Operation Abhyas: ಚಿಕ್ಕಬಳ್ಳಾಪುರದಲ್ಲಿ 'ಆಪರೇಷನ್ ಅಭ್ಯಾಸ್' ಅಣಕು ಕವಾಯತು; ತುರ್ತು ಪರಿಸ್ಥಿತಿ ಎದುರಿಸುವ ಬಗ್ಗೆ ಜಾಗೃತಿ
Chikkaballapur News: ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಲ್ಲಿ ʼಆಪರೇಷನ್ ಅಭ್ಯಾಸ್ʼ ಅಂಗವಾಗಿ ಬುಧವಾರ ನಾಗರಿಕ ರಕ್ಷಣಾ ಕಾರ್ಯಾಚರಣೆಯ ಸಂಬಂಧ ಸಾರ್ವಜನಿಕರು ಆಪತ್ಕಾಲದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಭೌತಿಕ ಪ್ರಾತ್ಯಕ್ಷಿಕೆಯ ಮೂಲಕ ಸರ್ಮರ್ಥವಾಗಿ ಅರಿವು ಮೂಡಿಸಲಾಯಿತು. ಈ ಕುರಿತ ವಿವರ ಇಲ್ಲಿದೆ.


ಚಿಕ್ಕಬಳ್ಳಾಪುರ: ನಗರದ ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಲ್ಲಿ ʼಆಪರೇಷನ್ ಅಭ್ಯಾಸ್ʼ ಅಂಗವಾಗಿ ಬುಧವಾರ ನಾಗರಿಕ ರಕ್ಷಣಾ ಕಾರ್ಯಾಚರಣೆಯ ಸಂಬಂಧ ಸಾರ್ವಜನಿಕರು ಆಪತ್ಕಾಲದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಭೌತಿಕ ಪ್ರಾತ್ಯಕ್ಷಿಕೆಯ ಮೂಲಕ ಸರ್ಮರ್ಥವಾಗಿ ಅರಿವು ಮೂಡಿಸಲಾಯಿತು. ನಗರದ (Chikkaballapur News) ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ಆಪರೇಷನ್ ಅಭ್ಯಾಸ್ (Operation Abhyas) ನಾಗರಿಕರ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಎಸ್ಪಿ ಕುಶಾಲ್ ಚೌಕ್ಸೆ ಚಾಲನೆ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಕೇಂದ್ರ ಬಸ್ ನಿಲ್ದಾಣದ ಸಮೀಪ ಅಣಕು ಪ್ರದರ್ಶನ ಮಾಡಲಾಯಿತು. ತುರ್ತು ಸಂದರ್ಭದಲ್ಲಿ ಸೈರನ್ ಮೊಳಗಿದಾಗ ಸಾರ್ವಜನಿಕರು ಯಾವುದೇ ಕಾರಣಕ್ಕೂ ಗುಂಪು ಸೇರಬಾರದು. ಸಾರ್ವಜನಿಕರು ನಿಮ್ಮ ನಿಮ್ಮ ರಕ್ಷಣಾತ್ಮಕವಾದ ಸುರಕ್ಷಿತವಾದ ಸ್ಥಳಗಳಲ್ಲಿ ಅಡಗಿಕೊಳ್ಳಬೇಕು. ಮನೆಯಿರಲಿ, ಸರ್ಕಾರಿ ಕಚೇರಿ ಕಟ್ಟಡಗಳಿರಲಿ ಅಲ್ಲಿ ಹೋಗಿ ರಕ್ಷಣೆ ಪಡೆಯಬೇಕು ಎಂದು ತಿಳಿಸಿದರು.

ಜನಜಂಗುಳಿ ಇದ್ದಾಗ ಆಂಬ್ಯುಲೆನ್ಸ್ ಹಾಗೂ ರಕ್ಷಣಾ ತಂಡಗಳ ವಾಹನ ಬರಲು ಕಷ್ಟಸಾಧ್ಯವಾಗಬಹುದು. ಈ ಅಣುಕು ಪ್ರದರ್ಶನದಲ್ಲಿ ಭಯೋತ್ಪಾದಕರು ದಾಳಿ ನಡೆಸಿದಾಗ ನಾಗರಿಕರಿಗೆ ಆಗುವ ತೊಂದರೆಗಳನ್ನು ಮನಮುಟ್ಟುವಂತೆ ಪ್ರದರ್ಶನದಲ್ಲಿ, ಇಂತಹ ಕಷ್ಟದ ಸಂದರ್ಭದಲ್ಲಿ ನಾಗರೀಕರ ಸಹಕಾರವೂ ಹೇಗಿರಬೇಕು ಎಂಬ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದ್ದಾರೆ ಎಂದರು.

ಸಿಟಿಜನ್ ವಾಲೆಂಟಿರ್ಸ್
ಸಿಟಿಜನ್ ವಾಲೆಂಟಿರ್ಸ್ ನೋಂದಣಿಗೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದ್ದು, ಆಸಕ್ತರು ತಪ್ಪದೆ ನೋಂದಣಿ ಮಾಡಿಕೊಳ್ಳಬೇಕು. ಯಾವುದೇ ಜಿಲ್ಲೆಯಲ್ಲಿ ಈ ತರದ ಘಟನೆಗಳು ನಡೆದಾಗ, ನಡೆಯುವ ಸಂಭವದ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಡಳಿತ ಕಾರ್ಯಾಲಯಕ್ಕೆ ಮಾಹಿತಿ ನೀಡಬೇಕು. ಈಗಾಗಲೇ ನಾವು ಜಿಲ್ಲೆಯಲ್ಲಿ ಸೆಕ್ಯೂರಿಟಿ ಪ್ಲಾನ್ ಮಾಡಿಕೊಂಡಿದ್ದು, ಪ್ರತಿಯೊಂದು ಗ್ರಾಮದಲ್ಲಿಯೂ ಈ ತಂಡದ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಯಾರೂ ಕೂಡ ಆತಂಕಕ್ಕೆ ಒಳಗಾಗಬೇಡಿ ಎಂದು ಹೇಳಿದರು.

ನಾಗರಿಕರ ರಕ್ಷಣೆ ವಿಷಯದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ತೆಗೆದುಕೊಳ್ಳಬೇಕಾದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ವದಂತಿಗಳಿಗೆ ಕಿವಿಗೊಡದೆ, ಪೂರ್ವಾಗ್ರಹ ಪೀಡಿತರಾಗದೆ ಜಿಲ್ಲಾಡಳಿತದ ಮೇಲೆ ವಿಶ್ವಾಸವಿಡಿ ಎಂದು ತಿಳಿಸಿದ ಅವರು, ಇಂದಿನ ಅಣುಕು ಪ್ರದರ್ಶನ ಯಶಸ್ವಿಯಾಗಿದೆ. ಈ ವಿಚಾರ, ವಿಷಯವನ್ನು ಹೆಚ್ಚೆಚ್ಚು ನಾಗರಿಕರಿಗೆ ತಿಳಿಸಿದರೆ ಉಪಯೋಗ ಆಗಲಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Dinesh Gundu Rao: ರಾಜ್ಯ ಸರ್ಕಾರದಿಂದಲೇ ಇನ್ಮುಂದೆ 108 ಆಂಬ್ಯುಲೆನ್ಸ್ ನಿರ್ವಹಣೆ: ದಿನೇಶ್ ಗುಂಡೂರಾವ್
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಡಿವೈಎಸ್ಪಿ ಶಿವಕುಮಾರ್, ಜಿಲ್ಲಾ ಕುಟುಂಬಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್, ಉಪವಿಭಾಗಾಧಿಕಾರಿ ಅಶ್ವಿನ್, ತಹಸೀಲ್ದಾರ್ ಅನಿಲ್, ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಕ ಬಸವರಾಜ್ ಮತ್ತಿತರರು ಇದ್ದರು.