Fact Check: 2-3 ದಿನ ಎಟಿಎಂ ಬಂದ್ ಆಗುತ್ತ? ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು
ಭಾರತ-ಪಾಕಿಸ್ತಾನದ ಮಧ್ಯೆ ಯುದ್ಧದ ವಾತಾವರಣೆ ಮೂಡಿದೆ. ಸಂಭಾವ್ಯ ದಾಳಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಇದರ ಮಧ್ಯೆ 2-3 ದಿನಗಳ ಕಾಲ ದೇಶಾದ್ಯಂತ ಎಟಿಎಂ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎನ್ನುವ ಸುದ್ದಿ ವ್ಯಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜವೇ? ವೈರಲ್ ಆಗಿರುವ ಈ ಸುದ್ದಿಯ ಅಸಲಿಯತ್ತೇನು?

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಪಹಲ್ಗಾಮ್ ದಾಳಿ ಮತ್ತು ಅದರ ನಂತರ ನಡೆದ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಗೆ ಭಾರತ ಬಲವಾಗಿಯೇ ತಿರುಗೇಟು ನೀಡಿದೆ. ಪಾಕ್‌ನ ಕ್ಷಿಪಣಿ, ಡ್ರೋನ್, ಜೆಟ್‌ಗಳನ್ನು ಹೊಡೆದುರುಳಿಸಿದ ಭಾರತೀಯ ಸೇನೆ, ತಾವು ನೀಡುವ ಪ್ರತ್ಯುತ್ತರ ಎಷ್ಟು ಬಲವಾಗಿರುತ್ತದೆ ಎನ್ನುವ ಸೂಚನೆ ನೀಡಿದೆ (Operation Sindoor). ಪಾಕ್‌ಗೆ ಅದರ ಭಾಷೆಯಲ್ಲೇ ತಿರುಗೇಟು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇನೆಗೆ ಸೂಚನೆ ನೀಡಿದ್ದು, ಸರ್ವ ರೀತಿಯಲ್ಲೂ ಸಜ್ಜುಗೊಳಿಸಲಾಗಿದೆ. ಪಾಕಿಸ್ತಾನದ ಸಂಭಾವ್ಯ ದಾಳಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಇದರ ಮಧ್ಯೆ 2-3 ದಿನಗಳ ಕಾಲ ದೇಶಾದ್ಯಂತ ಎಟಿಎಂ (ATM) ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎನ್ನುವ ಸುದ್ದಿ ವ್ಯಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜವೇ? ವೈರಲ್ ಆಗಿರುವ ಈ ಸುದ್ದಿಯ ಅಸಲಿಯತ್ತೇನು? (Fact Check) ಇಲ್ಲಿ ಫ್ಯಾಕ್ಟ್‌ಚೆಕ್.
2-3 ದಿನಗಳ ಕಾಲ ಎಟಿಎಂ ಸ್ಥಗಿತಗೊಳ್ಳಲಿದೆ ಎನ್ನುವ ಸುದ್ದಿ ನಕಲಿ, ಇದನ್ನು ಯಾರೂ ನಂಬಬೇಡಿ ಎಂದು ಸರ್ಕಾರದ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ. ಎಟಿಎಂ ಎಂದಿನಂತೆ ಕಾರ್ಯನಿರ್ವಹಿಸಲಿದೆ. ನಕಲಿ ಸುದ್ದಿಯನ್ನು ಯಾರೂ ಶೇರ್ ಮಾಡಬೇಡಿ ಎಂದು ಮನವಿ ಮಾಡಿದೆ.
ಫ್ಯಾಕ್ಟ್‌ಚೆಕ್ ಪೋಸ್ಟ್ ಇಲ್ಲಿದೆ:
Are ATMs closed⁉️
— PIB India (@PIB_India) May 9, 2025
A viral #WhatsApp message claims ATMs will be closed for 2–3 days.
🛑 This Message is FAKE
✅ ATMs will continue to operate as usual#IndiaFightsPropaganda #OperationSindoor https://t.co/Uca59itgFv
ಈ ಸುದ್ದಿಯನ್ನೂ ಓದಿ: ಪಾಕ್‌ನಿಂದ ಸುಳ್ಳು ಮಾಹಿತಿ ಹರಡುವ ಯತ್ನ; ರಿಪೋರ್ಟ್ ಮಾಡಲು ಪಿಐಬಿ ಮನವಿ
ʼʼಎಟಿಎಂ ಕ್ಲೋಸ್ ಆಗುತ್ತಾ? ವೈರಲ್ ವ್ಯಾಟ್ಸ್‌ಆ್ಯಪ್ ಮೆಸೇಜ್ 2-3 ದಿನಗಳ ಕಾಲ ಎಟಿಎಂ ಕಾರ್ಯ ನಿರ್ವಹಿಸುವುದಿಲ್ಲ ಎಂದು ಹೇಳಿದೆ. ಈ ಸಂದೇಶ ನಕಲಿ. ಎಟಿಎಂ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಇಂತಹ ಅನದಿಕೃತ ಮೆಸೇಜ್ ಅನ್ನು ಯಾರೂ ಹಂಚಿಕೊಳ್ಳಬೇಡಿʼʼ ಎಂದು ಸರ್ಕಾರ ತಿಳಿಸಿದೆ.
ಎಟಿಎಂ ಕುರಿತಾಗಿ ಸುಳ್ಳು ಸುದ್ದಿ ಹರಡಿರುವ ಕಾರಣ ನಗದು ಹಿಂಪಡೆಯಲು ಬ್ಯಾಂಕ್‌ನಲ್ಲಿ ಗ್ರಾಹಕರ ಜನ ಸಂದಣಿ ಹೆಚ್ಚಾಗುವ ಸಾಧ್ಯತೆ ಇದೆ. ಇದು ಬ್ಯಾಂಕ್ ಕಾರ್ಯ ನಿವರ್ಹಣೆಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಇಂತಹ ಸಂದೇಶಗಳನ್ನು ನಂಬುವ ಮೊದಲು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.
ನಕಲಿ ಸುದ್ದಿಗಳದ್ದೇ ಕಾರುಬಾರು
ಪಾಕಿಸ್ತಾನ ಮತ್ತು ಪಾಕಿಸ್ತಾನ ಬೆಂಬಲಿಗರು ಈ ವೇಳೆ ನಕಲಿ ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯುರೋ (Press Information Bureau) ತಿಳಿಸಿದೆ. ನೇರವಾಗಿ ಯುದ್ಧ ಎದುರಿಸಲಾಗದೆ ಪಾಕ್ ಇಂತಹ ಕಳ್ಳಾಟ ನಡೆಸುತ್ತಿದೆ ಎಂದಿದೆ. ಒಂದೇ ದಿನ ಇಂತಹ 7-8 ನಕಲಿ ಸುದ್ದಿಗಳು ಹರಿದಾಡಿವೆ. ಇವುಗಳಲ್ಲಿ ಪಂಜಾಬಿನ ಜಲಂಧರನ್‌ನಲ್ಲಿ ಪಾಕಿಸ್ತಾನದ ಡ್ರೋನ್ ಹಾರಾಟ ನಡೆದಿದೆ ಎಂದು ಹೇಳುವ ವೈರಲ್ ವಿಡಿಯೊವೂ ಸೇರಿತ್ತು. ಬಳಿಕ ಇದು ನಕಲಿ ಸುದ್ದಿ ಎನ್ನುವುದು ಸಾಬೀತಾಗಿದೆ.
ಇನ್ನು ಗುಜರಾತ್‌ನ ಹಜೀರಾ ಬಂದರಿನ ಮೇಲೆ ದಾಳಿ ನಡೆದಿದೆ ಎನ್ನುವ ವಿಡಿಯೊವೊಂದನ್ನು ಹಂಚಿಕೊಳ್ಳಲಾಗಿದ್ದು ಇದು ಕೂಡ ನಕಲಿ ಸುದ್ದಿ ಎಂಬುದನ್ನು ಪಿಐಬಿ ಗುರುತಿಸಿದೆ. ಈ ವಿಡಿಯೊ ಬಂದರಿನಲ್ಲಿ ನಡೆದ ಯಾವುದೇ ಇತ್ತೀಚಿನ ಘಟನೆಗೆ ಸಂಬಂಧಿಸಿಲ್ಲ ಮತ್ತು ಈ ಘಟನೆ 2021ರ ಜುಲೈ 7ರಂದು ಸಂಭವಿಸಿದ್ದು. ಬಂದರಿನಲ್ಲಿ ತೈಲ ಟ್ಯಾಂಕರ್ ಸ್ಫೋಟಗೊಂಡಾಗ ಆಗಿರುವಂತದ್ದು ಎಂದು ಸ್ಪಷ್ಟಪಡಿಸಿದೆ.