Roopa Gururaj Column: ಸುಳ್ಳು ಸುಲಭವಾದರೂ, ಸತ್ಯದ ದಾರಿ ಗೌರವದ್ದು
ಸತ್ಯವನ್ನು ನುಡಿದ ಆ ಅಪರಾಧಿಯನ್ನು ಕಾರಾಗೃಹದಿಂದ ಮುಕ್ತನನ್ನಾಗಿ ಮಾಡಿ,ತನ್ನ ಅರಮನೆಯ ಉದ್ಯಾನವನದಲ್ಲಿ ಗಿಡಗಳಿಗೆ ನೀರು ಹಾಕುವ ಕೆಲಸವನ್ನು ಕೊಟ್ಟು ಅಲ್ಲೇ ಇರಿಸಿದ. ನಮ್ಮ ದೈನಂದಿನ ಬದುಕಿನಲ್ಲಿ ಬೆಳಗಿನ ರಾತ್ರಿಯವರೆಗೆ, ನಾನಾ ವಿಷಯಗಳಿಗೆ ನಾನಾ ಪರಿಸ್ಥಿತಿಗಳಲ್ಲಿ ಸಲೀಸಾಗಿ ಹೇಳು ವುದನ್ನು ಸುಳ್ಳು ರೂಢಿ ಮಾಡಿಕೊಂಡಿರುತ್ತೇವೆ.


ಒಂದೊಳ್ಳೆ ಮಾತು
rgururaj628@gmail.com
ಒಮ್ಮೆ ಒಬ್ಬ ರಾಜ ಸೆರೆಮನೆಯಲ್ಲಿರುವ ಕೈದಿಗಳನ್ನು ವೀಕ್ಷಿಸಲು ಕಾರಾಗೃಹಕ್ಕೆ ಬಂದ. ಅಲ್ಲಿರುವ ಒಬ್ಬ ಕೈದಿಯನ್ನು ಕಂಡು ನೀನು ಯಾವ ಅಪರಾಧ ಮಾಡಿರುವೆ? ಎಂದು ಪ್ರಶ್ನೆ ಮಾಡಿದ. ಆಗ ಕೈದಿ ಮಹಾಸ್ವಾಮಿ, ನಾನು ಯಾವ ಅಪರಾಧವನ್ನು ಮಾಡಿಲ್ಲ ಆದರೂ ನನ್ನನ್ನು ಇವರು ಸುಮ್ಮನೆ ದಂಡಿಸಿದ್ದಾರೆ ಎಂದ. ಇನ್ನೊಬ್ಬ ಕೈದಿಯನ್ನು ವಿಚಾರಿಸಿದ, ನೀನು ಯಾವ ಅಪರಾಧ ಮಾಡಿರುವೆ ಎಂದು. ಪ್ರಭೂ ನಾನು ಯಾವ ಅಪರಾಧವನ್ನೂ ಮಾಡಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಹೊರಿಸಿ ದಂಡನೆಗೆ ಗುರಿ ಮಾಡಿದ್ದಾರೆ ಎಂದ. ಹಾಗೆಯೇ ಇನ್ನೊಬ್ಬ ಕೈದಿಯನ್ನು ವಿಚಾರಿಸಿದ. ಅವನು ಪ್ರಭೂ, ನಾನು ಯಾವ ತಪ್ಪನ್ನು ಮಾಡಿಲ್ಲಾ, ಅಪರಾಧ ನಡೆದ ದಿನ, ನಾನು ಊರಿನಲ್ಲೇ ಇರಲಿಲ್ಲ , ಆದರೂ ನನ್ನ ಮೇಲೆ ಸುಳ್ಳು ಆಪಾದನೆ ಹೊರಿಸಿ ಕಾರಾಗೃಹಕ್ಕೆ ತಳ್ಳಿದ್ದಾರೆ, ಎಂದು ಉತ್ತರಿಸಿದ.
ಹೀಗೆ ರಾಜ ಎಲ್ಲಾ ಕೈದಿಗಳನ್ನು ವಿಚಾರಿಸುತ್ತಾ ಹೋದಾಗ ಎಲ್ಲರೂ ತಾವು ನಿರ್ದೋಷಿಗಳೆಂದು, ತಾವೇನೂ ತಪ್ಪೇ ಮಾಡಿಲ್ಲವೆಂದು ಹೇಳುತ್ತಿದ್ದರು. ಕೊನೆಯಲ್ಲಿ ಒಬ್ಬ ಕೈದಿಯನ್ನು ರಾಜ ವಿಚಾರಿಸಿದಾಗ ಅವನು ಮಾತ್ರ ಹೌದು ಪ್ರಭೂ, ನಾನು ನಿಜವಾಗಿಯೂ ಅಪರಾಧ ಮಾಡಿದೆ. ಒಮ್ಮೆ ನನಗೆ ಬಹಳ ಹಸಿವಾಯಿತು, ಎಲ್ಲೂ ಊಟ ಸಿಗಲಿಲ್ಲ.
ಇದನ್ನೂ ಓದಿ: Roopa Gururaj Column: ಸಾಧನೆ ಎಂದೂ ಅಹಂಕಾರ ಮೂಡಿಸಬಾರದು
ಆಹಾರ ಖರೀದಿಸಲು ನನ್ನ ಬಳಿ ಹಣವೂ ಇರಲಿಲ್ಲ, ಆದ್ದರಿಂದ ಒಂದು ಅಂಗಡಿಯಲ್ಲಿ ಹಣವನ್ನು ಕದ್ದು ಇನ್ನೇನು ಓಡಿ ಹೋಗಬೇಕೆನ್ನುವಷ್ಟರಲ್ಲಿ, ಸಿಕ್ಕಿಬಿದ್ದೆ. ನನಗೆ ಸರಿಯಾಗಿ ದಂಡನೆ ಆಯಿತು. ಎಂದು ಹೇಳಿದ. ಇದನ್ನು ಕೇಳಿ ರಾಜನಿಗೆ ಬಹಳ ಸಂತೋಷವಾಯಿತು. ಸದ್ಯ ಒಬ್ಬನಾದರೂ ಸತ್ಯವನ್ನು ನುಡಿದನಲ್ಲ ಎಂದು. ಆ ಕೈದಿಯ ಪ್ರಾಮಾಣಿಕತೆಗೆ ಬೆರಗಾಗಿ, ಈ ನಿರ್ದೋಷಿಗಳ ಮಧ್ಯದಲ್ಲಿ ನಿನ್ನಂತಹ ಅಪರಾಧಿ ಇರಕೂಡದು ಎಂದು ಹೇಳುತ್ತಾ, ನಿನ್ನನ್ನು ಈ ಕೂಡಲೇ ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗುವಂತೆ ಸೇವಕರಿಗೆ ಹೇಳುತ್ತೇನೆ ಎಂದ.
ಆನಂತರ ಸತ್ಯವನ್ನು ನುಡಿದ ಆ ಅಪರಾಧಿಯನ್ನು ಕಾರಾಗೃಹದಿಂದ ಮುಕ್ತನನ್ನಾಗಿ ಮಾಡಿ,ತನ್ನ ಅರಮನೆಯ ಉದ್ಯಾನವನದಲ್ಲಿ ಗಿಡಗಳಿಗೆ ನೀರು ಹಾಕುವ ಕೆಲಸವನ್ನು ಕೊಟ್ಟು ಅಲ್ಲೇ ಇರಿಸಿದ. ನಮ್ಮ ದೈನಂದಿನ ಬದುಕಿನಲ್ಲಿ ಬೆಳಗಿನ ರಾತ್ರಿಯವರೆಗೆ, ನಾನಾ ವಿಷಯಗಳಿಗೆ ನಾನಾ ಪರಿಸ್ಥಿತಿಗಳಲ್ಲಿ ಸಲೀಸಾಗಿ ಹೇಳುವುದನ್ನು ಸುಳ್ಳು ರೂಢಿ ಮಾಡಿಕೊಂಡಿರುತ್ತೇವೆ.
ಆಫೀಸಿಗೆ ಲೇಟಾಗಿ ಹೋದರೆ, ರಸ್ತೆಯಲ್ಲಿ ಯಾವುದು ಆಕ್ಸಿಡೆಂಟ್ ಆಗಿತ್ತು, ಅಥವಾ ಮತ್ಯಾವುದೋ ತುರ್ತು ಪರಿಸ್ಥಿತಿ ಎಂದು ಯೋಚಿಸದೇ ಹೇಳಿಬಿಡುತ್ತೇವೆ. ಯಾರಿಗೂ ಯಾವುದೇ ಸಮಯದಲ್ಲಿ ಕರೆ ಮಾಡುವುದು ಮರೆತು ಹೋದರೆ, ಪ್ರಾಮಾಣಿಕವಾಗಿ ಮರೆತೆ ಎಂದು ಹೇಳುವ ಬದಲು ಅದಕ್ಕೊಂದು ಕಥೆ ಕಟ್ಟುತ್ತೇನೆ.
ಮಕ್ಕಳ ಜೊತೆ ಮಾತನಾಡುವಾಗ ಕೂಡ ಚಿಕ್ಕ ಚಿಕ್ಕ ವಿಷಯಕ್ಕೂ ನಾವು ಹೇಳುವ ಸುಳ್ಳು ನಮಗೆ ಮರೆತುಹೋಗಿದ್ದರೂ ಕೂಡ ಮಕ್ಕಳಿಗೆ ಸಂಪೂರ್ಣವಾಗಿ ನೆನಪಿರುತ್ತದೆ. ಸುಳ್ಳು ಹೇಳಿದಾಗ ಪ್ರತಿ ಬಾರಿಯೂ ನಾವದನ್ನು ನೆನಪಿಸಿಕೊಂಡು ಅದಕ್ಕೆ ತಕ್ಕಂತೆ ಮುಂದೆ ಮಾತನಾಡುತ್ತಾ ಹೋಗ ಬೇಕಾಗುತ್ತದೆ. ಮತ್ತೆ ಮತ್ತೆ ಅದನ್ನು ನಿರೂಪಿಸಲಿಕ್ಕೆ, ಅದರ ಜೊತೆಗೆ ಮತ್ತೊಂದು ಮಗದೊಂದು ಸುಳ್ಳು ಸೇರಿಸುತ್ತಲೇ ಇರಬೇಕಾಗುತ್ತದೆ. ಈ ಗೊಂದಲದಲ್ಲಿ ನಾವು ಹೇಳಿದ ಸುಳ್ಳು ಖಂಡಿತ ಬಯಲಾಗಿರುತ್ತದೆ.
ಚಿಕ್ಕ ಪುಟ್ಟದಕ್ಕೂ, ಸುಳ್ಳು ಹೇಳುವ ವ್ಯಕ್ತಿಯನ್ನು ಯಾರು ಕೂಡ ಗಂಭೀರವಾಗಿ ಪರಿಗಣಿಸುವು ದಿಲ್ಲ. ನಾವು ಚಿಕ್ಕ ಸುಳ್ಳಿಗೆ ಸಿಕ್ಕಿ ಹಾಕಿಕೊಂಡಿದ್ದರು ಸಹ, ಅದು ನಮ್ಮ ವ್ಯಕ್ತಿತ್ವವನ್ನೇ ಎದುರು ಗಿರುವವರ ಮುಂದೆ ಬದಲಾಯಿಸಿಬಿಡುತ್ತದೆ. ಸಾಧ್ಯವಾದಷ್ಟೂ ನಿಜ ಹೇಳುವ ಪ್ರಯತ್ನ ಮಾಡುವುದರಿಂದ ನಮ್ಮ ಮಟ್ಟಿಗೆ ಸುಳ್ಳು ನಮ್ಮ ಜೀವನದಿಂದ ಕಡಿಮೆಯಾಗುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ ನಾವು ಯಾರ ಜೊತೆ ಒಡನಾಡುತ್ತೇವೋ ಅಲ್ಲಿ ಗೌರವ ಉಳಿಸಿಕೊಳ್ಳುತ್ತೇವೆ. ಸತ್ಯವನ್ನು ನುಡಿಯುವುದಕ್ಕೂ ಧೈರ್ಯ ಬೇಕು, ಸತ್ಯವನ್ನು ನುಡಿಯುವವರಿಗೆ ಯಾವು ದೇ ರೀತಿಯ ಅಂಜಿಕೆಯೂ ಇರುವುದಿಲ್ಲ. ಅಂತವರು ಎಲ್ಲೇ ಇರಲಿ ಧೈರ್ಯದಿಂದ ಖುಷಿಯಾಗಿಯೇ ಇರಬಹುದು.