Roopa Gururaj Column: ಸಾಧನೆ ಎಂದೂ ಅಹಂಕಾರ ಮೂಡಿಸಬಾರದು
ಚೈತನ್ಯರು, ‘ಏನಾಯಿತು ಗದಾಧರ? ಅದರ ರಚನೆ ಸರಿಯಾಗಿಲ್ಲವೇ? ಅದರಲ್ಲಿ ಏನಾದರೂ ತಪ್ಪಿ ದೆಯೇ?’ ಎಂದು ಕೇಳಿದರು. ಆಗ ಗದಾಧರ, ‘ಗೆಳೆಯ, ನ್ಯಾಯ ಶಾಸ್ತ್ರದಲ್ಲಿ ಇಂತದ್ದೊಂದು ಗ್ರಂಥ ಬರಬಹುದೆಂದು ನನಗೆ ಅನ್ನಿಸಿಯೇ ಇರಲಿಲ್ಲ. ಎಷ್ಟು ಚೆನ್ನಾಗಿದೆ ಎಂದರೆ ಅದನ್ನು ವರ್ಣಿಸಲು ನನ್ನ ಬಳಿ ಪದಗಳಿಲ್ಲ. ನಾನೂ ಕೂಡ ಒಂದು ನ್ಯಾಯಶಾಸ್ತ್ರದ ಗ್ರಂಥ ರಚನೆ ಮಾಡಿದ್ದೇನೆ, ಆದರೆ ಈ ಗ್ರಂಥ ವನ್ನು ನೋಡಿದ ಮೇಲೆ ಅದು, ಸೂರ್ಯನ ಮುಂದಿಟ್ಟ ಒಂದು ಮೇಣದ ಬತ್ತಿಗೆ ಸಮಾನ ವೆನಿಸುತ್ತದೆ.


ಒಂದೊಳ್ಳೆ ಮಾತು
ಮಹಾ ಪ್ರಭು ಚೈತನ್ಯರು ನಮ್ಮ ದೇಶ ಕಂಡಂತಹ ಮಹಾನ್ ಸಂತರು. ಒಂದು ದಿನ ಅವರು ನದಿ ಯನ್ನು ದಾಟಿ, ಪಕ್ಕದ ಊರಿಗೆ ಹೋಗಬೇಕಾಗಿತ್ತು. ನಾವೆಯನ್ನು ನಡೆಸುವ ಅಂಬಿಗ, ನಾವೆಯನ್ನು ದಡಕ್ಕೆ ತಂದಾಗ ಚೈತನ್ಯರು ಅದರಲ್ಲಿ ಹತ್ತಿ ಕುಳಿತರು. ಸ್ವಲ್ಪ ಸಮಯದಲ್ಲಿ ಆ ನಾವೆ ಭರ್ತಿಯಾಗಿ ಹೊರಟಿತು. ನಾವೆ ಚಲಿಸುತ್ತಿದ್ದಾಗ ಯಾರೋ ಚೈತನ್ಯರ ಹೆಗಲ ಮೇಲೆ ಕೈ ಇಟ್ಟಂತಾಯಿತು. ಅವರು ತಿರುಗಿ ನೋಡಿದರೆ, ಅವರ ಸ್ನೇಹಿತ ಗದಾಧರ ನಿಂತಿದ್ದರು. ಚೈತನ್ಯ ಹಾಗೂ ಗದಾಧರ ಬಾಲ್ಯ ಸ್ನೇಹಿತರು. ಈಗ ಎಷ್ಟೋ ವರ್ಷಗಳ ನಂತರ ಒಬ್ಬರನ್ನೊಬ್ಬರು ನೋಡುತ್ತಿರುವುದು. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು. ‘ಚೈತನ್ಯ, ನೀನು ಈಗ ಏನು ಮಾಡುತ್ತಿರುವೆ? ನಾವು ಗುರುಕುಲಕ್ಕೆ ಹೋಗುತ್ತಿದ್ದಾಗ ನೀನು ಎಲ್ಲರಿಗಿಂತ ಅತ್ಯಂತ ಬುದ್ಧಿವಂತನಾಗಿದ್ದಿ, ನ್ಯಾಯಶಾಸ್ತ್ರದ ಮೇಲೊಂದು ಗ್ರಂಥ ರಚನೆ ಮಾಡು ತ್ತೇನೆಂದು ಹೇಳುತ್ತಿದ್ದೆ, ಅದಕ್ಕೆ ನಮ್ಮ ಗುರುಗಳು ಕೂಡ ನಿನಗೆ ಆಶೀರ್ವಾದ ಮಾಡಿದ್ದರಲ್ಲವೇ? ಆ ಗ್ರಂಥ ಪೂರ್ಣ ವಾಯಿತೇ?’ ಎಂದು ಗದಾಧರ ಕೇಳಿದ.
ಇದನ್ನೂ ಓದಿ: Roopa Gururaj Column: ಭಕ್ತಿ ಒಂದೇ ಅಲ್ಲ ದೇವರಲ್ಲಿ ನಂಬಿಕೆಯೂ ಬೇಕು
ಆಗ ಚೈತನ್ಯರು ನಗುತ್ತಾ, ನನಗೆ ಅದೆಲ್ಲಾ ನೆನಪಿದೆ ಗದಾಧರ, ಗುರುಗಳ ಆಶೀರ್ವಾದದಿಂದ ಆ ಗ್ರಂಥವನ್ನು ರಚನೆ ಮಾಡುತ್ತಿದ್ದೇನೆ, ಅದು ಈಗ ಮುಗಿಯುವ ಹಂತದಲ್ಲಿದೆ’ ಎಂದರು. ‘ಆ ಗ್ರಂಥ ಈಗ ನಿನ್ನ ಬಳಿ ಇದೆಯೇ?’ ಎಂದು ಕೇಳಿದ ಗದಾಧರ. ‘ಹೌದು ಅದರ ಹಸ್ತಪ್ರತಿ ನನ್ನ ಬಳಿಯೇ ಇದೆ’ ಎಂದು ಚೈತನ್ಯರು, ತಮ್ಮ ಚೀಲದಿಂದ ಒಂದು ಪುಸ್ತಕವನ್ನು ಹೊರ ತೆಗೆದರು.
ಅದನ್ನೊಂದು ಸುಂದರವಾದ ರೇಷ್ಮೆಯ ಬಟ್ಟೆಯಲ್ಲಿ ಸುತ್ತಿ ಇಟ್ಟಿದ್ದರು, ಗದಾಧರನ ಕೈಗೆ ಕೊಟ್ಟರು. ಗದಾಧರ ಅದನ್ನು ಓದತೊಡಗಿದ, ಓದುತ್ತಿದ್ದಂತೆ ಸುತ್ತಲಿನ ಪ್ರಪಂಚವನ್ನೇ ಮರೆತ. ಹಸ್ತಪ್ರತಿಯ ಪುಟಗಳನ್ನು ತಿರುವಿ ಹಾಕುತ್ತಿದ್ದಂತೆ ಅವನ ಮುಖ ಬಹಳ ಗಂಭೀರವಾಯಿತು. ಸ್ವಲ್ಪ ಹೊತ್ತಿನಲ್ಲಿ ಅವನ ಕಣ್ಣುಗಳಿಂದ ನೀರು ಹರಿಯತೊಡಗಿತು. ಹಸ್ತ ಪ್ರತಿಯನ್ನು ಮುಚ್ಚಿಟ್ಟು ಕಣ್ಣು ಮುಚ್ಚಿ ಕುಳಿತ.
ಚೈತನ್ಯರು, ‘ಏನಾಯಿತು ಗದಾಧರ? ಅದರ ರಚನೆ ಸರಿಯಾಗಿಲ್ಲವೇ? ಅದರಲ್ಲಿ ಏನಾದರೂ ತಪ್ಪಿದೆಯೇ?’ ಎಂದು ಕೇಳಿದರು. ಆಗ ಗದಾಧರ, ‘ಗೆಳೆಯ, ನ್ಯಾಯ ಶಾಸ್ತ್ರದಲ್ಲಿ ಇಂಥದ್ದೊಂದು ಗ್ರಂಥ ಬರಬಹುದೆಂದು ನನಗೆ ಅನ್ನಿಸಿಯೇ ಇರಲಿಲ್ಲ. ಎಷ್ಟು ಚೆನ್ನಾಗಿದೆ ಎಂದರೆ ಅದನ್ನು ವರ್ಣಿಸಲು ನನ್ನ ಬಳಿ ಪದಗಳಿಲ್ಲ. ನಾನೂ ಕೂಡ ಒಂದು ನ್ಯಾಯಶಾಸ್ತ್ರದ ಗ್ರಂಥ ರಚನೆ ಮಾಡಿದ್ದೇನೆ, ಆದರೆ ಈ ಗ್ರಂಥವನ್ನು ನೋಡಿದ ಮೇಲೆ ಅದು, ಸೂರ್ಯನ ಮುಂದಿಟ್ಟ ಒಂದು ಮೇಣದ ಬತ್ತಿಗೆ ಸಮಾನವೆನಿಸುತ್ತದೆ.
ಸಮುದ್ರದ ಮುಂದಿರುವ ಒಂದು ಸಣ್ಣ ಹೊಂಡದಂತೆ ಕಾಣುತ್ತದೆ. ನಿನ್ನ ಗ್ರಂಥದ ಮುಂದೆ ನನ್ನ ಪ್ರಯತ್ನವೆಲ್ಲಾ,ನಿಷ್ಟ್ರಯೋಜಕವೆನಿಸಿತು. ಅದಕ್ಕೆ ನನಗೆ ದುಃಖ-ಸಂತೋಷ ಎರಡೂ ಒಟ್ಟಿಗೆ ಉಮ್ಮಳಿಸಿ ಬಂತು’ ಎಂದು ಹೇಳಿದ. ಆಗ ಚೈತನ್ಯರು ಒಂದು ಕ್ಷಣ ಯೋಚಿಸಿ, ಇದರಿಂದ ತನಗೆ ಅಹಂಕಾರ ಬರಬಹುದೆಂದುಕೊಂಡು, ತಕ್ಷಣ ತಮ್ಮ ಗ್ರಂಥವನ್ನು ತಮ್ಮ ಸ್ನೇಹಿತನ ಕೈಯಿಂದ ತೆಗೆದುಕೊಂಡು, ಅದರ ಸುತ್ತ ರೇಷ್ಮೆಯ ವಸ್ತ್ರವನ್ನು ಚೆನ್ನಾಗಿ ಬಿಗಿದು ಕಟ್ಟಿ ಅದನ್ನು ನದಿಯ ನೀರಿಗೆ ಎಸೆದೇ ಬಿಟ್ಟರು.
ಗದಾಧರ ಗಾಬರಿಯಿಂದ, ‘ಇದೇನು ಮಾಡುತ್ತಿರುವೆ ನೀನು?’ ಎಂದು ಕೇಳಿದ. ಆಗ ಚೈತನ್ಯರು, ‘ಈ ಗ್ರಂಥ ರಚನೆಯ ಅಹಂಕಾರ ನನಗೇಕೆ ಬೇಕು? ಜನರ ಮನ್ನಣೆಗಾಗಿಯೇ? ಹೊಗಳಿಕೆಗಾಗಿಯೇ, ನನಗೇಕೆ ಈ ಹುಚ್ಚುತನ? ತರ್ಕ, ನ್ಯಾಯ, ವಾದ ಇವೆಲ್ಲವೂ ಬುದ್ಧಿಯ, ಮೆದುಳಿನ ಕೆಲಸವಲ್ಲವೇ? ಇನ್ನು ಮುಂದೆ ನನಗೆ ಈ ಬುದ್ಧಿಗೆ ಸಂಬಂಧ ಪಟ್ಟ ವಿಷಯ ಬೇಡ, ಬರೀ ಹೃದಯ ಸಂಬಂಧಿ ವಿಷಯ ಮಾತ್ರ ಬೇಕು.
ಹೃದಯದಲ್ಲಿ ಭಕ್ತಿ ತುಂಬಲು ಮಾತ್ರ ಶಕ್ತಿ ಕೊಡು ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದರು. ನಮ್ಮ ಸಾಧನೆ ಎಂದಿಗೂ ಹೃದಯಗಳನ್ನು ಮುಟ್ಟಬೇಕೆ ಹೊರತು, ನಮ್ಮಲ್ಲಿ ಅಹಂಕಾರ ವನ್ನು ಮೂಡಿಸಬಾರದು. ಅದಕ್ಕೆ ಸಂತ ಚೈತನ್ಯರ ಜೀವನದ ಈ ಘಟನೆಯೇ ದೊಡ್ಡ ಉದಾಹರಣೆ.