Ranjith H Ashwath Column: ಬಹುಮತ ಬಂದಾಗಲೇ ಕೈನಲ್ಲಿ ಕೊಸರಾಟ
ಬಹುಮತದ ಕೊರತೆಯಿದ್ದಾಗ ಅಥವಾ ಬಹುಮತದ ಸರಕಾರಗಳನ್ನೂ ಉರುಳಿಸುವಾಗ, ಆಧುನಿಕ ‘ತಂತ್ರ’ ಎಂದೇ ಹೇಳಲಾಗುವ ‘ಆಪರೇಷನ್ ಕಮಲ’ವನ್ನು ಮೊದಲ ಬಾರಿಗೆ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದೇ ಕರ್ನಾಟಕ ದಲ್ಲಿ ಎನ್ನುವುದು ಬೇರೆ ಮಾತು. ಈ ರೀತಿಯ ಆಪರೇಷನ್ ಗಳು ಆರಂಭಗೊಂಡ ಬಳಿಕ, ಸ್ಥಿರ ಸರಕಾರ ಸ್ಥಾಪನೆಗೆ ಕೇವಲ ಸರಳ ಬಹುಮತ ಮಾತ್ರವಲ್ಲದೇ, ಭರ್ಜರಿ ಬಹುಮತದ ಅಗತ್ಯವಿದೆ ಎನ್ನುವ ಲೆಕ್ಕಾಚಾರಗಳು ಶುರುವಾದವು.

ಮುಖ್ಯ ವರದಿಗಾರ ಹಾಗೂ ಅಂಕಣಕಾರ ರಂಜಿತ್ ಎಚ್.ಅಶ್ವತ್ಥ

ಅಶ್ವತ್ಥಕಟ್ಟೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ಅತಂತ್ರ’ ಸರಕಾರ ರಚನೆಯಾಗುವುದು ಯಾವುದೋ ಒಂದು ಪಕ್ಷ ‘ಮ್ಯಾಜಿಕ್ ಸಂಖ್ಯೆ’ಯಷ್ಟು ಬಹುಮತವನ್ನು ಮುಟ್ಟದೇ ಇದ್ದಾಗ. ಈ ರೀತಿ ಸರಳ ಬಹುಮತ ಬಾರದಿದ್ದಾಗ ಅನಿವಾರ್ಯವಾಗಿ ಇತರೆ ಪಕ್ಷಗಳ ಸಹಾಯ ಅಥವಾ ಮೈತ್ರಿಯೊಂದಿಗೆ ಸರಕಾರ ರಚಿಸುವುದು ಸಾಮಾನ್ಯ. ಆದರೆ ಈ ರೀತಿ ಚುನಾವಣೋತ್ತರ ಮೈತ್ರಿಗಳು ಬಹುತೇಕ ಸಮಯದಲ್ಲಿ ‘ಅರ್ಧ’ಕ್ಕೆ ಬಿದ್ದಿ ರುವ ಅಥವಾ ಹತ್ತಾರು ಗೊಂದಲ ಗಳೊಂದಿಗೆ ನಡೆಯುವ ಹತ್ತಾರು ನಿದರ್ಶನಗಳಿವೆ. ಈ ಕಾರಣಕ್ಕೆ ಬಿಜೆಪಿಗರು ಆಧುನಿಕ ತಂತ್ರಗಾರಿಕೆಯ ಭಾಗವಾಗಿ ಮೈತ್ರಿಯ ಬದಲು ‘ಆಪರೇ ಷನ್’ ಮೂಲಕ, ಸಿಗದ ಬಹುಮತ ವನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಹಲವೆಡೆ ಮಾಡಿದ್ದಾರೆ.
ಬಹುಮತದ ಕೊರತೆಯಿದ್ದಾಗ ಅಥವಾ ಬಹುಮತದ ಸರಕಾರಗಳನ್ನೂ ಉರುಳಿಸುವಾಗ, ಆಧುನಿಕ ‘ತಂತ್ರ’ ಎಂದೇ ಹೇಳಲಾಗುವ ‘ಆಪರೇಷನ್ ಕಮಲ’ವನ್ನು ಮೊದಲ ಬಾರಿಗೆ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದೇ ಕರ್ನಾಟಕ ದಲ್ಲಿ ಎನ್ನುವುದು ಬೇರೆ ಮಾತು. ಈ ರೀತಿಯ ಆಪರೇಷನ್ ಗಳು ಆರಂಭಗೊಂಡ ಬಳಿಕ, ಸ್ಥಿರ ಸರಕಾರ ಸ್ಥಾಪನೆಗೆ ಕೇವಲ ಸರಳ ಬಹುಮತ ಮಾತ್ರವಲ್ಲದೇ, ಭರ್ಜರಿ ಬಹುಮತದ ಅಗತ್ಯವಿದೆ ಎನ್ನುವ ಲೆಕ್ಕಾಚಾರಗಳು ಶುರುವಾದವು.
ಇದನ್ನೂ ಓದಿ: Ranjith H Ashwath Column: ದಶಕದ ಬಳಿಕವೂ ಪಾಠ ಕಲಿಯದ ಕೈ ಪಡೆ
ಅಂದರೆ ಆಪರೇಷನ್ ಮಾಡಿದರೂ, ಬಹುಮತ ಕುಸಿಯದಷ್ಟು ಬಲ ಪಡೆಯಬೇಕು ಎನ್ನುವುದು. ಈ ರಾಜಕೀಯ ಪಲ್ಲಟಗಳನ್ನು ಗಮನಿಸಿಯೇ, ರಾಜ್ಯದ ಜನರು ‘ಯಾವುದೇ ಸರಕಾರವಿರಲಿ, ಸ್ಥಿರ ಸರಕಾರ ಬೇಕು’ ಎನ್ನುವ ಮನಸ್ಥಿತಿಗೆ ಬಂದಿದ್ದರು. ಈ ಎಲ್ಲದರ ಫಲವಾಗಿ 2024ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ‘ಐತಿಹಾಸಿಕ’ ಬಹುಮತ ದೊಂದಿಗೆ ಅಧಿಕಾರದ ಗದ್ದುಗೆಯನ್ನು ಏರಿತ್ತು.
ಹಾಗೆ ನೋಡಿದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ನೀಡಿದ್ದ ಗ್ಯಾರಂಟಿ ಯೋಜನೆಗಳೊಂದಿಗೆ, ಬಿಜೆಪಿ ಸರಕಾರದ ಭ್ರಷ್ಟಾಚಾರದ ವಿರುದ್ಧ ರಾಜ್ಯದ ಮತದಾರರಿದ್ದರೂ, 136 ಸೀಟುಗಳು ಕಾಂಗ್ರೆಸ್‌ಗೆ ಸಿಗಲಿದೆ ಎಂದು ಸ್ವತಃ ಕಾಂಗ್ರೆಸ್ಸಿಗರೂ ನಿರೀಕ್ಷೆ ಮಾಡಿರಲಿಲ್ಲ.
ಆದರೆ ಸ್ಥಿರ ಸರಕಾರದ ನಿರೀಕ್ಷೆಯಲ್ಲಿದ್ದ ರಾಜ್ಯದ ಮತದಾರರು ಕಾಂಗ್ರೆಸ್ ಪರ ಒಲವು ತೋರಿದ್ದರು. ಆದರೆ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆಯುವಷ್ಟರಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ ಬಣ ಬಡಿದಾಟವನ್ನು ನೋಡಿದ ಅನೇಕರಿಗೆ, ಈ ಪ್ರಮಾ ಣದ ಬಹುಮತ ಕೊಟ್ಟರೂ ಬಂಡಾಯಕ್ಕೆ ಕೊನೆಯಿಲ್ಲವೇ ಎಂದು ಅನಿಸಿದ್ದು ಸುಳ್ಳಲ್ಲ.
ಐದು ವರ್ಷದ ಸ್ಥಿರ ಸರಕಾರ ರಾಜ್ಯಕ್ಕೆ ಸಿಗಲಿ ಎನ್ನುವ ಕಾರಣಕ್ಕೆ ಜನರು ಕಾಂಗ್ರೆಸ್‌ಗೆ ಭಾರಿ ಬಹುಮತವನ್ನು ನೀಡಿದ್ದರು. ಆದರೆ ಈ ಪ್ರಮಾಣದಲ್ಲಿ ಬಹುಮತ ನೀಡಿದರೂ, ಅಧಿಕಾರ ಹಂಚಿಕೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ವಿವಿಧ ಕಾರಣಕ್ಕೆ ಕಳೆದ ಕೆಲ ತಿಂಗಳಿನಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಕಿತ್ತಾಟಕ್ಕೆ ಸ್ವತಃ ಪಕ್ಷದ ಕಾರ್ಯಕರ್ತರೇ ಬೇಸರ ವ್ಯಕ್ತಪಡಿಸಿದ್ದಾರೆ.
ಆದರೆ ರಾಜ್ಯ ಕಾಂಗ್ರೆಸ್‌ನ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ರೀತಿ ಸ್ಪಷ್ಟ ಬಹುಮತ ಬಂದಾಗಲೇ ಕಾಂಗ್ರೆಸ್‌ನಲ್ಲಿ ಅತಿಹೆಚ್ಚು ಗೊಂದಲಗಳು ಕಾಣಿಸಿಕೊಂಡಿವೆ ಎನ್ನುವುದು ಸ್ಪಷ್ಟ. ಹೌದು, ಸ್ವಾತಂತ್ರ್ಯಾ ನಂತರ ಕರ್ನಾಟಕವನ್ನು ಅತಿಹೆಚ್ಚು ವರ್ಷಗಳ ಕಾಲ ಆಳಿರುವ ಪಕ್ಷವೆಂದರೆ ಕಾಂಗ್ರೆಸ್. ಆದರೆ ಐದು ವರ್ಷದ ಅವಧಿಯನ್ನು ಪೂರ್ಣ ಪ್ರಮಾಣದಲ್ಲಿ ಮುಖ್ಯಮಂತ್ರಿಯಾಗಿ ಮುಗಿಸಿರುವುದು ಮಾತ್ರ ಕೆಲವೇ ಕೆಲವು ನಾಯಕರು ಎನ್ನುವುದು ಸತ್ಯ. ಅದರಲ್ಲಿಯೂ 1989ರ ವಿಧಾನಸಭಾ ಚುನಾವಣೆಯ ಬಳಿಕ ಅಧಿಕಾ ರಕ್ಕೆ ಬಂದ ಕಾಂಗ್ರೆಸ್ ಸರಕಾರದಲ್ಲಿ, ಐದು ವರ್ಷದ ಅವಧಿಯಲ್ಲಿ ವೀರೇಂದ್ರ ಪಾಟೀಲ್, ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿ ದ್ದರು.
ಇದಕ್ಕೂ ಮೊದಲು 1967ರಲ್ಲಿ ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಗಳಾಗಿ, ಬಳಿಕ ಒಂದು ವರ್ಷ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದ ಇತಿಹಾಸವಿದೆ. 1978ರಲ್ಲಿ ದೇವರಾಜ ಅರಸು ಹಾಗೂ ಗುಂಡೂರಾವ್ ಅವರು ಮುಖ್ಯಮಂತ್ರಿ ಸ್ಥಾನವನ್ನು ಹಂಚಿ ಕೊಂಡಿದ್ದರು. ಇದು ಕೇವಲ ಕಾಂಗ್ರೆಸ್ ನಲ್ಲಿ ಮಾತ್ರವಲ್ಲ, ರಾಜ್ಯದಲ್ಲಿ ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಎರಡು, ಮೂರು ಮುಖ್ಯಮಂತ್ರಿ ಗಳನ್ನು ಐದು ವರ್ಷದ ಅವಧಿ ಯಲ್ಲಿ ನೋಡಿರುವ ಅನೇಕ ನಿದರ್ಶನಗಳಿವೆ.
ಇನ್ನು ಅನೇಕ ಸನ್ನಿವೇಶದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯಾಗದಿದ್ದರೂ, ಬಂಡಾ ಯದ ಬಾವುಟವಂತೂ ಹಾರಿದ್ದ ಉದಾಹರಣೆಯಿದೆ. ಆದರೆ ಕರ್ನಾಟಕದಲ್ಲಿ ಐದು ವರ್ಷಕ್ಕೆ ಒಬ್ಬರೇ ಮುಖ್ಯಮಂತ್ರಿ ಎನ್ನುವ ಸ್ಥಿತಿ ಮರಳಿ ಸ್ಥಾಪಿತವಾಗಿದ್ದು ಎಸ್.ಎಂ. ಕೃಷ್ಣರ ಅವಧಿಯಲ್ಲಿ. ಕಾಂಗ್ರೆಸ್ ಹೈಕಮಾಂಡ್ ಜತೆ ಉತ್ತಮ ಒಡನಾಟ ಹೊಂದಿದ್ದ ಕೃಷ್ಣ ಅವರು 132 ಶಾಸಕರ ಬಲದೊಂದಿಗೆ ಐದು ವರ್ಷ ಅಧಿಕಾರ ನಡೆಸಿದ್ದರು. ಇದಾದ ಬಳಿಕ ಸಿದ್ದರಾಮಯ್ಯ ಅವರು 2013ರಿಂದ 2018ರವರೆಗೆ 122 ಶಾಸಕರ ಬಲದೊಂದಿಗೆ ಅಧಿಕಾರ ಪೂರ್ಣಗೊಳಿಸಿದ್ದರು. ಆದರೆ 2024ರಲ್ಲಿ ಈ ಎರಡು ಬಾರಿಗಿಂತ ಹೆಚ್ಚು ಸ್ಥಾನ ವನ್ನು ಪಡೆದಿದ್ದರೂ, ಪಕ್ಷದ ಆಂತರಿಕ ಸಮಸ್ಯೆಗೆ ಕೊನೆಯಿಲ್ಲವಾಗಿದೆ.
ಪಕ್ಷದ ಹೈಕಮಾಂಡ್‌ನ ಸ್ಪಷ್ಟ ಎಚ್ಚರಿಕೆಯ ನಡುವೆಯೂ, ಬಣ ಬಡಿದಾಟದ ಮಾತು ಗಳಿಗೆ ಮಾತ್ರ ಕೊನೆಯಿಲ್ಲವಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದಾಗಲೆಲ್ಲ ನಡೆದಿರುವ ಹೈಡ್ರಾಮಾಗಳು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಿದ ಸಮಯದಲ್ಲಿ ನಡೆದಿಲ್ಲ. ಸ್ವಾತಂತ್ರ್ಯ ಪಡೆದ ಬಳಿಕ ದೇಶವನ್ನು ಅತಿಹೆಚ್ಚು ವರ್ಷ ಮುನ್ನಡೆಸಿರುವ ಕಾಂಗ್ರೆಸ್‌ನಲ್ಲಿ ಹಲವು ಭಿನ್ನಾಭಿ ಪ್ರಾಯ, ಬಂಡಾಯ ಕಾಣಿಸಿಕೊಂಡು ಅನೇಕರು ಪಕ್ಷದಿಂದ ಹೊರನಡೆದಿರುವ ಘಟನೆಗಳು ನಡೆದಿದ್ದರೂ, ಆಡಳಿತ ಪಕ್ಷದಲ್ಲಿದ್ದುಕೊಂಡೇ ನಾಯಕರ ವಿರುದ್ಧ ಮಾತನಾಡಿರುವ ಘಟನೆಗಳು ತೀರಾ ಕಡಿಮೆ. ಈ ರೀತಿಯಾಗಲು ಕಾರಣವೂ ಸ್ಪಷ್ಟವಾಗಿದೆ.
ಅದೇನೆಂದರೆ, 1947ರಲ್ಲಿ ಸ್ವಾತಂತ್ರ್ಯದ ಬಳಿಕ ನೆಹರು ಅವರೇ ಮೊದಲ ಪ್ರಧಾನಿಯಾಗಿ ದ್ದರು. ಬಳಿಕ 16 ವರ್ಷ ನೆಹರು ಅವರೇ ಪ್ರಧಾನಿಯಾಗಿ ಮುಂದುವರಿದರು. ಅವರ ನಿಧನ ಬಳಿಕ ಲಾಲ್ ಬಹಾದುರ್ ಶಾಸ್ತ್ರಿ ಅವರು ಪ್ರಧಾನಿಯಾಗಿದ್ದರು. ಶಾಸ್ತ್ರಿ ನಿಧನದ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಇಂದಿರಾ ಗಾಂಧಿ, ಇಂದಿರಾ ಅವರ ಬಳಿಕ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದರು. ಗಾಂಧಿ ಕುಟುಂಬವನ್ನು ಎದುರುಹಾಕಿಕೊಂಡು ರಾಜಕೀಯ ಮಾಡುವ ಅಥವಾ ಕಾಂಗ್ರೆಸ್‌ನಲ್ಲಿ ಉಳಿದುಕೊಳ್ಳುವ ಶಕ್ತಿ ಕಾಂಗ್ರೆಸ್‌ನ ಯಾವ ನಾಯಕ ರಿಗೂ ಇಲ್ಲದ ಕಾರಣ, ಅಧಿಕಾರ ಹಂಚಿಕೆಯ ವಿವಾದ ಸೃಷ್ಟಿಯಾಗಲಿಲ್ಲ.
ರಾಜೀವ್ ಗಾಂಧಿ ಹತ್ಯೆ ಬಳಿಕ ಕಾಂಗ್ರೆಸ್ ಅಽಕಾರದಲ್ಲಿದ್ದಾಗ ಪಿ.ವಿ.ನರಸಿಂಹ ರಾವ್ ಒಂದು ಅವಧಿಗೆ ಪ್ರಧಾನಿಯಾಗಿದ್ದರು. ಆದರೆ ಅ ಸಮಯದಲ್ಲಿ ಕಾಂಗ್ರೆಸ್ ನಿಂದ ಹಾಗೂ ಸಕ್ರಿಯ ರಾಜಕೀಯದಿಂದ ಗಾಂಧಿ ಕುಟುಂಬ ಅಂತರ ಕಾಯ್ದುಕೊಂಡಿತ್ತು. ಆದರೂ ನರಸಿಂಹರಾಯರು ಸೋನಿಯಾ ಗಾಂಧಿ ಅವರೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿ ದ್ದರು. ಇದಾದ ಬಳಿಕ 2004ರಿಂದ 2014ರವರೆಗೆ ಅಧಿಕಾರದಲ್ಲಿದ್ದ ಮನಮೋಹನ್ ಸಿಂಗ್ ಅವರಿಗೆ ಗಾಂಧಿ ಕುಟುಂಬದ ‘ಕೃಪಾಕಟಾಕ್ಷ’ ಪೂರ್ಣ ಪ್ರಮಾಣದಲ್ಲಿದ್ದುದರಿಂದ ಮೈತ್ರಿ ಆಡಳಿತವಿದ್ದರೂ ಸಮಸ್ಯೆಯಾಗದ ರೀತಿಯಲ್ಲಿ 10 ವರ್ಷದ ಅಧಿಕಾರಾವಧಿ ಯನ್ನು ಅವರು ಪೂರ್ಣಗೊಳಿಸಿದ್ದರು.
ಹಾಗೆ ನೋಡಿದರೆ, ಕರ್ನಾಟಕದಲ್ಲಿನ ಪರಿಸ್ಥಿತಿಯು ಸಾಮಾನ್ಯ ರಾಜಕೀಯ ಸ್ಥಿತಿಗಿಂತ ಭಿನ್ನವಾಗಿರುವುದು ಸುಳ್ಳಲ್ಲ. ಒಂದೆಡೆ ಪ್ರತಿಪಕ್ಷ ಸ್ಥಾನದಲ್ಲಿದ್ದು, ಸಮಯದಲ್ಲಿ ಕೂಡಿ ಬಾಳೋಣ ಎನ್ನುವ ಮನಸ್ಥಿತಿಯಲ್ಲಿ ಎಲ್ಲ ಪಕ್ಷಗಳಿದ್ದರೆ, ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಗರು ಹಾದಿ- ಬೀದಿಯಲ್ಲಿ ಬಡಿದಾಡಿಕೊಳ್ಳುತ್ತಿದ್ದಾರೆ. ಪ್ರತಿಪಕ್ಷದವರಾಗಿದ್ದುಕೊಂಡು ಆಡಳಿತ ಪಕ್ಷದ ತಪ್ಪುಗಳನ್ನು ಎತ್ತಿಹಿಡಿಯುವುದಕ್ಕಿಂತ ಮಿಗಿಲಾಗಿ, ತಮ್ಮ ಪಕ್ಷದೊಳಗಿನ ಸಮಸ್ಯೆಗಳನ್ನು ಬಹಿರಂಗಗೊಳಿಸುವಲ್ಲಿಯೇ ನಿರತರಾಗಿದ್ದಾರೆ.
ಇನ್ನೊಂದೆಡೆ ಸ್ಪಷ್ಟ ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ನಾಯಕರು, ಸಿಕ್ಕಿರುವ ಐದು ವರ್ಷದಲ್ಲಿ ‘ಜನಮೆಚ್ಚುವ ಕಾರ್ಯಕ್ರಮ’ಗಳನ್ನು ನೀಡುವ ಬದಲು ‘ಆಗದ-ಹೋಗದ’ ವಿಷಯವನ್ನು ಮುಂದಿಟ್ಟುಕೊಂಡು ಹೋರಾಟ ಮಾಡುವ ಮೂಲಕ, ಜನರಲ್ಲಿ ಪ್ರತಿಪಕ್ಷ ಬಿಜೆಪಿ ಮೂಡಿಸದ ‘ಆಡಳಿತ ವಿರೋಧಿ’ ಅಲೆಯನ್ನು ಸ್ವತಃ ಸೃಷ್ಟಿಸುತ್ತಿದ್ದಾರೆ. ಕಾಂಗ್ರೆಸ್ ನಲ್ಲಾಗುತ್ತಿರುವ ಈ ಎಲ್ಲ ಬೆಳವಣಿಗೆಗಳು, ಗೊಂದಲಮಯ ಹೇಳಿಕೆಗಳಿಂದಾಗಿ ಪಕ್ಷದಲ್ಲಿ ಬದಲಾವಣೆಯಾಗುವುದಿಲ್ಲ ಎನ್ನುವ ಅರಿವಿದ್ದರೂ, ‘ಲೈಮ್ ಲೈಟ್’ನಲ್ಲಿರಬೇಕು ಎನ್ನುವ ಕಾರಣಕ್ಕೆ ಕೆಲ ನಾಯಕರು ನಿತ್ಯ ಮುಂಜಾನೆ ಹೇಳಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ.
ಇಂದಿನ ರಾಷ್ಟ್ರ ರಾಜಕಾರಣದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನು ಹೊರತುಪಡಿಸಿ ಇನ್ಯಾವುದೇ ರಾಜ್ಯಗಳಲ್ಲಿ ಹೇಳಿಕೊಳ್ಳುವ ಮಟ್ಟ ದಲ್ಲಿ ಶಕ್ತಿಶಾಲಿಯಾಗಿಲ್ಲ. ಕರ್ನಾಟಕ ರಾಜ್ಯವು ಸಂಪನ್ಮೂಲ ಭರಿತವಾಗಿರುವು ದಷ್ಟೇ ಅಲ್ಲದೆ, ರಾಜ್ಯ ಕಾಂಗ್ರೆಸ್‌ನಲ್ಲಿರುವ ನಾಯಕತ್ವವೂ ಎಲ್ಲ ರೀತಿಯಲ್ಲಿಯೂ ‘ಬಲ ಶಾಲಿ’ಯಾಗಿರುವುದು ಸ್ಪಷ್ಟ. ರಾಷ್ಟ್ರದ ಕಾಂಗ್ರೆಸ್ ಸಂಘಟನೆ ಯಲ್ಲಿನ ಈ ಸಮಸ್ಯೆಯ ಕಾರಣಕ್ಕಾಗಿಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಎಚ್ಚರಿಕೆಯನ್ನೂ ಮೀರಿ ರಾಜ್ಯ ನಾಯಕರು ಅಧಿಕಾರ ಹಂಚಿಕೆಯ ವಿಷಯದಲ್ಲಿ ತಮ್ಮ ತಮ್ಮ ವಾದವನ್ನು ಸ್ವಚ್ಛಂದವಾಗಿ ಮಂಡಿಸುತ್ತ ಓಡಾಡುತ್ತಿದ್ದಾರೆ. ಈ ರೀತಿಯ ವರ್ತನೆಯಿಂದ ರಾಜ್ಯದಲ್ಲಿ ಕಳೆದುಹೋಗಿದ್ದ ಕೆಲ ಭದ್ರಕೋಟೆಯನ್ನು ಮರಳಿ ಪಡೆಯುವ ನಿಟ್ಟಿನ ಪ್ರಯತ್ನಗಳು ವಿಫಲವಾಗುವ ಆತಂಕವಿದೆ.
ಆದರೆ ಆಡಳಿತ ಪಕ್ಷದಲ್ಲಿರುವ ಈ ಹುಳುಕನ್ನು ಬಳಸಿಕೊಂಡು ವಿರೋಧಿಸುವ ಬದಲು ತಮ್ಮ ಸಂಘಟನೆಯನ್ನು ತಾವೇ ಹಾಳುಮಾಡುವ ನಿಟ್ಟಿನಲ್ಲಿ ಬಿಜೆಪಿಗರು ಹೋರಾಡು ತ್ತಿರುವುದರಿಂದ ಸದ್ಯ ಕಾಂಗ್ರೆಸ್‌ನ ಈ ಗೊಂದಲದಿಂದ ಮತ್ತೊಬ್ಬರಿಗೆ ಲಾಭವಾಗಿಲ್ಲ. ಕಾಂಗ್ರೆಸ್ ನಾಯಕರು ಇನ್ನಾದರೂ ತಮ್ಮಲ್ಲಿರುವ ಗೊಂದಲವನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ ಅಥವಾ ಗೊಂದಲವು ಬಹಿರಂಗವಾಗಿ ಕಾಣಿಸಿಕೊಳ್ಳದಂತೆ ಕಸರತ್ತು ಮಾಡಬೇಕಿದೆ. ಇಲ್ಲದಿದ್ದರೆ, ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ, ಮತದಾರರೇ ಉತ್ತರ ಕೊಡಲಿದ್ದಾರೆ!