Delhi Government: ಕೊನೆಗೂ ಜನಾಕ್ರೋಶಕ್ಕೆ ಮಣಿದ ದಿಲ್ಲಿ ಸರ್ಕಾರ; 'ಜೀವಿತಾವಧಿʼ ಮುಗಿದ ವಾಹನಗಳಿಗೆ ಇಂಧನವಿಲ್ಲ ಆದೇಶಕ್ಕೆ ತಡೆ
ಜು. 1ರಂದು ದಿಲ್ಲಿಯಲ್ಲಿ ಜಾರಿಗೆ ಬಂದ 'ಜೀವಿತಾವಧಿʼ ಮುಗಿದ ವಾಹನಗಳಿಗೆ ಇಂಧನ ನಿಷೇಧ ಆದೇಶವನ್ನು ತಡೆ ಹಿಡಿಯಲಾಗಿದೆ. ಈ ಬಗ್ಗೆ ಪರಿಸರ ಖಾತೆ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಮಾಹಿತಿ ನೀಡಿ, ʼʼತಾಂತ್ರಿಕ ಸವಾಲುಗಳು ಮತ್ತು ಸಂಕೀರ್ಣ ವ್ಯವಸ್ಥೆಗಳಿಂದಾಗಿ ಇಂಧನ ನಿಷೇಧ ನಿಯಮವನ್ನು ಜಾರಿಗೊಳಿಸುವುದು ಕಷ್ಟವಾಗುತ್ತಿದೆʼʼ ಎಂದು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಜನಾಕ್ರೋಶಕ್ಕೆ ತುತ್ತಾದ ದಿಲ್ಲಿ ಸರ್ಕಾರ (Delhi Government) ಕೊನೆಗೂ 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳಿಗೆ, 15 ವರ್ಷಕ್ಕೂ ಹಳೆಯ ಪೆಟ್ರೋಲ್ ವಾಹನಗಳಿಗೆ ಇಂಧನ ತುಂಬುವುದನ್ನು ನಿಷೇಧಿಸಿರುವ ವಿವಾದತ್ಮಕ ಆದೇಶವನ್ನು ಗುರುವಾರ (ಜು. 3) ತಡೆಹಿಡಿದಿದೆ. 15 ವರ್ಷಕ್ಕೂ ಹಳೆಯ ಪೆಟ್ರೋಲ್ ವಾಹನಗಳು ಮತ್ತು 10ಕ್ಕೂ ವರ್ಷಕ್ಕೂ ಹಳೆಯ ಡೀಸೆಲ್ ವಾಹನಗಳನ್ನು 'ಜೀವಿತಾವಧಿʼ ಮುಗಿದವುಗಳು ಎಂದು ಪರಿಗಣಿಸಿ ಅವುಗಳಿಗೆ ಇಂಧನ ಪೂರೈಕೆ ನಿಷೇಧಿಸಲಾಗಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದಿಲ್ಲಿ ಸರ್ಕಾರ ಇದೀಗ ತನ್ನ ಆದೇಶವನ್ನು ಹಿಂಪಡೆದುಕೊಂಡಿದೆ.
ʼʼತಾಂತ್ರಿಕ ಸವಾಲುಗಳು ಮತ್ತು ಸಂಕೀರ್ಣ ವ್ಯವಸ್ಥೆಗಳಿಂದಾಗಿ ಇಂಧನ ನಿಷೇಧ ನಿಯಮವನ್ನು ಜಾರಿಗೊಳಿಸುವುದು ಕಷ್ಟವಾಗುತ್ತಿದೆʼʼ ಎಂದು ಪರಿಸರ ಖಾತೆ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ (Manjinder Singh Sirsa) ಸುದ್ದಿಗಾರರಿಗೆ ತಿಳಿಸಿದರು. ಕಳಪೆ ನಿರ್ವಹಣೆಯ ವಾಹನಗಳನ್ನು ವಶಪಡಿಸಿಕೊಳ್ಳುವ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.
'ಜೀವಿತಾವಧಿ ಮುಗಿದʼ (EoL) ನೀತಿಯ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ಈ ಬೆಳವಣಿಗೆ ಕಂಡುಬಂದಿದೆ. ಜು. 1ರಿಂದ ಜಾರಿಗೆ ಬಂದ ವಾಯು ಗುಣಮಟ್ಟ ನಿರ್ವಹಣಾ ಆಯೋಗದ ಈ ಆದೇಶವು, ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯವನ್ನು ತಡೆಯುವ ಉದ್ದೇಶವನ್ನು ಹೊಂದಿತ್ತು. ದಿಲ್ಲಿಯಲ್ಲಿ ವಾಯು ಗುಣಮಟ್ಟ ತೀರಾ ಕಳಪೆಯಾಗಿದೆ. ಇಲ್ಲಿನ ಮಾಲಿನ್ಯಕ್ಕೆ ವಾಹನಗಳು ಪ್ರಮುಖ ಕಾರಣವಾಗುತ್ತಿವೆ ಎಂಬ ವರದಿಯ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿತ್ತು.
Delhi Environment Minister Manjinder Singh Sirsa writes to the Commission for Air Quality Management to place on hold the enforcement of Direction No. 89, which mandates the denial of fuel to End-of-Life (EOL) vehicles in Delhi
— ANI (@ANI) July 3, 2025
"We urge the Commission to put the implementation… pic.twitter.com/mgg1Ymdaes
ಈ ಸುದ್ದಿಯನ್ನೂ ಓದಿ: Patanjali: ಬಾಬಾ ರಾಮ್‌ದೇವ್‌ಗೆ ಹಿನ್ನಡೆ; ಪತಂಜಲಿ ಸಂಸ್ಥೆ ಕುರಿತು ದೆಹಲಿ ಹೈಕೋರ್ಟ್ ಮಹತ್ವದ ಆದೇಶ
ʼʼವಾಹನಗಳ ಹೊರಸೂಸುವಿಕೆಯನ್ನು (ಇಂಗಾಲ ಡೈ ಆಕ್ಸೈಡ್) ಕಡಿಮೆ ಮಾಡುವ ವಿಶಾಲ ಕಾರ್ಯತಂತ್ರದ ಭಾಗ ಇದಾಗಿದ್ದು, ನಿಯಮವನ್ನು ಜಾರಿಗೊಳಿಸಲು ಇಂಧನ ಕೇಂದ್ರಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ANPR) ಕ್ಯಾಮೆರಾಗಳನ್ನು ಅಳವಡಿಸಲಾಗುವುದುʼʼ ಎಂದು ಈ ಹಿಂದೆ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದರು.
ಕೊನೆಗೆ ಜು. 1ರಂದು ‘ಜೀವಿತಾವಧಿ ಮುಗಿದ ವಾಹನಗಳಿಗೆ ಇಂಧನವಿಲ್ಲ’ ನಿಯಮವನ್ನು ಜಾರಿಗೆ ತರಲಾಯಿತು. ಈ ವೇಳೆ ದಿಲ್ಲಿಯ 520 ಇಂಧನ ಕೇಂದ್ರಗಳ ಪೈಕಿ ಸುಮಾರು 500 ಕೇಂದ್ರಗಳಲ್ಲಿ ಎಎನ್‌ಪಿಆರ್ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಸಾರಿಗೆ ಇಲಾಖೆ, ದಿಲ್ಲಿ ಪೊಲೀಸ್, ಸಂಚಾರ ಪೊಲೀಸ್ ಮತ್ತು ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಒಳಗೊಂಡ ವಿವರವಾದ ನಿಯಮ ಜಾರಿ ಕಾರ್ಯತಂತ್ರವು ಸಿದ್ಧವಾಗಿದೆ ಎಂದು ಸರ್ಕಾರ ಹೇಳಿತ್ತು.
ಯುಟರ್ನ್ ಹೊಡೆದ ಸರ್ಕಾರ
ಗುರುವಾರ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಮಂಜಿಂದರ್ ಸಿಂಗ್ ಸಿರ್ಸಾ, ʼʼಈ ನಿಯಮ ಜಾರಿಗೊಳಿಸಲು ಅನೇಕ ಸವಾಲುಗಳಿವೆ. ತಾಂತ್ರಿಕ ದೋಷಗಳು, ಸರಿಯಾಗಿ ಕಾರ್ಯ ನಿರ್ವಹಿಸದ ಸೆನ್ಸಾರ್, ಸ್ಪೀಕರ್ ಇತ್ಯಾದಿ ಬಹುದೊಡ್ಡ ಸವಾಲುಗಳುʼʼ ಎಂದು ಅವರು ಕಾರಣ ವಿವರಿಸಿದರು.
ಈಗಾಗಲೇ 2026ರ ಆ. 15ರಿಂದ ದಿಲ್ಲಿಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ದ್ವಿಚಕ್ರ ವಾಹನಗಳ ಹೊಸ ನೋಂದಣಿಗಳನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ. ಆ ಮೂಲಕ ಎಕ್ಟ್ರಿಕಲ್ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಮುಂದಾಗಿದೆ.