ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

M J Akbar Column: ಇದೆಂಥ ವಿಚಿತ್ರ ನೋಡಿ, ಸ್ವರ್ಗ ಕೂಡ ಸಾಲದು ಎಂಬ ಸನ್ನಿವೇಶ ಬಂದರೆ !

ಭಾರತ ಮತ್ತು ಪಾಕಿಸ್ತಾನದ ನಡುವಿನ ನಿರಂತರ ಸಂಘರ್ಷದಲ್ಲಿ ಮೂರು ಮಹತ್ವದ ಹಂತಗಳಿವೆ. ಅವು ಕಳೆದ ಎಪ್ಪತ್ತೈದಕ್ಕೂ ಹೆಚ್ಚು ವರ್ಷಗಳಿಂದ ಗಡಿ ಸಂಘರ್ಷದ ರೂಪದಲ್ಲಿ ಲಾವಾ ಉಗುಳಿ ಉಗುಳಿ ಗಟ್ಟಿಯಾಗಿವೆ. ಮೊದಲ ಹಂತವೆಂದರೆ 1947ರ ಅಕ್ಟೋಬರ್ 22ರಂದು ಕಾಶ್ಮೀರದ ಮೇಲೆ ಭಯೋತ್ಪಾದಕರ ಮೂಲಕ ಪಾಕಿಸ್ತಾನ ನಡೆಸಿದ ಅಮಾನುಷ ದಾಳಿ. ಅದು 1948ರ ಜನವರಿ 1ರಂದು ಕದನವಿರಾಮದೊಂದಿಗೆ ಮೇಲ್ನೋಟಕ್ಕೆ ಅಂತ್ಯಗೊಂಡಿತು.

ಇದೆಂಥ ವಿಚಿತ್ರ ನೋಡಿ, ಸ್ವರ್ಗ ಕೂಡ ಸಾಲದು ಎಂಬ ಸನ್ನಿವೇಶ ಬಂದರೆ !

Profile Ashok Nayak May 21, 2025 8:35 AM

ಅಕ್ಬರ್‌ ನಾಮಾ

ಎಂ.ಕೆ.ಅಕ್ಬರ್

ಕಳೆದ ಅರ್ಧ ಶತಮಾನದಿಂದ ಇತಿಹಾಸದ ಮೆಟ್ಟಿಲುಗಳ ಮೇಲೆ ಕುಳಿತಿರುವ ಕೆಲ ಉತ್ತರವಿಲ್ಲದ ಪ್ರಶ್ನೆಗಳನ್ನು ಗಮನಿಸಿದರೆ ಇಂದಿನ ಪಾಕಿಸ್ತಾನದ ಜಗಮೊಂಡತನ ಮತ್ತು ಆ ದೇಶದೊಳಗಿನ ಅಸ್ಥಿರ ಅವ್ಯವಸ್ಥೆಗಳಿಗೆ ಏನು ಕಾರಣ ಎಂಬುದರ ಬಗ್ಗೆ ಒಂದಷ್ಟು ಸುಳಿವುಗಳು ಸಿಗಬಹುದು. ಯಾವುದೇ ವ್ಯವಸ್ಥೆಯನ್ನು ಮೌಲ್ಯಮಾಪನ ಮಾಡಲು 50 ವರ್ಷಗಳ ಹಿಮ್ಮುಖ ಪ್ರಯಾಣ ಬೇಕಾದಷ್ಟಾಯಿತು. 1947ರ ಅಕ್ಟೋಬರ್‌ನಲ್ಲಿ ಪಾಕಿಸ್ತಾನವೇ ಆರಂಭಿಸಿದ ಹಾಗೂ 2047ರವರೆಗೂ ಮುಂದುವರಿಯ ಬಹುದಾದ ಯುದ್ಧದ ಸಂದಿಗ್ಧ ಸಂಕೀರ್ಣ ಬೆಳವಣಿಗೆಗಳ ಭಾವನಾತ್ಮಕ ಅಸ್ಥಿರ ಚಿತ್ರಣದ ಹೊರತಾಗಿಯೂ ಒಂದೈವತ್ತು ವರ್ಷಗಳ ಇತಿಹಾಸವನ್ನು ಮೆಲುಕು ಹಾಕಿದರೆ ಪಾಕಿಸ್ತಾನದ ಹಣೆಬರಹದ ಮೌಲ್ಯಮಾಪನವನ್ನು ಸುಲಭವಾಗಿ ಮಾಡಬಹುದೆಂದೇ ನನ್ನ ಭಾವನೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ನಿರಂತರ ಸಂಘರ್ಷದಲ್ಲಿ ಮೂರು ಮಹತ್ವದ ಹಂತಗಳಿವೆ. ಅವು ಕಳೆದ ಎಪ್ಪತ್ತೈದಕ್ಕೂ ಹೆಚ್ಚು ವರ್ಷಗಳಿಂದ ಗಡಿ ಸಂಘರ್ಷದ ರೂಪದಲ್ಲಿ ಲಾವಾ ಉಗುಳಿ ಉಗುಳಿ ಗಟ್ಟಿಯಾಗಿವೆ. ಮೊದಲ ಹಂತವೆಂದರೆ 1947ರ ಅಕ್ಟೋಬರ್ 22ರಂದು ಕಾಶ್ಮೀರದ ಮೇಲೆ
ಭಯೋತ್ಪಾದಕರ ಮೂಲಕ ಪಾಕಿಸ್ತಾನ ನಡೆಸಿದ ಅಮಾನುಷ ದಾಳಿ.

ಅದು 1948ರ ಜನವರಿ 1ರಂದು ಕದನವಿರಾಮದೊಂದಿಗೆ ಮೇಲ್ನೋಟಕ್ಕೆ ಅಂತ್ಯಗೊಂಡಿತು. ಆದರೆ ಇವತ್ತಿಗೂ ಅದು ಮತ್ತೆ ಮತ್ತೆ ಹುಟ್ಟಿಬರುತ್ತಿರುವ ರಕ್ತಬೀಜಾಸುರರಂಥ ಭಯೋತ್ಪಾದಕರ ಮೂಲಕ 1947ರ ಅಕ್ಟೋಬರ್‌ನಲ್ಲಿದ್ದಷ್ಟೇ ಚೈತನ್ಯಶೀಲವಾಗಿದೆ, ಜೀವಂತವಾಗಿದೆ. 1965ರ ಶರತ್ಕಾಲದಲ್ಲಿ ಕಾಶ್ಮೀರವನ್ನು ಕಬಳಿಸಲು ಪಾಕಿಸ್ತಾನ ಎರಡನೇ ಯುದ್ಧ ನಡೆಸಿತು. ‌

ಇದನ್ನೂ ಓದಿ: ‌M J Akbar Column: ಪಾಕಿಸ್ತಾನದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಡಾ.ಸ್ಟ್ರೇಂಜ್‌ ಲವ್ !

ಅದು ನಾಟಕೀಯವಾಗಿ ಅಂತ್ಯಗೊಂಡಿತು. ಅಲ್ಲದೆ, ಆ ದೇಶದ ಮೊದಲ ಮಿಲಿಟರಿ ಸರ್ವಾಧಿಕಾರಿ ಅಯೂಬ್ ಖಾನ್‌ನ ರಾಜಕೀಯ ವೃತ್ತಿಜೀವನವನ್ನೂ ಅಂತ್ಯಗೊಳಿಸಿತು. ಆತ ತನಗೆ ತಾನೇ ಜನರಲ್ ಹುದ್ದೆಯಿಂದ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ಕೊಟ್ಟುಕೊಂಡಿದ್ದ. ಬಹುಶಃ ಭಾರತದ ವಿರುದ್ಧ ಮಿಲಿಟರಿ ದಾಳಿಯಲ್ಲಿ ಗೆದ್ದೇಬಿಡುತ್ತೇನೆಂಬ ಭ್ರಮೆಯಿಂದ ಹಾಗೆ ಮಾಡಿದ್ದಿರಬಹುದು.

ಆದರೆ, ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರೀಯವರು ಭಾರತೀಯ ಸೇನೆಗೆ ಅಂತಾರಾಷ್ಟ್ರೀಯ ಗಡಿ ದಾಟಿ ಲಾಹೋರ್‌ಗೇ ನುಗ್ಗುವಂತೆ ಆದೇಶಿಸಿದಾಗ ಆತನಿಗೆ ಭಾರತದ ತಾಕತ್ತೇನು ಎಂಬುದರ ಆಳ ವಾದ ಪರಿಚಯವಾಗಿತ್ತು. ಆನಂತರ ಪಾಕಿಸ್ತಾನ ಯಾವತ್ತೂ ಸಾಂಪ್ರದಾಯಿಕ ಯುದ್ಧದ ಮೂಲಕ ಕಾಶ್ಮೀರವನ್ನು ಪಡೆದುಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಲಿಲ್ಲ.

1971ರ ಯುದ್ಧ ಮಾರ್ಚ್‌ನಲ್ಲಿ ಅಂದಿನ ಪೂರ್ವ ಪಾಕಿಸ್ತಾನದಲ್ಲಿ ಬಂಗಾಳಿಗಳ ಭೀಕರ ಮಾರಣ ಹೋಮದೊಂದಿಗೆ ಆರಂಭವಾಯಿತು. ಪೂರ್ವ ಪಾಕಿಸ್ತಾನಿಗಳು ತಮ್ಮ ಭಾಷೆ ಮತ್ತು ಸಂಸ್ಕೃತಿ ಯನ್ನು ತ್ಯಾಗ ಮಾಡಲು ಒಪ್ಪದ ಕಾರಣಕ್ಕೆ ಪಾಕಿಸ್ತಾನ ಅವರ ಮೇಲೆ ಯುದ್ಧ ಸಾರಿತ್ತು. ಬರೋ ಬ್ಬರಿ ಒಂದು ಕೋಟಿ ನಿರಾಶ್ರಿತರು ಪಾಕ್‌ನ ರಾಕ್ಷಸರಿಂದ ಹೇಗೋ ತಪ್ಪಿಸಿಕೊಂಡು ಭಾರತಕ್ಕೆ ಬಂದು ಆಶ್ರಯ ಪಡೆದರು. ನಂತರ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬರುವುದರೊಂದಿಗೆ ಸಂಘರ್ಷ ಕೊನೆಯಾಯಿತು.

1971ರ ಡಿಸೆಂಬರ್‌ನಲ್ಲಿ ನಡೆದ ಎರಡು ವಾರಗಳ ಭೀಕರ ಯುದ್ಧದಲ್ಲಿ ಪಾಕಿಸ್ತಾನದ ಸೇನೆ ಬಹು ತೇಕ ನಿರ್ನಾಮವಾದ ಮೇಲೆಯೇ ಯುದ್ಧ ಕೊನೆಯಾಗಿದ್ದು. ಢಾಕಾದಲ್ಲಿ ಪಾಕಿಸ್ತಾನದ 93000 ಸೈನಿಕರು ಮತ್ತು ಸೇನಾಧಿಕಾರಿಗಳು ಭಾರತೀಯ ಸೇನೆಯ ದಂಡ ನಾಯಕರಾದ ಲೆ.ಜ. ಜಗಜಿತ್ ಸಿಂಗ್ ಅರೋರಾ ಮತ್ತು ಲೆ.ಜ.ಜೆಎ-ಆರ್ ಜೇಕಬ್ ಮುಂದೆ ಶರಣಾಗಿದ್ದರು.

ಆದರೆ ಒಂದು ಸರಳ ಪ್ರಶ್ನೆಗೆ ಯಾವತ್ತೂ ಉತ್ತರ ಸಿಕ್ಕಿಲ್ಲ: ಆರೋಗ್ಯವಾಗಿದ್ದ ಹಾಗೂ ಸಾಕಷ್ಟು ಶಸ್ತ್ರಾಸ್ತ್ರಗಳನ್ನು ತಮ್ಮಲ್ಲಿಟ್ಟುಕೊಂಡಿದ್ದ 93000 ಪಾಕಿಸ್ತಾನಿ ಅಧಿಕಾರಿಗಳು ಮತ್ತು ಯೋಧರು ಏಕೆ ಯುದ್ಧ ಮುಂದುವರಿಸದೆ ಅಷ್ಟೊಂದು ಅವಮಾನಕರ ರೀತಿಯಲ್ಲಿ ಭಾರತದ ಮುಂದೆ ಶರಣಾಗುವ ಆಯ್ಕೆಯನ್ನು ಆತುಕೊಂಡರು? ಯುದ್ಧಕ್ಕೆ ಹೋದ ಎಲ್ಲಾ ಸೈನಿಕರೂ ಸಾಯುತ್ತಾರೆಂದು ಯಾರೂ ನಿರೀಕ್ಷಿಸುವುದಿಲ್ಲ.

ಆದರೆ ಸೇನೆಯಲ್ಲಿರುವವರು ಯುದ್ಧದಲ್ಲಿ ನಾನು ಕೊನೆಯ ಉಸಿರಿರುವವರೆಗೂ ಹೋರಾಡುತ್ತೇನೆ ಎಂಬ ಕೆಚ್ಚೆದೆಯ ನಿರ್ಧಾರದೊಂದಿಗೇ ಕೆಲಸ ಮಾಡುತ್ತಿರುತ್ತಾರೆ. ಆದ್ದರಿಂದಲೇ ಸಶಸ್ತ್ರ ಪಡೆಗಳಿಗೆ ಅಷ್ಟೊಂದು ಶ್ರೇಷ್ಠ ಸ್ಥಾನವಿದೆ. ಆದರೆ, ಬಾಂಗ್ಲಾದೇಶದ ಜನನಕ್ಕೂ ಮುನ್ನ ಯುದ್ಧದಲ್ಲಿ
ಪಾಕಿಸ್ತಾನದ ಈ ಬೃಹತ್ ಪಡೆಯನ್ನು ಭಾರತದ ಸೇನಾಪಡೆಗಳು ಅತ್ಯಂತ ಚಾಣಾಕ್ಷ ಕಾರ್ಯಾ ಚರಣೆಯಲ್ಲಿ ಹಣ್ಣುಗಾಯಿ ನೀರುಗಾಯಿ ಮಾಡಿದ್ದವು. ಹಾಗಂತ ಪಾಕ್‌ನ ಸೇನೆಗೆ ಯುದ್ಧ ಮುಂದು ವರಿಸಲು ಅವಕಾಶವಿತ್ತು. ಆದರೂ ಅದು ಹೇಡಿಗಳಂತೆ ಶರಣಾಯಿತು.

ಏಕೆ ಹೀಗೆ ಎಂಬ ಪ್ರಶ್ನೆಯನ್ನು ಪಾಕಿಸ್ತಾನ ಕೇಳಲಿಲ್ಲ. ಕೇಳಿದ್ದರೆ ಅದರ ಮರ್ಯಾದೆಯೇ ಹೋಗುತ್ತಿತ್ತು. ಭಾರತೀಯರೂ ಕೇಳಲಿಲ್ಲ. ಏಕೆಂದರೆ ಜಯವನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ. ಪಾಕಿಸ್ತಾನದ ಸೇನೆ ಮತ್ತು ರಾಜಕೀಯ ನಾಯಕರು ಆ ಯುದ್ಧದ ವಿಷಯದಲ್ಲಿ ಒಗ್ಗಟ್ಟಾಗಿದ್ದರು. ತಮ್ಮ ಸೇನೆ ಪಾಕಿಸ್ತಾನ ಮತ್ತು ಇಸ್ಲಾಮ್‌ಗಾಗಿ ಯುದ್ಧ ಮಾಡುತ್ತಿದೆ ಎಂಬ ಒಂದೇ ಭಾವನೆಯನ್ನು ಅವರಿಬ್ಬರೂ ಹೊಂದಿದ್ದರು. ಆದರೆ, ಜನರಲ್ ಯಾಹ್ಯಾ ಖಾನ್‌ನ ರಕ್ತಸಿಕ್ತ ಕೈಗಳಿಂದ ಅಧಿಕಾರ ವನ್ನು ಕಿತ್ತುಕೊಂಡಿದ್ದ ರಾಜಕೀಯ ನಿಪುಣ ಜುಲ್ಫಿಕರ್ ಅಲಿ ಭುಟ್ಟೋ ಕೇವಲ 14 ದಿನಗಳಲ್ಲಿ ಯುದ್ಧವನ್ನು ಸೋತ ನಂತರ ವಿಶ್ವಸಂಸ್ಥೆಗೆ ಹೋಗಿ, ‘ನಾವು ಸಾವಿರ ವರ್ಷಗಳವರೆಗೆ ಯುದ್ಧ ಮಾಡಲು ಸಿದ್ಧರಿದ್ದೇವೆ’ ಎಂದು ಜೋರಾಗಿ ಭಾಷಣ ಬಿಗಿದಿದ್ದರು.

ಆ ದೇಶ ಹುಟ್ಟಿದ್ದೇ ಸುಳ್ಳುಗಳ ಮೇಲೆ. ಅವರ ಮಾತಿನಲ್ಲೂ ಅದೇ ಧ್ವನಿಸುತ್ತಿತ್ತು. 1946 ಮತ್ತು 1947ರಲ್ಲಿ ಪಾಕಿಸ್ತಾನವೆಂಬ ಕಾನ್ಸೆಪ್ಟ್‌ಗೆ ಏಕೈಕ ಸೂಚಕ, ಪ್ರೇರಕ ಮತ್ತು ವಕ್ತಾರನಾಗಿದ್ದ ಮೊಹ ಮ್ಮದ್ ಅಲಿ ಜಿನ್ನಾ ಭಾರತದಿಂದ ಬೇರೆಯಾಗಿ ಪ್ರತ್ಯೇಕ ದೇಶ ಸೃಷ್ಟಿಸಿಕೊಳ್ಳಲು ‘ಇಸ್ಲಾಂ ಅಪಾಯ ದಲ್ಲಿದೆ’ ಎಂಬ ಭ್ರಮೆಯನ್ನು ಭಾರತೀಯ ಮುಸ್ಲಿಮರ ತಲೆಯಲ್ಲಿ ತುಂಬಿದ್ದರು.

ಭಾರತದಿಂದ ಬೇರೆಯಾದರೆ ಮಾತ್ರ ನಾವು ಉಳಿಯುತ್ತೇವೆಂಬ ನಂಬಿಕೆಯನ್ನು ಕುಲೀನ ಮುಸ್ಲಿಮ ರಲ್ಲಿ ಹುಟ್ಟುಹಾಕಿದ್ದರು. ಆದರೆ ಧರ್ಮಕ್ಕಿರುವ ಮೌಲ್ಯದ ಚೌಕಟ್ಟಿನಲ್ಲಿ ನೋಡುವು ದಾದರೆ ಇಂಥ ನಂಬಿಕೆ ಶುದ್ಧ ಸುಳ್ಳು. ನೀವು ನಿಜವಾದ ಮುಸ್ಲಿಮರೇ ಆಗಿದ್ದರೆ ಇಸ್ಲಾಂ ಅಪಾಯಕ್ಕೆ ಸಿಲುಕುತ್ತದೆ ಎಂಬುದನ್ನು ಯಾವುದೇ ಕಾರಣಕ್ಕೂ ನಂಬುವುದಿಲ್ಲ.

ಮುಸ್ಲಿಮರು ಅಪಾಯಕ್ಕೆ ಸಿಲುಕಬಹುದು, ಅದನ್ನೂ ಮುಸ್ಲಿಂ ಸಮುದಾಯ ದೃಢೀಕರಿಸ ಬೇಕಾಗುತ್ತದೆ. ಪಾಕಿಸ್ತಾನವೆಂಬ ಐಡಿಯಾ ಅಥವಾ ಕಲ್ಪನೆಗೆ ಯಾವುದೇ ಸಾಮೂಹಿಕ ಚಳವಳಿಯ ಬೆಂಬಲ ಇರಲಿಲ್ಲ. ದೇಶ ವಿಭಜನೆಯ ಕೂಗಿಗೆ ಕೃತಕ ಕೋಮುಗಲಭೆಗಳ ಸೃಷ್ಟಿಯ ಬಳಿಕವಷ್ಟೇ ಬೆಂಬಲ ಲಭಿಸಿತು. ಬ್ರಿಟಿಷ್ ವಸಾಹತುಶಾಹಿಗಳು ಯಾವುದೇ ವಿಷಯವನ್ನು ತಿರುಚುವಲ್ಲಿ ಮಹಾನ್ ಪ್ರಚಂಡರು. ಅವರು 1946ರ ಚುನಾವಣೆಯ ಫಲಿತಾಂಶವನ್ನು ಮುಸ್ಲಿಂ ಅಭಿಪ್ರಾಯದ ಪರಿಣಾಮ ಎಂಬಂತೆ ಬಿಂಬಿಸಿದ್ದರು.

ಆದರೆ ಅದೊಂದು ದೊಡ್ಡ ಮೋಸವಾಗಿತ್ತು. ಏಕೆಂದರೆ ತೆರಿಗೆದಾರರಾಗಿದ್ದ ಮೇಲ್ವರ್ಗದ ಶೇ.10 ರಷ್ಟು ಜನರು ಮಾತ್ರ ಆ ಚುನಾವಣೆಯಲ್ಲಿ ಮತದಾರರಾಗಿದ್ದರು. ದೇಶ ವಿಭಜನೆಯನ್ನು ಬ್ರಿಟಿಷರು ಬಹಳ ಸಂತೋಷದಿಂದಲೇ ಬೆಂಬಲಿಸಿದ್ದರು. ಆದರೆ ಆ ಸಂತೋಷವನ್ನು ಬಚ್ಚಿಟ್ಟು
ಕೊಂಡಿದ್ದರು. ಅವರಿಗೆ ಸಂತೋಷ ಏಕೆಂದರೆ, ಬ್ರಿಟಿಷ್ ವಸಾಹತು ಶಾಹಿಯಿಂದ ಸ್ವಾತಂತ್ರ್ಯಕ್ಕೆ ಪಟ್ಟುಹಿಡಿದು ಪಡೆದುಕೊಂಡ ಮೊದಲ ದೇಶ ಭಾರತವಾಗಿತ್ತು.

ಜಿನ್ನಾ ಬಳಿಕ ಬಂದ ಪ್ರತಿಯೊಬ್ಬ ಉತ್ತರಾಧಿಕಾರಿಯೂ ಇಸ್ಲಾಂ ಮತ್ತು ಪಾಕಿಸ್ತಾನ ಒಂದೇ ಎಂಬ ಗಿಣಿಪಾಠವನ್ನೇ ಹೇಳಿದರು. ಇಸ್ಲಾಂ ಉಳಿಸಿಕೊಳ್ಳಲು ಜೀವ ಕೊಡಿ ಎಂದು ಸೇನೆಗೂ ಉಪದೇಶ ಮಾಡಿದರು. 1971ರ ಯುದ್ಧದಲ್ಲೂ ಈ ನಂಬಿಕೆಯೇ ಪಾಕಿಸ್ತಾನದ ಸಶಸ್ತ್ರ ಪಡೆಗಳ ಮೂಲ
ಸಿದ್ಧಾಂತವಾಗಿ ಕೆಲಸ ಮಾಡಬೇಕಿತ್ತು. ಆ 93000 ಯೋಧರು ನಿಜವಾಗಿಯೂ ಯುದ್ಧದಲ್ಲಿ ತಾವು ಹುತಾತ್ಮರಾದರೆ ಸ್ವರ್ಗದಲ್ಲಿ ಶಾಶ್ವತವಾಗಿ ಸ್ಥಾನ ಸಿಗುತ್ತದೆ ಎಂದು ನಂಬಿದ್ದರೆ ಅವರು ಸಾವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು.

ಲಾಹೋರ್ ಅಥವಾ ಸಿಯಾಲ್ಕೋಟ್ ಅಥವಾ ಕರಾಚಿಯ ಕಿಕ್ಕಿರಿದ ರಸ್ತೆಗಳು ಅಥವಾ ಖೈಬರ್ ಪಖ್ತೂನ್‌ಕ್ವಾದ ಹಳ್ಳಿಗಳಿಗಿಂತ ಸ್ವರ್ಗವೇ ಒಳ್ಳೆಯ ಆಯ್ಕೆಯಾಗಿತ್ತು ಬಿಡಿ. ಆದರೆ, ಪಾಕಿಸ್ತಾನದ ಯೋಧರು ಸ್ವರ್ಗದ ತೊರೆಗಳಿಗಿಂತ ತಮ್ಮೂರಿನ ಜನಪ್ರವಾಹವನ್ನೇ ಪರಮಸುಖ ಎಂಬಂತೆ ಆಯ್ಕೆ ಮಾಡಿಕೊಂಡರು. ಮೊಟ್ಟಮೊದಲ ಇಸ್ಲಾಮಿಸ್ಟ್ ಜನರಲ್ (ಇವರ ಹಿಂದಿನ ಜನರಲ್ ಯಾಹ್ಯಾ ಖಾನ್ ದಿನಕ್ಕೊಂದು ಬಾಟಲ್ ಒಳಗಿಳಿಸುತ್ತಿದ್ದರು) ಜಿಯಾ ಉಲ್ ಹಕ್‌ಗೆ ಈ ವೈರುಧ್ಯದ ಅರಿವಿತ್ತು.

ಆದರೆ ಎಲ್ಲೂ ಅದನ್ನು ಒಪ್ಪಿಕೊಳ್ಳಲು ಹೋಗಲಿಲ್ಲ. ಅವರು ಪಾಕಿಸ್ತಾನಿ ಸೇನೆಯ ಮುಖ್ಯ ಉದ್ದೇಶವನ್ನು ಇತ್ತೆಹಾದ್, ಯಕೀನ್, ತಂಜಿಮ್ (ಏಕತೆ, ನಂಬಿಕೆ, ಶಿಸ್ತು) ಬದಲು ಇಮಾನ್, ತಕ್ವಾ, ಜಿಹಾದ್ ಫಿ ಸಬಿಲಿಲ್ಲಾಹ್ (ನಂಬಿಕೆ, ದಯೆ, ಪವಿತ್ರ ಯುದ್ಧ) ಎಂಬುದಕ್ಕೆ ಬದಲಿಸಿದರು. ಜನರಲ್ ಜಿಯಾ ಸೇನೆ ನಿಯೋಜಿಸುತ್ತಿದ್ದ ರೀತಿಯಲ್ಲಿ ಪ್ರತಿಯೊಂದು ಸಂಗತಿಗೂ ಇಸ್ಲಾಂ ಧರ್ಮವೇ ಮೂಲಾಧಾರವಾಗಿರುತ್ತಿತ್ತು.

ಅದಕ್ಕೂ ಮೊದಲು ಹಾಗೆ ನಂಬಿಸಲಾಗುತ್ತಿತ್ತಷ್ಟೆ, ಆಚರಣೆಯಲ್ಲಿ ಪಾಲಿಸುತ್ತಿರಲಿಲ್ಲ. 93000 ಯೋಧರ ಪೈಕಿ ಕೇವಲ 20000 ಸೈನಿಕರು ತಮ್ಮ ಹಳ್ಳಿಯ ಬದಲು ಸ್ವರ್ಗವನ್ನು ಆಯ್ದುಕೊಂಡಿ ದ್ದರೂ ಡಿಸೆಂಬರ್ 1971ಕ್ಕೆ ಮುಗಿದ ಯುದ್ಧ ಜನವರಿಯವರೆಗೂ ಮುಂದುವರಿಯುತ್ತಿತ್ತು. ಪಾಕಿಸ್ತಾನವೇನೂ ಯುದ್ಧದಲ್ಲಿ ಗೆಲ್ಲುತ್ತಿರಲಿಲ್ಲ, ಆದರೆ ಅದರ ರಾಜಕೀಯ ಪರಿಣಾಮ ಗಳು ಬೇರೆಯಾಗಿರುತ್ತಿದ್ದವು.

ಏಕೆಂದರೆ ಜಗತ್ತು ಆ ಯುದ್ಧ ನಿಲ್ಲಿಸಲು ಏನು ಮಾಡಬೇಕು ಎಂಬುದರ ಬಗ್ಗೆ ವಿಶ್ವಸಂಸ್ಥೆಯಲ್ಲಿ ಚರ್ಚಿಸಲು ಆರಂಭಿಸಿತ್ತು. 1971ರಲ್ಲಿ ವಿಶ್ವಸಂಸ್ಥೆ ಆಗಿನ್ನೂ ಯುವಕನಾಗಿತ್ತು ಮತ್ತು ವಿಶ್ವಾ ಸಾರ್ಹತೆಯನ್ನು ಉಳಿಸಿಕೊಂಡಿತ್ತು. ಈಗ ಇರುವಂತೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ರೀತಿಯಲ್ಲಿ ಇರಲಿಲ್ಲ. ಆದರೆ ಡಿಸೆಂಬರ್ 16ರಂದು ಪಾಕಿಸ್ತಾನ ದಿಢೀರನೆ ಶರಣಾಗಿದ್ದರಿಂದ ವಿಶ್ವಸಂಸ್ಥೆಯಲ್ಲಿ ನಡೆಯುತ್ತಿದ್ದ ಚರ್ಚೆಗಳು ಅರ್ಧದಲ್ಲೇ ನಿಂತುಹೋದವು. ಎಂಬಲ್ಲಿಗೆ, ಯಾವಾಗಲೂ ಆಗುವಂತೆ ಮತ್ತೆ ಮೊದಲಿನ ಸ್ಥಿತಿಯೇ ನೆಲೆಯಾಯಿತು.

ಚೋದ್ಯವೇನೆಂದರೆ, ಭಾರತ-ಪಾಕ್ ನಡುವಿನ ಮೊದಲ ಯುದ್ಧದಲ್ಲೇ ಅಹಿಂಸೆಯ ಪಿತಾಮಹ ಮಹಾತ್ಮ ಗಾಂಧೀಜಿ, ಒಬ್ಬ ಯೋಧನ ಕರ್ತವ್ಯವೇನು ಎಂಬುದನ್ನು ಬಹಳ ಚೆನ್ನಾಗಿ ಹೇಳಿದ್ದರು. ಭಾರತದ ಮೇಲೆ ದಾಳಿ ನಡೆಸುವಂತೆ ಯೋಧರನ್ನು ಜಿನ್ನಾ ಕಳುಹಿಸಿದ ಏಳನೇ ದಿನಕ್ಕೆ ಗಾಂಧೀಜಿ 1947ರ ಅಕ್ಟೋಬರ್ 29ರಂದು ತಮ್ಮ ಪ್ರಾರ್ಥನಾ ಸಭೆಯಲ್ಲಿ, ‘ಸಶಸ್ತ್ರ ಪಡೆಗಳ ಸೈನಿಕರ ಕರ್ತವ್ಯ ವೇನೆಂದರೆ ಎದೆಯುಬ್ಬಿಸಿ ಮುಂದಕ್ಕೆ ನುಗ್ಗುವುದು ಮತ್ತು ಶತ್ರುವಿನ ಮೇಲೆ ದಾಳಿ ನಡೆಸುವುದು. ಅವರು ಹೋರಾಡುತ್ತಾ ಸಾಯುತ್ತಾರೆಯೇ ಹೊರತು ಯಾವತ್ತೂ ತಿರುಗಿ ಓಡುವುದಿಲ್ಲ...’ ಎಂದು ತಿಳಿಸಿದ್ದರು.

ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದಕರನ್ನು ಅವರು ಉಪದ್ವ್ಯಾಪಿಗಳು ಮತ್ತು ತಂಟೆಕೋರರು ಎಂದು ಕರೆದಿದ್ದರು. 1948ರ ಜನವರಿ 27ರಂದು ಗಾಂಧೀಜಿಯವರು ಬ್ರಿಟಿಷ್ ಪತ್ರಕರ್ತ ಕಿಂಗ್‌ಸ್ಲೇ ಮಾರ್ಟಿನ್‌ಗೆ ‘ಭಾರತ ಸರಕಾರ ತನ್ನ ದೇಶವನ್ನು ರಕ್ಷಿಸಿಕೊಳ್ಳುವ ಸಂದರ್ಭ ಬಂದಾಗ ಅಹಿಂಸೆಯ ಮಂತ್ರ ಜಪಿಸುತ್ತಾ ಕೂರಲು ಸಾಧ್ಯವಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದರು.

ನನ್ನ ಊಹೆಯಿದು. 93000 ಸೈನಿಕರು ಮತ್ತು ಅಧಿಕಾರಿಗಳು ಯುದ್ಧ ಮುಂದುವರಿಸಿ ಜೀವವನ್ನು ಅಪಾಯಕ್ಕೊಡ್ಡಲು ಏಕೆ ಮುಂದಾಗಲಿಲ್ಲವೆಂದರೆ ಅವರಿಗೆ ಜಿಹಾದ್‌ನಲ್ಲಾಗಲೀ ಪಾಕಿಸ್ತಾನ ದಲ್ಲಾಗಲೀ ನಂಬಿಕೆಯಿರಲಿಲ್ಲ. ಪಾಕಿಸ್ತಾನಕ್ಕಾಗಿ ಸಾಯುವುದರಲ್ಲಿ ಅರ್ಥವಿಲ್ಲ ಎಂದು ಅವರು ನಂಬಿದ್ದರು. 1971ರ ಯುದ್ಧದಲ್ಲಿ ಅವರು ಅನುಭವಿಸಿದ ನೋವು ಮತ್ತು ಅವಮಾನ ಯಾವ ತೆರನದ್ದಾಗಿತ್ತು ಅಂದರೆ, ಪಾಕಿಸ್ತಾನ ಮತ್ತೆಂದೂ ನೇರವಾಗಿ ಯುದ್ಧಕ್ಕೆ ಬರಲೇ ಇಲ್ಲ. ಆ ಸೋಲಿನ ಬಳಿಕ ಪಾಕಿಸ್ತಾನದ ಸೇನೆಯು ತನ್ನ ಸೇನಾಪಡೆಗಳು ಯುದ್ಧಭೂಮಿಯಲ್ಲಿ ಇರುವುದರ ಬದಲು ತಂತಿಬೇಲಿಯ ಒಳಗೆ ಹಾಗೂ ಬ್ಯಾರಕ್‌ನಲ್ಲೇ ಸುರಕ್ಷಿತವಾಗಿ ಇರುತ್ತವೆ ಎಂದು ನಿರ್ಧರಿಸಿತು. ಪರಿಣಾಮ, ಯುದ್ಧವನ್ನು ಭಯೋತ್ಪಾದಕರಿಗೆ ಹೋಲ್‌ಸೇಲಾಗಿ ಹೊರಗುತ್ತಿಗೆ ನೀಡಿತು.

ಆಧುನಿಕ ಭಯೋತ್ಪಾದನೆಯನ್ನು ಪಾಕಿಸ್ತಾನ ಹುಟ್ಟುಹಾಕಿದ್ದು 1947ರಲ್ಲಿ. ದೇಶ ವಿಭಜನೆಯಾಗಿ, ಭಾರತ ಮತ್ತು ಪಾಕಿಸ್ತಾನ ಸೃಷ್ಟಿಯಾದ ಬೆನ್ನಲ್ಲೇ 5000 ಭಯೋತ್ಪಾದಕರನ್ನು ಕಾಶ್ಮೀರದಲ್ಲಿ ದಂಗೆ, ಲೂಟಿ, ಕೊಲೆ ಮತ್ತು ಅತ್ಯಾಚಾರ ನಡೆಸಲು ಸೂಚಿಸಿ ಛೂ ಬಿಟ್ಟಿತು. ಆದರೆ 1947 ಮತ್ತು 1965ರಲ್ಲಿ ಇದು ಯುದ್ಧದ ಆರಂಭಿಕ ಹಂತದಲ್ಲಿ ಮಾತ್ರ ನಡೆಯುತ್ತಿತ್ತು.

ನಂತರ ನಿಜವಾದ ಸೈನಿಕರು ಕಾಶ್ಮೀರದತ್ತ ಧಾವಿಸಿ ರಣರಂಗಕ್ಕೆ ಇಳಿಯುತ್ತಿದ್ದರು. ಸರಕಾರವನ್ನು ಬೀಳಿಸಿ ದಂಗೆಯ ಮೂಲಕ ಪಾಕಿಸ್ತಾನದ ಆಡಳಿತದ ಚುಕ್ಕಾಣಿ ಹಿಡಿದ ಜನರಲ್ ಜಿಯಾ ಉಲ್ ಹಕ್ ಭಯೋತ್ಪಾದನೆಯೆಂಬ ಅನೈತಿಕ ಮತ್ತು ಷಂಡರ ಸಿದ್ಧಾಂತವನ್ನೇ ತನ್ನ ಸೇನೆಯ ಪ್ರಧಾನ ರಣತಂತ್ರವನ್ನಾಗಿ ಮಾಡಿಬಿಟ್ಟಿದ್ದರು. ಭಯೋತ್ಪಾದಕರಿಗೆ ಸೇನೆಯ ನೆರವು ಮತ್ತು ಹಣಕಾಸಿನ ನೆರವು ನೀಡಿ, ಭಾರತವನ್ನು ದುರ್ಬಲಗೊಳಿಸಲು ಅಟ್ಟುತ್ತಿದ್ದರು.

ಅವರ ದಾಳಿಯಿಂದ ವಾಯವ್ಯ ಭಾರತ ದುರ್ಬಲವಾಗುತ್ತದೆ, ಕ್ರಮೇಣ ಅದನ್ನು ತಾನು ವಶಪಡಿಸಿ ಕೊಳ್ಳಬಹುದು ಎಂಬ ಭ್ರಮೆ ಅವರಿಗಿತ್ತು. ಆತನ ಅತ್ಯಂತ ಮಹತ್ವಾಕಾಂಕ್ಷಿ ಕಾರ್ಯಾಚರಣೆ ಕಾರ್ಗಿಲ್ ಭಯೋತ್ಪಾದಕ ದಾಳಿಯಾಗಿತ್ತು. ಅದರಲ್ಲಿ ವಿಫಲಗೊಂಡ ಬಳಿಕವೂ ಪಾಕ್‌ನ ಕೊಲ್ಲುವ ಆಟ ನಿಂತಿಲ್ಲ. ಬೇರೆ ಬೇರೆ ಫಲಿತಾಂಶವನ್ನು ಪಡೆಯುವ ನಿರೀಕ್ಷೆಯಲ್ಲಿ ಪಾಕಿಸ್ತಾನ ಒಂದೇ ಹುಚ್ಚಾಟವನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ.

ಇಂಥ ಹುಚ್ಚಾಟ ಅದಕ್ಕೊಂದು ಚಟವೇ ಆಗಿಬಿಟ್ಟಿದೆ. ಅಣ್ವಸ್ತ್ರಗಳನ್ನು ಪಡೆದುಕೊಂಡ ಮೇಲಂತೂ ಪಾಕ್‌ನ ಭ್ರಮೆ ಇನ್ನೊಂದು ಹಂತಕ್ಕೆ ಏರಿಕೆಯಾಗಿದೆ. ಅಣ್ವಸ ಪರೀಕ್ಷೆಯಲ್ಲಿ ಯಶಸ್ವಿ ಯಾದ ಮೇಲೆ ಅಲ್ಲಿನ ಮಿಲಿಟರಿ ಕಾರಿಡಾರ್‌ಗಳಲ್ಲಿ ಭಯೋತ್ಪಾದನೆಯ ಅಧಿಕೃತ ಸಿದ್ಧಾಂತಕ್ಕೆ ಹೊಸ ಚೈತನ್ಯ ಬಂದಿತ್ತು. ಆದರೆ, ಅಣ್ವಸ್ತ್ರವಿದೆ ಎಂದು ಬ್ಲ್ಯಾಕ್‌ಮೇಲ್ ಮಾಡಿದರೆ ಭಾರತ ಸೊಪ್ಪು ಹಾಕುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತೀಕ್ಷ್ಣವಾಗಿ ಹೇಳಿದ ಮೇಲೆ ಆ ವಿಷಯ ದಲ್ಲಿದ್ದ ಗೊಂದಲವೂ ಪಾಕ್‌ನ ಮಸ್ತಿಷ್ಕದಿಂದ ದೂರವಾದಂತಾಗಿದೆ.

ಈಗಲೂ ಯುದ್ಧದ ಕಾರ್ಮೋಡ ಇನ್ನೂ ಸಂಪೂರ್ಣ ಸರಿದಿಲ್ಲ. ಆದರೆ, ಪಾಕಿಸ್ತಾನ ನಲುಗಿ ಹೋಗಿದೆ ಎಂಬುದಕ್ಕೆ ಸಾಕಷ್ಟು ಅಧಿಕೃತ ವರದಿಗಳಿವೆ. ಪಾಕಿಸ್ತಾನದ ಅಣ್ವಸ್ತ್ರಗಳು ಇರುವ ಪ್ರದೇಶದ ಪಕ್ಕದಲ್ಲೇ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ ಕರಾರುವಾಕ್ಕು ಕ್ಷಿಪಣಿ ದಾಳಿ ನಡೆಸಿದ ಮೇಲೆ ವಾಷಿಂಗ್ಟನ್ ಕೂಡ ಕಂಗಾಲಾಗಿದೆ.

ಹೀಗಾಗಿ ಎಲ್ಲರೂ ಸೇರಿ ಕದನವಿರಾಮಕ್ಕಾಗಿ ಓಡಿಬಂದಿದ್ದಾರೆ. ಪಾಕ್‌ನ ನಡುಕ ಇನ್ನೂ ನಿಂತಿಲ್ಲ. ಆ ದೇಶಕ್ಕಾದ ಗಾಯಗಳನ್ನು ಉಪಗ್ರಹದ ಚಿತ್ರಗಳು ತೋರಿಸುತ್ತಿವೆ. ಸರ್ಗೋಧಾ ಪ್ರದೇಶದಲ್ಲಿ ವಿಕಿರಣಶೀಲತೆ ಹೆಚ್ಚಾಗಿದೆ ಎಂಬ ವರದಿಗಳೂ ಇವೆ. ಭಾರತೀಯ ಉಪಖಂಡವು ಹಿಂದೆಂದಿಗಿಂತ ತೀಕ್ಷ್ಣವಾದ ಅನಾಹುತದತ್ತ ಸಾಗುತ್ತಿರುವ ಸುಳಿವುಗಳಿವೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಪೆಂಟಗನ್‌ಗೆ ವರದಿ ನೀಡಿದ ಮೇಲೆ ಬೇರೆ ದಾರಿಯೇ ಇಲ್ಲದೆ ಇಸ್ಲಾಮಾಬಾದ್ ಮತ್ತು ದೆಹಲಿಗೆ, ವಾಷಿಂಗ್ಟನ್ ಫೋನ್ ಕೈಗೆತ್ತಿಕೊಂಡಿದೆ.

ಯುದ್ಧೋನ್ಮಾದದಿಂದ ರೂಪುಗೊಂಡ ಸಾರ್ವಜನಿಕ ಅಭಿಪ್ರಾಯವೇ ಸೇಡಿನ ಸ್ಪರ್ಧೆಯ ಜಡ್ಜ್ ಆಗಿಬಿಟ್ಟರೆ ಪ್ರಥಮ ಯಾರು ಮತ್ತು ದ್ವಿತೀಯ ಯಾರು ಎಂಬುದನ್ನು ಹೇಳುವುದು ಕಷ್ಟ. ಒಂದೇ ಒಂದು ತಪ್ಪು ಲೆಕ್ಕಾಚಾರ ಕೂಡ ಆರ್ಮಾಗೆಡನ್‌ನಂಥ ಭಯಾನಕ ದುಷ್ಪರಿಣಾಮವನ್ನು ಸೃಷ್ಟಿಸ ಬಲ್ಲದು.

ಯುದ್ಧವನ್ನು ಶುರುಮಾಡುವುದು ಯುದ್ಧವನ್ನು ಮುಗಿಸುವುದಕ್ಕಿಂತ ಬಹಳ ಸುಲಭ. ಪಾಕಿಸ್ತಾನ ಯುದ್ಧ ಶುರು ಮಾಡಿದೆ. ಬಳಿಕ ಅದಕ್ಕೆ ಭಾರತದಲ್ಲಿ ಉಕ್ಕಿನ ನರಗಳ ನಾಯಕನಿದ್ದಾನೆ ಎಂಬುದು ಗೊತ್ತಾಗಿದೆ. ತಾನು ಬಳಸುವ ಕೋಮುವಾದಿ ಭಯೋತ್ಪಾದನೆಯ ದಾಳದಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಸತ್ಯವನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಭಯೋತ್ಪಾದನೆ ಹೀಗೇ ಉಳಿಯಬಹುದು, ಆದರೆ ಆಪರೇಷನ್ ಸಿಂದೂರ್ ಬಳಿಕ ಅದರ ಪರಿಣಾಮಗಳು ಬೇರೆಯಾಗಿವೆ.

ಯೋಚನೆ ಕೂಡ ಮಾಡಲು ಆಗದ ವಿಚಾರವೇ ವಾಸ್ತವವಾಗುವುದನ್ನು ತಪ್ಪಿಸಬೇಕು ಅಂದರೆ ನೀವು ಅದನ್ನು ಯೋಚನೆ ಮಾಡುವಂಥ ವಿಚಾರವನ್ನಾಗಿಸಬೇಕು. ಪ್ರಧಾನಿ ಮೋದಿ ಅದನ್ನೇ ಮಾಡಿದ್ದಾರೆ.

ಈವರೆಗೆ ಬಹಳ ಸಹಜ ಎಂಬಂತೆ ಪರಿಗಣಿಸಲ್ಪಡುತ್ತಿದ್ದ ಸಾಂಪ್ರದಾಯಿಕ ಮಾನದಂಡಗಳು ಕೂಡ ಈಗ ಬದಲಾಗಿವೆ. ಹೊಸ ನಾರ್ಮಲ್ ಈಗ ನಿಧಾನವಾಗಿ ರೂಪ ತಳೆಯುತ್ತಿದೆ. ನೀರಿನ ರಣತಂತ್ರ ಬೈಬಲ್‌ನಷ್ಟೇ ಹಳೆಯದು. ಹಳೆಯ ಒಡಂಬಡಿಕೆಯಲ್ಲಿ ಬರುವ ಒಳ್ಳೆಯ ರಾಜರಲ್ಲಿ ಒಬ್ಬನಾದ ಜುಡಾದ ಹೆಜೆಕಿಯಾ ರಾಜನು ಸುಮಾರು 2700 ವರ್ಷಗಳ ಹಿಂದೆಯೇ ಅಸ್ಸಿರಿಯನ್ಸ್‌ಗಳಿಗೆ ನೀರು ಹರಿಯದಂತೆ ನದಿಯನ್ನು ನಿಲ್ಲಿಸಿದ್ದನು.

ಮೋದಿ ಸಿಂಧೂ ನದಿಯ ಬಗ್ಗೆ ಹೇಳಿರುವುದೂ ಇದನ್ನೇ. ‘ಭಾರತದ ನೀರು ಭಾರತೀಯರ ಅನು‌ ಕೂಲಕ್ಕೆ ಹರಿಯುತ್ತದೆ. ಅದನ್ನು ಭಾರತದ ಅನುಕೂಲಕ್ಕಾಗಿ ಉಳಿಸಿಕೊಳ್ಳಲಾಗುತ್ತದೆ. ಅದನ್ನು ಭಾರತದ ಅಭಿವೃದ್ಧಿಗೆ ಬಳಸಲಾಗುತ್ತದೆ’ ಎಂದು ಅವರು ಹೇಳಿದ್ದಾರೆ. ನೀರೆಂಬುದು ಮೃದುವಾದ ಶಕ್ತಿಯಲ್ಲ, ಅದು ಬಹಳ ಗಟ್ಟಿಯಾದ ಮತ್ತು ತುಂಬಾ ತೀಕ್ಷ್ಣವಾದ ಅಸ್ತ್ರ.

ಕಾಕತಾಳೀಯವೆಂಬಂತೆ, ಸಾಫ್ಟ್ ಪವರ್ ಎಂಬ ಪದವನ್ನು ಸೃಷ್ಟಿಸಿದ ವ್ಯಕ್ತಿ ಜೋಸೆಫ್ ನಿಯೆ ಇತ್ತೀಚೆಗಷ್ಟೇ ತೀರಿಕೊಂಡರು. ಇಲ್ಲಿಯವರೆಗೆ‌ ಸಾಫ್ಟ್ ಪವರ್ ಎಂಬುದು ಜಾಗತಿಕ ಆರ್ಥಿಕತೆಯ ನಾಟಕ ರಂಗದಲ್ಲಿ ನಡೆಯುವ ವ್ಯಾಪಾರದ ಚೌಕಾಸಿಗಷ್ಟೇ ಸೀಮಿತವಾಗಿತ್ತು. ಇತಿಹಾಸಕ್ಕೆ ತಾಳ್ಮೆ ಯಿದೆ. ಅಪಾಯಕಾರಿ ಸಂದಿಗ್ಧದ ಡಿಎನ್‌ಎ ಕುರಿತು ಪ್ರಶ್ನೆ ಕೇಳಲು ಅದು ತನ್ನದೇ ಆದ ಸಮಯ ವನ್ನು ತೆಗೆದುಕೊಳ್ಳಬಹುದು. ಆದರೆ, ಅದು ಉತ್ತರವನ್ನು ಮಾತ್ರ ಪಡೆದೇ ತೀರುತ್ತದೆ.

(ಲೇಖಕರು ಹಿರಿಯ ಪತ್ರಕರ್ತರು)