ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸೇರಿದ ಕಿವೀಸ್‌ ವಿಕೆಟ್‌ ಕೀಪರ್‌ ಟಿಮ್‌ ಸೀಫರ್ಟ್‌!

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪ್ಲೇಆಫ್ಸ್‌ ನಿಮಿತ್ತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಜಾಕೋಬ್‌ ಬೆಥೆಲ್‌ ಸ್ಥಾನಕ್ಕೆ ತಾತ್ಕಾಲಿಕವಾಗಿ ನ್ಯೂಜಿಲೆಂಡ್‌ ತಂಡದ ವಿಕೆಟ್‌ ಕೀಪರ್‌ ಟಿಮ್‌ ಸೀಫರ್ಟ್‌ ಅವರನ್ನು ಸೇರಿಸಿಕೊಂಡಿದೆ. ಈ ಬಗ್ಗೆ ಬೆಂಗಳೂರು ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಪ್ರಕಟಿಸಿದೆ.

ಜಾಕೋಬ್‌ ಬೆಥೆಲ್‌ ಸ್ಥಾನಕ್ಕೆ ಆರ್‌ಸಿಬಿ ಸೇರಿದ ಟಿಮ್‌ ಸೀಫರ್ಟ್‌!

ಜಾಕೋಬ್‌ ಬೆಥೆಲ್‌ ಸ್ಥಾನಕ್ಕೆ ಟಿಮ್‌ ಸೀಫರ್ಡ್‌.

Profile Ramesh Kote May 22, 2025 5:42 PM

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025)‌ ಟೂರ್ನಿಯು ನಿರ್ಣಾಯಕ ಹಂತವನ್ನು ತಲುಪಿದೆ. ರಾಯಲ್‌ ಚಾಲೆಂಜರ್ಸ್ ಬೆಂಗಳೂರು(RCB) ಸೇರಿದಂತೆ ನಾಲ್ಕು ತಂಡಗಳು ಈಗಾಗಲೇ ಟೂರ್ನಿಯ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿವೆ. ಇದೀಗ ಆರ್‌ಸಿಬಿ ತಂಡದಲ್ಲಿ ಮಹತ್ತರ ಬದಲಾವಣೆಯೊಂದು ನಡೆದಿದೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಯ ನಿಮಿತ್ತ ಜಾಕೋಬ್‌ ಬೆಥೆಲ್‌ (Jacon Bethell) ಅವರು ಆರ್‌ಸಿಬಿಯನ್ನು ತೊರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಸ್ಥಾನಕ್ಕೆ ನ್ಯೂಜಿಲೆಂಡ್‌ ವಿಕೆಟ್‌ ಕೀಪರ್‌ ಟಿಮ್‌ ಸೀಫರ್ಟ್‌ (Tim Seifert) ಅವರನ್ನು ಬೆಂಗಳೂರು ಫ್ರಾಂಚೈಸಿ ತಾತ್ಕಾಲಿಕವಾಗಿ ಕರೆಸಿಕೊಂಡಿದೆ. ಈ ಬಗ್ಗೆ ಆರ್‌ಸಿಬಿ ತನ್ನ ಅಧೀಕೃತ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಪ್ರಕಟಿಸಿದೆ.

ಆರ್‌ಸಿಬಿಗೆ ಇನ್ನೂ ಎರಡು ಲೀಗ್‌ ಪಂದ್ಯಗಳು ಬಾಕಿಯಿದ್ದು, ಮೇ 23ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕಾದಾಟ ನಡೆಸಲಿದೆ. ಇದಾದ ಬಳಿಕ ಅಂತಿಮ ಲೀಗ್‌ ಪಂದ್ಯಕ್ಕೂ ಮುನ್ನ ಜಾಕೋಬ್‌ ಬೆಥೆಲ್ ಇಂಗ್ಲೆಂಡಿಗೆ ತೆರಳಲಿದ್ದಾರೆ. ಹಾಗಾಗಿ ಇವರ ಸ್ಥಾನದಲ್ಲಿ ಟಿಮ್‌ ಸೀಫರ್ಟ್ ಮೇ 24ರಿಂದ ಆರ್‌ಸಿಬಿಗೆ ಲಭ್ಯವಾಗಲಿದ್ದಾರೆ. ಕಿವೀಸ್‌ ವಿಕೆಟ್‌ ಕೀಪರ್‌ 66 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 133.07ರ ಸ್ಟ್ರೈಕ್ ರೇಟ್‌ನಲ್ಲಿ 5,800ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆರ್‌ಸಿಬಿ ಅವರನ್ನು ರೂ. 2 ಕೋಟಿ ರೂ ಮೂಲ ಬೆಲೆಗೆ ಸಹಿ ಮಾಡಿಸಿಕೊಂಡಿದೆ.

IPL 2025: ಮುಂಬೈಗೆ ಇನ್ನೂ ಇದೆ ಅಗ್ರ 2ರಲ್ಲಿ ಸ್ಥಾನ ಪಡೆಯುವ ಅವಕಾಶ; ಈ ಲೆಕ್ಕಾಚಾರ ಇಲ್ಲಿದೆ

ಜಾಕೋಬ್‌ ಬೆಥೆಲ್‌ ಸ್ಥಾನಕ್ಕೆ ಟಿಮ್‌ ಸೀಫರ್ಟ್‌

ಟಿಮ್‌ ಸೀಫರ್ಟ್‌ ಕೊನೆಯ ಬಾರಿ 2022ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದರು. ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್‌ನ ಕರಾಚಿ ಕಿಂಗ್ಸ್ ತಂಡದಲ್ಲಿ ಅವರು ಆಡುತ್ತಿದ್ದಾರೆ. ಅವರ ತಂಡದ ಮುಂದಿನ ಪಂದ್ಯಗಳ ಪ್ರದರ್ಶನವನ್ನು ನೋಡಿಕೊಂಡು ಆರ್‌ಸಿಬಿ ಕಿವೀಸ್‌ ಆಟಗಾರರನ್ನು ಕರೆಸಿಕೊಳ್ಳಲಿದೆ.

"ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದದ ಪಂದ್ಯದ ಬಳಿಕ ಜಾಕೋಬ್‌ ಬೆಥೆಲ್‌ ಅವರು ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಸ್ಥಾನಕ್ಕೆ ತಾತ್ಕಾಲಿಕವಾಗಿ ನ್ಯೂಜಿಲೆಂಡ್‌ ವಿಕೆಟ್‌ ಕೀಪರ್‌ ಹಾಗೂ ಸ್ಪೋಟಕ ಬ್ಯಾಟ್ಸ್‌ಮನ್‌ ಟಿಮ್‌ ಸೀಫರ್ಟ್‌ಗೆ ಅವಕಾಶ ನೀಡಲಾಗಿದೆ," ಎಂದು ಆರ್‌ಸಿಬಿ ತನ್ನ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಖಚಿತಪಡಿಸಿದೆ.



ಆರ್‌ಸಿಬಿಗೆ ಮುಝರಬಾನಿ ಸೇರ್ಪಡೆ

ಇದು ಆರ್‌ಸಿಬಿ ಪಾಲಿಗೆ ಎರಡನೇ ಬದಲಾವಣೆ ಇದಾಗಿದೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್ಗಿಡಿ ಅವರ ಸ್ಥಾನಕ್ಕೆ ಜಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಜೂನ್ 11 ರಂದು ಆಸ್ಟ್ರೇಲಿಯಾ ವಿರುದ್ಧ ಆರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ ನಿಮಿತ್ತ ಲುಂಗಿ ಎನ್ಗಿಡಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಜಾಕೋಬ್‌ ಬೆಥೆಲ್‌ ಆರ್‌ಸಿಬಿ ಪರ ಎರಡು ಪಂದ್ಯಗಳನ್ನು ಆಡಿದ್ದರು. ಇದರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಅವರು 55 ರನ್‌ಗಳ ಮಹತ್ವದ ಇನಿಂಗ್ಸ್‌ ಅನ್ನು ಆಡಿದ್ದರು. ಆದರೆ, ವೆಸ್ಟ್‌ ಇಂಡೀಸ್‌ ವಿರುದ್ದದ ಏಕದಿನ ಸರಣಿಯ ನಿಮಿತ್ತ ಬೆಥೆಲ್‌ ಇಂಗ್ಲೆಂಡ್‌ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.

IPL 2025: ʼನಮಗೆ ಅನ್ಯಾಯವಾಗಿದೆʼ- ನಿಯಮ ಬದಲಿಸಿದ ಬಿಸಿಸಿಐ ವಿರುದ್ಧ ತಿರುಗಿಬಿದ್ದ ಕೆಕೆಆರ್‌ ಸಿಇಒ!

ಜಾಶ್‌ ಹೇಝಲ್‌ವುಡ್‌ ಅನುಮಾನ

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಭುಜದ ನೋವಿಗೆ ತುತ್ತಾಗಿದ್ದ ಜಾಶ್‌ ಹೇಝಲ್‌ವುಡ್‌, ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಇದಾದ ಬಳಿಕ ಭಾರತ-ಪಾಕ್ ಯುದ್ಧ ಭೀತಿ ಹಿನ್ನಲೆಯಲ್ಲಿ ತವರಿಗೆ ಮರಳಿದ್ದ ಆಸೀಸ್‌ ವೇಗಿ ಐಪಿಎಲ್‌ ಪುನರಾರಂಭವಾದರೂ ಆರ್‌ಸಿಬಿಗೆ ಸೇರ್ಪಡೆಯಾಗಿಲ್ಲ. ಭುಜದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಅವರು, ಸಂಪೂರ್ಣ ಫಿಟ್‌ನೆಸ್‌ ಸಾಧಿಸಲು ಬ್ರಿಸ್ಬೇನ್‌ನ ಕ್ರಿಕೆಟ್ ಆಸ್ಟ್ರೇಲಿಯಾ ಹೈ-ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ. ಅವರು ಭಾರತಕ್ಕೆ ಮರಳುವ ಬಗ್ಗೆ ಇನ್ನೂ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ.