RR vs GT: ಸೋಲಿನ ಸುಳಿಯಿಂದ ಹೊರಬರುವುದೇ ರಾಜಸ್ಥಾನ್?; ನಾಳೆ ಗುಜರಾತ್ ಎದುರಾಳಿ
ಇತ್ತಂಡಗಳು ಇದುವರೆಗಿನ ಐಪಿಎಲ್‌ನಲ್ಲಿ 7 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ರಾಜಸ್ಥಾನ್ ರಾಯಲ್ಸ್ ಗೆದ್ದಿರುವುದು ಕೇವಲ ಒಂದು ಪಂದ್ಯ ಮಾತ್ರ. ಗುಜರಾತ್ ಟೈಟಾನ್ಸ್ ಗರಿಷ್ಠ 6 ಪಂದ್ಯ ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಗುಜರಾತ್ ಬಲಿಷ್ಠ ಎನ್ನಲಡ್ಡಿಯಿಲ್ಲ.


ಜೈಪುರ: ಪ್ಲೇ-ಆಫ್‌ನ ಕ್ಷೀಣ ಅವಕಾಶವೊಂದನ್ನು ಹೊಂದಿರುವ ರಾಜಸ್ಥಾನ್ ರಾಯಲ್ಸ್(RR vs GT) ಮತ್ತು ಪ್ಲೇ-ಆಫ್ ಸನಿಹಕ್ಕೆ ಬಂದು ನಿಂತಿರುವ ಗುಜರಾತ್ ಟೈಟಾನ್ಸ್ ತಂಡಗಳು ಸೋಮವಾರ ಐಪಿಎಲ್(IPL 2025)ನ 47ನೇ ಪಂದ್ಯದಲ್ಲಿ ಸೆಣಸಾಟ ನಡೆಸಲಿದೆ. 9 ಪಂದ್ಯಗಳಲ್ಲಿ 2 ಪಂದ್ಯ ಗೆದ್ದು 9ನೇ ಸ್ಥಾನದಲ್ಲಿರುವ ರಾಜಸ್ಥಾನ್ ಈ ಪಂದ್ಯದಲ್ಲಿ ಸೋತರೆ ಅಧಿಕೃತವಾಗಿ ಲೀಗ್‌ನಿಂದ ಹೊರಬೀಳಲಿದೆ. ಇದನ್ನು ತಪ್ಪಿಸಬೇಕಿದ್ದರೆ ಗೆಲುವು ಅತ್ಯಗತ್ಯ.
ರಾಜಸ್ಥಾನ್ ತಂಡ ಒಂದೆಡೆ ಬ್ಯಾಟಿಂಗ್‌ನಲ್ಲಿ ಹೀನಾಯ ವೈಫಲ್ಯ ಅನುಭವಿಸಿದರೆ, ಮತ್ತೊಂದೆಡೆ ಅದೃಷ್ಟ ಕೂಡ ಕೈಕೊಡುತ್ತಿದೆ. ಗೆಲುವಿನ ಸನಿಹಕ್ಕೆ ಬಂದು ಸೋಲು ಕಾಣುತ್ತಿದೆ. ಇದಕ್ಕೆ ಕಳೆದ ಮೂರು ಪಂದ್ಯಗಳ ಫಲಿತಾಂಶವೇ ಉತ್ತಮ ನಿದರ್ಶನ. ಗಾಯಳು ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿಯೂ ಆಡುವುದು ಅನುಮಾನ. ಸಂಜು ಗೈರು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ತಂಎದ ವೇಳೆ ಸಂದೀಪ್ ಶರ್ಮ ಕಳೆದ ಪಂದ್ಯದ ವೇಳೆ ಹೇಳಿದ್ದರು.
ಆರಂಭಿಕ ಆಟಗಾರ ಜೈಸ್ವಾಲ್ ಹೊರತುಪಡಿಸಿ ಉಳಿದ ಆಟಗಾರರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಕಂಡುಬರುತ್ತಿಲ್ಲ. ಉಸ್ತುವಾರಿ ನಾಯಕ ರಿಯಾನ್ ಪರಾಗ್ ಒಂದೆರಡು ಸಿಕ್ಸರ್ ಬಾರಿಸಿ ವಿಕೆಟ್ ಕೈಚೆಲ್ಲುತ್ತಿದ್ದಾರೆ. ವಿಂಡೀಸ್‌ನ ಹೆಟ್‌ಮೈರ್ ಕೂಡ ದೊಡ್ಡ ಇನಿಂಗ್ಸ್ ಆಡಿಲ್ಲ. ಜತೆಗೆ ತಂಡದ ಫೀಲ್ಡಿಂಗ್ ಕೂಡ ಸಾಧಾರಣ ಮಟ್ಟದಲ್ಲಿದೆ. ಹಲವು ಕ್ಯಾಚ್ ಕೈಚೆಲ್ಲುವ ಮೂಲಕ ಪಂದ್ಯದ ಸೋಲಿಗೆ ಕಾರಣರಾಗುತ್ತಿದ್ದಾರೆ. ಒಟ್ಟಾರೆ ಸ್ಥಿರ ಪ್ರದರ್ಶನ ತೋರದ ಹೊರತು ತಂಡ ಗೆಲುವಿನ ಹಳಿ ಏರುವುದು ಕಷ್ಟ ಸಾಧ್ಯ.
ಇದನ್ನೂ ಓದಿ IPL 2025: ಪಂಜಾಬ್ ವಿರುದ್ಧದ ಪಂದ್ಯ ರದ್ದಾದ ನಂತರ ಕೆಕೆಆರ್ ಪ್ಲೇ-ಆಫ್ ಅವಕಾಶ ಹೇಗಿದೆ?
ಗುಜರಾತ್ ಸಮರ್ಥ ತಂಡ
ಆಡಿದ 8 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 12 ಅಂಕಗಳಿಸಿರುವ ಗುಜರಾತ್ ಟೈಟಾನ್ಸ್ ತಂಡ ಬ್ಯಾಟಿಂಗ್, ಬೌಲಿಂಗ್ ಎಲ್ಲಾ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ಪರ ಆಡಿದ ಜಾಸ್ ಬಟ್ಲರ್, ಪ್ರಸಿದ್ಧ್ ಕೃಷ್ಣ ಈ ಬಾರಿ ಗುಜರಾತ್ ತಂಡದ ಪರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಹಾಲಿ ಆವೃತ್ತಿಯ ಯಶಸ್ವಿ ಆರಂಭಿಕ ಜೋಡಿ ಎನಿಸಿಕೊಂಡ ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್ ಗಿಲ್ ಜತೆಯಾಟ ಕೂಡ ತಂಡದ ಪ್ಲಸ್ ಪಾಯಿಂಟ್. ಉಳಿದಂತೆ ಮೊಹಮ್ಮದ್ ಸಿರಾಜ್ ಕೂಡ ಉತ್ತಮ ಲಯದಲ್ಲಿದ್ದಾರೆ. ತಂಡದ ಪರ ಔಟ್ ಆಫ್ ಫಾರ್ಮ್‌ನಲ್ಲಿರುವ ಆಟಗಾರನೆಂದರೆ ಸ್ಪಿನ್ ಆಲ್‌ರೌಂಡರ್ ರಶೀದ್ ಖಾನ್ ಮಾತ್ರ. ಅವರು ಎಲ್ಲ ಪಂದ್ಯದಲ್ಲಿಯೂ ದುಬಾರಿಯಾಗುತ್ತಿದ್ದಾರೆ.
ಮುಖಾಮುಖಿ
ಇತ್ತಂಡಗಳು ಇದುವರೆಗಿನ ಐಪಿಎಲ್‌ನಲ್ಲಿ 7 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ರಾಜಸ್ಥಾನ್ ಗೆದ್ದಿರುವುದು ಕೇವಲ ಒಂದು ಪಂದ್ಯ ಮಾತ್ರ. ಗುಜರಾತ್ ಗರಿಷ್ಠ 6 ಪಂದ್ಯ ಗೆದ್ದಿದೆ.
ಸಂಭಾವ್ಯ ತಂಡ
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಶುಭಂ ದುಬೆ, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ್ ಜುರೆಲ್ (ವಿ.ಕೀ.), ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಫಜಲ್ಹಕ್ ಫಾರೂಕಿ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ.
ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿ.ಕೀ.), ಶೆರ್ಫೇನ್ ರುದರ್‌ಫೋರ್ಡ್, ರಾಹುಲ್ ತೆವಾಟಿಯಾ, ವಾಷಿಂಗ್ಟನ್ ಸುಂದರ್, ಶಾರುಖ್ ಖಾನ್, ರಶೀದ್ ಖಾನ್, ಆರ್. ಸಾಯಿ ಕಿಶೋರ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.