ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮಕ್ಕಳ ಏಕಾಗ್ರತೆ ಹೆಚ್ಚಿಸಲು ಅಧ್ಯಯನ ಕೊಠಡಿ ಹೇಗಿರಬೇಕು ಗೊತ್ತೇ?

ಶಾಲೆ ಪ್ರಾರಂಭವಾಗಲು ಇನ್ನು ವಾರವಷ್ಟೇ ಬಾಕಿ ಇದೆ. ಶಾಲೆಗೆ ಹೋಗುವ ಮಕ್ಕಳಿರುವ ಮನೆಯಲ್ಲಿ ಈಗ ಇದಕ್ಕಾಗಿ ಸಿದ್ಧತೆ ಪ್ರಾರಂಭವಾಗತೊಡಗಿದೆ. ತಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಒಳ್ಳೆಯ ಅಂಕಗಳನ್ನು ಗಳಿಸಬೇಕು ಎನ್ನುವ ಅಸೆ ಎಲ್ಲ ಪೋಷಕರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಕೇವಲ ಓದಿ ಬರೆದದ್ದು ಸಾಲುವುದಿಲ್ಲ. ಮನೆಯಲ್ಲಿ ಕೆಲವೊಂದು ವಾಸ್ತು ತತ್ತ್ವಗಳನ್ನು ಅನುಸರಿಸಬೇಕಾಗುತ್ತದೆ. ಅದು ಏನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಮಕ್ಕಳ ಅಧ್ಯಯನ ಕೊಠಡಿ ಹೇಗಿರಬೇಕು ಗೊತ್ತೇ?

ಶಾಲೆ ಪ್ರಾರಂಭವಾಗಲು ಇನ್ನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಶಾಲೆಗೆ ಹೋಗುವ ಮಕ್ಕಳಿರುವ ಮನೆಯಲ್ಲಿ ಇದಕ್ಕಾಗಿ ಈಗಾಗಲೇ ಸಿದ್ಧತೆ ಪ್ರಾರಂಭವಾಗಿದೆ. ಮಕ್ಕಳು ಚೆನ್ನಾಗಿ ಓದಬೇಕು, ಒಳ್ಳೆಯ ಅಂಕಗಳನ್ನು ಗಳಿಸಬೇಕು ಎನ್ನುವ ಅಸೆ ಎಲ್ಲ ಪೋಷಕರದ್ದೂ ಆಗಿರುತ್ತದೆ. ಇದಕ್ಕಾಗಿ ಕೇವಲ ಓದಿ ಬರೆದರೆ ಸಾಲುವುದಿಲ್ಲ. ಮನೆಯಲ್ಲಿ ಕೆಲವೊಂದು ವಾಸ್ತು ತತ್ತ್ವಗಳನ್ನು (Vastu Tips) ಅನುಸರಿಸಬೇಕಾಗುತ್ತದೆ. ಮಕ್ಕಳಿಗೆ ಅಧ್ಯಯನದಲ್ಲಿ (Vastu for study) ಆಸಕ್ತಿ ಬೆಳೆಯಲು, ಏಕಾಗ್ರತೆ ಹೆಚ್ಚಿಸಲು ಕೆಲವು ನಿಯಮಗಳ (vastu for study room) ಪಾಲನೆ ಮನೆಯಲ್ಲಿ ಬಹು ಮುಖ್ಯವಾಗಿರುತ್ತದೆ. ಈ ಬಗ್ಗೆ ವಾಸ್ತು ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ.

ಮಕ್ಕಳು ಅಧ್ಯಯನದತ್ತ ಗಮನ ಹರಿಸುವಂತೆ ಮಾಡುವುದು ಪ್ರತಿಯೊಬ್ಬ ಪೋಷಕರ ಪ್ರಮುಖ ಆದ್ಯತೆಯಾಗಿರುತ್ತದೆ. ಆದರೆ ಹಲವು ಬಾರಿ ಮಕ್ಕಳು ಅಧ್ಯಯನದಲ್ಲಿ ಆಸಕ್ತಿ ವಹಿಸುವುದಿಲ್ಲ ಅಥವಾ ಅವರಲ್ಲಿ ಏಕಾಗ್ರತೆಯ ಕೊರತೆ ಕಾಣಿಸತೊಡಗುತ್ತದೆ. ಇದಕ್ಕೆ ಮನೆಯ ವಾಸ್ತು ದೋಷವೂ ಒಂದು ಕಾರಣವಾಗಿರಬಹುದು.

ಮನೆಯಲ್ಲಿ ಸರಿಯಾದ ವಾಸ್ತು ನಿಯಮಗಳನ್ನು ಪಾಲಿಸುವ ಮೂಲಕ ಮಕ್ಕಳ ಅಧ್ಯಯನ ಮಟ್ಟವನ್ನು ಸುಧಾರಿಸಬಹುದು. ಮಕ್ಕಳು ಅಧ್ಯಯನದಲ್ಲಿ ಆಸಕ್ತಿ ತೋರದೇ ಇದ್ದರೆ ಅಥವಾ ಅವರು ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗದಿದ್ದರೆ ಇದಕ್ಕೆ ಕಾರಣ ಮನೆಯ ವಾಸ್ತು ದೋಷವಾಗಿರಬಹುದು. ಅದನ್ನು ತಕ್ಷಣವೇ ತೆಗೆದುಹಾಕುವುದು ಮುಖ್ಯವಾಗಿರುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪರಿಸರ ಮತ್ತು ಅಧ್ಯಯನ ಕೋಣೆಯ ದಿಕ್ಕು ಮಕ್ಕಳ ಅಧ್ಯಯನ ಮತ್ತು ಏಕಾಗ್ರತೆಯ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಸರಿಯಾದ ದಿಕ್ಕಿನಲ್ಲಿ ಕುಳಿತು ಶೈಕ್ಷಣಿಕ ಅಭ್ಯಾಸಗಳನ್ನು ನಡೆಸುವುದು ಬಹುಮುಖ್ಯವಾಗಿರುತ್ತದೆ.

ಅಲ್ಲದೇ ಮಕ್ಕಳು ಅಧ್ಯಯನ ಮಾಡುವ ಕೊನೆಯಲ್ಲಿ ಸರಿಯಾದ ಬಣ್ಣಗಳನ್ನು ಬಳಸುವುದರಿಂದ ಕೋಣೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಳವಾಗುತ್ತದೆ. ಇದರಿಂದ ಮಕ್ಕಳಿಗೆ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

ಮಕ್ಕಳಿಗೆ ಅಧ್ಯಯನದಲ್ಲಿ ಸಹಾಯ ಮಾಡುವ ವಾಸ್ತು ನಿಯಮಗಳ ಕುರಿತು ಪ್ರಸಿದ್ಧ ಜ್ಯೋತಿಷಿ ಪ್ರದುಮಾನ್ ಸೂರಿ ಅವರು ಹೇಳುವುದು ಹೀಗೆ...

vastu11

ಅಧ್ಯಯನದಲ್ಲಿ ಮಕ್ಕಳ ಆಸಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಅಧ್ಯಯನ ಕೊಠಡಿಯನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇನಿರ್ಮಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪೂರ್ವ ದಿಕ್ಕು ಕಲಿಕೆ ಮತ್ತು ಜ್ಞಾನದ ಸಂಕೇತ. ಇದು ಮಕ್ಕಳ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮತ್ತೊಂದೆಡೆ ಉತ್ತರ ದಿಕ್ಕು ಸಕಾರಾತ್ಮಕ ಶಕ್ತಿ ಮತ್ತು ಸ್ಥಿರತೆಯನ್ನು ಒದಗಿಸುತ್ತದೆ, ಇದರಿಂದಾಗಿ ಮಕ್ಕಳು ಅಧ್ಯಯನದ ಮೇಲೆ ಹೆಚ್ಚು ಗಮನಹರಿಸುತ್ತಾರೆ.

ಇನ್ನು ಮಕ್ಕಳು ಅಧ್ಯಯನಕ್ಕೆ ಬಳಸುವ ಮೇಜನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡಬೇಕು. ಇದರಿಂದ ಮಗುವಿನ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಇದು ಅವರ ಸ್ಮರಣೆ ಶಕ್ತಿಯನ್ನು ಬಲಪಡಿಸುತ್ತದೆ. ಸರಿಯಾದ ದಿಕ್ಕಿನಲ್ಲಿ ಕುಳಿತು ಅಧ್ಯಯನ ಮಾಡುವುದು ಅವರಿಗೆ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಉತ್ತಮ ಅಂಕ ಗಳಿಸಲು ನೆರವಾಗುತ್ತದೆ.

ಮಕ್ಕಳ ಅಧ್ಯಯನದಲ್ಲಿ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಅಧ್ಯಯನ ಕೋಣೆ ಮತ್ತು ಟೇಬಲ್ ಅನ್ನು ಸ್ವಚ್ಛವಾಗಿ ಮತ್ತು ಶಿಸ್ತು ಬದ್ಧವಾಗಿ ಇಡುವುದು ಬಹಳ ಮುಖ್ಯ.

ವಾಸ್ತು ಶಾಸ್ತ್ರದ ಪ್ರಕಾರ ಚದುರಿದ ಮತ್ತು ಗಲೀಜಾದ ಅಧ್ಯಯನ ಕೋಣೆಯು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಮಗುವಿಗೆ ಅಧ್ಯಯನದ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ.

ಇನ್ನು ಅಧ್ಯಯನಕ್ಕೆ ಬಳಸುವ ಟೇಬಲ್ ಮೇಲೆ ಹೆಚ್ಚಿನ ವಸ್ತುಗಳನ್ನು ಇಡಬೇಡಿ. ಆದಷ್ಟು ಟೇಬಲ್ ಖಾಲಿಯಾಗಿರಲಿ. ಮೇಜಿನ ಮೇಲೆ ಹೆಚ್ಚು ವಸ್ತುಗಳನ್ನು ಇಡುವುದರಿಂದ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತದೆ.

ಇನ್ನು ಅಧ್ಯಯನ ಮೇಜಿನ ಮುಂದೆ ಗೋಡೆಯ ಮೇಲೆ ಸರಸ್ವತಿಯ ಪ್ರತಿಮೆ ಅಥವಾ ಸ್ಫೂರ್ತಿದಾಯಕ ಚಿತ್ರ ಅಥವಾ ಪ್ರತಿಮೆಯನ್ನು ಇಡುವುದು ಒಳ್ಳೆಯದು.

ಅಧ್ಯಯನ ಕೊಠಡಿಯು ತಿಳಿ ಹಸಿರು, ಹಳದಿ, ತಿಳಿ ನೀಲಿ ಅಥವಾ ಬಿಳಿಯಂತಹ ಬಣ್ಣಗಳನ್ನು ಹೊಂದಿರಬೇಕು. ಈ ಬಣ್ಣಗಳು ಮನಸ್ಸನ್ನು ಶಾಂತವಾಗಿರಿಸುತ್ತದೆ ಮತ್ತು ಮಗುವಿನ ಅಧ್ಯಯನದಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Vastu Tips: ಕಚೇರಿಯಲ್ಲಿ ಸಮೃದ್ಧಿ ತುಂಬಿ ತುಳುಕಬೇಕಾದರೆ ಹೀಗೆ ಮಾಡಿ

ಇದರೊಂದಿಗೆ ಕೋಣೆಯಲ್ಲಿ ಗರಿಷ್ಠ ನೈಸರ್ಗಿಕ ಬೆಳಕು ಇರಬೇಕು. ಒಂದು ವೇಳೆ ನೈಸರ್ಗಿಕ ಬೆಳಕಿನ ಕೊರತೆಯಿದ್ದರೆ ಬಿಳಿ ಅಥವಾ ಹಳದಿ ಬೆಳಕಿನ ಬಲ್ಬ್‌ಗಳನ್ನು ಬಳಸಿ.

ಟಿವಿ, ಮೊಬೈಲ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಅಧ್ಯಯನ ಕೋಣೆಯಲ್ಲಿ ಇಡಬಾರದು. ಅಧ್ಯಯನ ಕೋಣೆಯಲ್ಲಿ ಕಂಪ್ಯೂಟರ್ ಇಡುವುದು ಅಗತ್ಯವಿದ್ದರೆ ಅದನ್ನು ಪಶ್ಚಿಮ ಗೋಡೆಯ ಬಳಿ ಇರಿಸಿ. ಇದು ಮಗುವಿಗೆ ಅಧ್ಯಯನದ ಮೇಲೆ ಗಮನಹರಿಸಲು ಸಹಾಯ ಮಾಡುತ್ತದೆ.