Vishwavani Global Achievers Award at Georgia: ಜಾರ್ಜಿಯಾದಲ್ಲಿ ಜನಮನ ಸೆಳೆದ ವಿಶ್ವವಾಣಿ ಸಮಾರಂಭ
ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತಲ್ಲದೇ, ಜಾರ್ಜಿಯಾ ದೇಶದ ಐತಿಹಾಸಿಕ ಮತ್ತು ಅಪರೂಪದ ತಾಣಗಳನ್ನು ವಿಶ್ವವಾಣಿಯ ನಿಯೋಗಕ್ಕೆ ಪರಿಚಯಿಸುವ ಒಂದು ವಾರ ಕಾಲದ ಪ್ರವಾಸವನ್ನೂ ಏರ್ಪಡಿಸಿರುವುದು ಗಮನಾರ್ಹ.


ಪ್ರತ್ಯಕ್ಷ ವರದಿ : ರಾಜು ಅಡಕಳ್ಳಿ
ಜಾರ್ಜಿಯಾದ ರಾಜಧಾನಿ ಟಿಬಿಲಿಸಿ ಸುಂದರ ಗಿರಿಧಾಮ. ಇಲ್ಲಿಯ ತಂಪು ಇಂಪಿನ ವಾತಾವರಣ ಮನಸ್ಸಿಗೂ ಆರಾಮ. ಇಲ್ಲಿ ಎಲ್ಲೆಡೆ ಹಸಿರು ಸೂಸುವ ನಿಸರ್ಗ. ಸ್ವರ್ಗದ ತುಣುಕೊಂದು ಜಾರಿ ಬಿದ್ದಂತಿರುವ ಈ ಅಪ್ರತಿಮ ತಾಣದಲ್ಲಿ ವಿಶ್ವವಾಣಿ ಏರ್ಪಡಿಸಿದ ಗ್ಲೋಬಲ್ ಅಚೀವರ್ಸ್ ಸಮ್ಮೇಳನದಲ್ಲಿ 17 ಮಂದಿ ಕನ್ನಡ ನಾಡಿನ ಸಾಧಕರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಸಂಪನ್ನಗೊಂಡಿತು. ಜಾರ್ಜಿಯಾದ ಜನಪ್ರತಿನಿಧಿಗಳು, ರಾಯಭಾರ ಕಚೇರಿಯ ಅಧಿಕಾರಿಗಳು, ಅನಿವಾಸಿ ಭಾರತೀಯರು ಮತ್ತು ಬೆಂಗಳೂರಿನಿಂದ ತೆರಳಿದ್ದ ವಿಶೇಷ ನಿಯೋಗದ ಸದಸ್ಯರ ಸಮ್ಮುಖದಲ್ಲಿ ಜಾರ್ಜಿಯಾ ಕಲಾವಿದರ ಆಕರ್ಷಕ ಸಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನದೊಂದಿಗೆ ಈ ಕಾರ್ಯಕ್ರಮ ನಡೆದಿದ್ದು ವಿಶೇಷ. ಕನ್ನಡ ನಾಡಿನಲ್ಲಿದ್ದು, ಕಲೆ, ಶಿಕ್ಷಣ, ಸಮಾಜ ಸೇವೆ, ಕೃಷಿ, ಕೈಗಾರಿಕೋದ್ಯಮ, ರಾಜಕಾರಣ, ಹೋಟೆಲ್ ಉದ್ಯಮ, ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಸಾಧನೆ ಕೈಗೊಂಡ ಸ್ಪೂರ್ತಿವಂತರಿಗೆ ಮತ್ತು ಅನಿವಾಸಿ ಕನ್ನಡಿಗರಿಗೆ ವಿಶ್ವವಾಣಿಯ ಅಂತರರಾಷ್ಟ್ರೀಯ ಪ್ರಶಸ್ತಿಯ ಕಿರೀಟ ತೊಡಿಸಿ ಗೌರವಿಸಿದ್ದು ವಿಶೇಷವಾಗಿತ್ತು.

ಒಂದು ವಾರ ಕಾಲ ಪ್ರವಾಸ
ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ ಸಮಾ ರಂಭ ನಡೆಯಿತಲ್ಲದೇ, ಜಾರ್ಜಿಯಾ ದೇಶದ ಐತಿಹಾಸಿಕ ಮತ್ತು ಅಪರೂಪದ ತಾಣಗಳನ್ನು ವಿಶ್ವ ವಾಣಿಯ ನಿಯೋಗಕ್ಕೆ ಪರಿಚಯಿಸುವ ಒಂದು ವಾರ ಕಾಲದ ಪ್ರವಾಸವನ್ನೂ ಏರ್ಪಡಿಸಿರುವುದು ಗಮನಾರ್ಹ.
ಸಾಧನೆ ಮಾಡಿದರೆ ಮಾತ್ರ ಬದುಕು ಸಾರ್ಥಕ
ಸಮಾರಂಭ ಉದ್ಘಾಟಿಸಿದ ಬೈಲಹೊಂಗಲದ ಮೂರು ಸಾವಿರ ಮಠದ ಶ್ರೀ ಪ್ರಭು ನೀಲಕಂಠ ಮಹಾ ಸ್ವಾಮೀಜಿಯವರು, ಜಾರ್ಜಿಯಾದಂತಹ ದೂರದ ದೇಶದಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಸಂಘಟಿಸುವುದು ಸುಲಭದ ಕೆಲಸವಲ್ಲ. ಈ ನಿಟ್ಟಿನಲ್ಲಿ ವಿಶ್ವವಾಣಿಯು ಅಭಿನಂದನಾರ್ಹ ಎಂದು ಪ್ರಶಂಸಿಸಿದರು. ಮನುಷ್ಯ ಸಾಧನೆ ಮಾಡಿದರೆ ಮಾತ್ರ ಆತನ ಬದುಕು ಸಾರ್ಥಕ. ಸಾಧಕರಿಗೆ ಪ್ರೋತ್ಸಾಹ ನೀಡುವ ಕೆಲಸವೂ ನಮ್ಮಿಂದ ಆಗಬೇಕು. ಇಂತಹ ಕೆಲಸಕ್ಕೆ ವಿಶ್ವವಾಣಿಯಂತಹ ಮಾಧ್ಯಮ ಸಂಸ್ಥೆಯೂ ಕೈಗೂಡಿಸಿರುವುದು ವಿಶೇಷ. ಕನ್ನಡಿಗರ ಸಾಧನೆಯನ್ನು ಜಗತ್ತಿಗೆ ಪರಿಚಯಿಸಿದರೆ ನಮ್ಮ ಕರ್ನಾಟಕಕ್ಕೂ ಅದು ದೊಡ್ಡ ಹೆಮ್ಮೆ ಎಂದು ಸ್ವಾಮೀಜಿಯವರು ಶ್ಲಾಘಿಸಿದರು.
ವೈದ್ಯಕೀಯ ವಿದ್ಯಾರ್ಥಿಗಳಿಗೆ ನೆರವು
ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವೇಶ್ವರ ಭಟ್ಟರು, ಭಾರತ ಮತ್ತು ಜಾರ್ಜಿಯಾ ದೇಶಗಳ ನಡುವಿನ ಉತ್ತಮ ಬಾಂಧವ್ಯದ ಇತಿಹಾಸವನ್ನು ಪರಿಚಯಿಸಿದರು. ಭಾರತ ಮತ್ತು ಜಾರ್ಜಿಯ ಪರಸ್ಪರ ಗಡಿಯನ್ನು ಹಂಚಿಕೊಂಡಿಲ್ಲದೇ ಇರಬಹುದು, ಆದರೆ ಇದಕ್ಕಿಂತಲೂ ಮಿಗಿಲಾದ ಭಾವನಾತ್ಮಕ, ಮಧುರ ಸಂಬಂಧಗಳನ್ನು ಹಂಚಿಕೊಂಡಿವೆ. ಕರ್ನಾ ಟಕವು ಸೇರಿದಂತೆ ಭಾರತದ ಅನೇಕ ರಾಜ್ಯಗಳ ವಿದ್ಯಾರ್ಥಿಗಳು ಜಾರ್ಜಿಯಾಕ್ಕೆ ವೈದ್ಯಕೀಯ ಶಿಕ್ಷಣ ಪಡೆಯಲು ಭಾರೀ ಸಂಖ್ಯೆಯಲ್ಲಿ ಪ್ರತಿ ವರ್ಷವೂ ಬರುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಜಾರ್ಜಿಯಾ ಅನೇಕ ರೀತಿಯ ಅನುಕೂಲಗಳನ್ನು ಕಲ್ಪಿಸಿರುವುದು ಪ್ರಶಂಸನಾರ್ಹ ಎಂದರು. ಭಾರತದ ಯೋಗ, ಕಲೆ, ಸಾಹಿತ್ಯ ಮತ್ತು ಸಿನಿಮಾಗಳು ಜಾರ್ಜಿಯಾದವರ ಮೇಲೆ ಗಾಢ ಪರಿಣಾಮ ಬೀರಿದೆ. ಭಾರತದ ಮೇರು ನಟರಾದ ರಾಜಕಪೂರ್ ಮತ್ತು ಮಿಥುನ್ ಚಕ್ರವರ್ತಿ ಅವರು ಜಾರ್ಜಿಯಾದ ಜನಮಾನಸದಲ್ಲಿ ಇಂದಿಗೂ ಪ್ರಸಿದ್ಧರಾಗಿರುವುದು ವಿಶೇಷ. ಜಾರ್ಜಿಯಾವು ಹಿಂದೆ ಸೋವಿಯತ್ ಒಕ್ಕೂಟದ ಭಾಗವಾಗಿತ್ತು. ಅಂದಿನ ಕಾಲದಿಂದಲೂ ಭಾರತ ಉತ್ತಮ ಸಂಬಂಧವನ್ನು ಇಟ್ಟುಕೊಂಡು, ನಂತರ ಜಾರ್ಜಿಯಾ ದೇಶ ಪ್ರತ್ಯೇಕವಾಗಿ ಉದಯವಾದ ನಂತರವೂ ಅದನ್ನು ಮುಂದುವರಿಸಿಕೊಂಡು ಬಂದಿರುವುದು ಗಮನಿಸಬೇಕಾದ ಅಂಶವಾಗಿದೆ. ಇಂಥ ಬಾಂಧವ್ಯಗಳನ್ನು ಮತ್ತಷ್ಟು ಗಟ್ಟಿಗೊಳಿ ಸಲು ವಿಶ್ವವಾಣಿಯಿಂದ ಈ ಕಾರ್ಯಕ್ರಮ ಏರ್ಪ ಡಿಸಲು ಸಾಧ್ಯವಾಗಿರುವುದು ಸಂತೋಷದ ಸಂಗತಿ ಎಂದು ತಿಳಿಸಿದ ವಿಶ್ವೇಶ್ವರ ಭಟ್ಟರು, ಈ ಕಾರ್ಯಕ್ರಮಕ್ಕೆ ಸಹಕರಿಸಿದ ಜಾರ್ಜಿಯಾದ ಅಧಿಕಾರಿಗಳಿಗೆ, ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸಿದರು.

ಸಾಧನೆಗೆ ಬೆನ್ನು ತಟ್ಟಿದಾಗ ಹೊಸ ಹುರುಪು
ಸನ್ಮಾನಿತರ ಪರವಾಗಿ ಮಾತನಾಡಿದ ಮಾಜಿ ಶಾಸಕ ಸುಕುಮಾರ ಶೆಟ್ಟಿ ಮತ್ತು ಉದ್ಯಮಿ ಯಜ್ಞ ನಾರಾಯಣ ಕಮ್ಮಾಜೆ ಅವರು ಸಾಧಕರನ್ನು ಈ ರೀತಿ ಗುರುತಿಸಿ ಬೆನ್ನು ತಟ್ಟಿದಾಗ ಅವರಿಗೆ ಹೊಸ ಹುರುಪು ಮೂಡುತ್ತದೆ ಮತ್ತು ಯುವ ಪೀಳಿಗೆಗೆ ಇವರಿಂದ ಸ್ಪೂರ್ತಿ ಸಿಗುವಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಜೀವನದಲ್ಲಿ ಇಷ್ಟು ಸಾಕಪ್ಪ ಸಾಕು ಎನ್ನುವ ಮನೋಭಾವನೆಯನ್ನು ನಾವು ಬಿಡಬೇಕು, ಸಾಧನೆಗೆ ಯಾವುದೇ ಮಿತಿ ಇಲ್ಲ. ಸಾಧನೆಯ ಬೆನ್ನ ಹಿಂದೆ ಹೋಗುವವರು ಸದಾ ಕ್ರಿಯಾಶೀಲರಾಗಿರುತ್ತಾರೆ ಎಂದು ಕಮ್ಮಾಜೆಯವರು ಕಿವಿಮಾತು ಹೇಳಿದರು. ಜಾರ್ಜಿಯಾದಲ್ಲಿ ಶಿಸ್ತು ಸ್ವಚ್ಛತೆ ಮತ್ತು ಪ್ರವಾಸೋದ್ಯಮಕ್ಕೆ ಅತ್ಯಂತ ಮಹತ್ವ ನೀಡುವ ಇಲ್ಲಿಯ ಜನರಿಂದ ನಾವು ಕಲಿತುಕೊಳ್ಳಬೇಕಾದದ್ದು ಸಾಕಷ್ಟಿವೆ ಎಂದು ಸುಕುಮಾರ ಶೆಟ್ಟಿಯವರು ಅಭಿಪ್ರಾಯಪಟ್ಟರು.
ಭಟ್ಟರ ಪ್ರಯೋಗಶೀಲತೆಗೆ ಮೆಚ್ಚುಗೆ
ದುಬೈಯಲ್ಲಿರುವ ಅನಿವಾಸಿ ಕನ್ನಡಿಗರಾದ ಪ್ರವೀಣ್ ಶೆಟ್ಟಿ ಅವರು ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಸ್ಪರ್ಶ ನೀಡಿರುವ ವಿಶ್ವೇಶ್ವರ ಭಟ್ಟರ ಪ್ರಯೋಗಶೀಲತೆ ಮತ್ತು ಸಾಹಸ ಶೀಲತೆಯನ್ನು ಕೊಂಡಾಡಿದರು. ತಾವು ಜಾರ್ಜಿಯಾದಲ್ಲಿ ಹೋಟೆಲ್ ಉದ್ಯಮ ಸ್ಥಾಪಿಸಿದ ಅನುಭವವನ್ನು ಹಂಚಿ ಕೊಂಡ ಅವರು, ಜಾರ್ಜಿಯಾದಲ್ಲಿ ಹಿಂದುಗಳ ಹಬ್ಬಗಳಾದ ದೀಪಾವಳಿ ಮತ್ತು ಹೋಳಿಯನ್ನು ಅದ್ದೂರಿಯಾಗಿ ಆಚರಿಸುವ ಸಂಪ್ರದಾಯ ಪ್ರಾರಂಭಿಸಿ, ತನ್ಮೂಲಕ ಭಾರತೀಯ ಸಂಸ್ಕೃತಿ ಯನ್ನು ವಿಶ್ವವ್ಯಾಪಿಗೊಳಿಸಲಾಗಿದೆ ಎಂದು ವಿವರಿಸಿದರು.
ವಿಶ್ವವಾಣಿ ಬಳಗದ ನಾಗಾರ್ಜುನ ಸ್ವಾಗತಿಸಿದರು, ಸಿದ್ದೇಶ್ ಹಾರನಹಳ್ಳಿ ಕಾರ್ಯಕ್ರಮ ನಿರ್ವಹಿಸಿ ದರು. ವೆಂಕಟೇಶ ಹೊಸಬಾಳೆ ವಂದಿಸಿದರು. ವಿಶ್ವವಾಣಿಯ ಚಿದಾನಂದ ಕಡಲಾಸ್ಕರ್, ರಾಜ ಶೇಖರ ಪತ್ತಾರ್, ಹಿರಿಯ ಪತ್ರಕರ್ತ ರಾಜು ಅಡಕಳ್ಳಿ, ಲೇಖಕಿ ಭಾವನಾ ಬೆಳಗೆರೆ, ಅಡಿಗಾಸ್ ಯಾತ್ರಾ ಸಂಸ್ಥೆಯ ಮುಖ್ಯಸ್ಥ ಕೆ, ನಾಗರಾಜ ಅಡಿಗ, ಎಸ್ ಆರ್ ಡಬ್ಲ್ಯೂ ಗ್ರೂಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಚ್. ರವಿ ಮುಂತಾದವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಫನ್ ಸ್ಟೇ ನಿತಿನ್ ಅಗರ್ವಾಲ್ ಈ ಪ್ರವಾಸದ ಸಂಯೋಜಕತ್ವ ವಹಿಸಿದ್ದರು.
ಬೆಂಗಳೂರಿನಿಂದ ನಿಯೋಗದಲ್ಲಿ ತೆರಳಿದ್ದ ವಸಂತಿ ಕಮ್ಮಾಜೆ, ಜಾರ್ಜಿಯಾದ ಅನೇಕ ಗಣ್ಯರು, ಇಲ್ಲಿರುವ ಅನಿವಾಸಿ ಭಾರತೀಯರು, ಭಾರತೀಯ ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಭಾಗ ವಹಿಸಿ ಹರ್ಷ ವ್ಯಕ್ತಪಡಿಸಿದರು. ಈ ಸಮಾರಂಭದ ಅಂಗವಾಗಿ ಭೋಜನ ಕೂಟವನ್ನು ಏರ್ಪಡಿಸಲಾಗಿತ್ತು.
17 ಕಿರುಚಿತ್ರ ಪ್ರದರ್ಶನ
ಜಾರ್ಜಿಯಾದ ಸುಂದರ ಕಲಾವಿದರು ಮತ್ತು ಕಲಾವಿದೆಯರು ಸೇರಿ ನೃತ್ಯ, ವಾದ್ಯ ಮೇಳ ಮತ್ತು ಕೊರಿಯೋಗ್ರಾಫಿ ಪ್ರದರ್ಶನ ಈ ಕಾರ್ಯಕ್ರಮಕ್ಕೆ ಕಳೆಕಟ್ಟಿತ್ತು. ಎಲ್ಲಾ ಪ್ರಶಸ್ತಿ ಪುರಸ್ಕೃತರ ಸಾಧನೆಗಳನ್ನು ವಿವರಿಸುವ 17 ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಈ ರೀತಿಯ ವೈಶಿಷ್ಟ್ಯ ಪೂರ್ಣ ಅಂತರ ರಾಷ್ಟ್ರೀಯ ಸಮ್ಮೇಳನಗಳನ್ನು ಕಳೆದ ಒಂದುವರೆ ವರ್ಷದಲ್ಲಿ ವಿಶ್ವವಾಣಿಯು 9 ಬೇರೆ ಬೇರೆ ದೇಶಗಳಲ್ಲಿ ಯಶಸ್ವಿಯಾಗಿ ನಡೆಸಿರುವುದು ಉಲ್ಲೇಖಾರ್ಹ. ಕಾಂಬೋಡಿಯ, ವಿಯೆಟ್ನಾಂ, ಜಪಾನ್, ರಷ್ಯಾ, ಇಂಡೋನೇಷ್ಯಾ, ಮಾಲ್ಡಿವ್ಸ್, ಒಮಾನ್, ಮಾರಿಷಸ್ ಮುಂತಾದ ದೇಶಗಳಲ್ಲಿ ಈಗಾಗಲೇ ವಿಶ್ವವಾಣಿಯು ಕನ್ನಡದ ಕಹಳೆ ಮೊಳಗಿಸಿದೆ.
ಪರ್ವತ ಶ್ರೇಣಿಯ ಸುಂದರ ನಗರ
ಜಾರ್ಜಿಯಾ ದೇಶದ ರಾಜಧಾನಿ ಟಿಬಿಲಿಸಿ ಕಾಕೇಷಸ್ ಪರ್ವತ ಶ್ರೇಣಿಗಳ ನಡುವಿನ ಸುಂದರ ನಗರ. ಈ ನಗರವು ತನ್ನ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಭೌಗೋಳಿಕ ಮಹತ್ವದಿಂದ ಗಮನ ಸೆಳೆಯು ತ್ತದೆ. ಕೂರಾ ನದಿಯ ತೀರದಲ್ಲಿರುವ ಈ ನಗರ, ಪರ್ವತಗಳಿಂದ ಸುತ್ತುವರಿದಿದೆ. ಸಮುದ್ರ ಮಟ್ಟ ದಿಂದ ಸುಮಾರು 400 ಮೀಟರ್ ಎತ್ತರದಲ್ಲಿರುವ ಈ ನಗರವು ವಿಶಿಷ್ಟ ಭೌಗೋಳಿಕ ರಚನೆ ಮತ್ತು ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಈ ನಗರ ಹಲವು ಶತಮಾನಗಳವರೆಗೆ ಪರ್ಷಿಯನ್, ಅರಬ್, ಮಂಗೋಲ್, ಓಟ್ಟೋಮನ್ ಮತ್ತು ರಷ್ಯನ್ ಸಾಮ್ರಾಜ್ಯಗಳ ಅಧೀನದಲ್ಲಿತ್ತು. ಇದರಿಂದ ಟಿಬಿಲಿಸಿಗೆ ಬಹುಸಾಂಸ್ಕೃತಿಕ ಆಯಾಮವಿದೆ. ಪ್ರತಿ ಆಳ್ವಿಕೆಯಿಂದಲೂ ಇಲ್ಲಿನ ಕಲಾ, ವಾಸ್ತುಶಿಲ್ಪ ಹಾಗೂ ಆಹಾರದ ವೈವಿಧ್ಯ ಶ್ರೀಮಂತ ವಾಗಿದ್ದನ್ನು ಕಾಣಬಹುದು. ಟಿಬಿಲಿಸಿಯ ಜನಸಂಖ್ಯೆ ಸುಮಾರು ಹನ್ನೆರಡು ಲಕ್ಷ. ಜಾರ್ಜಿಯಾದ ಜನಸಂಖ್ಯೆ ಸುಮಾರು ಮೂವತ್ತೇಳು ಲಕ್ಷ. ಬಹುಪಾಲು ಜನ ಜಾರ್ಜಿಯನ್ ಭಾಷೆಯನ್ನೇ ಮಾತನಾಡುತ್ತಾರೆ. ಜತೆಗೆ ರಷ್ಯನ್, ಇಂಗ್ಲಿಷ್ ಮತ್ತು ಅರ್ಮೇನಿಯನ್ ಭಾಷೆಗಳ ಬಳಕೆಯೂ ಇದೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯು ಇಂಗ್ಲಿಷ್ ಭಾಷಾ ಬಳಕೆಯನ್ನು ಹೆಚ್ಚಿಸಿದೆ.
ಟಿಬಿಲಿಸಿ ಜಾರ್ಜಿಯಾದ ಆರ್ಥಿಕ, ಶೈಕ್ಷಣಿಕ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಹಲವು ಬ್ಯಾಂಕುಗಳು, ಇನ್‌ಶುರನ್ಸ್ ಕಂಪನಿಗಳು ಮತ್ತು ಸ್ಟಾರ್ಟ್ ಅಪ್ ಕಂಪನಿಗಳು ಇಲ್ಲಿ ನೆಲೆಸಿವೆ. ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ, ಶಿಕ್ಷಣ ಮತ್ತು ವಾಣಿಜ್ಯ ಕ್ಷೇತ್ರಗಳು ಇಲ್ಲಿನ ಆರ್ಥಿಕತೆಯ ಮುಖ್ಯ ಅಂಶಗಳು. ಟಿಬಿಲಿಸಿಯು ಬೃಹತ್ ಸಾಂಸ್ಕೃತಿಕ ಮೇಳವಾಗಿದೆ. ಇಲ್ಲಿ ಅನೇಕ ನೃತ್ಯ, ಸಂಗೀತ, ಚಿತ್ರಕಲೆ ಹಾಗೂ ನಾಟಕ ಪ್ರದರ್ಶನಗಳು ನಿರಂತರ ನಡೆಯುತ್ತವೆ. ಈ ನಗರದಲ್ಲಿ ಪ್ರತಿವರ್ಷವೂ ಟಿಬಿಲಿಸಿ ಫಿಲ್ಮ್ ಫೆಸ್ಟಿವಲ್, ಜಾಜ್ ಫೆಸ್ಟಿವಲ್ ಮತ್ತು ಬೇರೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಟಿಬಿಲಿಸಿಯು ಜಾರ್ಜಿಯಾದ ಶೈಕ್ಷಣಿಕ ಕೇಂದ್ರವೂ ಆಗಿದೆ. ಟಿಬಿಲಿಸಿ ಸ್ಟೇಟ್ ಯೂನಿವರ್ಸಿಟಿ, ಜಾರ್ಜಿಯನ್ ಟೆಕ್ನಿಕಲ್ ಯುನಿವರ್ಸಿಟಿ ಮತ್ತು ಇನ್ನಷ್ಟು ಸಂಸ್ಥೆಗಳು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿವೆ. ಬಹುಭಾಷಾ ಶಿಕ್ಷಣವು ಇಲ್ಲಿನ ವೈಶಿಷ್ಟ್ಯ. ಆಶ್ಚರ್ಯವೆಂದರೆ ಈ ನಗರದಲ್ಲಿ ಅನೇಕ ಕನ್ನಡಿಗ ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲ ವೈದ್ಯಕೀಯ ಶಿಕ್ಷಣ ವ್ಯಾಸಂಗಕ್ಕೆ ಬಂದವರು. ಟಿಬಿಲಿಸಿಯಲ್ಲಿ ನಡೆದಾಡುವಾಗ, ಕನ್ನಡಿಗ ವಿದ್ಯಾರ್ಥಿಗಳು, ಅವರನ್ನು ನೋಡಲು ಬರುವ ಪಾಲಕರನ್ನು ಕಾಣಬಹುದು.
ಟಿಬಿಲಿಸಿ ಒಂದು ಚಲನಶೀಲ ಮತ್ತು ಕ್ರಿಯಾತ್ಮಕ ನಗರ. ಇಲ್ಲಿ ಪುರಾತನ ಇತಿಹಾಸವೂ ಇದೆ ಮತ್ತು ಆಧುನಿಕತೆಯ ಸ್ಪರ್ಶವೂ ಇದೆ. ಇಲ್ಲಿನ ಸಂಸ್ಕೃತಿ, ಆಹಾರ, ವಾಸ್ತುಶಿಲ್ಪ, ಜನಪದ, ನೃತ್ಯ ಮತ್ತು ಹಿತಕರ ಹವಾಮಾನ ಈ ನಗರದ ವೈಶಿಷ್ಟ್ಯ. ಜಾರ್ಜಿಯಾದ ಅರಮನೆ ಎಂದೇ ಹೇಳಬಹುದಾದ ಈ ನಗರ, ಇಂದಿಗೂ ಅನೇಕರ ಕಲ್ಪನೆಗಳ ಮೇಲೆ ಸವಾರಿ ಮಾಡುತ್ತದೆ.
ಟಿಬಿಲಿಸಿಯ ಬಿಷಪ್ ಸಿಮಿಯೋನ್ ಅಭಿನಂದನೆ
ಬೇರೆ ದೇಶಗಳಲ್ಲಿ ಮಾಧ್ಯಮ ಸಂಸ್ಥೆಯವರು ಈ ರೀತಿ ಕಾರ್ಯಕ್ರಮ ಏರ್ಪಡಿಸಿರುವುದು ವಿನೂತನ ಪ್ರಯೋಗವೇ ಸರಿ. ಭಾರತೀಯರು ಅತ್ಯಂತ ಸರಳ ಮತ್ತು ಸಜ್ಜನ ಸ್ವಭಾವದವರು ಎಂದು ಪ್ರಶಂಸಿಸಿ, ಜಾರ್ಜಿಯಾವನ್ನು ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಯ್ಕೆ ಮಾಡಿರುವುದಕ್ಕೆ ವಿಶ್ವವಾಣಿಯನ್ನು ಟಿಬಿಲಿಸಿಯ ಬಿಷಪ್ ಸಿಮಿಯೋನ್ ಅವರು ಅಭಿನಂದಿಸಿದರು.
ಮುಖ್ಯ ಅತಿಥಿಯಾಗಿದ್ದ ಅವರು, ಭಾರತಕ್ಕೆ ದೀರ್ಘ ಇತಿಹಾಸವಿದೆ, ಪರಂಪರೆ ಇದೆ, ಜಾರ್ಜಿಯಾ ಭಾರತವನ್ನು, ಅಲ್ಲಿಯ ಸಂಸ್ಕೃತಿಯನ್ನು ಸದಾ ಗೌರವಿಸುತ್ತದೆ. ಜಾರ್ಜಿಯಾಕ್ಕೆ ಶಿಕ್ಷಣಕ್ಕಾಗಿ ಇನ್ನಷ್ಟು ಭಾರತೀಯ ವಿದ್ಯಾರ್ಥಿಗಳು ಬರುವಂತಾದರೆ ಸಂತೋಷ, ಅವರಿಗೆ ಇಲ್ಲಿ ಸೂಕ್ತ ಸೌಲಭ್ಯ ಒದಗಿಸಲಾಗುವುದು ಎಂದು ಸಿಮಿಯೋನ್ ಅವರು ತಿಳಿಸಿದರು.
ಜಾರ್ಜಿಯಾದ ಜನಪ್ರಿಯ ನಟ ನಿಕೋಲಾಜ್ ಸುಲುಕಿಜ್ ಅವರು ಕನ್ನಡ ನಾಡಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ತಾವು ಬೆಂಗಳೂರಿಗೆ ಅನೇಕ ಬಾರಿ ಭೇಟಿ ಕೊಟ್ಟಿರುವುದನ್ನು, ಬಾಲಿವುಡ್ ಸಿನಿಮಾಗಳು, ಹಿಂದಿ ಸಿನಿಮಾ ಹಾಡುಗಳು ಜಾರ್ಜಿಯಾದಲ್ಲಿ ಜನಪ್ರಿಯವಾಗಿರುವುದನ್ನು ನೆನಪಿಸಿದರು. ಭಾರತವು ಕಲೆ ಮತ್ತು ಸಂಸ್ಕೃತಿಗಳ ಬೀಡಾಗಿದೆ. ಇದರಿಂದಾಗಿ ಜಗತ್ತಿನ ನಕ್ಷೆಯಲ್ಲಿ ಭಾರತಕ್ಕೆ ವಿಶೇಷ ಸ್ಥಾನಮಾನ ಲಭಿಸುವಂತಾಗಿದೆ ಎಂದು ಅವರು ಕೊಂಡಾಡಿದರು.
ಮತ್ತೊಬ್ಬ ಅತಿಥಿ ಜಾರ್ಜಿಯಾದ ಖ್ಯಾತ ಲೇಖಕ ಜಾರ್ಜಿ ಕೆಕೆಲಿಡ್ಜ್ ಅವರು, ಭಾರತದ ಶ್ರೇಷ್ಠ ಗ್ರಂಥವಾದ ಭಗವದ್ಗೀತೆಯನ್ನು ಜಾರ್ಜಿಯಾ ಭಾಷೆಗೂ ಅನುವಾದಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಜಾರ್ಜಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಹಿರಿಯ ಅಧಿಕಾರಿ ಚೇತನ್ ಶರ್ಮಾ ಅವರು ಉಪಸ್ಥಿತರಿದ್ದರು. ಅನಿವಾಸಿ ಭಾರತೀಯರಾದ ದರ್ಪಣ್ ಪರಾಶರ್ ಅವರು ಜಾರ್ಜಿಯಾದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಬದಲಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಟರ್ಕಿ, ಅಜರ್ ಬೈಜಾನ್ ದೇಶಗಳಿಗೆ ಭಾರತೀಯ ಪ್ರವಾಸಿ ಗರು ಹೋಗಲು ಅಷ್ಟಾಗಿ ಇಷ್ಟ ಪಡಲಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಜಾರ್ಜಿಯಾಕ್ಕೆ ಭಾರತೀಯ ಪ್ರವಾಸಿಗರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತಹ ಬೆಳವಣಿಗೆಯಾಗಿದೆ. ಶೈಕ್ಷಣಿಕ ಕೇಂದ್ರವಾಗಿಯೂ ಜಾರ್ಜಿಯಾವು ಬೆಳೆಯುತ್ತಿರುವುದು ವಿಶೇಷ. ಭಾರತೀಯ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಶಿಕ್ಷಣ ಪಡೆಯುವುದಕ್ಕೂ ಇದು ಅನುಕೂಲವಾಗಿದೆ ಎಂದು ದರ್ಪಣ್ ಅಭಿಪ್ರಾಯಪಟ್ಟರು.