Pahalgam Terror Attack: ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ವಿಶ್ವಾದ್ಯಂತ ಭಾರತೀಯರಿಂದ ಪ್ರತಿಭಟನೆ- ಫೋಟೋಗಳು ಇಲ್ಲಿವೆ
Indian Diaspora Protest: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಮಂಗಳವಾರ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ವಿಶ್ವದ ವಿವಿಧ ದೇಶಗಳಲ್ಲಿ ಭಾನುವಾರ ಭಾರತೀಯರು ಪ್ರತಿಭಟನೆ ನಡೆಸಿದರು. ಈ ದಾಳಿಯಲ್ಲಿ ವಿದೇಶಿ ಪ್ರವಾಸಿಗರು ಸೇರಿದಂತೆ ಕನಿಷ್ಠ 26 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಲಷ್ಕರ್-ಇ-ತೊಯ್ಬಾದ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಈ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಪ್ರತಿಭಟನೆ


ಫ್ರಾನ್ಸ್ನ ಪ್ಯಾರಿಸ್, ಸ್ವಿಟ್ಜರ್ಲೆಂಡ್ನ ಜ್ಯೂರಿಚ್, ಫಿನ್ಲ್ಯಾಂಡ್ನ ಹೆಲ್ಸಿಂಕಿ, ಆಸ್ಟ್ರೇಲಿಯಾದ ಮೆಲ್ಬರ್ನ್, ಸ್ಪೇನ್ ಮತ್ತು ಇತರ ಹಲವು ದೇಶಗಳಲ್ಲಿ ಭಾರತೀಯ ಸಮುದಾಯದ ಸದಸ್ಯರು ಪ್ರತಿಭಟನೆಗಳನ್ನು ಆಯೋಜಿಸಿದರು. ಈ ಸಂದರ್ಭದಲ್ಲಿ ಒಟ್ಟುಗೂಡಿದ ಭಾರತೀಯರು ಭಯೋತ್ಪಾದನೆಯ ವಿರುದ್ಧ ಕಟ್ಟುನಿಟ್ಟಾದ ಸಂದೇಶವನ್ನು ರವಾನಿಸಿದರು.

ಪ್ಯಾರಿಸ್ನಲ್ಲಿ ಪ್ರತಿಭಟನೆ: ಅನಿವಾಸಿ ಭಾರತೀಯರು ಪಹಲ್ಗಾಮ್ ದಾಳಿಯನ್ನು ಖಂಡಿಸಿ ಪ್ಯಾರಿಸ್ನ ಐಫೆಲ್ ಟವರ್ ಬಳಿ ಪ್ರತಿಭಟನೆ ನಡೆಸಿದರು. ಇತ್ತ ಆಸ್ಟ್ರೇಲಿಯಾದ ಮೆಲ್ಬರ್ನ್ನಲ್ಲಿ ಕೂಡ ಅನಿವಾಸಿ ಭಾರತೀಯ ಸಮುದಾಯವು ದಾಳಿಯ ವಿರುದ್ಧ ಧ್ವನಿ ಎತ್ತಿದ್ದು, ಪ್ರತಿಭಟನೆಯಲ್ಲಿ ಪಹಲ್ಗಾಮ್ ದಾಳಿಯನ್ನು ಖಂಡಿಸಿದರು.

ಫಿನ್ಲ್ಯಾಂಡ್ನಲ್ಲಿ ಒಟ್ಟುಗೂಡಿದ ಅನಿವಾಸಿ ಭಾರತೀಯರು ಈ ಭೀಕರ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಸ್ವಿಟ್ಜರ್ಲೆಂಡ್ನ ಜ್ಯೂರಿಚ್ನಲ್ಲೂ ಭಾರತೀಯರು ಪ್ರತಿಭಟನೆ ನಡೆಸಿದರು. ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ, ಭಯೋತ್ಪಾದನೆಯ ವಿರುದ್ಧ ಘೋಷಣೆಗಳನ್ನು ಕೂಗಿದರು

ಸ್ಪೇನ್ನಲ್ಲಿ ಭಾರತೀಯರು ದಾಳಿಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪಹಲ್ಗಾಮ್ ದಾಳಿಯ ಹಿಂದಿರುವ ಉಗ್ರರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. 500ಕ್ಕೂ ಹೆಚ್ಚು ಬ್ರಿಟಿಷ್ ಹಿಂದೂಗಳು ಶುಕ್ರವಾರ ಲಂಡನ್ನ ಪಾಕಿಸ್ತಾನ ರಾಯಭಾರ ಕಚೇರಿಯ ಮುಂದೆ ಈ ಭೀಕರ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಭಾರತೀಯ ಧ್ವಜಗಳು, ಬ್ಯಾನರ್ಗಳು ಮತ್ತು ಪ್ಲಕಾರ್ಡ್ಗಳನ್ನು ಹಿಡಿದು, ಭಯೋತ್ಪಾದನೆಯ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಈ ದಾಳಿಗಳಿಗೆ ಕಾರಣರಾದ ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ಮತ್ತು ಆಶ್ರಯ ನೀಡುತ್ತಿರುವುದಕ್ಕಾಗಿ ಪಾಕಿಸ್ತಾನವನ್ನು ಟೀಕಿಸಿದರು. ಜೊತೆಗೆ, ನಿರಪರಾಧಿಗಳ ಸಾವಿನ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿ, ಬಲಿಪಶುಗಳಿಗೆ ನ್ಯಾಯಕ್ಕಾಗಿ ಒತ್ತಾಯಿಸಿದರು.

ಪ್ರತಿಭಟನೆಯ ವೇಳೆ, ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಭಟನಾಕಾರರಿಗೆ ಬೆದರಿಕೆಯ ಹಾಕಿದ ವಿಡಿಯೋ ವೈರಲ್ ಆಗಿದೆ. ಲಂಡನ್ನಲ್ಲಿರುವ ಪಾಕಿಸ್ತಾನ ಹೈ ಕಮಿಷನ್ನಲ್ಲಿ ಸೇನೆ ಮತ್ತು ವಾಯು ಸಲಹೆಗಾರನಾಗಿರುವ ಕರ್ನಲ್ ತೈಮೂರ್ ರಹತ್, ಭಾರತೀಯ ಸಮುದಾಯದ ಪ್ರತಿಭಟನಾಕಾರರಿಗೆ ಕತ್ತು ಕೊಯ್ಯುವ ಸನ್ನೆ ಮೂಲಕ ಬೆದರಿಕೆ ಹಾಕಿರುವುದು ವಿಡಿಯೋದಲ್ಲಿ ಕಂಡುಬಂದಿದೆ.