Rangaswamy Mookanahalli Column: ಒಂದು ಸಮಯದಲ್ಲಿ ಒಂದು ಕೆಲಸ !
ಜಪಾನ್‌ನಲ್ಲಿ ಕಾಣುವ ಒಂದು ಅಚ್ಚರಿದಾಯಕ ಅಂಶವೆಂದರೆ, ಇಲ್ಲಿ ಯಾವುದೇ ಸ್ತರದ ಉದ್ಯೋಗಿಯೂ ಕೆಲಸದ ವೇಳೆಯಲ್ಲಿ ಮೊಬೈಲ್ ನೋಡುವುದಿಲ್ಲ, ಕರೆ ಸ್ವೀಕರಿಸುವುದಿಲ್ಲ, ಕರೆ ಮಾಡುವುದಿಲ್ಲ. ತೀರಾ ಅನಿವಾರ್ಯ ಎಂದಾಗ ಇದನ್ನು ಮುರಿದಿರಬಹುದು. ಆದರೆ ನನ್ನ ಕಣ್ಣಿಗೆ ಅದು ಬೀಳಲಿಲ್ಲ.

ವಿಶ್ವರಂಗ
ಜಪಾನ್‌ನಲ್ಲಿ ಕಾಣುವ ಒಂದು ಅಚ್ಚರಿದಾಯಕ ಅಂಶವೆಂದರೆ, ಇಲ್ಲಿ ಯಾವುದೇ ಸ್ತರದ ಉದ್ಯೋಗಿಯೂ ಕೆಲಸದ ವೇಳೆಯಲ್ಲಿ ಮೊಬೈಲ್ ನೋಡುವುದಿಲ್ಲ, ಕರೆ ಸ್ವೀಕರಿಸುವು ದಿಲ್ಲ, ಕರೆ ಮಾಡುವುದಿಲ್ಲ. ತೀರಾ ಅನಿವಾರ್ಯ ಎಂದಾಗ ಇದನ್ನು ಮುರಿದಿರಬಹುದು. ಆದರೆ ನನ್ನ ಕಣ್ಣಿಗೆ ಅದು ಬೀಳಲಿಲ್ಲ.
ಬದುಕನ್ನು, ಜಗತ್ತನ್ನು ನಾವೆಲ್ಲಾ ನಮ್ಮ ನಮ್ಮ ಕಿಟಕಿಗಳ ಮೂಲಕ ನೋಡುತ್ತೇವೆ, ಅಲ್ಲಿಂದ ಕಂಡದ್ದನ್ನು ಬಣ್ಣಿಸುತ್ತೇವೆ. ಬಹುಜನರು ಕೂಡ ಅದೇ ಕಿಟಕಿಯಿಂದ ಅದೇ ಚಿತ್ರವನ್ನು ಕಂಡಿದ್ದರೆ ಅದು ಸರಿ ಎನ್ನಿಸಿಕೊಳ್ಳುತ್ತದೆ,ಒಪ್ಪಿತವಾಗುತ್ತದೆ. ಹಾಗೆಂದ ಮಾತ್ರಕ್ಕೆ ‘ಅದೇ ಸರಿ’ ಎನ್ನುವ ಮನೋಭಾವ ನನ್ನದಲ್ಲ. ‘ಹತ್ತು ವ್ಯಕ್ತಿ, ಹತ್ತು ನೋಟ’ ಎನ್ನುವ ಅಂಶದಲ್ಲಿ ನಂಬಿಕೆ ಇಟ್ಟವನು ನಾನು.
ಇಷ್ಟೆಲ್ಲಾ ಪೀಠಿಕೆ ಏಕೆಂದರೆ, ಈಗ ನಾನು ಬರೆಯಲು ಹೊರಟಿರುವ ಸಾಲುಗಳು ಅಂಥವು. ನನ್ನ ಕಿಟಕಿಯಲ್ಲಿ, ನನ್ನ ದೃಷ್ಟಿಕೋನಕ್ಕೆ ದಕ್ಕಿದಂಥವು. ಹೀಗಾಗಿ, ನಿಮ್ಮ ನೋಟ, ನನ್ನ ನೋಟ ತಾಳೆಯಾದರೆ ಓಕೆ. ಇಲ್ಲವಾದಲ್ಲಿ ನಿಮ್ಮ ಮಾತುಗಳನ್ನು ಕೇಳಲು ಕೂಡ ನಾನು ಸಿದ್ಧ. ಮೊದಲಿಗೆ, ಸಹೋದರ ರಾಮ ಚರಣ್ (ಮೈಸೂರಿನ ‘ಮೈಕಾ’ ಕಾಲೇಜಿನ ಪ್ರಿನ್ಸಿ ಪಾಲ್) ಜತೆಗೆ ನಿನ್ನೆ ಸಮಯ ಕಳೆಯುವಾಗ ಎರಡು ಅಂಶಗಳು ತಲೆಯಲ್ಲಿ ಉಳಿದು ಕೊಂಡು ಬಿಟ್ಟವು.
ಅವನ್ನು ನಿಮಗೆ ದಾಟಿಸಿಬಿಡುತ್ತೇನೆ. ನಂತರ ಜಪಾನ್ ಕಥೆ! ರಾಮ ಚರಣ್ ಅವರ ಸ್ನೇಹಿತರೊಬ್ಬರು ನೆದರ್ಲ್ಯಾಂಡಿ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೊಬ್ಬಳು ಐದರ ವಯಸ್ಸಿನ ಮಗಳಿದ್ದಾಳೆ. ಅವರು ಮೈಸೂರಿಗೆ ಬಂದಿದ್ದಾರೆ. ಅಪ್ಪ ರಸ್ತೆ ಕ್ರಾಸ್ ಮಾಡಿದ್ದಾರೆ, ಆದರೆ ಮಗು ಅಪ್ಪನ ಕೈ ಹಿಡಿದದ್ದು ಬಿಟ್ಟು ಕ್ರಾಸ್ ಮಾಡದೇ ಅಲ್ಲೇ ನಿಂತುಬಿಟ್ಟಿದೆ.
“ಬಾ ಮಗಳೇ, ಕ್ರಾಸ್ ಮಾಡು" ಎಂದು ಎಷ್ಟು ಹೇಳಿದರೂ ಮಗು ರಸ್ತೆ ಕ್ರಾಸ್ ಮಾಡಿಲ್ಲ. ಯಾಕಮ್ಮಾ ಎಂದು ಕೇಳಿದಾಗ, “ಅಪ್ಪಾ, ಇಲ್ಲಿ ಜೀಬ್ರಾ ಕ್ರಾಸಿಂಗ್ ಇಲ್ಲ, ನಾನು ರಸ್ತೆ ಕ್ರಾಸ್ ಮಾಡಲು ಸಾಧ್ಯವಿಲ್ಲ" ಎಂದಿತಂತೆ ಆ ಮಗು! ಎಳವೆಯಲ್ಲಿ ಸರಿಯಾದ ಪಾಠಗಳನ್ನು ಹೇಳಿಕೊಡುವುದರಿಂದ ದೇಶದಲ್ಲಿ ಬದಲಾವಣೆ ತರಲು ಸಾಧ್ಯ. ಬರೀ ಬಾಯಲ್ಲಿ ಉದ್ಘೋ ಷ ಮಾಡಿ ಪ್ರಯೋಜನವಿಲ್ಲ, ‘ಜೀಬ್ರಾ ಕ್ರಾಸಿಂಗ್’ ಕೂಡ ಇರಬೇಕು. ಹೀಗೇ ಮಾತನಾಡುತ್ತ ಕುಳಿತಿದ್ದೆವು. ಪದವಿ ಓದುತ್ತಿರುವ ಒಂದು ಹೆಣ್ಣು ಮಗಳು ಕ್ಯಾಬಿನ್ ಪ್ರವೇಶಿಸಿ, ರಾಮ ಚರಣ್ ಅವರನ್ನು ಕುರಿತು, “ಸರ್, ಐ ನೀಡ್ ಯುವರ್ ಸಿಗ್ನೇಚರ್ ಆನ್ ದಿಸ್ ಪೇಪರ್ ಟು ಗೆಟ್ ಮೈ ಹಾಲ್ ಟಿಕೆಟ್" ಎಂದಳು.
“ಯಾಕಮ್ಮಾ, ಏನಾಯ್ತು?" ಎಂಬ ರಾಮ ಚರಣ್ ಅವರ ಮಾತಿಗೆ ಆ ಹುಡುಗಿ, “75 ಪರ್ಸೆಂಟಿಗಿಂತ ಕಡಿಮೆ ಅಟೆಂಡೆನ್ಸ್ ಇದೆ, ಅದಕ್ಕೆ" ಎಂದಳು. “ಅದು ಗೊತ್ತಾಯ್ತು, 75%ಗಿಂತ ಕಡಿಮೆ ಅಂದರೆ ಎಷ್ಟಿದೆ?" ಎನ್ನುವ ರಾಮ ಚರಣ್ ಅವರ ಪ್ರಶ್ನೆಗೆ ಆ ಹುಡುಗಿ, “ಸರ್, ನನಗೆ ಬೆಳಗ್ಗೆ ಏಳುವುದಕ್ಕೆ ಕಷ್ಟ, ತಲೆನೋವು ಬರುತ್ತದೆ. ಅದಕ್ಕೆ ಬೆಳಗಿನ ಕ್ಲಾಸ್ ಅಟೆಂಡ್ ಮಾಡಲು ಆಗಲಿಲ್ಲ. 45 ಕ್ಲಾಸ್‌ನಲ್ಲಿ 6 ಕ್ಲಾಸ್ ಅಟೆಂಡ್ ಮಾಡಿದ್ದೇನೆ" ಎಂದಳು!
ಮೇಲಿನ ಎರಡು ನಿದರ್ಶನಗಳಲ್ಲಿ ಇರುವುದು ಒಂದೇ ಸಾರ- ‘ಬಿತ್ತಿದಂತೆ ಬೆಳೆ’. ಬೇವನ್ನು ಬಿತ್ತಿ ಮಾವಿನ ಫಲವನ್ನುನಿರೀಕ್ಷಿಸಿದರೆ ಅದು ಹೇಗೆ ತಾನೇ ಸಿಕ್ಕೀತು? ಈಗ ಜಪಾನ್ ಕಥೆಗೆ ಬರುವೆ. ಜಪಾನ್ ದೇಶದಲ್ಲಿ ನಾನು ನೋಡಿದ ನಗರಗಳಲ್ಲಿ, ಕೊನೇ ಪಕ್ಷ ತರಕಾರಿ ಅಂಗಡಿ ಯು ನನ್ನ ಕಣ್ಣಿಗೆ ಬೀಳಲಿಲ್ಲ. ತರಕಾರಿಗಳು ಸೂಪರ್ ಮಾರ್ಕೆಟ್‌ನಲ್ಲಿ ಲಭ್ಯವಿರುತ್ತವೆ. ನಾನು ಯಾವುದೇ ದೇಶಕ್ಕೆ ಹೋಗಲಿ, ಅಲ್ಲಿನ ಜನಸಾಮಾನ್ಯನ ಬದುಕಿಗೆ ಎಷ್ಟು ಹಣ ಬೇಕಾಗ ಬಹುದು ಎನ್ನುವ ಲೆಕ್ಕಾಚಾರ ಮಾಡುವ, ತಿಳಿದುಕೊಳ್ಳುವ ಪ್ರಯತ್ನ ಮಾಡು ತ್ತೇನೆ. ಹೀಗೆ ಇಲ್ಲೂ ಅಂಥ ಪ್ರಯತ್ನ ಮಾಡಿದೆ. ಅಲ್ಲಿ ಕಂಡದ್ದು ಒಂದಷ್ಟು ಆಘಾತ ಉಂಟುಮಾಡಿತು.
ಒಂದ್ ಮೂರು ಅಥವಾ ನಾಲ್ಕು ಈರುಳ್ಳಿ, ಎರಡು ಅಥವಾ ಮೂರು ಆಲೂಗಡ್ಡೆ, ಒಂದು ಕ್ಯಾರೆಟ್, ಒಂದು ಬಾಳೇ ಹಣ್ಣು, ಒಂದೆರಡು ಟೊಮೇಟೋ, ಒಂದು ಸೌತೇಕಾಯಿ, ಒಂದು ಬದನೇಕಾಯಿ ಹೀಗೆ ಮುಕ್ಕಾಲು ಪಾಲು ತರಕಾರಿ ಕೇವಲ ಒಂದು ಪೀಸ್ ಮೇಲೆ ಕವರ್ ಹಾಕಿ ಅಲ್ಲೊಂದು ಕ್ಯೂಆರ್ ಕೋಡ್ ಹಾಕಿ ಇಟ್ಟಿರುತ್ತಿದ್ದರು. ಕೆ.ಜಿ.ಯ ಪ್ಯಾಕ್ ಕಂಡದ್ದು ಅಪರೂಪ. ಅಲ್ಲಿ ಒಂದು ಪೀಸಿಗೆ ಕೊಡುವ ಬೆಲೆಯಲ್ಲಿ ಭಾರತದಲ್ಲಿ ಕೆ.ಜಿ.ಗೂ ಹೆಚ್ಚು ಬರುತ್ತದೆ ಎನ್ನುವುದು ನಿರ್ವಿವಾದ. ಗಮನಿಸಿ ನೋಡಿದಾಗ, ಈ ಚಿತ್ರಣ ಅಲ್ಲಿನ ಎರಡು ಅಂಶವನ್ನು ಥಟ್ಟನೆ ಬಿಟ್ಟುಕೊಟ್ಟಿತು. ಒಂದನೆಯದು- ಈ ಸಮಾಜದಲ್ಲಿ ಒಂಟಿಯಾಗಿರು ವವರ ಸಂಖ್ಯೆ ಹೆಚ್ಚು, ಜತೆಯಾಗಿದ್ದರೂ ಅಡುಗೆ ಮಾಡುವವರ ಸಂಖ್ಯೆ ಕಡಿಮೆ; ಎರಡನೆಯದು- ಆಹಾರ ಪದಾರ್ಥಗಳ ಬೆಲೆ ಹೆಚ್ಚು.
ರಾಮ ಚರಣ್ ಅವರ ಜತೆ ಮಾತು ಮುಗಿಸಿ ಮನೆ ಕಡೆ ಹೊರಟಾಗ, “ದಾರಿಯಲ್ಲಿ ಬರುವಾಗ ತರಕಾರಿ ಅಜ್ಜಿ ಬಳಿಹೋಗಿ ಬೆಂಡೆಕಾಯಿ ತೆಗೆದುಕೊಂಡು ಬನ್ನಿ" ಎನ್ನುವ ಮೆಸೇಜ್ ಹಾಕಿದ್ದಳು ರಮ್ಯ. ತರಕಾರಿ ಅಜ್ಜಿ, “ಸಂಜೆ ಬಾರಪ್ಪ, ಫ್ರೆಶ್ ಆಗಿ ಬಂದಿರುತ್ತೆ. ಸದ್ಯಕ್ಕೆ ಇರುವುದು ಇಷ್ಟು, ತೆಗೆದುಕೊಂಡು ಹೋಗಿರು" ಅಂತ ಅರ್ಧ ಕೆ.ಜಿ. ಬೆಂಡೆಕಾಯಿ ಕೊಟ್ಟರು. ಐನೂರರ ನೋಟು ಕೊಟ್ಟೆ, ಅಜ್ಜಿ ಅದನ್ನು ಕೈಯಲ್ಲೂ ಮುಟ್ಟಲಿಲ್ಲ!
“ರಂಗನಾಥ ಸ್ವಾಮಿ, ಬಾಪ್ಪ ಕೊಡಿವೆಯಂತೆ, ಎಲ್ಲೋಗುತ್ತೆ" ಅಂದವರು ಹಣವನ್ನು ತೆಗೆದುಕೊಳ್ಳದೆ ಕಳುಹಿಸಿದರು. ನಾನು ಮನದಲ್ಲೇ, “ಜಪಾನ್‌ನಲ್ಲಿ ಇಷ್ಟಕ್ಕೆ ಕನಿಷ್ಠ 1000 ಯೆನ್ ಕೊಡಬೇಕಾಗಿತ್ತು" ಅಂದುಕೊಂಡೆ (ಒಂದು ರುಪಾಯಿಗೆ 1.8 ಯೆನ್ ಸಿಗುತ್ತದೆ, ಆ ಲೆಕ್ಕಾಚಾರದಲ್ಲಿ 560 ರುಪಾಯಿ!).
ಮರುಕ್ಷಣದಲ್ಲಿ ‘ಅಭಿವೃದ್ಧಿ, ಜಿಡಿಪಿಗಳ ಅರ್ಥವೇನು?’ ಎಂದು ಮನಸ್ಸು ರೋದಿಸತೊಡಗಿತು. ಷೇಕ್ಸ್‌ಪಿಯರ್‌ನ ‘Thy shall not seek all good qualities in one man’ ಎನ್ನುವ ಮಾತು ನೆನಪಾಯಿತು. ‘ಆಯಾ ದೇಶಕ್ಕೆ ಆಯಾ ಗುಣಧರ್ಮಗಳು’ ಎಂದು ಮನಸ್ಸು ಹಗುರಾಯಿತು. ಜಪಾನ್ ದೇಶದಲ್ಲಿ ಕಂಡ ಇನ್ನೊಂದು ಅಂಶ ನನ್ನನ್ನು ಅಚ್ಚರಿಗೆ ದೂಡಿತು. ಇಲ್ಲಿ ಯಾವುದೇ ಸ್ತರದಲ್ಲಿ ಕೆಲಸ ಮಾಡುವ ವ್ಯಕ್ತಿಯನ್ನು ನೀವು ಗಮನಿಸಿ ನೋಡಿ, ಅವರು ಕೆಲಸದ ವೇಳೆಯಲ್ಲಿ ಮೊಬೈಲ್ ನೋಡುವುದಿಲ್ಲ, ಕರೆ ಸ್ವೀಕರಿಸುವುದಿಲ್ಲ, ಕರೆ ಮಾಡುವುದಿಲ್ಲ. ತೀರಾ ಅನಿವಾರ್ಯ ಎಂದಾಗ ಇದನ್ನು ಮುರಿದಿರಬಹುದು. ಆದರೆ ನನ್ನ ಕಣ್ಣಿಗೆ ಅದು ಬೀಳಲಿಲ್ಲ. ಅದರಲ್ಲೂ ಸರ್ವೀಸ್ ಇಂಡಸ್ಟ್ರಿಯಲ್ಲಿ ಇರುವ ಜನ, ಅಂದರೆ ನಾವು ಹೊಕ್ಕ ಕಾಫಿಬಾರ್‌ಗಳಿರಬಹುದು, ರೆಸ್ಟೋರೆಂಟ್‌ಗಳಿರಬಹುದು, ಹೋಟೆಲ್‌ನ -ಂಟ್ ಡೆಸ್ಕ್ ಇರಬಹುದು ಅಥವಾ ಸೂಪರ್ ಮಾರ್ಕೆಟ್‌ನಲ್ಲಿ ಸಹಾಯ ಮಾಡುವವರು ಹೀಗೆಯಾರೊಬ್ಬರೂ ಮೊಬೈಲ್ ದಾಸ್ಯಕ್ಕೆ ಬಿದ್ದಿರಲಿಲ್ಲ.
ಅಂದ ಮಾತ್ರಕ್ಕೆ ಜಪಾನ್‌ನಲ್ಲಿ ಮೊಬೈಲ್ ದಾಸ್ಯ ಇಲ್ಲವೆಂದಲ್ಲ, ಅವರು ಅದಕ್ಕೆ ಅಡಿಕ್ಟ್ ಆಗಿದ್ದಾರೆ ಅಥವಾ ಆಗಿಲ್ಲ ಎನ್ನುವುದಲ್ಲ. ಕೆಲಸದ ವೇಳೆಯಲ್ಲಿ ಅವರು ಮೊಬೈಲ್ ಮುಟ್ಟುವುದಿಲ್ಲ. ಮಾಲೀಕನಿರಲಿ ಅಥವಾ ಇಲ್ಲದಿರಲಿ, ಎಲ್ಲೆಡೆ ಇಂಥ ಒಂದು ಅಭ್ಯಾಸವನ್ನು ಕಂಡು ಮನಸ್ಸು ಹಿಗ್ಗಿತು. ಬೇಡವೆಂದರೂ ಭಾರತ ನೆನಪಾಯ್ತು. ಭಾರತದಂಥ ದೇಶದಲ್ಲಿ ವ್ಯಾಪಾರ ಮಾಡುವುದು, ಅಂದರೆ, ಯಾವುದಾದರೂ ಬಿಸಿನೆಸ್ ಮಾಡುವುದು ಮಹಾಪಾಪ ಎನ್ನುವ ನಿಲುವಿಗೆ ನಾನು ಬಂದಿದ್ದೇನೆ.
ಅದಕ್ಕೆ ಪ್ರಮುಖ ಕಾರಣ- ಹ್ಯೂಮನ್ ರಿಸೋರ್ಸ್. ಇಷ್ಟೊಂದು ಜನರಿದ್ದಾರೆ, ಆದರೆ ಕೆಲಸಕ್ಕೆ ಮಾತ್ರ ಜನ ಸಿಕ್ಕುವು ದಿಲ್ಲ. ಸಿಕ್ಕರೂ ಅವರಿಗೆ ದಮ್ಮಯ್ಯ ಗುಡ್ಡೆ ಹಾಕಬೇಕು. ಇದು ಎಲ್ಲಾ ಕ್ಷೇತ್ರಕ್ಕೂ ಅನ್ವಯ. ಹಣ ಹೂಡಿಕೆ ಮಾಡಿ, ಎಂಪ್ಲಾಯ್ ಮೆಂಟ್ ಕ್ರಿಯೇಟ್ ಮಾಡಿ ಕೂಡ ನೋವು ತಪ್ಪದು. ಪ್ರತಿಯೊಬ್ಬರೂ ಮೊಬೈಲ್ ಬಿಟ್ಟು ಅರೆಕ್ಷಣವೂ ಇರುವುದಿಲ್ಲ. ವೇತನ ಪಡೆದು ದಿನದ 8 ಗಂಟೆಯನ್ನು ನಾವು ಕೆಲಸಕ್ಕೆ ಅಂತ ಕೊಟ್ಟಿರುತ್ತೇವೆ. ಆ ಸಮಯದಲ್ಲಿ ಮೊಬೈಲ್ ನೋಡುತ್ತಾ, ಮಾಡುವ ಕೆಲಸದಲ್ಲಿ ಪೂರ್ಣ ತೊಡಗಿಸಿಕೊಳ್ಳದೇ ಇರುವುದು ಕೆಲಸಕ್ಕೆ ಮಾಡುವ ಅನ್ಯಾಯ. ಇದು ವೇತನ ನೀಡುತ್ತಿರುವವರಿಗೆ ಮಾಡುತ್ತಿರುವ ಮೋಸ ಎನ್ನುವ ಭಾವನೆ ನಮ್ಮ ಜನರಲ್ಲಿಬರುವುದೇ ಇಲ್ಲ! ಜಪಾನ್ ಸುಮ್ಮನೆ ಜಪಾನ್ ಆಗಿಲ್ಲ.
ಅಲ್ಲಿನ ಜನರ ವರ್ಕ್ ಎಥಿಕ್ಸ್ ಮ್ಯಾಚ್ ಮಾಡುವುದು ಬೇಡ, ಅದರಿಂದ ನಾವು ಒಂದಷ್ಟು ಕಲಿತರೂ ಸಾಕು ಎನ್ನಿಸಿತು. ಆದರೆ ಯಾರಿಗೆ ಹೇಳುವುದು? ಯಾರನ್ನು ತಿದ್ದುವುದು? ನಮ್ಮ ದೇಶದ ನಿಜವಾದ ಜನಸಂಖ್ಯೆ ಎಷ್ಟು ಎನ್ನುವುದೇ ನಮಗೆ ತಿಳಿದಿಲ್ಲ! ಇಂದಿಗೂ ಕೆಲವರು 135 ಕೋಟಿ ಎಂದು ಬರೆಯುತ್ತಾರೆ, ಕೆಲವರು 140 ಕೋಟಿ ಎನ್ನುತ್ತಾರೆ. ನಮ್ಮ ನಿಜವಾದ ಜನಸಂಖ್ಯೆ ಎಷ್ಟು ಎಂದು ತಿಳಿಯದ ದೇಶ, ನಮ್ಮ ಸಮಸ್ಯೆಯನ್ನು ಪಟ್ಟಿಮಾಡಲು ಎಲ್ಲಿಂದ ಸಾಧ್ಯ? ಸಮಸ್ಯೆಗಳ ನಿಖರ ಲೆಕ್ಕವಿಲ್ಲದ ಮೇಲೆ ಅದಕ್ಕೆ ಪರಿಹಾರ ಎಲ್ಲಿಂದ ತರುವುದು? ಮೇಲಿನ ಪ್ರಶ್ನೆಗಳು ಬಂದಾಗ ಸಹಜವಾಗಿ ನಮ್ಮಲ್ಲಿನ ಹಲವು ಮೇಧಾವಿಗಳು, “ಜಪಾನ್ ಪುಟಾಣಿ ದೇಶ. ಅಲ್ಲಿ ಎಲ್ಲವನ್ನೂ ನಿಖರವಾಗಿ, ಸ್ವಚ್ಛವಾಗಿ ಇಡಲು ಸಾಧ್ಯ, ಭಾರತ ಬಹುದೊಡ್ಡ ದೇಶ" ಎನ್ನುವ ಆಣಿಮುತ್ತುಗಳನ್ನು ಉದುರಿಸುತ್ತಾರೆ.
ಜಪಾನ್ ನಲ್ಲಿ ಕೂಡ ಹನ್ನೆರಡೂವರೆ ಕೋಟಿ ಜನಸಂಖ್ಯೆಯಿದೆ, ಅಲ್ಲಿಯೂ ಸಮಸ್ಯೆಗಳಿವೆ. ಆದರೆ ಅವುಗಳ ಲೆಕ್ಕಾಚಾರ ಅವರಿಗೆ ಗೊತ್ತಿದೆ. ವ್ಯವಸ್ಥೆಯನ್ನು ಸರಿಯಾಗಿ ಕಟ್ಟಿದರೆ, ೧೨ ಕೋಟಿಗೆ ಅನ್ವಯವಾದದ್ದು 140 ಕೋಟಿಗೂ ಅನ್ವಯವಾಗುವಂತೆ ನೋಡಿಕೊಳ್ಳುವುದು ಕಷ್ಟವೇನಲ್ಲ. ಎಲ್ಲಕ್ಕಿಂತ ಮೊದಲಿಗೆ ನಿಮ್ಮ ಮನಸ್ಸಿನಲ್ಲಿ ಒಂದಂಶ ಭದ್ರವಾಗಿ ನೆಲೆಯೂರಲಿ. ನಾವು ಎಲ್ಲದರಲ್ಲೂ ‘ಬೆಸ್ಟ್’ ಆಗಿರಬೇಕು ಎನ್ನುವುದು ಸಾಧ್ಯವಿಲ್ಲದ ಮಾತು. ಇದೊಂದು ಮಾನಸಿಕ ವ್ಯಸನ. ದಯಮಾಡಿ ಅದರಿಂದ ಹೊರಬನ್ನಿ. ಜಗತ್ತಿನಲ್ಲಿ ಗೆದ್ದ ವ್ಯಕ್ತಿಯನ್ನು ನೀವು ಗಮನಿಸಿ, ಅವನಿಗೆ ಎಲ್ಲವೂ ಗೊತ್ತಿರುವುದಿಲ್ಲ.
ಆದರೆ ತಾನು ಮಾಡುವ ಕೆಲಸದಲ್ಲಿ ಮಾತ್ರ ಆತ ನಿಪುಣನಾಗಿರುತ್ತಾನೆ. ನಾವು ಮಾಡಬೇಕಾದುದು ಕೂಡ ಅಷ್ಟೇ.‘ಎಲ್ಲವನ್ನೂ ಮಾಡುತ್ತೇನೆ’ ಎನ್ನುವುದು ಇಲ್ಲದ ಒತ್ತಡವನ್ನು ಸೃಷ್ಟಿಸುತ್ತದೆ. ಹತ್ತಾರು ಕೆಲಸವನ್ನು ಒಮ್ಮೆಲೇ ಮಾಡುವ, ಅಂದರೆ ಒಂದೇ ಸಮಯದಲ್ಲಿ ಐದಾರು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುವ, ಹೆಚ್ಚಿನ ಹಣ ಮಾಡಬೇಕು ಎನ್ನುವ ‘ಭಾರತೀಯ ಗುಣ’ದಿಂದ ನಾವು ಸ್ವಲ್ಪ ಹೊರಬರಬೇಕು. ಜಪಾನ್ ಈ ಮಟ್ಟಿಗೆ ವಿಶ್ವಪ್ರಸಿದ್ಧವಾಗಿರುವುದು ‘ಇಚಿಗೋ ಇಚಿ’ ಎಂಬ ಅದರ ಒಂದು ಮಾತಿನಿಂದ! ಹೀಗೆಂದರೆ, ಒಂದು ಸಮಯದಲ್ಲಿ ಒಂದು ಮೀಟಿಂಗ್ ಅಥವಾ ಒಂದು ಕಾರ್ಯ ಎಂದರ್ಥ. ಅವರು ಆಡುಮಾತನ್ನು ಬದುಕಿಗೆ ಅಳವಡಿಸಿಕೊಂಡಿದ್ದಾರೆ. ಕೆಲಸದ ಸಮಯದಲ್ಲಿ ಕೆಲಸಕ್ಕೆ ಆದ್ಯತೆ. ಮೊಬೈಲ್ ನೇಪಥ್ಯಕ್ಕೆ ಸರಿಯುತ್ತದೆ.
ಪ್ರತಿ ದೇಶಕ್ಕೂ ಒಂದು ಅಸ್ಮಿತೆ, ತನ್ನದೇ ಆದ ನೆಲೆ ಜಾಗತಿಕವಾಗಿ ದಕ್ಕಿದೆ. ಅಂಥ ಐಡೆಂಟಿಟಿಯನ್ನು ದೇಶಕ್ಕೆತಂದುಕೊಡುವುದು ಆಯಾ ದೇಶದ ಜನ. ದೇಶದ ಜನರ ಕಲೆಕ್ಟಿವ್ ಮನಸ್ಥಿತಿ ಒಮ್ಮುಖವಾಗಿದ್ದಷ್ಟೂ ಆ ದೇಶ ಜಾಗತಿಕವಾಗಿ ಹೆಚ್ಚು ಬಲಿಷ್ಠವೂ ಪ್ರಖ್ಯಾತವೂ ಆಗುತ್ತದೆ ಎನ್ನುವ ನನ್ನ ಬಹುಕಾಲದ ನಂಬಿಕೆಯನ್ನು ಜಪಾನ್ ಬಲಪಡಿಸಿದೆ.
ಇದನ್ನೂ ಓದಿ: Rangaswamy Mookanahalli Column