Booker Prize 2025: ಬೂಕರ್ ಪ್ರಶಸ್ತಿ ಪುರಸ್ಕೃತೆ ಲೇಖಕಿ ಬಾನು ಮುಷ್ತಾಕ್‌ಗೆ ಕೆ.ವಿ.ಪ್ರಭಾಕರ್ ಅಭಿನಂದನೆ
Booker Prize 2025: ಬೂಕರ್ ಪ್ರಶಸ್ತಿ ವೇದಿಕೆಯಲ್ಲಿ ಕನ್ನಡದ ಸಾಹಿತ್ಯದ ಹಿರಿಮೆಯನ್ನು ಎತ್ತಿ ಹಿಡಿದ ಲೇಖಕಿ, ಪತ್ರಕರ್ತೆ, ಕತೆಗಾರ್ತಿ ಬಾನು ಮುಷ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿರುವುದು ಅವರ ಕತೆಗಳಲ್ಲಿ ಬೆಸೆದಿರುವ ಭಾರತೀಯತೆಯ ಬೆಸುಗೆಗೆ ಸಿಕ್ಕಿರುವ ಅಂತಾರಾಷ್ಟ್ರೀಯ ಮನ್ನಣೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಸಂತಸ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು: ಬೂಕರ್ ವೇದಿಕೆಯಲ್ಲಿ ಕನ್ನಡದ ಸಾಹಿತ್ಯದ ಹಿರಿಮೆಯನ್ನು ಎತ್ತಿ ಹಿಡಿದ ಲೇಖಕಿ, ಪತ್ರಕರ್ತೆ, ಕತೆಗಾರ್ತಿ ಬಾನು ಮುಷ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ (Booker Prize 2025) ಲಭಿಸಿರುವುದು ಅವರ ಕತೆಗಳಲ್ಲಿ ಬೆಸೆದಿರುವ ಭಾರತೀಯತೆಯ ಬೆಸುಗೆಗೆ ಸಿಕ್ಕಿರುವ ಅಂತಾರಾಷ್ಟ್ರೀಯ ಮನ್ನಣೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಲೇಖನ, ಭಾಷಣ ಮತ್ತು ಕತೆಗಳಲ್ಲಿ ನಮ್ಮ ನೆಲದ ಮೂಲ ಸತ್ವ ಮತ್ತು ಮೂಲ ತತ್ವ ಆಗಿರುವ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಮೌಲ್ಯವನ್ನು ಮತ್ತು ಜಾತ್ಯತೀತತೆಯನ್ನು ಬೆಸೆಯುವ ಕಾರ್ಯ ಮಾಡುತ್ತಲೇ ಬರುತ್ತಿದ್ದಾರೆ. ಇವರಿಗೆ ಬೂಕರ್ ಪ್ರಶಸ್ತಿ ಬಂದಿರುವುದು ಕನ್ನಡ ಸಾಹಿತ್ಯ ಮತ್ತು ಕನ್ನಡತನದ ಹಿರಿಮೆಯನ್ನು ಹೆಚ್ಚಿಸಿದ್ದು, ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡಬೇಕಾದ ಸಂದರ್ಭ ಇದಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Booker Prize 2025: ಬಾನು ಮುಷ್ತಾಕ್‌ಗೆ ಬೂಕರ್ ಪ್ರಶಸ್ತಿ; ಸಿಎಂ ಸಿದ್ದರಾಮಯ್ಯ ಅಭಿನಂದನೆ
ವಿಶ್ವ ಮಾನವತೆಯ ಸದಾಶಯವನ್ನು ಎತ್ತಿ ಹಿಡಿಯುವ ಭಾನು ಮುಷ್ತಾಕ್ ಅವರ ಕತೆಗಳು, ವಿಶ್ವದ ಎಲ್ಲಾ ಭಾಷೆಗಳಿಗೂ ಅನುವಾದಗೊಳ್ಳಬೇಕು ಎನ್ನುವುದು ನನ್ನ ಆಶಯ. ಭಾನು ಮುಷ್ತಾಕ್ ಅವರ ಹಸೀನಾ ಮತ್ತು ಇತರ ಕೃತಿಗಳು ನನಗೆ ಬಹಳ ಇಷ್ಟವಾದ ಸಂಕಲನ. ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸುತ್ತೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ.
ʼಹಾರ್ಟ್ ಲ್ಯಾಂಪ್ʼ ಕೃತಿಗೆ ಬೂಕರ್ ಪ್ರಶಸ್ತಿ
ಕನ್ನಡದ ಸಾಹಿತಿ ಬಾನು ಮುಷ್ತಾಕ್ (Banu mushtaq) ಅವರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ (booker prize 2025) ಲಭಿಸಿದೆ. ಇದೇ ಮೊದಲ ಬಾರಿಗೆ ಕನ್ನಡತಿಯೊಬ್ಬರಿಗೆ ಈ ಪ್ರಶಸ್ತಿ ದೊರೆಯುತ್ತಿದೆ. ಈ ಮೂಲಕ ಕನ್ನಡ ಸಾಹಿತ್ಯಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಬಾನು ಮುಷ್ತಾಕ್ ಅವರ ಕನ್ನಡದ ಕತೆಗಳ ಅನುವಾದ ʼಹಾರ್ಟ್ ಲ್ಯಾಂಪ್ʼ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಈ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಬೂಕರ್ ಪ್ರಶಸ್ತಿ 57.48 ಲಕ್ಷ ರೂ. ನಗದನ್ನು ಒಳಗೊಂಡಿದೆ.
ಮೇ 21ರಂದು ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಈ ಕುರಿತ ಅಧಿಕೃತ ಘೋಷಣೆ ಹೊರಬಿದ್ದಿದೆ. ವಿಜೇತರಿಗೆ 50,000 ಪೌಂಡ್ ಬಹುಮಾನ ಅಂದರೆ, 57.48 ಸಿಗಲಿದೆ. ಇದನ್ನು ಲೇಖಕರು ಹಾಗೂ ಅನುವಾದಕರ ನಡುವೆ ಹಂಚಲಾಗುತ್ತದೆ. ಶಾರ್ಟ್ ಲಿಸ್ಟ್‌ನಲ್ಲಿ ಆಯ್ಕೆಯಾಗಿದ್ದ ಎಲ್ಲರನ್ನೂ ಲಂಡನ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಮೇ 2024 ಮತ್ತು ಏಪ್ರಿಲ್ 2025 ರ ನಡುವೆ UK ಮತ್ತು ಐರ್ಲೆಂಡ್‌ನಲ್ಲಿ ಪ್ರಕಟವಾದ ಇಂಗ್ಲಿಷ್‌ಗೆ ಅನುವಾದಿಸಲಾದ ಅತ್ಯುತ್ತಮ ಕಾದಂಬರಿ ಅಥವಾ ಸಣ್ಣ ಕಥೆಗಳ ಸಂಗ್ರಹಕ್ಕೆ ಈ ವಾರ್ಷಿಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ಬಾನು ಮುಷ್ತಾಕ್ ಅವರು ತಮ್ಮ ಅನುವಾದಕಿ ದೀಪಾ ಭಸ್ತಿ ಅವರೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು.
ಬಾನು ಮುಷ್ತಾಕ್ ಅವರ ಈ ಸಾಧನೆಗೆ ಕನ್ನಡದ ಬರಹಗಾರರು ಹರ್ಷ ವ್ಯಕ್ತಪಡಿಸಿದ್ದಾರೆ. ಇದು ಕನ್ನಡ ಸಾಹಿತ್ಯಕ್ಕೆ ಸಂದ ಗೌರವ ಎಂದು ಬಣ್ಣಿಸಿದ್ದಾರೆ. ಈ ಪ್ರಶಸ್ತಿಯು ಕನ್ನಡ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸಲು ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಹಾಸನ ಪಟ್ಟಣದಲ್ಲಿ 1948ರಲ್ಲಿ ಜನಿಸಿದ ಮುಷ್ತಾಕ್, ಅವಿಭಕ್ತ ಮುಸ್ಲಿಂ ಕುಟುಂಬದಲ್ಲಿ ಬೆಳೆದವರು. ಆರಂಭದಲ್ಲಿ ಉರ್ದು ಮಾಧ್ಯಮ ಶಾಲೆ ನಂತರ ಎಂಟನೇ ವಯಸ್ಸಿನಲ್ಲಿ ಕನ್ನಡ ಶಾಲೆಯಲ್ಲಿ ಕಲಿತವರು. ಹಿಂದಿನ ಮೈಸೂರು ರಾಜ್ಯದಲ್ಲಿ ಸರ್ಕಾರಿ ಆರೋಗ್ಯ ನಿರೀಕ್ಷಕರಾಗಿದ್ದ ಅವರ ತಂದೆ, ಅವರ ಸೂಕ್ಷ್ಮ ಆರ್ಥಿಕ ಪರಿಸ್ಥಿತಿಯ ಹೊರತಾಗಿಯೂ, ಬಾನು ಅವರ ಬರವಣಿಗೆಯನ್ನು ಪ್ರೋತ್ಸಾಹಿಸಿದರು. ಅವರಿಗಾಗಿ ಕನ್ನಡ ಪುಸ್ತಕಗಳನ್ನು ಖರೀದಿಸಿದರು. ಶಾಲೆಯಲ್ಲಿದ್ದಾಗ ಅವರ ಬರವಣಿಗೆ ಪ್ರಾರಂಭವಾಯಿತು. ಅವರು 26 ನೇ ವಯಸ್ಸಿನಲ್ಲಿ ಮದುವೆಯಾದ ನಂತರ, ಅವರ ಮೊದಲ ಸಣ್ಣ ಕಥೆ ಜನಪ್ರಿಯ ಕನ್ನಡ ನಿಯತಕಾಲಿಕೆ ಪ್ರಜಾಮತದಲ್ಲಿ ಪ್ರಕಟವಾಯಿತು. ಸಂದರ್ಶನಗಳಲ್ಲಿ ಬಾನು ತಮ್ಮ ತಂದೆಯ ಅಳಿಸಲಾಗದ ಪ್ರಭಾವ, ಅವರ ಶಾಲೆಯ ಸರ್ವಾಧಿಕಾರಿ ವಾತಾವರಣದ ವಿರುದ್ಧದ ಹೋರಾಟದಲ್ಲಿ ಅವರ ನಿರಂತರ ಬೆಂಬಲದ ಬಗ್ಗೆ ಮಾತನಾಡಿದ್ದಾರೆ.
2022 ರಲ್ಲಿ, ಗೀತಾಂಜಲಿ ಶ್ರೀ ಮತ್ತು ಅನುವಾದಕಿ ಡೈಸಿ ರಾಕ್‌ವೆಲ್ ಅವರು ಮೊದಲ ಹಿಂದಿ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ಗಾಗಿ ಪ್ರಶಸ್ತಿಯನ್ನು ಗೆದ್ದರು. 2023 ರಲ್ಲಿ ಪೆರುಮಾಳ್ ಮುರುಗನ್ ಅವರ ತಮಿಳು ಕಾದಂಬರಿ ‘ಪೈರ್’ ಅನ್ನು ಅನುವಾದಕ ಅನಿರುದ್ಧನ್ ವಾಸುದೇವನ್ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದರು. ಈ ಕೃತಿಯು ದೀರ್ಘ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.