ಸೇನಾ ಕಾರ್ಯಾಚರಣೆಯ ನೇರಪ್ರಸಾರ ಮಾಡಬೇಡಿ: ಮಾಧ್ಯಮಗಳಿಗೆ ಕೇಂದ್ರದಿಂದ ಮಾರ್ಗಸೂಚಿ ಪ್ರಕಟ
Pahalgam Terror Attack: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತೀಯ ಸೇನೆ ದಿಟ್ಟವಾಗಿ ಪ್ರತ್ಯತ್ತರ ನೀಡುತ್ತಿದೆ. ಈ ಮಧ್ಯೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ರಾಷ್ಟ್ರೀಯ ಭದ್ರತೆ ಹಿತಾಸಕ್ತಿ ಹಿನ್ನೆಲೆಯಲ್ಲಿ ಎಲ್ಲ ಮಾಧ್ಯಮ ಸಂಸ್ಥೆಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ರಕ್ಷಣಾ ಕಾರ್ಯಾಚರಣೆ, ಸೇನೆಯ ಚಲನವಲನಗಳ ನೇರಪ್ರಸಾರ ಮಾಡದಂತೆ ಸಲಹೆ ನೀಡಿದೆ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ (Pahalgam Terror Attack) ಭಾರತೀಯ ಸೇನೆ ದಿಟ್ಟವಾಗಿ ಪ್ರತ್ಯತ್ತರ ನೀಡುತ್ತಿದೆ. ಈ ಮಧ್ಯೆ ಶನಿವಾರ (ಏ. 26) ಮಾಹಿತಿ ಮತ್ತು ಪ್ರಸಾರ ಸಚಿವಾಲಯವು (Union Ministry of Information and Broadcasting) ರಾಷ್ಟ್ರೀಯ ಭದ್ರತೆ ಹಿತಾಸಕ್ತಿ ಹಿನ್ನೆಲೆಯಲ್ಲಿ ಎಲ್ಲ ಮಾಧ್ಯಮ ಸಂಸ್ಥೆಗಳಿಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ರಕ್ಷಣಾ ಕಾರ್ಯಾಚರಣೆ, ಸೇನೆಯ ಚಲನವಲನಗಳ ನೇರಪ್ರಸಾರ ಮಾಡದಂತೆ ಸಲಹೆ ನೀಡಿದೆ.
ʼʼರಾಷ್ಟ್ರದ ಹಿತದೃಷ್ಟಿಯಿಂದ ಎಲ್ಲ ಮಾಧ್ಯಮಗಳು, ಸುದ್ದಿಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಭದ್ರತೆಗೆ ಸಂಬಂಧಿತ ಕಾರ್ಯಾಚರಣೆಗಳನ್ನು ವರದಿ ಮಾಡುವಾಗ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು ಮತ್ತು ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು" ಎಂದು ಸಚಿವಾಲಯ ತಿಳಿಸಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಇಂತಿದೆ:
Ministry of Information and Broadcasting (@MIB_India) issues advisory to all Media channels to refrain from showing live coverage of defence operations and movement of security forces in the interest of national security.#NationalSecurity pic.twitter.com/D2M8Dj79CT
— All India Radio News (@airnewsalerts) April 26, 2025
ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ಸರ್ಕಾರ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಸಲು ಮುಂದಾಗಿದ್ದು, ಇದನ್ನು ನೇರ ಪ್ರಸಾರ ಮಾಡದಂತೆ ಸೂಚಿಸಿದೆ. "ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸುವುದು ವಿರೋಧಿಗಳಿಗೆ ಅನುಕೂಲ ಒದಗಿಸಿದಂತಾಗುತ್ತದೆ. ಇದು ಕಾರ್ಯಾಚರಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಲ್ಲದೆ ಭದ್ರತಾ ಸಿಬ್ಬಂದಿಯ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ" ಎಂದು ವಿವರಿಸಿದೆ.
ಈ ಸುದ್ದಿಯನ್ನೂ ಓದಿ: Pahalgam Terror Attack: 'ಮಕ್ಕಳ ಚಿಕಿತ್ಸೆಗೆ ಅವಕಾಶ ಕೊಡಿ'; ಕಣ್ಣೀರು ಹಾಕ್ತಾ ಬೇಡಿಕೊಂಡ ಪಾಕ್ ವ್ಯಕ್ತಿ
ʼʼಕಾರ್ಗಿಲ್ ಯುದ್ಧ, 26/11 ಮುಂಬೈ ಭಯೋತ್ಪಾದಕ ದಾಳಿ ಮತ್ತು ಕಂದಹಾರ್ ಅಪಹರಣ ಸೇರಿದಂತೆ ಕೆಲವು ಘಟನೆಗಳಲ್ಲಿ ಅನಿರ್ಬಂಧಿತ ನೇರ ಪ್ರಸಾರವು ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆʼʼ ಎಂದು ಸಚಿವಾಲಯ ನೆನಪಿಸಿಕೊಂಡಿದೆ. "ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವಲ್ಲಿ ಮಾಧ್ಯಮ, ಡಿಜಿಟಲ್ ಫ್ಯಾಟ್‌ಫಾರ್ಮ್ ಮತ್ತು ವ್ಯಕ್ತಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಕಾನೂನು ಬಾಧ್ಯತೆಗಳ ಹೊರತಾಗಿ ನಾವು ನಡೆಸುವ ಕ್ರಮಗಳು ನಡೆಯುತ್ತಿರುವ ಕಾರ್ಯಾಚರಣೆಗಳು ಅಥವಾ ನಮ್ಮ ಪಡೆಗಳ ಭದ್ರತೆ ಪಡೆಗಳ ಕಾರ್ಯ ವೈಖರಿ ಜತೆಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕುʼʼ ಎಂದಿದೆ.
ಕೇಬಲ್ ಟೆಲಿವಿಷನ್ ನೆಟ್‌ವರ್ಕ್ (ತಿದ್ದುಪಡಿ) ನಿಯಮಗಳು 2021ರ ನಿಯಮ 6 (1) (ಪಿ) ಅನ್ನು ಅನುಸರಿಸಲು ಸಚಿವಾಲಯವು ಈ ಹಿಂದೆ ಹಲವು ಸಂದರ್ಭಗಳಲ್ಲಿಯೂ ಎಲ್ಲ ಟಿವಿ ಚಾನಲ್‌ಗಳಿಗೆ ಸಲಹೆ ನೀಡಿತ್ತು. ನಿಯಮ 6 (1) (ಪಿ) ಭದ್ರತಾ ಪಡೆಗಳ ಯಾವುದೇ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ನೇರ ಪ್ರಸಾರವನ್ನು ಒಳಗೊಂಡಿರುವ ಕಾರ್ಯಕ್ರಮವನ್ನು ಕೇಬಲ್ ಟಿವಿಯಲ್ಲಿ ಪ್ರಸಾರ ಮಾಡಬಾರದು ಎಂದು ಹೇಳುತ್ತದೆ. ಆದ್ದರಿಂದ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಭದ್ರತಾ ಪಡೆಗಳ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ನೇರ ಪ್ರಸಾರದ ಬಗ್ಗೆ ಜಾಗರೂಕರಾಗಿರಲು ಎಲ್ಲ ಟಿವಿ ಚಾನಲ್‌ಗಳಿಗೆ ಸೂಚಿಸಲಾಗಿದೆ.
ಸೂಕ್ತ ಕ್ರಮ ಎಚ್ಚರಿಕೆ
ನಿಯಮವನ್ನು ಉಲ್ಲಂಘಿಸುವ ಚಾನಲ್‌ಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಲಾಗಿದೆ. "ಎಲ್ಲ ಮಾಧ್ಯಮದವರು ಜಾಗರೂಕರಾಗಿರಬೇಕು ಮತ್ತು ರಾಷ್ಟ್ರದ ಸೇವೆಯಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು" ಎಂದು ಸಚಿವಾಲಯದ ಉಪ ನಿರ್ದೇಶಕ ಕ್ಷಿತಿಜ್ ಅಗರ್ವಾಲ್ ಕರೆ ನೀಡಿದ್ದಾರೆ. ಈ ಮಾರ್ಗಸೂಚಿಯನ್ನು ಎಲ್ಲ ಟಿವಿ ಚಾನೆಲ್ ಸಂಘಗಳು ಮತ್ತು ಮಾಧ್ಯಮ ಸಂಸ್ಥೆಗಳಿಗೆ ಕಳುಹಿಸಲಾಗಿದೆ.