Chinese Court: ಕೆಲಸದ ಸಮಯದಲ್ಲಿ ಗೆಳತಿಯೊಂದಿಗೆ ಸರಸವಾಡುತ್ತಿದ್ದಾಗಲೇ ಮೃತಪಟ್ಟ ವ್ಯಕ್ತಿ; ಕೈಗಾರಿಕಾ ಅಪಘಾತ ಎಂದ ಕೋರ್ಟ್
ಕೆಲಸದ ಸಮಯದಲ್ಲಿ ಗೆಳತಿಯೊಂದಿಗೆ ಸರಸವಾಡುತ್ತಿದ್ದ 60 ವರ್ಷದ ಭದ್ರತಾ ಸಿಬ್ಬಂದಿಯೊಬ್ಬರು ಮೃತಪಟ್ಟ ಘಟನೆಯನ್ನು ಚೀನಾದ ನ್ಯಾಯಾಲಯವು ʼಕೈಗಾರಿಕಾ ಅಪಘಾತʼ ಎಂದು ತೀರ್ಪು ನೀಡಿದೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ನ್ಯಾಯಾಲಯವು ಕೆಲಸದ ಸ್ಥಳದಲ್ಲಿ ತನ್ನ ಗೆಳತಿಯೊಂದಿಗೆ ಆತ್ಮೀಯ ಸಂಬಂಧ ಹೊಂದುವ ಹಕ್ಕು, ನೀರು ಕುಡಿಯುವುದು ಅಥವಾ ರೆಸ್ಟ್‌ರೂಮ್ ಬಳಸುವಷ್ಟೇ ಸಹಜವಾದದ್ದು ಎಂದು ತಿಳಿಸಿದೆ.

ಸಾಂಧರ್ಬಿಕ ಚಿತ್ರ.

ಬೀಜಿಂಗ್: ಕೆಲಸದ ಸಮಯದಲ್ಲಿ (Work Hours) ಗೆಳತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ 60 ವರ್ಷದ ಭದ್ರತಾ ಸಿಬ್ಬಂದಿಯೊಬ್ಬ (Security Guard ) ಮೃತಪಟ್ಟ ಘಟನೆಯನ್ನು ಚೀನಾದ ನ್ಯಾಯಾಲಯ (Chinese Court)ವು ಕೈಗಾರಿಕಾ ಅಪಘಾತ (Industrial Accident) ಎಂದು ತೀರ್ಪು ನೀಡಿದೆ. ಮೃತನನ್ನು ಝಾಂಗ್ ಎಂದು ಗುರುತಿಸಲಾಗಿದೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ನ್ಯಾಯಾಲಯವು ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ತಮ್ಮ ಗೆಳತಿಯೊಂದಿಗೆ ಆತ್ಮೀಯ ಸಂಬಂಧ ಹೊಂದುವ ಹಕ್ಕು, ನೀರು ಕುಡಿಯುವುದು ಅಥವಾ ರೆಸ್ಟ್‌ರೂಮ್ ಬಳಸುವಷ್ಟೇ ಸಹಜವಾದದ್ದು ಎಂದು ತಿಳಿಸಿದೆ.
ಝಾಂಗ್ ಬೀಜಿಂಗ್‌ನ ಒಂದು ಸಣ್ಣ ಕಾರ್ಖಾನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ವಿರಾಮವಿಲ್ಲದೆ, ರಜೆ ದಿನಗಳಿಲ್ಲದೆ ನಿರಂತರವಾಗಿ ಕೆಲಸ ಮಾಡುತ್ತಿದ್ದ ಎಂದು ಸದರ್ನ್ ಮೆಟ್ರೋಪೊಲಿಸ್ ನ್ಯೂಸ್ ವರದಿ ಮಾಡಿತ್ತು. 2014ರ ಅಕ್ಟೋಬರ್ 6ರಂದು ಕಾರ್ಖಾನೆಯ ಭದ್ರತಾ ಕೊಠಡಿಯಲ್ಲಿ ಗೆಳತಿಯನ್ನು ಭೇಟಿಯಾದ ಝಾಂಗ್ ಸರಸವಾಡುತ್ತಲೇ ಮೃತಪಟ್ಟಿದ್ದ.
ಪೊಲೀಸ್ ತನಿಖೆಯು ಯಾವುದೇ ಅನುಮಾನಾಸ್ಪದ ಸಂದರ್ಭಗಳಿಲ್ಲದೆ, ಈ ಸಾವು ಆಕಸ್ಮಿಕವಾಗಿದೆ ಎಂದು ದೃಢಪಡಿಸಿತು. ಒಂದು ವರ್ಷದ ಬಳಿಕ ಝಾಂಗ್‌ನ ಮಗ ಝಾಂಗ್ ಶಿಯಾವೊಶಿ, ಮುನ್ಸಿಪಲ್ ಸೋಶಿಯಲ್ ಸೆಕ್ಯುರಿಟಿ ಬ್ಯೂರೋದಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರೂ, ಅಧಿಕಾರಿಗಳು ತಿರಸ್ಕರಿಸಿದರು. ಝಾಂಗ್ ತನ್ನ ಕರ್ತವ್ಯವನ್ನು ನಿರ್ವಹಿಸದೆ, ಗೆಳತಿಯೊಂದಿಗೆ ಡೇಟಿಂಗ್‌ನಲ್ಲಿದ್ದ ಕಾರಣ ಇದು ಕೈಗಾರಿಕಾ ಅಪಘಾತವಲ್ಲ ಎಂದು ಅಧಿಕಾರಿಗಳು ವಾದಿಸಿದರು.
ಈ ಸುದ್ದಿಯನ್ನು ಓದಿ: Viral Video: ನೆದರ್‌ಲ್ಯಾಂಡ್ ಖರೀದಿಸಿದ ಟಾಪ್‌ಗೆ.. ಇಡೀ ಪ್ರಪಂಚ ಹುಡುಕಿದ್ರೂ ಸಿಗದ ಮ್ಯಾಚಿಂಗ್ ಸ್ಕರ್ಟ್ ಸಿಕ್ಕಿದ್ದೆಲ್ಲಿ ಗೊತ್ತಾ? ಈ ವೈರಲ್ ವಿಡಿಯೊ ನೋಡಿ
2016ರಲ್ಲಿ ಶಿಯಾವೊಶಿ ಸಾಮಾಜಿಕ ಭದ್ರತಾ ಕಚೇರಿ ಮತ್ತು ಕಾರ್ಖಾನೆಯ ವಿರುದ್ಧ ಮೊಕದ್ದಮೆ ಹೂಡಿದರು. ತಂದೆಯು ನಿರಂತರ ಕೆಲಸದಲ್ಲಿದ್ದ ಕಾರಣ, ಈ ಸಾವನ್ನು ಕಾರ್ಯಸ್ಥಳದ ಮರಣವೆಂದು ವರ್ಗೀಕರಿಸಬೇಕು ಎಂದು ಅವರು ವಾದಿಸಿದರು. ಝಾಂಗ್‌ಗೆ ಕೆಲಸದಿಂದ ಹೊರಗೆ ಹೋಗಲು ಸಾಧ್ಯವಾಗದ ಕಾರಣ, ಗೆಳತಿಯನ್ನು ಭದ್ರತಾ ಕೊಠಡಿಯಲ್ಲಿಯೇ ಭೇಟಿಯಾಗಿದ್ದ. "ನನ್ನ ತಂದೆಯ ಭಾವನಾತ್ಮಕ ಅಗತ್ಯಗಳು ವಯಸ್ಕ ಪುರುಷನಿಗೆ ಸಹಜವಾದವು. ಪ್ರೀತಿಯ ಸಂಬಂಧವು ವಿಶ್ರಾಂತಿಯ ಒಂದು ಭಾಗವಾಗಿದೆ. ಅವರು ತಮ್ಮ ಕಾರ್ಯಸ್ಥಳದಲ್ಲಿಯೇ ಇದ್ದರು. ಆದ್ದರಿಂದ, ಅವರ ಅಕಾಲಿಕ ಮರಣವನ್ನು ಕೈಗಾರಿಕಾ ಅಪಘಾತವಾಗಿ ವರ್ಗೀಕರಿಸಬೇಕು" ಎಂದು ಶಿಯಾವೊಶಿ ನ್ಯಾಯಾಲಯಕ್ಕೆ ತಿಳಿಸಿದರು.
ಚೀನಾದ ಕೈಗಾರಿಕಾ ಅಪಘಾತ ವಿಮೆ ನಿಯಮದ ಪ್ರಕಾರ, ಕೆಲಸದ ಸಮಯದಲ್ಲಿ, ಕಾರ್ಯಸ್ಥಳದಲ್ಲಿ ಉದ್ಯೋಗಿಯ ಅಕಾಲಿಕ ಮರಣವನ್ನು ಕೈಗಾರಿಕಾ ದುರಂತವೆಂದು ವರ್ಗೀಕರಿಸಬೇಕು. ಈ ತೀರ್ಪಿನಿಂದ ಝಾಂಗ್ ಕುಟುಂಬಕ್ಕೆ ಪರಿಹಾರ ಮತ್ತು ವಿಮಾ ವ್ಯಾಪ್ತಿಯ ಹಕ್ಕು ದೊರೆತಿದೆ. ಕಾರ್ಖಾನೆ ಮತ್ತು ಸಾಮಾಜಿಕ ಭದ್ರತಾ ಕಚೇರಿಯ ಮೇಲ್ಮನವಿಯ ಹೊರತಾಗಿಯೂ, ಉನ್ನತ ನ್ಯಾಯಾಲಯವು ಆರಂಭಿಕ ತೀರ್ಪನ್ನು ಎತ್ತಿಹಿಡಿಯಿತು. 2017ರ ಫೆಬ್ರವರಿಯಲ್ಲಿ ಸಾಮಾಜಿಕ ಭದ್ರತಾ ಅಧಿಕಾರಿಗಳು ಝಾಂಗ್‌ನ ಸಾವನ್ನು ವೃತ್ತಿಪರ ದುರಂತವೆಂದು ದೃಢಪಡಿಸಿದ ದಾಖಲೆಯನ್ನು ಬಿಡುಗಡೆ ಮಾಡಿದರು. ಆದರೆ ಕುಟುಂಬಕ್ಕೆ ದೊರೆಯುವ ಪರಿಹಾರದ ಮೊತ್ತವನ್ನು ಸ್ಪಷ್ಟಪಡಿಸಲಿಲ್ಲ.