PES University: ರಾಷ್ಟ್ರ ಮಟ್ಟದ ಸ್ಥಿರ-ವಿಂಗ್ ಡ್ರೋನ್ ಸ್ಪರ್ಧೆ: ಪಿಇಎಸ್ ವಿವಿಯ ತಂಡಕ್ಕೆ 2ನೇ ಸ್ಥಾನ
ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಥಿರ-ವಿಂಗ್ ಡ್ರೋನ್ ಸ್ಪರ್ಧೆಯಲ್ಲಿ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎರಡನೇ ಸ್ಥಾನ ಪಡೆದಿದ್ದಾರೆ. ತಂಡವು ಈ ಸಾಧನೆಗಾಗಿ 45,000 ರೂ.ಗಳ ಬಹುಮಾನ ಪಡೆಯಿತು. ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಜವಾಹರ್ ದೊರೆಸ್ವಾಮಿ, ಕುಲಪತಿ ಪ್ರೊ. ಜೆ. ಸೂರ್ಯಪ್ರಸಾದ್ ಅವರು ತಂಡವನ್ನು ಅಭಿನಂದಿಸಿದ್ದಾರೆ.


ಬೆಂಗಳೂರು: ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಥಿರ-ವಿಂಗ್ ಡ್ರೋನ್ ಸ್ಪರ್ಧೆಯಲ್ಲಿ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ (PES University) ವಿದ್ಯಾರ್ಥಿಗಳು ಎರಡನೇ ಸ್ಥಾನ ಪಡೆದಿದ್ದಾರೆ. ಪಿಇಎಸ್ ವಿಶ್ವವಿದ್ಯಾಲಯ ತಂಡ ಏವಿಯನ್ಸ್, ಎಸ್.ಎ.ಇ.ಐ.ಎಸ್.ಎಸ್. (SAEISS) ಡ್ರೋನ್ ಅಭಿವೃದ್ಧಿ ಸವಾಲಿನಲ್ಲಿ ಒಟ್ಟಾರೆ ಕಾರ್ಯಕ್ಷಮತೆ ಯಲ್ಲಿ 2ನೇ ಸ್ಥಾನವನ್ನು ಗಳಿಸಿತು. ತಂಡವು ಈ ಸಾಧನೆಗಾಗಿ 45,000 ರೂ.ಗಳ ಬಹುಮಾನ ಪಡೆಯಿತು.
ತಂಡವು ವಿವಿಧ CAD ಪರಿಕರಗಳನ್ನು ಬಳಸಿಕೊಂಡು ವಿನ್ಯಾಸಗೊಳಿಸುವ ಮೂಲಕ ಪ್ರಾರಂಭಿಸಿತು. ನಂತರ ವಾಯುಬಲ, ವೈಜ್ಞಾನಿಕ ದಕ್ಷತೆ ಮತ್ತು ರಚನಾತ್ಮಕ ಸ್ಥಿರತೆಗಾಗಿ ಅತ್ಯುತ್ತಮವಾಗಿಸಲು ವಿವರವಾದ ಕಂಪ್ಯೂಟೇಶನಲ್ ಫ್ಲೂಯಿಡ್ ಡೈನಾಮಿಕ್ಸ್ (CFD) ವಿಶ್ಲೇಷಣೆಯನ್ನು ನಡೆಸಲಾಯಿತು. ವಿನ್ಯಾಸವು ಎಲ್ಲಾ ಕಾರ್ಯಕ್ಷಮತೆ ಮತ್ತು ಸ್ಪರ್ಧೆಯ ಮಾನದಂಡಗಳನ್ನು ಪೂರೈಸಿದ ನಂತರ ತಂಡವು ಬಾಲ್ಸಾ, ಬರ್ಚ್ ಮರದಂತಹ ವಿವಿಧ ಹಗುರವಾದ ಮರವನ್ನು ಬಳಸಿಕೊಂಡು ಅಂತಿಮ ಮಾದರಿಯನ್ನು ನಿರ್ಮಿಸಿತು. ಪರಿಣಾಮವಾಗಿ ಡ್ರೋನ್ 1 ಕೆಜಿಯ ತೂಕವನ್ನು ಹೊಂದಿತ್ತು ಮತ್ತು 1.3 ಕೆಜಿಯ ಪೇಲೋಡ್ ಅನ್ನು ಯಶಸ್ವಿಯಾಗಿ ಸಾಗಿಸಿತು.
ಅಧ್ಯಾಪಕ ಸಲಹೆಗಾರ ಡಾ.ಎಸ್.ವಿ. ಸತೀಶ್ ಅವರ ಮಾರ್ಗದರ್ಶನದಲ್ಲಿ ತಂಡವು ಗುರ‍್ರಾಮ್ ಶ್ರೇಯಾ (ತಂಡದ ನಾಯಕ), ಬಿ.ಎಸ್. ಅನುರಾಗ್ ರಾವ್, ಗೀತೇಶ್ ನಾಯ್ಡು, ಶುಭಂಗಿ ಶ್ರೀವಾಸ್ತವ, ಉದಯ್ ಗೋಪನ್, ಆದರ್ಶ್ ಡಿ, ಜಾನ್ಹವಿ ಅಶ್ವಿನ್ ಖೇರ್, ಆಂಡೆ ಹೇಮಂತ್, ಉದಿತಿ ಮೌರ್ಯಂದ್, ಹೇಮಾಕ್ಷ ಬ್ರೇಜಾ ಅವರ ಪರಿಶ್ರಮದಿಂದ ಯೋಜನೆಯು ರೂಪಗೊಂಡಿತ್ತು.
ಈ ಸುದ್ದಿಯನ್ನೂ ಓದಿ | BOB Recruitment 2025: 10ನೇ ತರಗತಿ ಪಾಸಾದವರಿಗೆ ಬಂಪರ್ ಚಾನ್ಸ್; ಬ್ಯಾಂಕ್ ಆಫ್ ಬರೋಡಾದಲ್ಲಿದೆ ಬರೋಬ್ಬರಿ 500 ಹುದ್ದೆ
ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಜವಾಹರ್ ದೊರೆಸ್ವಾಮಿ, ಕುಲಪತಿ ಪ್ರೊ. ಜೆ. ಸೂರ್ಯಪ್ರಸಾದ್ ಅವರು ತಂಡವನ್ನು ಅಭಿನಂದಿಸಿದ್ದಾರೆ.