ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs DC: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗೆದ್ದು ಪ್ಲೇಆಫ್ಸ್‌ಗೇರಿದ ಮುಂಬೈ ಇಂಡಿಯನ್ಸ್‌!

MI vs DC match Highlights: ಸೂರ್ಯಕುಮಾರ್‌ ಯಾದವ್‌ ಅರ್ಧಶತಕ ಹಾಗೂ ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್‌ ದಾಳಿಯ ನೆರವಿನಿಂದ ಮುಂಬೈ ಇಂಡಿಯನ್ಸ್‌ ತಂಡ, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ 59 ರನ್‌ಗಳಿಂದ ಗೆದ್ದು, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಿತು. ಸೋಲಿನ ಮೂಲಕ ಡೆಲ್ಲಿ ಪ್ಲೇಆಫ್ಸ್‌ ರೇಸ್‌ನಿಂದ ಹೊರ ನಡೆಯಿತು.

ಡೆಲ್ಲಿ ಕನಸು ಭಗ್ನ, ಪ್ಲೇಆಫ್ಸ್‌ಗೆ ಅರ್ಹತೆ ಪಡೆದ ಮುಂಬೈ ಇಂಡಿಯನ್ಸ್‌!

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗೆದ್ದು ಪ್ಲೇಆಫ್ಸ್‌ಗೆ ಅರ್ಹತೆ ಪಡೆದ ಮುಂಬೈ ಇಂಡಿಯನ್ಸ್‌.

Profile Ramesh Kote May 21, 2025 11:50 PM

ಮುಂಬೈ: ಸೂರ್ಯಕುಮಾರ್‌ ಯಾದವ್‌ (73*) ಅರ್ಧಶತಕ ಹಾಗೂ ಮಿಚೆಲ್‌ ಸ್ಯಾಂಟ್ನರ್‌ ಮತ್ತು ಜಸ್‌ಪ್ರೀತ್‌ ಬುಮ್ರಾ ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ಸಹಾಯದಿಂದ ಮುಂಬೈ ಇಂಡಿಯನ್ಸ್‌ (MI) ತಂಡ, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ (DC) ವಿರುದ್ದ 59 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಪ್ಲೇಆಫ್ಸ್‌ ಟಿಕೆಟ್‌ ಅನ್ನು ಪಡೆದುಕೊಂಡಿತು. ಆದರೆ, ಸೋಲು ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಟೂರ್ನಿಯಿಂದ ಎಲಿಮಿನೇಟ್‌ ಆಯಿತು. ಮುಂಬೈ ಇಂಡಿಯನ್ಸ್‌ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಸೂರ್ಯಕುಮಾರ್‌ ಯಾದವ್‌ (Suryakumar Yadav) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಬುಧವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ನೀಡಿದ್ದ 181 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಜಸ್‌ಪ್ರೀತ್‌ ಬುಮ್ರಾ ಹಾಗೂ ಮಿಚೆಲ್‌ ಸ್ಯಾಂಟ್ನರ್‌ ಸೇರಿದಂತೆ ಮುಂಬೈ ಬೌಲರ್‌ಗಳ ದಾಳಿಗೆ ಡೆಲ್ಲಿ ಬ್ಯಾಟ್ಸ್‌ಮನ್‌ಗಳು ಶರಣಾದರು. ಸಮೀರ್‌ ರಿಝ್ವಿ(39) ಹಾಗೂ ವಿಪ್ರಜ್‌ ನಿಗಮ್‌ (20) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಯಕ್ತಿಕ 20 ರನ್‌ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್‌ 18.2 ಓವರ್‌ಗಳಿಗೆ 121 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಸೋಲು ಅನುಭವಿಸಿತು.

IPL 2025: ʼನಮಗೆ ಅನ್ಯಾಯವಾಗಿದೆʼ- ನಿಯಮ ಬದಲಿಸಿದ ಬಿಸಿಸಿಐ ವಿರುದ್ಧ ತಿರುಗಿಬಿದ್ದ ಕೆಕೆಆರ್‌ ಸಿಇಒ!

ಡೆಲ್ಲಿ ಬ್ಯಾಟ್ಸ್‌ಮನ್‌ಗಳ ವೈಫಲ್ಯ

ಫಾಫ್‌ ಡು ಪ್ಲೆಸಿಸ್‌ (6), ಕೆಎಲ್‌ ರಾಹುಲ್‌ (11) ಹಾಗೂ ಅಭಿಷೇಕ್‌ ಪೊರೆಲ್‌ (6) ಡೆಲ್ಲಿಗೆ ಉತ್ತಮ ಆರಂಭ ತಂದುಕೊಡುವಲ್ಲಿ ವಿಫಲರಾದರು. ಆ ಮೂಲಕ ಡೆಲ್ಲಿ ಕೇವಲ 27 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಸಮೀರ್‌ ರಿಝ್ವಿ ಹಾಗೂ ವಿಪ್ರಜ್‌ ನಿಗಮ್‌ ಸ್ವಲ್ಪ ಹೊತ್ತು ಆಡಿ 28 ರನ್‌ಗಳ ಅಲ್ಪ ಜೊತೆಯಾಟದ ಮೂಲಕ ಡೆಲ್ಲಿಗೆ ಭರವಸೆ ನೀಡಿದ್ದರು. ಆದರೆ, 20 ರನ್‌ ಗಳಿಸಿ ಆಡುತ್ತಿದ್ದ ವಿಪ್ರಜ್‌ ನಿಗಮ್‌ ಅವರನ್ನು ಮಿಚೆಲ್‌ ಸ್ಯಾಂಟ್ನರ್‌ ಔಟ್‌ ಮಾಡಿ ಜೊತೆಯಾಟವನ್ನು ಬ್ರೇಕ್‌ ಮಾಡಿದರು. ಒಂದು ತುದಿಯಲ್ಲಿ 35 ಎಸೆತಗಳಲ್ಲಿ 39 ರನ್‌ ಗಳಿಸಿ ಏಕಾಂಗಿ ಹೋರಾಟ ನಡೆಸುತ್ತಿದ್ದ ಸಮೀರ್‌ ರಿಝ್ವಿಗೆ ಮತ್ತೊಂದು ತುದಿಯಲ್ಲಿ ಯಾರೂ ಸಾಥ್‌ ನೀಡಲಿಲ್ಲ. ಕೆಳ ಮಧ್ಯಮ ಕ್ರಮಾಂಕದಲ್ಲಿ ಆಶುತೋಷ್‌ ಶರ್ಮಾ 18 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಟ್ರಿಸ್ಟನ್‌ ಸ್ಟಬ್ಸ್‌ ಕೂಡ ನಿರಾಶೆ ಮೂಡಿಸಿದರು.



ಮಿಂಚಿದ ಸ್ಯಾಂಟ್ನರ್‌, ಬುಮ್ರಾ

ಮುಂಬೈ ಇಂಡಿಯನ್ಸ್‌ ಪರ ಎಲ್ಲಾ ಬೌಲರ್‌ಗಳು ಕೂಡ ಉತ್ತಮ ಪ್ರದರ್ಶನವನ್ನು ತೋರಿದರು. ಇವರ ಪೈಕಿ ವಿಶೇಷವಾಗಿ ಮಿಚೆಲ್‌ ಸ್ಯಾಂಟ್ನರ್‌ ಮತ್ತು ಜಸ್‌ಪ್ರೀತ್‌ ಬುಮ್ರಾ ತಲಾ ಮೂರು ವಿಕೆಟ್‌ಗಳನ್ನು ಕಿತ್ತು ಡೆಲ್ಲಿ ತಂಡವನ್ನು 121 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.

180 ರನ್‌ ಕಲೆ ಹಾಕಿದ್ದ ಮುಂಬೈ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಮುಂಬೈ ಇಂಡಿಯನ್ಸ್‌ ತಂಡ, ಸೂರ್ಯಕುಮಾರ್‌ ಯಾದವ್‌ ನಿರ್ಣಾಯಕ ಅರ್ಧಶತಕದ ಬಲದಿಂದ, ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 180 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 181 ರನ್‌ಗಳ ಗುರಿಯನ್ನು ನೀಡುವಲ್ಲಿ ಸಫಲವಾಗಿತ್ತು.



ಸ್ಟಾರ್‌ ಬ್ಯಾಟ್ಸ್‌ಮನ್‌ಗಳ ವೈಫಲ್ಯ

ಮುಂಬೈ ಇಂಡಿಯನ್ಸ್‌ ತಂಡದ ಪರ ಬ್ಯಾಟಿಂಗ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ಸೂರ್ಯಕುಮಾರ್‌ ಯಾದವ್‌! ರೋಹಿತ್‌ ಶರ್ಮಾ 5 ರನ್‌ಗೆ ವಿಕೆಟ್‌ ಒಪ್ಪಿಸಿದ್ದರು. ರಯಾನ್‌ ರಿಕೆಲ್ಟನ್‌ (25) ಹಾಗೂ ವಿಲ್‌ ಜ್ಯಾಕ್ಸ್‌ ( 21) ಅವರು ಸಿಕ್ಕ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ತಿಲಕ್‌ ವರ್ಮಾ 27 ರನ್‌ ಗಳಿಸಿ ಔಟ್‌ ಆಗಿದ್ದರು. ನಂತರ ಹಾರ್ದಿಕ್‌ ಪಾಂಡ್ಯ ನಿರಾಶೆ ಮೂಡಿಸಿದ್ದರು. ಆ ಮೂಲಕ ಮುಂಬೈ ಇಂಡಿಯನ್ಸ್‌ 16.3 ಓವರ್‌ಗಳಿಗೆ 123 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.



ನಿರ್ಣಾಯಕ ಅರ್ಧಶತಕ ಬಾರಿಸಿದ್ದ ಸೂರ್ಯ

ಆದರೆ, ಈ ವೇಳೆ ಕೊನೆಯಲ್ಲಿ ಆರನೇ ವಿಕೆಟ್‌ಗೆ ಸೂರ್ಯಕುಮಾರ್‌ ಯಾದವ್‌ ಹಾಗೂ ನಮನ್‌ ಧೀರ್‌ ಕೊನೆಯ 19 ಎಸೆತಗಳಲ್ಲಿ 57 ರನ್‌ಗಳನ್ನು ಸಿಡಿಸಿದರು. ಇದು ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ ತಂದುಕೊಟ್ಟಿತು. ಸ್ಪೋಟಕ ಬ್ಯಾಟ್‌ ಮಾಡಿದ ಸೂರ್ಯಕುಮಾರ್‌ ಯಾದವ್‌ 43 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ ಅಜೇಯ 73 ರನ್‌ಗಳನ್ನು ಸಿಡಿಸಿ ಮುಂಬೈ ಇಂಡಿಯನ್ಸ್‌ 180 ರನ್‌ ಗಳಿಸಲು ನೆರವು ನೀಡಿದರು. ಕೊನೆಯಲ್ಲಿ ಇವರಿಗೆ ಸಾಥ್‌ ನೀಡಿದ್ದ ನಮನ್‌ ಧೀರ್‌ 8 ಎಸೆತಗಳಲ್ಲಿ ಅಜೇಯ 24 ರನ್‌ಗಳ ನಿರ್ಣಾಯಕ ಕೊಡುಗೆ ನೀಡಿದ್ದರು.