೆ ಬೆಲೆ ಕೊಟ್ಟ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ), ಪಾಕ್ ಮತ್ತು ಶ್ರೀಲಂಕಾ ನಡುವೆ ಪಂದ್ಯಗಳನ್ನು ವಿಭಜಿಸಿ ಆಡಿಸಲು ನಿರ್ಧರಿಸಿತ್ತು. 2025ರ ಚಾಂಪಿಯನ್ಸ್ ಟ್ರೋಫಿಗೂ ಇದೇ ವ್ಯವಸ್ಥೆಯನ್ನು ಭಾರತ ನಿರೀಕ್ಷಿಸುತ್ತಿದೆ. ಈ ಪಂದ್ಯಾವಳಿಯ ಸ್ಥಳದ ಬಗೆಗಿನ ಒಂದು ತಿಂಗಳ ಚರ್ಚೆಯ ನಂತರ, ಪಿಸಿಬಿಯು ಫೆಬ್ರವರಿ-ಮಾರ್ಚ್‌ನಲ್ಲಿ ದುಬೈ ಅಥವಾ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಭಾರತ ತನ್ನ ಪಂದ್ಯಗಳನ್ನಾಡಲು ಸಾಧ್ಯವಾಗುವ ಹೈಬ್ರಿಡ್ ಮಾದರಿಗೆ ಒಪ್ಪಿದೆ ಎನ್ನಲಾಗುತ್ತಿದೆ ಮತ್ತು ಪಾಕ್‌ನಲ್ಲಿ ತನ್ನ ತಂಡ ದಿಂದ ಪಂದ್ಯಗಳನ್ನು ಆಡಿಸದಿರುವ ಬಿಸಿಸಿಐ ನಿರ್ಧಾರದ ಕುರಿತು ಪಿಸಿಬಿಯು ಐಸಿಸಿಯ ಮುಂದೆ ತಕರಾರು ಮಂಡಿಸಿದೆಯಂತೆ.

ಹಾಗೊಮ್ಮೆ ಐಸಿಸಿ ಭಾರತದ ಪರವಾಗಿ ನಿಂತರೆ, 2031ರವರೆಗೆ ಭಾರತದಲ್ಲಿ ನಡೆಯಲಿರುವ ಮುಂದಿನ ಐಸಿಸಿ ಪಂದ್ಯಾವಳಿಗಳಿಗೂ ‘ಹೈಬ್ರಿಡ್-ಫಾರ್-ಹೈಬ್ರಿಡ್’ ಪರಿಹಾರವನ್ನೇ ನೀಡಬೇಕು ಎಂದು ಪಿಸಿಬಿ ಕೇಳಿದೆಎನ್ನಲಾಗುತ್ತಿದೆ.

ಐಸಿಸಿ ಯಾವಾಗಲೂ ಭಾರತದ ಪರವಾಗೇ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂಬ ದೂರು ದಾಖಲಿಸು ವುದು ಪಿಸಿಬಿಯ ಯತ್ನವಾಗಿದೆ.

“ನಾವು ಮಾತ್ರ ನೀವು ಹೇಳಿದಾಗ ಭಾರತಕ್ಕೆ ತೆರಳಬೇಕು; ಆದರೆ ಅವರು ನಮ್ಮಲ್ಲಿಗೆ ಬರುವುದಿಲ್ಲ ಎಂಬ ಧೋರಣೆಸರಿಯಲ್ಲ. ಇದನ್ನು ಐಸಿಸಿ ಶಾಶ್ವತವಾಗಿ, ಸಮಾನವಾಗಿ ಇತ್ಯರ್ಥಪಡಿಸಬೇಕು" ಎಂಬುದು ಪಾಕ್‌ನ ದೂರಿನಸಾರಾಂಶ. ಮಾತ್ರವಲ್ಲದೆ, ಈ ಹೈಬ್ರಿಡ್ ವ್ಯವಸ್ಥೆಗೆ ಪರಿಹಾರವಾಗಿ ಐಸಿಸಿಯ ಆದಾಯದ ಹೆಚ್ಚಿನ ಪಾಲನ್ನು ಪಿಸಿಬಿ ಕೇಳುತ್ತಿದೆ ಎನ್ನಲಾಗಿದೆ (ಐಸಿಸಿಯ ಆದಾಯದಲ್ಲಿ ಬಿಸಿಸಿಐ ಶೇ.38ರಷ್ಟು ಪಾಲನ್ನು ಪಡೆದರೆ, ಪಿಸಿಬಿ ಶೇ.6ಕ್ಕಿಂತ ಕಡಿಮೆ ಪಡೆಯುತ್ತದೆ). ಹಾಗಂತ, ಹೈಬ್ರಿಡ್ ಮಾದರಿಗೆ ಒಪ್ಪಿದ ಕಾರಣಕ್ಕೆ ಇತರ ದೇಶಗಳ ಮಂಡಳಿಗಳು ತಮ್ಮ ಪಾಲನ್ನು ಕಡಿತಗೊಳಿಸಲು ಒಪ್ಪುವುದಿಲ್ಲವಾದ್ದರಿಂದ, ಪಿಸಿಬಿಯ ಆದಾಯದ ಪಾಲನ್ನು ಹೆಚ್ಚಿಸಲು ಐಸಿಸಿ ಒಪ್ಪುವ ಸಾಧ್ಯತೆ ಕಮ್ಮಿಯೇ.

ಹೈಬ್ರಿಡ್ ಮಾದರಿಯಲ್ಲೇ ಚಾಂಪಿಯನ್ಸ್ ಟ್ರೋಫಿ ಆಡಿಸುವ ತಮ್ಮ ನಿಲುವಿಗೆ ಬಿಸಿಸಿಐ ಮತ್ತು ಐಸಿಸಿ ಅಂಟಿ ಕೊಂಡಂತೆ ಈ ಕ್ಷಣದವರೆಗೆ ತೋರುತ್ತಿದೆ. ಈ ವ್ಯವಸ್ಥೆಗೆ ಪಾಕ್ ಒಪ್ಪದಿದ್ದರೆ, ಪಿಸಿಬಿ ತನ್ನ ಆತಿಥ್ಯದ ಹಕ್ಕುಗಳನ್ನು ಸಂಪೂರ್ಣ ಕಳೆದುಕೊಳ್ಳುವ ಅಪಾಯವೂ ಇದೆ ಎನ್ನಲಾಗುತ್ತಿದೆ. ಮುಂಬರುವ ವಾರಗಳಲ್ಲಿ ಪಂದ್ಯಾವಳಿಯ ವೇಳಾಪಟ್ಟಿ ರೂಪುಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಬಿಸಿಸಿಐನ ಹಾಲಿ ಕಾರ್ಯದರ್ಶಿ ಜಯ್ ಶಾ ಐಸಿಸಿಯ ಸ್ವತಂತ್ರ ಅಧ್ಯಕ್ಷರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಇದಕ್ಕೂ ಮೊದಲೇ ಈ ವಿವಾದ ವನ್ನು ಪರಿಹರಿಸಿ ಕೊಳ್ಳಬೇಕೆಂದು ಪಿಸಿಬಿ ಬಯಸಿದ್ದರೂ ಅದು ಸಾಧ್ಯವಾಗಲಿಲ್ಲ. ಭಾರತ-ಪಾಕ್‌ನ ಕ್ರಿಕೆಟ್ ವೈರತ್ವ ಇಂದು ನಿನ್ನೆಯದಲ್ಲ.

1952-53ರಲ್ಲಿ ಪಾಕಿಸ್ತಾನವು 5 ಪಂದ್ಯಗಳ ತನ್ನ ಮೊದಲ ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸ ಕೈಗೊಂಡಿತ್ತು; ಒಂದು ವರ್ಷದ ನಂತರ ಭಾರತ ತಂಡವೂ ಪಾಕ್‌ಗೆ ಭೇಟಿ ನೀಡಿತ್ತು. ಆದರೆ, ಆ ಸರಣಿ ಬಿಕ್ಕಟ್ಟಿನಲ್ಲೇ ಕೊನೆ ಗೊಂಡಿತ್ತು. 1955 ಮತ್ತು 1960-61ರ ಸರಣಿಗಳಲ್ಲೂ ಇಂಥದೇ ಸ್ಥಿತಿ ಒದಗಿತು. 1965 ಮತ್ತು 1971ರ ಯುದ್ಧಗಳು, ಒಂದು ದಶಕಕ್ಕೂ ಹೆಚ್ಚು ಕಾಲ ಭಾರತ-ಪಾಕ್ ನಡುವಿನ ಕ್ರಿಕೆಟ್ ಸಂಬಂಧಗಳನ್ನು ಸ್ಥಗಿತ ಗೊಳಿಸಿದ್ದವು. 1978ರವರೆಗೂ ಅದು ಪುನರಾರಂಭಗೊಳ್ಳಲಿಲ್ಲ. ಜೈಪುರ ಟೆಸ್ಟ್ ಪಂದ್ಯದ ವೇಳೆ ಪಾಕ್‌ನ ಆಗಿನ ಅಧ್ಯಕ್ಷ ಜಿಯಾ-ಉಲ್-ಹಕ್‌ರ ಭೇಟಿಯಂಥ ವಿರಳ ರಾಜತಾಂತ್ರಿಕ ಘಟನೆಗಳಿಗೆ ಕ್ರಿಕೆಟ್ ಸಾಕ್ಷಿಯಾಯಿತಾದರೂ, ದ್ವಿಪಕ್ಷೀಯ ಸಂಬಂಧಗಳನ್ನು ಸಾಮಾನ್ಯಗೊಳಿಸುವಲ್ಲಿ ಅದು ಹೆಚ್ಚಿನ ಯಶಸ್ಸನ್ನು ಗಳಿಸಲಿಲ್ಲ.

1980ರ ದಶಕದ ಉತ್ತರಾರ್ಧದಿಂದ 1990ರ ದಶಕದವರೆಗೆ, ಶಾರ್ಜಾ ಮತ್ತು ಟೊರೊಂಟೊದಂಥ ತಟಸ್ಥ ಸ್ಥಳಗಳು ಭಾರತ-ಪಾಕ್ ಪಂದ್ಯಗಳಿಗೆ ಸಾಕ್ಷಿಯಾದವು.

ಕಾರ್ಗಿಲ್ ಯುದ್ಧ, ಮುಂಬೈ ದಾಳಿಯಂಥ ‘ಭೂರಾಜಕೀಯ’ ಉದ್ವಿಗ್ನತೆಯಿಂದಾಗಿ ದ್ವಿಪಕ್ಷೀಯ ಕ್ರಿಕೆಟ್ ಬಾಂಧವ್ಯಕ್ಕೆ ಪದೇ ಪದೆ ಪೆಟ್ಟು ಬೀಳುತ್ತಲೇ ಇತ್ತು. ನಂತರ, ಭಾರತದ ಅಂದಿನ ಪ್ರಧಾನಿ ವಾಜಪೇಯಿ ಮತ್ತುಪಾಕ್ ಅಧ್ಯಕ್ಷ ಮುಷರ- ದಿಟ್ಟವಾಗಿ ರಾಜತಾಂತ್ರಿಕ ಶಾಂತಿ ಪ್ರಕ್ರಿಯೆಯನ್ನು ಮತ್ತೆ ಪ್ರಾರಂಭಿಸಿದರು. ಇದು14 ವರ್ಷಗಳ ನಂತರ ಭಾರತದ ಕ್ರಿಕೆಟಿಗರು ಮತ್ತೆ ಪಾಕ್ ಪ್ರವಾಸ ಕೈಗೊಳ್ಳಲು ಕಾರಣವಾಯಿತು. ಈ ಬೆಳವಣಿಗೆಯನ್ನು ಕ್ರಿಕೆಟ್ ಮತ್ತು ದ್ವಿಪಕ್ಷೀಯ ಸಂಬಂಧಗಳಲ್ಲಿನ ಐತಿಹಾಸಿಕ ಕ್ಷಣ ಎಂದೂ ಬಣ್ಣಿಸಲಾಗಿತ್ತು.

ಮುಂದೆ ಭಾರತದ ಪ್ರಧಾನಿ ಮನಮೋಹನ್ ಸಿಂಗ್‌ರ ಕಾಲದಲ್ಲಿ ಉಭಯ ದೇಶಗಳ ನಡುವಿನ ಶಾಂತಿಸ್ಥಾಪನಾಯತ್ನಗಳು ಮತ್ತೆ ಶುರುವಾದವು. 2011ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ, ಭಾರತದಲ್ಲಿ ನಡೆದ ಸೆಮಿಫೈನಲ್‌ನಲ್ಲಿಭಾರತ-ಪಾಕ್ ಮುಖಾಮುಖಿಯಾದವು. ಒಟ್ಟಿಗೆ ಕುಳಿತು ಪಂದ್ಯ ವೀಕ್ಷಿಸಲು ಪಾಕ್‌ನ ಪ್ರಧಾನಿ ಯೂಸುಫ್ ರಾಜಾಗಿಲಾನಿಯವರನ್ನು ಆಹ್ವಾನಿಸುವ ಮೂಲಕ ಸಿಂಗ್ ಉದಾರತೆ ಮೆರೆದಿದ್ದರು.

ಈ ಪಂದ್ಯದ ನಂತರದ ಸಕಾರಾತ್ಮಕ ರಾಜತಾಂತ್ರಿಕ ಸೂಚನೆಗಳನ್ನು ಗಮನಿಸಿ, ಬಿಸಿಸಿಐ 2012ರಲ್ಲಿ ಒಂದು ಕಿರುಸರಣಿಗಾಗಿ ಪಾಕ್ ತಂಡವನ್ನು ಭಾರತಕ್ಕೆ ಆಹ್ವಾನಿಸಿತು. ಮುಂದೆ 8 ವರ್ಷಗಳಲ್ಲಿ 6 ಸರಣಿಗಳಿಗೆ 2014ರ ಒಪ್ಪಂದ ಸೇರಿದಂತೆ ದ್ವಿಪಕ್ಷೀಯ ಸರಣಿಗಳನ್ನು ಔಪಚಾರಿಕಗೊಳಿಸುವ ಯತ್ನಗಳಾದವು. ಆದರೆ, ರಾಜಕೀಯ ಉದ್ವಿಗ್ನತೆ ಮತ್ತು ಭದ್ರತಾ ಕಾಳಜಿಗಳು ಈ ಯೋಜನೆಗಳ ಹಳಿ ತಪ್ಪಿಸಿದವು. ಭವಿಷ್ಯದ ಯಾವುದೇ ಸರಣಿ ಮುಂದುವರಿಯುವ ಮೊದಲು ಸರಕಾರದ ಅನುಮೋದನೆ ಅಗತ್ಯವಿದೆ ಎಂದು 2017ರ ಹೊತ್ತಿಗೆ ಭಾರತ ಘೋಷಿಸಿತು. ಇದು ಈ ಕುರಿತ ಮುಂದಿನ ಪ್ರಗತಿಯನ್ನು ಸ್ಥಗಿತಗೊಳಿಸಿತು.

ಈ ಮಧ್ಯೆ, ‘ಹಿಂದೂ ಹೃದಯ ಸಾಮ್ರಾಟ’ ಎನಿಸಿಕೊಂಡಿದ್ದ ಶಿವಸೇನೆಯ ಬಾಳಾಸಾಹೇಬ್ ಠಾಕ್ರೆ ಯವರು, “ಭಾರತ ತಂಡ ಪಾಕ್‌ಗೆ ಹೋಗಕೂಡದು, ಪಾಕ್ ತಂಡವೂ ಭಾರತಕ್ಕೆ ಬಂದು ಆಡಕೂಡದು" ಎಂದು ಫರ್ಮಾನು ಹೊರಡಿಸಿಬಿಟ್ಟರು. ಆದರೆ ಶಿವಸೇನೆಯ ಮಿತ್ರ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳವರು, “ಕ್ರಿಕೆಟ್ ಮತ್ತು ರಾಜಕೀಯ ಎರಡು ವಿಭಿನ್ನ ವಿಷಯಗಳು, ಒಂದಕ್ಕೊಂದು ತಳುಕುಹಾಕಬಾರದು" ಎಂದು ಅಭಿಪ್ರಾಯಪಟ್ಟಿದ್ದರು.

ಇದನ್ನೊಪ್ಪದ ಠಾಕ್ರೆ ಪಾಕ್ ಕ್ರಿಕೆಟಿಗರ ಭಾರತ ಪ್ರವಾಸವನ್ನು ‘ರಾಷ್ಟ್ರೀಯ ನಾಚಿಕೆಗೇಡಿನ ಸಂಗತಿ’ ಎಂದು ಬಣ್ಣಿಸಿ ದ್ದರು. ಹೀಗೆ ಶಿವಸೇನೆಯ ‘ಕ್ರೀಡಾಸಾಮರಸ್ಯ-ವಿರೋಧಿ’ ಧೋರಣೆಗಳು ಭಾರತ-ಪಾಕ್ ಕ್ರಿಕೆಟ್ ಬಾಂಧವ್ಯದ ಮುಂದುವರಿಕೆಗೆ ೨ ದಶಕಗಳ ಕಾಲ ಅಡ್ಡಬಂದು, 1999ರಲ್ಲಿ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಪಿಚ್ ಅಗೆದು ಪಂದ್ಯ ನಡೆಯದಂತೆ ಮಾಡುವವರೆಗೆ ಮುಂದುವರಿಯಿತು.

ಮುಂಬೈನಲ್ಲಾದ 26/11ರ ಭಯೋತ್ಪಾದಕ ದಾಳಿಯ ನಂತರ, ಐಪಿಎಲ್‌ನಲ್ಲಿ ಪಾಕ್ ಆಟಗಾರರ ಭಾಗವಹಿಸುವಿಕೆಯನ್ನು ವಿರೋಧಿಸಿದ ಶಿವಸೇನೆಯ ಕಾರ್ಯಕಾರಿ ಅಧ್ಯಕ್ಷ ಉದ್ಧವ್ ಠಾಕ್ರೆ, ಐಪಿಎಲ್‌ನಲ್ಲಿ ಯಾವುದೇ ಪಾಕ್ಕ್ರಿಕೆಟಿಗನಿಗೆ ಆಡಲು ಅವಕಾಶ ನೀಡಬಾರದೆಂದು ಆಗ್ರಹಿಸಿದ್ದರು. ಅದರಂತೆ, ಜಗತ್ತಿನಲ್ಲೇ ಅತ್ಯಂತ ಸಮೃದ್ಧಪಂದ್ಯಾವಳಿಯಾದ ಐಪಿಎಲ್‌ನಲ್ಲಿ ಪಾಕ್ ಆಟಗಾರರು ಪಾಲ್ಗೊಳ್ಳಲು ಭಾರತ ಅವಕಾಶ ನೀಡಲಿಲ್ಲ ಎಂಬುದುಗಮನಾರ್ಹ.

26/11ರ ಪಾಕ್-ಪ್ರೇರಿತ ಭಯೋತ್ಪಾದಕ ದಾಳಿಯನ್ನು ಮರೆಯಲಾದೀತೇ? ಇಂಥ ದಾಳಿಗಳಿಂದಾದ ಸಾವು-ನೋವಿ ನಿಂದ ನೂರಾರು ಭಾರತೀಯರು ಬಳಲುತ್ತಿರುವಾಗ, ಆ ದೇಶದವರ ಜತೆ ಆಡುತ್ತ ನಾವು ಸಂತೋಷ ಪಡುವು ದಾದರೂ ಹೇಗೆ? ನಾವು ಪಾಕ್ ನೊಂದಿಗೆ 50 ವರ್ಷಗಳಿಂದ ಕ್ರಿಕೆಟ್ ಆಡುತ್ತಲೇ ಇದ್ದೇವೆ; ಆದರೆ ಈ ಕ್ರೀಡಾ ಬಾಂಧವ್ಯವು ರಾಜತಾಂತ್ರಿಕವಾಗಿ ನಮಗೆ ಹೆಚ್ಚೇನೂ ನೆರವಾಗಲಿಲ್ಲ.

ಕ್ರಿಕೆಟ್ ರಾಜತಾಂತ್ರಿಕತೆಯ ಹೊರತಾಗಿಯೂ ದಾವೂದ್ ಇಬ್ರಾಹಿಂ ಭಾರತದಲ್ಲಿ ಒಂದಾದ ಮೇಲೊಂದರಂತೆ ಸ್ಪೋಟಗಳನ್ನು ಯೋಜಿಸುತ್ತಿದ್ದ, ‘ಕಸಬ್ ಗ್ಯಾಂಗ್’ ಮುಂಬೈ ಮೇಲೆ ಭಯಾನಕ ದಾಳಿ ಮಾಡಿತು. ಕ್ರಿಕೆಟ್ ಮಂಡಳಿ ಮಾತ್ರ ಕೋಟಿಗಳಲ್ಲಿ ಹಣ ಗಳಿಸುತ್ತಿದೆಯೇ ಹೊರತು ದೇಶಕ್ಕಾದ ಪ್ರಯೋಜನ ಅಷ್ಟಕ್ಕಷ್ಟೇ ಎಂಬ ಶಿವಸೇನೆಯ ವಾದ ಒಪ್ಪುವಂಥದ್ದೇ. 2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲಾದ ಭಯೋತ್ಪಾದಕ ದಾಳಿಯು, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಆತಿಥ್ಯ ವಹಿಸುವ ಪಾಕ್‌ನ ಸಾಮರ್ಥ್ಯಕ್ಕೆ ಒದಗಿದ ಕಳಂಕವಾಗಿತ್ತು.

ಪಾಕ್‌ನಲ್ಲಿ ನಮ್ಮ ಆಟಗಾರರಿಗೆ ಅಗತ್ಯ ಭದ್ರತೆ ಸಿಗಲಿಕ್ಕಿಲ್ಲ ಎಂಬ ಭಾರತದ ವಾದಕ್ಕೆ ಈ ಘಟನೆಗಿಂತ ಪುರಾವೆ ಬೇಕಿಲ್ಲ. ಪಾಕ್‌ನಲ್ಲಿ ತನ್ನ ಆಟಗಾರರಿಗೆ ಭದ್ರತೆಯ ಕೊರತೆಯಿದೆ ಎಂಬುದು, ಚಾಂಪಿಯನ್ಸ್ ಟ್ರೋಫಿ ಆಡಲು ಅಲ್ಲಿಗೆ ತೆರಳದಿರಲು ಭಾರತಕ್ಕೆ ಒಂದು ನೆಪ ಮಾತ್ರ. ಬೇರೆ ದೇಶಗಳಿಂದ ಪಾಕ್‌ಗೆ ಹರಿದುಬರುತ್ತಿದ್ದ ಅನುದಾನ ಗಳನ್ನು ನಿಲ್ಲಿಸಿ, ಕಳೆದ 10 ವರ್ಷಗಳಲ್ಲಿ ಅದನ್ನು ಜಾಗತಿಕವಾಗಿ ಮೂಲೆಗುಂಪಾಗಿ ಸುವಲ್ಲಿ ಭಾರತ ಸರಕಾರ ಯಶಸ್ವಿಯಾಗಿದೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯವನ್ನೂ ತಪ್ಪಿಸಿ ಪಾಕ್‌ಗೆ ಆರ್ಥಿಕ ವಾಗಿಯೂ ಹೊಡೆತ ಕೊಡುವುದೇ ಭಾರತದ ಉದ್ದೇಶ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಅಂತೂ, ದೇಶಕ್ಕಿಂತ ಕ್ರೀಡೆ ದೊಡ್ಡದಲ್ಲ ಎಂಬ ಹಿನ್ನೆಲೆಯಲ್ಲಿ ನೋಡುವಾಗ, ಪಾಕ್‌ನಲ್ಲಿ ನಡೆಯಲಿರುವ ಈಪಂದ್ಯಾವಳಿ ಕುರಿತಾಗಿ ಭಾರತ ಕೈಗೊಳ್ಳುತ್ತಿರುವ ನಿಲುವು ಜಾಣತನದ್ದೇ ಆಗಿದೆ ಎನ್ನಬಹುದು.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

ಇದನ್ನೂ ಓದಿ: Vinayaka M Bhatta Column: ಜೀವನಧರ್ಮಯೋಗ ಎಂಬ ಗೀತಾರ್ಥ ಗಂಧೋತ್ಕಟ