Dengue Case: ಸಾವಿರ ಗಡಿ ದಾಟಿದ ಡೆಂಗ್ಯೂ ಪ್ರಕರಣ- ಪೋಷಕರೇ ಎಚ್ಚರ !
ಡೆಂಗ್ಯೂ ಜ್ವರ ಈಡಿಸ್ ಈಜಿಪ್ಟಿ ಸೊಳ್ಳೆ ಕಡಿತದಿಂದ ಹರಡುವ ವೈರಲ್ ಕಾಯಿಲೆ. ಮಲೇರಿಯಾಗೆ ಕಾರಣವಾದ ಸೊಳ್ಳೆಗಿಂತ ಇದು ಭಿನ್ನವಾಗಿರುತ್ತದೆ. ಈಡಿಸ್ ಈಜಿಪ್ಟಿ ಸೊಳ್ಳೆ ಹಗಲಿನಲ್ಲಿ ಆಹಾರವನ್ನು ತಿನ್ನುತ್ತದೆ. ಹೀಗಾಗಿ ಹಗಲಿನ ಹೊತ್ತು ಅಗತ್ಯ ರಕ್ಷಣಾ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯ.

ಡಾ. ವಿನಯ್ ಹೊಸದುರ್ಗ, ವಾಸವಿ ಆಸ್ಪತ್ರೆಯ ತಜ್ಞ ವೈದ್ಯ

- ಡಾ. ವಿನಯ್ ಹೊಸದುರ್ಗ, ವಾಸವಿ ಆಸ್ಪತ್ರೆಯ ತಜ್ಞ ವೈದ್ಯ
ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಭೀತಿ(Dengue Case) ಆರಂಭವಾಗಿದ್ದು, ಸಾವಿರದ ಗಡಿ ದಾಟಿದೆ. ಅಲ್ಲದೆ ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಬಹುದು ಎಂಬ ಆತಂಕ ಎದುರಾಗಿದೆ. ಮಳೆಗಾಲದಲ್ಲಿ ಅನೇಕ ಸಾಂಕ್ರಾಮಿಕ ರೋಗಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಅಂತೆಯೇ ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಬಗ್ಗೆ ಹೆಚ್ಚಿನವರಲ್ಲಿ ಮಾಹಿತಿಯೇ ಇರುವುದಿಲ್ಲ. ಹಾಗಾದ್ರೆ ಡೆಂಗ್ಯೂ ಜ್ವರದ ಕುರಿತು ಒಂದಷ್ಟು ಮಾಹಿತಿಯನ್ನು ಇಲ್ಲಿ ತಿಳಿಯೋಣ.
ಡೆಂಗ್ಯೂ ಜ್ವರ ಹರಡುವುದು ಹೇಗೆ?
ಡೆಂಗ್ಯೂ ಜ್ವರ ಈಡಿಸ್ ಈಜಿಪ್ಟಿ ಸೊಳ್ಳೆ ಕಡಿತದಿಂದ ಹರಡುವ ವೈರಲ್ ಕಾಯಿಲೆ. ಮಲೇರಿಯಾಗೆ ಕಾರಣವಾದ ಸೊಳ್ಳೆಗಿಂತ ಇದು ಭಿನ್ನವಾಗಿರುತ್ತದೆ. ಈಡಿಸ್ ಈಜಿಪ್ಟಿ ಸೊಳ್ಳೆ ಹಗಲಿನಲ್ಲಿ ಆಹಾರವನ್ನು ತಿನ್ನುತ್ತದೆ. ಹೀಗಾಗಿ ಹಗಲಿನ ಹೊತ್ತು ಅಗತ್ಯ ರಕ್ಷಣಾ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯ. ಡೆಂಗ್ಯೂ ಜ್ವರವನ್ನು ಮಕ್ಕಳು ಮತ್ತು ವಯಸ್ಕರಲ್ಲಿ ಹೆಚ್ಚಾಗಿ ಕಾಣಬಹುದು. ಒಂದು ವೇಳೆ ಮಕ್ಕಳಲ್ಲಿ ಈ ಕಾಯಿಲೆ ಕಂಡುಬಂದಲ್ಲಿ ಪೋಷಕರು ಹೆಚ್ಚು ನಿಗಾ ವಹಿಸುವ ಅಗತ್ಯವಿದೆ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ವಿನಯ್ ಹೊಸದುರ್ಗ.
ಮಕ್ಕಳಲ್ಲಿ ಕಂಡುಬರುವ ಡೆಂಗ್ಯೂ ಲಕ್ಷಣಗಳು:
ಡೆಂಗ್ಯೂ ಸೋಂಕಿಗೆ ಒಳಗಾದ ಮಕ್ಕಳಲ್ಲಿ ಆಗಾಗ್ಗೆ ಜ್ವರ, ತಲೆನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಹೊಟ್ಟೆಯಲ್ಲಿ ಉರಿತ ಕಂಡುಬರುತ್ತದೆ. ಇದರಿಂದಾಗಿ ವಾಕರಿಕೆ, ವಾಂತಿ, ಹೊಟ್ಟೆ ನೋವು ಮತ್ತು ಕೆಲವೊಮ್ಮೆ ಸಡಿಲವಾದ ಮಲದ ಸಮಸ್ಯೆ ಉಂಟಾಗಬಹುದು.
ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದಲ್ಲಿ ಮೊದಲ 2 ರಿಂದ 4 ವಾರಗಳ ಕಾಲ ಪೋಷಕರು ಹೆಚ್ಚು ನಿಗಾವಹಿಸಬೇಕು. ಪ್ಯಾರಾಸಿಟಮಲ್ ನಂತಹ ಜ್ವರ ವಿರೋಧಿ ಔಷಧಿಗಳನ್ನು ಮಕ್ಕಳಿಗೆ ನೀಡಬಹುದು. ಔಷಧಿಯ ಜೊತೆಗೆ ಮಕ್ಕಳಿಗೆ ಸಾಕಷ್ಟು ವಿಶ್ರಾಂತಿ ಜೊತೆಗೆ ನೀರು ಕುಡಿಯುವಂತೆ ಕೂಡ ನೋಡಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ..
ಡೆಂಗ್ಯೂ ಬಗ್ಗೆ ಇರುವ ತಪ್ಪುಕಲ್ಪನೆಗಳೇನು ?
ತಪ್ಪುಕಲ್ಪನೆ: ಕಲುಷಿತ ನೀರಿನಿಂದ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಡೆಂಗ್ಯೂ ಹರಡುತ್ತದೆ.
ಸತ್ಯ: ಸೊಳ್ಳೆ ಕಡಿತದಿಂದ ಮಾತ್ರ ಡೆಂಗ್ಯೂ ಹರಡುತ್ತದೆ.
ತಪ್ಪುಕಲ್ಪನೆ: ಡೆಂಗ್ಯೂ ಸೋಂಕಿತ ತಾಯಂದಿರು ಮಗುವಿಗೆ ಹಾಲುಣಿಸಬಾರದು.
ಸತ್ಯ: ಡೆಂಗ್ಯೂ ವೈರಸ್ ಎದೆ ಹಾಲಿನ ಮೂಲಕ ಹರಡುವುದಿಲ್ಲ.
ತಪ್ಪುಕಲ್ಪನೆ: ಸೋಂಕಿತ ಮಗುವಿನ ಸಂಪರ್ಕದಿಂದ ಮಕ್ಕಳಿಗೆ ಡೆಂಗ್ಯೂ ಬರಬಹುದು.
ಸತ್ಯ: ಸೋಂಕಿತ ಮಗುವಿನ ಸಂಪರ್ಕದಿಂದ, ಬಟ್ಟೆ ಅಥವಾ ಪಾತ್ರೆಗಳಂತಹ ವಸ್ತುಗಳನ್ನು ಹಂಚಿಕೊಳ್ಳುವ ಮೂಲಕ ಡೆಂಗ್ಯೂ ಹರಡುವುದಿಲ್ಲ.
ತಪ್ಪುಕಲ್ಪನೆ: ಡೆಂಗ್ಯೂ ಸೋಂಕಿನಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಸತ್ಯ: ಡೆಂಗ್ಯೂ ನಿಂದ ಯಾವುದೇ ರೋಗನಿರೋಧಕ ಶಕ್ತಿ ಹೆಚ್ಚುವುದಿಲ್ಲ. ಜನರು ಡೆಂಗ್ಯೂನಿಂದ ಪುನಃ ಸೋಂಕಿಗೆ ಒಳಗಾಗಬಹುದು.
ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ರೋಗಲಕ್ಷಣಗಳಿವು
ಮಕ್ಕಳಲ್ಲಿ ಡೆಂಗ್ಯೂ ಬಂದಿದೆ ಅಂತ ತಿಳಿಯೋದು ಹೇಗೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ಒಂದು ವೇಳೆ ಮಗುವಿನಲ್ಲಿ ಈ ಕೆಳಗೆ ತಿಳಿಸಿರುವ ರೋಗಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
- ಊಟ ಸೇವನೆಗೆ ನಿರಾಕರಿಸುವುದು ಅಥವಾ ವಾಂತಿ ಮಾಡುವುದು.
- ನಿದ್ರಾಹೀನತೆ ಅಥವಾ ಚಡಪಡಿಕೆಗೆ ಒಳಗಾಗುವುದು.
- ಮೂಗು ಮತ್ತು ಒಸಡುಗಳಲ್ಲಿ ರಕ್ತಸ್ರಾವ, ವಾಂತಿ ಅಥವಾ ಮಲದಲ್ಲಿ ರಕ್ತಸ್ರಾವ ಕಂಡುಬರುವುದು.
- ಹೊಟ್ಟೆ ನೋವು
- ಚರ್ಮದ ಬಣ್ಣ ಬದಲಾವಣೆ, ಕೈ ಮತ್ತು ಪಾದಗಳು ತಣ್ಣಗಾಗುವುದು.
- ಕನಿಷ್ಟ 6 ಗಂಟೆಗಳ ಕಾಲ ಮೂತ್ರ ಕಟ್ಟಿಕೊಂಡಿರುವುದು.
ಡೆಂಗ್ಯೂನಿಂದ ಮಕ್ಕಳನ್ನು ರಕ್ಷಿಸಿಕೊಳ್ಳಲು ಪೋಷಕರಿಗೆ ಇಲ್ಲಿದೆ ಟಿಪ್ಸ್
ಡೆಂಗ್ಯೂ ಕಾಯಿಲೆ ಹರಡುವಿಕೆ ಬಗ್ಗೆ ಆತಂಕಕ್ಕೊಳಗಾದ ಪೋಷಕರು ತಮ್ಮ ಮಕ್ಕಳನ್ನು ರೋಗದಿಂದ ರಕ್ಷಿಸಿಕೊಳ್ಳಲು ಹಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಅವುಗಳೆಂದರೆ
- ಸೊಳ್ಳೆಗಳನ್ನು ದೂರವಿಡಲು ಸೊಳ್ಳೆ ನಿವಾರಕಗಳು ಮತ್ತು ಸೊಳ್ಳೆ ಬತ್ತಿಗಳನ್ನು ಬಳಸುವುದು.
- ಬೆಳಗ್ಗೆ ಮತ್ತು ಮುಸ್ಸಂಜೆ ವೇಳೆ ಸೊಳ್ಳೆಗಳು ಹೆಚ್ಚು, ಹೀಗಾಗಿ ಮಕ್ಕಳು ಮೈತಂಬಾ ಉಡುಪುಗಳನ್ನು ಧರಿಸುವಂತೆ ನೋಡಿಕೊಳ್ಳಬೇಕು.
- ಮನೆಯ ಆವರಣದಲ್ಲಿ ನೀರು ನಿಂತಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಮನೆಯ ಸುತ್ತ ನಿಂತ ನೀರನ್ನು ಸ್ವಚ್ಛಗೊಳಿಸುವುದು ಪ್ರಮುಖವಾದುದು.
- ಎರಡು ತಿಂಗಳೊಳಗಿನ ಶಿಶುಗಳಿಗೆ ಸೊಳ್ಳೆ ಪರದೆಗಳನ್ನು ಬಳಸುವುದು ಮುಖ್ಯ.
- ಸೊಳ್ಳೆಗಳು ಹೆಚ್ಚಿರುವ ಮುಂಜಾನೆ ಮತ್ತು ಮುಸ್ಸಂಜೆ ಸಮಯದಲ್ಲಿ ಮಕ್ಕಳು ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಪೋಷಕರು ನೋಡಿಕೊಳ್ಳಬೇಕು.
- ಸೊಳ್ಳೆ ಕಡಿತ ಮತ್ತು ನೈರ್ಮಲ್ಯ ಅಭ್ಯಾಸಗಳ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಬೇಕು ಎನ್ನುವುದು ತಜ್ಞರ ಸಲಹೆ.