Tirumala Tirupati: ತಿರುಮಲಕ್ಕೆ ಭದ್ರತೆ ಹೆಚ್ಚಳ: ಡ್ರೋನ್ ನಿರೋಧಕ ತಂತ್ರಜ್ಞಾನ ಬಳಸಲು ಚಿಂತನೆ
ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವಾಗಿ ಗುರುತಿಸಿಕೊಂಡಿರುವ ತಿರುಪತಿಯ ತಿರುಮಲ ಬೆಟ್ಟದ ಮೇಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭವಿಷ್ಯದಲ್ಲಿ ಬೆದರಿಕೆ ಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಡ್ರೋನ್ ನಿರೋಧಕ ತಂತ್ರಜ್ಞಾನವನ್ನು ಅಳವಡಿಸಲು ತಿರುಮಲ ತಿರುಪತಿ ದೇವಸ್ಥಾನ ನಿರ್ಧರಿಸಿದೆ.


ತಿರುಪತಿ: ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವಾದ (Hindu temple) ತಿರುಮಲ ತಿರುಪತಿ ದೇವಸ್ಥಾನದ (Tirumala Tirupati Temple) ಭದ್ರತೆಯನ್ನು ಹೆಚ್ಚಿಸಲಾಗುತ್ತಿದ್ದು, ಇದರಲ್ಲಿ ಹೊಸ ಸೇರ್ಪಡೆಯಾಗಿ ಇದೀಗ ಡ್ರೋನ್ ನಿರೋಧಕ ತಂತ್ರಜ್ಞಾನವನ್ನು (Anti-drone technology) ಬಳಸಲು ಯೋಜನೆ ರೂಪಿಸಲಾಗಿದೆ. ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ (Sri Venkateswara temple) ಭವಿಷ್ಯದಲ್ಲಿ ಬೆದರಿಕೆ ಬರುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಡ್ರೋನ್ ವಿರೋಧಿ ತಂತ್ರಜ್ಞಾನವನ್ನು ದೇವಾಲಯದ ರಕ್ಷಣೆಗಾಗಿ ಬಳಸಲು ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಟಿಟಿಡಿ (TTD) ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವಾಗಿ ಗುರುತಿಸಿಕೊಂಡಿರುವ ತಿರುಪತಿಯ ತಿರುಮಲ ಬೆಟ್ಟದ ಮೇಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭವಿಷ್ಯದಲ್ಲಿ ಬೆದರಿಕೆ ಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಡ್ರೋನ್ ವಿರೋಧಿ ತಂತ್ರಜ್ಞಾನವನ್ನು ಅಳವಡಿಸಲು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ನಿರ್ಧರಿಸಿದೆ.
ಈ ಬಗ್ಗೆ ಮಂಗಳವಾರ ಪ್ರಕಟಣೆ ಹೊರಡಿಸಿರುವ ಟಿಟಿಡಿ, ತಿರುಮಲ ದೇವಸ್ಥಾನದ ಭದ್ರತಾ ಅಂಶವನ್ನು ಗಮನದಲ್ಲಿಟ್ಟುಕೊಂಡು ಡ್ರೋನ್ ವಿರೋಧಿ ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಿರುವುದಾಗಿ ಹೇಳಿದೆ.
ಟಿಟಿಡಿ ಮಂಡಳಿಯ ಅಧ್ಯಕ್ಷ ಬಿ.ಆರ್. ನಾಯ್ಡು ಅಧ್ಯಕ್ಷತೆಯಲ್ಲಿ ನಡೆದ ಟಿಟಿಡಿ ಟ್ರಸ್ಟ್ ಮಂಡಳಿಯ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಬೆಟ್ಟದ ಮೇಲೆ ದೇವಾಲಯದ ಸುತ್ತಲೂ ಡ್ರೋನ್‌ಗಳನ್ನು ಹಾರಿಸುವುದನ್ನು ನಿಷೇಧಿಸಲಾಗಿದೆ. ಆದರೆ ಇತ್ತೀಚೆಗೆ ಕೆಲವು ಭದ್ರತಾ ಉಲ್ಲಂಘನೆಗಳ ವರದಿಯಾಗಿದೆ. ಕಳೆದ ತಿಂಗಳು ರಾಜಸ್ಥಾನದ ಯುಟ್ಯೂಬರ್ ಒಬ್ಬ ಡ್ರೋನ್ ಹಾರಿಸಿದ್ದ. ಬಳಿಕ ಆತನನ್ನು ಬಂಧಿಸಲಾಗಿತ್ತು. ಆತ ದೇವಾಲಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಕಳೆದ ವರ್ಷ ಹರಿಯಾಣದ ದಂಪತಿ ತಿರುಮಲ ಘಾಟ್ ರಸ್ತೆಯ ಉದ್ದಕ್ಕೂ ಡ್ರೋನ್ ಕೆಮರಾ ಬಳಸಿದ್ದರು. ದೇವಾಲಯದ ಸುತ್ತಮುತ್ತ ಪದೇ ಪದೆ ಡ್ರೋನ್ ಹಾರಾಟ ಪ್ರಕರಣ ನಡೆಯುತ್ತಿರುವುದರಿಂದ ಕಳೆದ ಮಾರ್ಚ್‌ನಲ್ಲಿ ಬೆಟ್ಟದ ದೇವಾಲಯದ ಮೇಲೆ ಡ್ರೋನ್ ಹಾರಾಟ ನಿಷೇಧಿತ ವಲಯವನ್ನು ಘೋಷಿಸುವಂತೆ ಟಿಟಿಡಿ ಕೇಂದ್ರವನ್ನು ಒತ್ತಾಯಿಸಿತು.
ಈ ಕುರಿತು ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಮಾತನಾಡಿ, ಕೇಂದ್ರ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಅವರಿಗೆ ಪತ್ರ ಬರೆದು ಆಗಮ ಶಾಸ್ತ್ರದ ತತ್ತ್ವಗಳು, ದೇವಾಲಯದ ಪಾವಿತ್ರ್ಯ, ಸುರಕ್ಷತೆ ಮತ್ತು ಭಕ್ತರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ತಿರುಮಲವನ್ನು ವಿಮಾನ ಹಾರಾಟ ನಿಷೇಧಿತ ವಲಯವೆಂದು ಘೋಷಿಸಬೇಕೆಂದು ಮನವಿ ಮಾಡಿದ್ದರು.
ಬೆಟ್ಟದ ಮೇಲಿನ ವೈಮಾನಿಕ ಚಟುವಟಿಕೆಗಳು ದೇವಾಲಯದ ಸುತ್ತಲಿನ ಪವಿತ್ರ ವಾತಾವರಣವನ್ನು ಭಂಗಗೊಳಿಸುತ್ತವೆ ಎಂದು ಟಿಟಿಡಿ ಹೇಳಿದೆ. ಇದರೊಂದಿಗೆ ಮಂಗಳವಾರ ನಡೆದ ಮಂಡಳಿಯ ಸಭೆಯಲ್ಲಿ ಟಿಟಿಡಿಯಲ್ಲಿ ಕೆಲಸ ಮಾಡುವ ಹಿಂದೂಯೇತರ ನೌಕರರನ್ನು ಪರ್ಯಾಯ ಮಾರ್ಗಗಳ ಮೂಲಕ ಅಥವಾ ಅವರಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆಯನ್ನು ನೀಡುವ ಮೂಲಕ ವರ್ಗಾವಣೆ ಮಾಡುವ ಕ್ರಮಗಳಿಗೆ ಅನುಮೋದನೆ ನೀಡಲಾಗಿದೆ.
ಅಲ್ಲದೇ ಡಿಡಿ ನೆಕ್ಸ್ಟ್ ಲೆವೆಲ್ ಚಿತ್ರದ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ದೇವಾಲಯ ಮಂಡಳಿ ನಿರ್ಧರಿಸಿದೆ. ಚಿತ್ರದಲ್ಲಿ ಗೋವಿಂದ ನಾಮಾವಳಿಯನ್ನು ರಿಮಿಕ್ಸ್ ಮಾಡಿ ಭಕ್ತರ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಹೇಳಿದೆ.
ವಿವಿಧ ಯೋಜನೆಗೆ ಅನುಮೋದನೆ
ತಿರುಮಲ ಬೆಟ್ಟಗಳಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನಿರ್ದೇಶನದಂತೆ ಅರಣ್ಯ ಇಲಾಖೆಯ ಮೂಲಕ ತಿರುಮಲ ಬೆಟ್ಟಗಳಲ್ಲಿ ಹಸಿರು ಹೊದಿಕೆಯನ್ನು ಈಗಿರುವ ಶೇ. 68.14ರಿಂದ ಶೇ. 80ಕ್ಕೆ ಹೆಚ್ಚಿಸಲು ಮಂಡಳಿಯು ಅನುಮೋದನೆ ನೀಡಿದೆ.
ಇದಕ್ಕಾಗಿ ಟಿಟಿಡಿ ಅರಣ್ಯ ಇಲಾಖೆಗೆ ಹಂತ ಹಂತವಾಗಿ 4 ಕೋಟಿ ರೂ. ಬಿಡುಗಡೆ ಮಾಡಲಿದೆ. ಇದರಲ್ಲಿ 2025-26ನೇ ಸಾಲಿಗೆ 1.74 ಕೋಟಿ ರೂ., 2026-27ರಲ್ಲಿ 1.13 ಕೋಟಿ ರೂ. ಮತ್ತು 2027-28 ರಲ್ಲಿ 1.13 ಕೋಟಿ ರೂ. ಸೇರಿವೆ.
ಇದನ್ನೂ ಓದಿ: YouTuber Jyoti Malhotra: ಪಾಕ್‌ನೊಂದಿಗೆ ನಂಟು, ದೇಶಕ್ಕೆ ದ್ರೋಹ..... ಡೈರಿಯಿಂದ ಬಯಲಾಯ್ತು ಜ್ಯೋತಿ ಮಲ್ಹೋತ್ರಾ ಗುಟ್ಟು!
ಇನ್ನು ಬಡವರು ಮತ್ತು ನಿರ್ಗತಿಕರಿಗೆ ಉತ್ತಮ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿರುವ ಸ್ವಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಪ್ರಸ್ತುತ ನೀಡಲಾಗುತ್ತಿರುವ 60 ಕೋಟಿ ರೂ. ಆರ್ಥಿಕ ನೆರವಿನ ಜತೆಗೆ ವರ್ಷಕ್ಕೆ ಹೆಚ್ಚುವರಿಯಾಗಿ 71 ಕೋಟಿ ರೂ.ಗಳನ್ನು ಒದಗಿಸಲು ಮಂಡಳಿಯು ಅನುಮೋದನೆ ನೀಡಿದೆ. ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (SVIMS) ಪ್ರಸ್ತುತ ಖಾಲಿ ಇರುವ ಹುದ್ದೆಗಳಿಗೆ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಮತ್ತು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಪೂರ್ಣಗೊಳಿಸಲು ಕೂಡ ನಿರ್ಧರಿಸಲಾಗಿದೆ.
ಶ್ರೀವಾರಿ ಸೇವಾ ಸ್ವಯಂಸೇವೆಯ ಮಾದರಿಯಲ್ಲೇ ಶ್ರೀವಾರಿ ವೈದ್ಯ ಸೇವೆಯನ್ನು ಪರಿಚಯಿಸಲು ಟಿಟಿಡಿ ಮಂಡಳಿಯು ನಿರ್ಧರಿಸಿದ್ದು, ಇದಕ್ಕಾಗಿ ವೈದ್ಯಕೀಯ ಕ್ಷೇತ್ರದ ತಜ್ಞರನ್ನು ಆಹ್ವಾನಿಸಲಾಗಿದೆ ಎಂದು ಮಂಡಳಿ ಸಭೆಯಲ್ಲಿ ತಿಳಿಸಿದೆ.