ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

INDW vs SLW: ಶ್ರೀಲಂಕಾ ತಂಡವನ್ನು ಮಣಿಸಿ ತ್ರಿಕೋನ ಸರಣಿಯನ್ನು ಮುಡಿಗೇರಿಸಿಕೊಂಡ ಭಾರತ ವನಿತೆಯರು!

ಸ್ಮೃತಿ ಮಂಧಾನಾ ಶತಕ ಹಾಗೂ ಸ್ನೇಹಾ ರಾಣಾಗೆ (4 ವಿಕೆಟ್‌) ಸ್ಪಿನ್‌ ಮೋಡಿಯ ನೆರವಿನಿಂದ ಭಾರತ ಮಹಿಳಾ ತಂಡ, ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ 97 ರನ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಮಹಿಳಾ ತ್ರಿಕೋನ ಸರಣಿಯನ್ನು ಮುಡಿಗೇರಿಸಿಕೊಂಡಿದೆ.

ಶ್ರೀಲಂಕಾವನ್ನು ಮಣಿಸಿ ತ್ರಿಕೋನ ಸರಣಿ ಗೆದ್ದ ಭಾರತ ವನಿತೆಯರು!

ಶ್ರೀಲಂಕಾ ವಿರುದ್ಧ ಫೈನಲ್‌ ಗೆದ್ದು ಮಹಿಳಾ ತ್ರಿಕೋನ ಸರಣಿ ಮುಡಿಗೇರಿಸಿಕೊಂಡ ಭಾರತ.

Profile Ramesh Kote May 11, 2025 6:31 PM

ಕೊಲಂಬೊ: ಸ್ಮೃತಿ ಮಂಧಾನಾ (116 ರನ್‌) ಶತಕ ಹಾಗೂ ಸ್ನೇಹಾ ರಾಣಾ (38ಕ್ಕೆ 4) ಅವರ ಸ್ಪಿನ್‌ ಮೋಡಿಯ ಸಹಾಯದಿಂದ ಭಾರತ ತಂಡ ಮಹಿಳಾ ತ್ರಿಕೋನ ಸರಣಿಯ ಫೈನಲ್‌ ಪಂದ್ಯದಲ್ಲಿ(INDW vs SLW) ಶ್ರೀಲಂಕಾ ತಂಡವನ್ನು 97 ರನ್‌ಗಳಿಂದ ಮಣಿಸಿದೆ. ಆ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತಮ್ಮ ವೃತ್ತಿ ಜೀವನದ 11ನೇ ಶತಕವನ್ನು ಸಿಡಿಸಿದ ಸ್ಮೃತಿ ಮಂಧಾನಾ (Smriti Mandhana) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿ 11 ವಿಕೆಟ್‌ಗಳನ್ನು ಕಬಳಿಸಿದ ಭಾರತದ ಸ್ಪಿನ್ನರ್‌ ಸ್ನೇಹಾ ರಾಣಾ (Sneh Rana) ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಭಾನುವಾರ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದ್ದ ಮಹಿಳಾ ತ್ರಿಕೋನ ಸರಣಿಯ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಆತಿಥೇಯ ಶ್ರೀಲಂಕಾ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ಮಹಿಳಾ ತಂಡ ದೊಡ್ಡ ಅಂತರದಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಿತು. ಈ ಪಂದ್ಯದಲ್ಲಿ ಭಾರತ ನೀಡಿದ್ದ 343 ರನ್‌ಗಳ ಬೃಹತ್‌ ಮೊತ್ತವನ್ನು ಹಿಂಬಾಲಿಸಿದ ಶ್ರೀಲಂಕಾ ತಂಡ, 48.2 ಓವರ್‌ಗಳಲ್ಲಿ 245 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ತವರು ಅಭಿಮಾನಿಗಳ ಎದುರು ಸಿಂಹಳೀಯರು ಸೋಲನ್ನು ಒಪ್ಪಿಕೊಂಡರು.

INDW vs SLW: ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 11ನೇ ಶತಕ ಸಿಡಿಸಿದ ಸ್ಮೃತಿ ಮಂಧಾನಾ!

ಶ್ರೀಲಂಕಾ ತಂಡದ ಪರ ಅತ್ಯುತ್ತಮ ಬ್ಯಾಟ್‌ ಮಾಡಿದ ವಿಶ್ಮಿ ಗುಣರತ್ನೆ 36 ರನ್‌, ಚಾಮರಿ ಅಟಪಟ್ಟು 51 ರನ್‌, ನೀಲಾಕ್ಷಿ ಡಿ ಸಿಲ್ವಾ 48 ರನ್‌, ಹರ್ಷಿತಾ ಸಮರವಿಕ್ರಮ 26 ರನ್‌ ಹಾಗೂ ಅನುಷ್ಕಾ ಸಂಜೀವಾಣಿ 28 ರನ್‌ಗಳನ್ನು ಗಳಿಸಿದರು. ಇವರು ಉತ್ತಮ ಆರಂಭ ಪಡೆದರೂ ತಮ್ಮ-ತಮ್ಮ ಇನಿಂಗ್ಸ್‌ಗಳನ್ನು ದೊಡ್ಡದು ಮಾಡುವಲ್ಲಿ ವಿಫಲರಾದರು. ಭಾರತದ ಪರ ಶಿಸ್ತುಬದ್ದ ಬೌಲಿಂಗ್‌ ದಾಳಿ ನಡೆಸಿದ ಅಮನ್ಜೋತ್‌ ಕೌರ್‌ 54 ರನ್‌ಗಳನ್ನು ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆದರೆ, ಈ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಸ್ನೇಹಾ ರಾಣಾ ಅವರು 38 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದರು.



342 ರನ್‌ಗಳನ್ನು ಕಲೆ ಹಾಕಿದ ಭಾರತ

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ, ಸ್ಮೃತಿ ಮಂಧಾನಾ ಶತಕದ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 342 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಎದುರಾಳಿ ಶ್ರೀಲಂಕಾ ತಂಡಕ್ಕೆ 343 ರನ್‌ಗಳ ಗುರಿಯನ್ನು ನೀಡಿತ್ತು. ಮಂಧಾನಾ ಶತಕದ ಜೊತೆಗೆ ಅಗ್ರ ನಾಲ್ಕು ಬ್ಯಾಟರ್‌ಗಳು ಉತ್ತಮ ಪ್ರದರ್ಶನ ತೋರಿದ್ದರು.



11ನೇ ಶತಕ ಸಿಡಿಸಿದ ಸ್ಮೃತಿ ಮಂಧಾನಾ

ಈ ಪಂದ್ಯದಲ್ಲಿ ಇನಿಂಗ್ಸ್‌ ಆರಂಭಿಸಿದ ಸ್ಮೃತಿ ಮಂಧಾನಾ ಹಾಗೂ ಪ್ರತೀಕಾ ರಾವಲ್‌ ಮೊದಲನೇ ವಿಕೆಟ್‌ಗೆ 70 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತ ತಂಡ ಉತ್ತಮ ಆರಂಭವನ್ನು ಪಡೆಯಿತು. ಪ್ರತೀಕಾ ರಾವಲ್‌ ಅವರು 30 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆದರೆ, ಒಂದು ಹಂತದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ ಸ್ಮೃತಿ ಮಂಧಾನಾ, 101 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 15 ಬೌಂಡರಿಗಳೊಂದಿಗೆ 116 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ತಮ್ಮ ಏಕಿದಿನ ಕ್ರಿಕೆಟ್‌ನಲ್ಲಿ 11ನೇ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಭಾರತ ತಂಡವನ್ನು 200ರ ಗಡಿ ಸನಿಹ ತಂದು ವಿಕೆಟ್‌ ಒಪ್ಪಿಸಿದರು.

IPL 2025: ಮೇ 16 ರಂದು ಪಂದ್ಯಗಳ ಆರಂಭ, 30ಕ್ಕೆ ಫೈನಲ್‌ ಹಣಾಹಣಿ! ವರದಿ

ನಂತರ ಮಧ್ಯಮ ಕ್ರಮಾಂಕದಲ್ಲಿ ಹರ್ಲೀನ್‌ ಡಿಯೋಲ್‌ 47 ರನ್‌, ಹರ್ಮನ್‌ಪ್ರೀತ್‌ ಕೌರ್‌ 41 ರನ್‌, ಜೆಮಿಮಾ ರೊಡ್ರಿಗಸ್‌ 44 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದ್ದರು.