Athani Movie: ಸಮರ್ಥ್ ಎಂ ನಟಿಸಿ, ನಿರ್ದೇಶಿಸಿರುವ ʼಅಥಣಿʼ ಚಿತ್ರದ ಟ್ರೈಲರ್ ರಿಲೀಸ್
Athani Movie: ಸಮರ್ಥ್ ಎಂ ನಿರ್ದೇಶನದೊಂದಿಗೆ ನಾಯಕನಾಗಿಯೂ ನಟಿಸಿರುವ ʼಅಥಣಿʼ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಸಂಕಲನಕಾರ, ನಟ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಈ ಚಿತ್ರದ ಟ್ರೈಲರ್ ಅನಾವರಣ ಮಾಡಿದರು. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಅಭಯ್ ಖುಷಿ ಮೂವೀಸ್ ಬ್ಯಾನರ್‌ನ ಅಡಿಯಲ್ಲಿ ಮೂಲತಃ ರೈತರಾಗಿರುವ ವಾಸುದೇವ ಆರ್. ದೊಡ್ಡಹೆಜ್ಜಾಜಿ ಅವರು ನಿರ್ಮಿಸಿರುವ, ಸಮರ್ಥ್ ಎಂ ನಿರ್ದೇಶನದೊಂದಿಗೆ ನಾಯಕನಾಗಿಯೂ ನಟಿಸಿರುವ ʼಅಥಣಿʼ ಚಿತ್ರದ (Athani Movie) ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಸಂಕಲನಕಾರ, ನಟ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಈ ಚಿತ್ರದ ಟ್ರೈಲರ್ ಅನಾವರಣ ಮಾಡಿದರು. ʼಅಥಣಿʼ ಒಂದು ಊರಿನ ಹೆಸರಾಗಿದ್ದು, ರೈತನ ಬದುಕು ಬವಣೆಗಳನ್ನು ಪ್ರೇಕ್ಷಕರಿಗೆ ತೋರಿಸುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಲಾಗಿದೆ. ಟ್ರೈಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ʼಅಥಣಿʼ ಬಗ್ಗೆ ಮಾತನಾಡಿದರು.
ನಿರ್ದೇಶಕ ಹಾಗೂ ನಾಯಕ ಸಮರ್ಥ್ ಮಾತನಾಡಿ, ʼಅಥಣಿʼ ಒಂದು ಊರಿನ ಹೆಸರು. ಎಲ್ಲಾ ಊರುಗಳಲ್ಲಿ ಕೃಷಿಕ ಎದುರಿಸುತ್ತಿರುವ ಸಮಸ್ಯೆಗಳನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆ. ಸುಮ್ಮನೆ ಎಲ್ಲರೂ ರೈತನ ಪರ ಎನ್ನುತ್ತಾರೆ. ಆದರೆ ರೈತನ ಕಷ್ಟಕ್ಕೆ ಯಾರು ನೆರವಾಗುವುದಿಲ್ಲ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ರೈತನ ಪರ ಕಾಳಜಿಯಿರುವ ಮೂಲತಃ ರೈತನೇ ಆಗಿರುವ ವಾಸುದೇವ್ ಆರ್. ದೊಡ್ಡಹೆಜ್ಜಾಜಿ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಮ್ಮ ಚಿತ್ರಕ್ಕೆ ʼಧರಣಿ ಮಂಡಲ ಮಧ್ಯದೊಳಗೆʼ ಎಂಬ ಅಡಿಬರಹವಿದೆ. ರೈತನ ಕಥೆಯ ಜತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಕೂಡ ಹೊಂದಿರುವ ಈ ಚಿತದ ನಾಯಕನಾಗಿ ನಾನು ನಟಿಸಿದ್ದೇನೆ. ಜತೆಗೆ ನಿರ್ದೇಶನ ಕೂಡ ಮಾಡಿದ್ದೇನೆ. ಮಧು ಈ ಚಿತ್ರದ ನಾಯಕಿ. ಹರ್ಷ ಕಾಗೋಡು ಸಂಗೀತ ನಿರ್ದೇಶನ, ಸಂದೀಪ್ ಹೊನ್ನಾಳಿ ಛಾಯಾಗ್ರಹಣ, ಸುನಯ್ ಜೈನ್ ಸಂಕಲನ ಜತೆಗೆ ಛಾಯಾಗ್ರಹಣವನ್ನು ಮಾಡಿದ್ದಾರೆ. ಇತ್ತೀಚೆಗಷ್ಟೇ ನಿಧನರಾದ ರಾಕೇಶ್ ಪೂಜಾರಿ ಕೂಡ ಚಿತ್ರದಲ್ಲಿ ನನ್ನ ಮಾವನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶೋಭ್ ರಾಜ್, ಯತಿರಾಜ್, ಭವ್ಯ, ಹನುಮಂತೇ ಗೌಡ, ಬಲ ರಾಜವಾಡಿ, ನಾಗೇಂದ್ರ ಅರಸ್ ಮುಂತಾದ ಹಿರಿಯ ಕಲಾವಿದರು ತಾರಾಬಳಗದಲ್ಲಿದ್ದಾರೆ. ಚಿತ್ರವನ್ನು ಸೆನ್ಸಾರ್ ಮಂಡಳಿ ಸಹ ವೀಕ್ಷಿಸಿದ್ದು, ಸದ್ಯದಲ್ಲೇ ತೆರೆಗೆ ತರುವ ತಯಾರಿ ನಡೆಯುತ್ತಿದೆ ಎಂದರು.

ನಿರ್ಮಾಪಕ ವಾಸುದೇವ್ ಆರ್ ದೊಡ್ಡಹೆಜ್ಜಾಜಿ ಮಾತನಾಡಿ, ನಾನು ರೈತ ಹಾಗೂ ರೈತನ ಕಷ್ಟವನ್ನು ಕಂಡವನು ಹಾಗಾಗಿ ಸಮರ್ಥ್ ಅವರು ಹೇಳಿದ ಕಥೆ ಇಷ್ಟವಾಗಿ ಬಂಡವಾಳ ಹಾಕಿದ್ದೇನೆ. ಎಲ್ಲರೂ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದು ಮನವಿ ಮಾಡಿದರು.
ಈ ಸುದ್ದಿಯನ್ನೂ ಓದಿ | Beauty Trend: ಅತ್ಯಾಕರ್ಷಕ ಮೇಕಪ್‌ಗೆ ಲಿಪ್ ಪೆನ್ಸಿಲ್ ಸಾಥ್
ನಟ ನಾಗೇಂದ್ರ ಅರಸ್ ಮಾತನಾಡಿ, ಚಿತ್ರದಲ್ಲಿ ನನ್ನದು ಹೋರಾಟಗಾರ್ತಿ ಪಾತ್ರ ಎಂದರು ನಾಯಕಿ ಮಧು. ಸಾಮಾನ್ಯವಾಗಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಾನು ಈ ಚಿತ್ರದಲ್ಲಿ ವೈದ್ಯನ ಪಾತ್ರ ನಿಭಾಯಿಸಿದ್ದೇನೆ ಎಂದರು.
ಛಾಯಾಗ್ರಾಹಕ ಮತ್ತು ಸಂಕಲನಕಾರ ಸುನಯ್ ಎಸ್ ಜೈನ್, ಕಾರ್ಯಕಾರಿ ನಿರ್ಮಾಪಕ ರಜನಿ ಪರಿಸರ ಪ್ರೇಮಿ, ಚಿತ್ರದಲ್ಲಿ ನಟಿಸಿರುವ ಗಂಗರಾಜ್, ಮೂರ್ತಿ ವಿಷ್ಣುಪ್ರಿಯ, ರಾಜು ಮುಂತಾದ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ವಿನುಮನಸು ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ.