ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AA22XA6: ಅಟ್ಲಿ-ಅಲ್ಲು ಅರ್ಜುನ್‌ ಚಿತ್ರಕ್ಕೆ ದೀಪಿಕಾ ನಾಯಕಿ? 700 ಕೋಟಿ ರೂ. ಬಜೆಟ್‌ನಲ್ಲಿ ಸಿದ್ಧವಾಗಲಿದೆ ಮೆಗಾ ಮೂವಿ

Deepika Padukone: ಸದ್ಯ ದೇಶಾದ್ಯಂತ ಕುತೂಹಲ ಮೂಡಿಸಿರುವ ಚಿತ್ರದಲ್ಲಿ ಎಎ22Xಎ6 ಕೂಡ ಒಂದು. ಅಲ್ಲು ಅರ್ಜುನ್‌-ಅಟ್ಲಿ ಕಾಂಬಿನೇಷನ್‌ನ ಈ ಚಿತ್ರ ಸೆಟ್ಟೇರುವ ಮುನ್ನವೇ ನಿರೀಕ್ಷೆ ಮೂಡಿಸಿದೆ. ಬರೋಬ್ಬರಿ 700 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ನಾಯಕಿಯಾಗಿ ದೀಪಿಕಾ ಪಡಿಕೋಣೆ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಅಟ್ಲಿ-ಅಲ್ಲು ಅರ್ಜುನ್‌ ಚಿತ್ರಕ್ಕೆ ದೀಪಿಕಾ ನಾಯಕಿ?

ದೀಪಿಕಾ ಪಡುಕೋಣೆ ಮತ್ತು ಅಲ್ಲು ಅರ್ಜುನ್‌.

Profile Ramesh B May 22, 2025 7:04 PM

ಹೈದರಾಬಾದ್‌: ಸೆಟ್ಟೇರುವ ಮುನ್ನವೇ ಕೆಲವೊಂದು ಚಿತ್ರಗಳು ಸದ್ದು ಮಾಡುತ್ತವೆ. ಇದಕ್ಕೆ ಸ್ಟಾರ್‌ ಕಾಸ್ಟ್‌, ಬಜೆಟ್‌, ಸ್ಟಾರ್‌ ನಿರ್ದೇಶಕ, ಪ್ರತಿಷ್ಠಿತ ಬ್ಯಾನರ್‌ ಹೀಗೆ ಬೇರೆ ಬೇರೆ ಕಾರಣಗಳಿರುತ್ತವೆ. ಟಾಲಿವುಡ್‌ ಸೂಪರ್‌ ಸ್ಟಾರ್‌ ಅಲ್ಲು ಅರ್ಜುನ್‌ (Allu Arjun), ಜನಪ್ರಿಯ ನಿರ್ದೇಶಕ ಅಟ್ಲಿ (Atlee) ಮೊದಲ ಬಾರಿಗೆ ಒಂದಾಗುತ್ತಿರುವ ತೆಲುಗು ಚಿತ್ರ ಸದ್ಯ ಅಂತಹದ್ದೊಂತು ಹೈಪ್‌ ಸೃಷ್ಟಿಸಿದೆ. ಟಾಲಿವುಡ್‌ ಮಾತ್ರವಲ್ಲ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಈ ಚಿತ್ರಕ್ಕೆ ತಾತ್ಕಾಲಿಕವಾಗಿ ಎಎ22Xಎ6 (AA22XA6) ಎಂದು ಶೀರ್ಷಿಕೆ ಇಡಲಾಗಿದೆ. ಇದೀಗ ಈ ಚಿತ್ರಕ್ಕೆ ನಾಯಕಿಯಾಗಿ ದೀಪಿಕಾ ಪಡುಕೋಣೆ (Deepika Padukone) ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಹರಡಿದ್ದು, ನಿರೀಕ್ಷೆ ಇನ್ನೊಂದು ಹಂತಕ್ಕೆ ಏರಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ ಇಷ್ಟುದಿನ ನಟನೆಗೆ ಬ್ರೇಕ್‌ ಕೊಟ್ಟು ತಾಯ್ತನದ ಸುಖ ಅನುಭವಿಸುತ್ತಿದ್ದರು. ಇದೀಗ ಒಂದೊಂದೇ ಪ್ರಾಜೆಕ್ಟ್‌ ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಪ್ರಭಾಸ್‌-ಸಂದೀಪ್‌ ರೆಡ್ಡಿ ವಂಗಾ ಕಾಂಬಿನೇಷನ್‌ನ ಮೊದಲ ಚಿತ್ರ ʼಸ್ಪಿರಿಟ್‌ʼಗೆ ದೀಪಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿತ್ತು. ಬಳಿಕ ಈ ಚಿತ್ರದಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿಯೂ ಹಬ್ಬಿತ್ತು. ಜತೆಗೆ ಪ್ರಭಾಸ್‌ ಜತೆಗಿನ ‘ಕಲ್ಕಿ 2898 ಎಡಿ’ ಭಾಗ 2ರ ಶೂಟಿಂಗ್‌ನಲ್ಲಿ ದೀಪಿಕಾ ಪಾಲ್ಗೊಳ್ಳಲಿದ್ದಾರೆ. ಮಾತ್ರವಲ್ಲ ಶಾರುಖ್‌ ಖಾನ್‌ ಅಭಿನಯದ ಹಿಂದಿಯ ʼಕಿಂಗ್‌ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಹೀಗೆ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳನ್ನು ಒಪ್ಪಿಕೊಂಡಿರುವ ಅವರು ಇದೀಗ ಅಲ್ಲು ಅರ್ಜುನ್‌ಗೆ ಜೋಡಿಯಾಗುತ್ತಿದ್ದಾರೆ ಎನ್ನುವ ವದಂತಿ ಹಬ್ಬಿದೆ.

ವರದಿಯೊಂದರ ಪ್ರಕಾರ ಈ ಚಿತ್ರಕ್ಕೆ ನಾಯಕಿಯಾಗಿ ದೀಪಿಕಾ ಅವರನ್ನು ಈ ಹಿಂದೆಯೇ ಸಂಪರ್ಕಿಸಲಾಗಿತ್ತು. ಸದ್ಯ ಅವರ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ. ಅಂದುಕೊಂಡಂತೆ ನಡೆದರೆ ಅಟ್ಲಿ ಮತ್ತು ದೀಪಿಕಾ ಕಾಂಬಿನೇಷನ್‌ನ 2ನೇ ಚಿತ್ರ ಇದಾಗಲಿದೆ. 2023ರಲ್ಲಿ ತೆರೆಕಂಡ ಶಾರುಖ್‌ ಖಾನ್‌-ಅಟ್ಲಿಯ ಬಾಲಿವುಡ್‌ ಚಿತ್ರ ʼಜವಾನ್‌ʼನಲ್ಲಿ ದೀಪಿಕಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪೂರ್ಣ ಪ್ರಮಾಣದ ನಾಯಕಿಯಾಗಲಿದ್ದಾರೆ.

ಈ ಸುದ್ದಿಯನ್ನೂ ಓದಿ: Deepika Padukone: ಪ್ರಭಾಸ್ ಜೊತೆ ನಟಿಸಲು‌ ಭಾರಿ ಮೊತ್ತದ ಸಂಭಾವನೆ ಪಡೆದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ

ಮೊದಲ ಬಾರಿ ಒಂದಾಗಲಿದ್ದಾರೆ ಅಲ್ಲು-ದೀಪಿಕಾ

ಈ ಪ್ರಾಜೆಕ್ಟ್‌ ಮೂಲಕ ಅಲ್ಲು ಅರ್ಜುನ್‌ ಮತ್ತು ದೀಪಿಕಾ ಮೊದಲ ಬಾರಿಗೆ ತೆರೆಮೇಲೆ ಒಂದಾಗಲಿದ್ದಾರೆ. ಕಳೆದ ವರ್ಷ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಸೃಷ್ಟಿಸಿದ ʼಪುಷ್ಪ 2ʼ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಅಲ್ಲು ಅರ್ಜುನ್‌ ಸದ್ಯ ಹಲವು ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅವರ ಮುಂದಿನ ಚಿತ್ರ ಈಗಾಗಲೇ ಕುತೂಹಲ ಕೆರಳಿಸಿದ್ದು, ದೀಪಿಕಾ ನಟಿಸುತ್ತಿರುವುದು ಖಚಿತವಾದರೆ ಇಬ್ಬರ ಫ್ಯಾನ್ಸ್‌ ಖುಷಿ ಡಬಲ್‌ ಆಗಲಿದೆ. ಇದುವರೆಗೆ ಮಾಡದ ಪಾತ್ರವನ್ನು ಅಲ್ಲು ಅರ್ಜುನ್‌ ನಿರ್ವಹಿಸಲಿದ್ದಾರೆ. ಮೂಲಗಳ ಪ್ರಕಾರ ಅವರು ಅಲ್ಲು ಅರ್ಜುನ್‌ ತ್ರಿಪ್ರಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

700 ಕೋಟಿ ರೂ. ಬಜೆಟ್‌

ಮೂಲಗಳ ಪ್ರಕಾರ ಈ ಚಿತ್ರ ಬರೋಬ್ಬರಿ 700 ಕೋಟಿ ರೂ. ಬಜೆಟ್‌ನಲ್ಲಿ ಸಿದ್ಧವಾಗಲಿದೆ. ಆ ಮೂಲಕ ಭಾರತದಲ್ಲಿ ತಯಾರಾಗಲಿರುವ ಅತ್ಯಂತ ವೆಚ್ಚದಾಯಕ ಸಿನಿಮಾಗಳಲ್ಲಿ ಇದೂ ಒಂದು ಎನಿಸಿಕೊಳ್ಳಲಿದೆ. ಮೂಲಗಳ ಪ್ರಕಾರ ಮೃಣಾಲ್‌ ಠಾಕೂರ್‌ ಮತ್ತು ಜಾಹ್ನವಿ ಕಪೂರ್‌ ಕೂಡ ಈ ಸಿನಿಮಾದಲ್ಲಿ ನಟಿಸಲಿದ್ದಾರೆ.

ʼಸ್ಪಿರಿಟ್‌ʼನಿಂದ ಹೊರ ಬಂದ ದೀಪಿಕಾ?

ಸುದೀಪ್‌ ರೆಡ್ಡಿ ವಂಗಾ-ಪ್ರಭಾಸ್‌ ಮೊದಲ ಬಾರಿಗೆ ಜತೆಯಾಗುತ್ತಿರುವ ʼಸ್ಪಿರಿಟ್‌ʼ ಚಿತ್ರಕ್ಕೆ ದೀಪಿಕಾ ನಾಯಕಿ ಎನ್ನಲಾಗಿತ್ತು. ಇದಕ್ಕಾಗಿ ಅವರಿಗೆ ಬರೋಬ್ಬರಿ 20 ಕೋಟಿ ರೂ. ಸಂಭಾವನೆ ನೀಡಲಾಗಿತ್ತು ಎನ್ನುವ ಸುದ್ದಿಯೂ ಹಬ್ಬಿತ್ತು. ಆದರೆ ಇದೀಗ ಅವರು ಆ ಚಿತ್ರದಿಂದ ಹೊರಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.