Vishweshwar Bhat Column: ಶಾಪವಾದ ದೀರ್ಘಾಯುಷ್ಯ
ಆತ ಕಳೆದ 16 ವರ್ಷಗಳಿಂದ ತನ್ನ ಮನೆಯಲ್ಲಿ ಒಂಟಿಯಾಗಿದ್ದ. ಆತನನ್ನು ನೋಡಲು ಯಾರೂ ಬರುತ್ತಿರಲಿಲ್ಲ. ನಗರ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸುವುದಾಗಿ ಸರಕಾರ ಹೇಳಿದರೂ ಆತ ತನ್ನ ಸ್ವಂತ ಮನೆಯಲ್ಲಿಯೇ ಜೀವಿಸುತ್ತಿದ್ದ. ಒಂದು ದಿನ ಆತ ತೀರಿಕೊಂಡ. ಆದರೆ ಅದು ಹೊರಜಗತ್ತಿಗೆ ಗೊತ್ತಾಗಲು 4 ತಿಂಗಳುಗಳೇ ಹಿಡಿದವು.


ಸಂಪಾದಕರ ಸದ್ಯಶೋಧನೆ
ನಾನು ಜಪಾನಿಗೆ ಹೋದಾಗ ಅಲ್ಲಿನ ಪ್ರತಿಷ್ಠಿತ ಪತ್ರಿಕೆ ‘ದಿ ಜಪಾನ್ ಟೈಮ್ಸ್’ನಲ್ಲಿ ಒಂದು ವರದಿ ಪ್ರಕಟವಾಗಿತ್ತು. Some 58,000 elderly people died alone at home this year ಎಂಬ ಶೀರ್ಷಿಕೆ ಯಡಿಯಲ್ಲಿ ಪ್ರಕಟವಾದ ಆ ಸುದ್ದಿಯಲ್ಲಿ ತಮ್ಮ ಮನೆಯಲ್ಲಿ ಒಂಟಿಯಾಗಿ ಮೃತಪಟ್ಟ 65 ಅಥವಾ ಹೆಚ್ಚು ವಯಸ್ಸಿನ ವ್ಯಕ್ತಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂಬ ಆಘಾತಕಾರಿ ಸಂಗತಿ ಬಹಿರಂಗವಾಗಿತ್ತು. ತಮ್ಮ ತಮ್ಮ ಮನೆಗಳಲ್ಲಿ ಏಕಾಂಗಿಯಾಗಿರುವ 58 ಸಾವಿರಕ್ಕೂ ಅಧಿಕ ವೃದ್ಧರು ಅಬ್ಬೇಪಾರಿಗಳಾಗಿ ಸತ್ತಿದ್ದಾರೆಂದು ಜಪಾನಿನ ರಾಷ್ಟ್ರೀಯ ಪೊಲೀಸ್ ಸಂಸ್ಥೆ ( National Police Agency) ಪ್ರಕಟಿಸಿತ್ತು. ಈ ಅಂಕಿ-ಅಂಶಗಳನ್ನು ವಾರ್ಷಿಕ ಆಧಾರದ ಮೇಲೆ ಬಿಡುಗಡೆ ಮಾಡಿರುವುದು ಇದೇ ಮೊದಲು. ಈ ಮಾಹಿತಿಯನ್ನು ಸರಕಾರ ಸಮಾಜದಿಂದ ಪ್ರತ್ಯೇಕವಾಗು ತ್ತಿರುವ ವ್ಯಕ್ತಿಗಳಿಗೆ ಬೆಂಬಲ ನೀಡುವ ಯೋಜನೆಗಳನ್ನು ರೂಪಿಸಲು ಉಪಯೋಗಿಸಲೆಂದು ಕಲೆ ಹಾಕಿತ್ತು. ಈ ಅಂಕಿ-ಅಂಶಗಳ ಪ್ರಕಾರ, 2024ರಲ್ಲಿ ರಾಷ್ಟ್ರವ್ಯಾಪಿಯಾಗಿ ಪೊಲೀಸ್ ಇಲಾಖೆ ನಿರ್ವಹಿಸಿದ ಒಟ್ಟು 2,04,184 ಸಾವು ಗಳಲ್ಲಿ (ಇದರಲ್ಲಿ ಆತ್ಮಹತ್ಯೆಗಳು ಕೂಡ ಸೇರಿವೆ), ಒಂಟಿಯಾಗಿ ಮನೆಗಳಲ್ಲಿ ಮೃತಪಟ್ಟವರು 76 ಸಾವಿರಕ್ಕೂ ಅಧಿಕ ಮಂದಿಯಿದ್ದರು.
ಅವರ ಪೈಕಿ ಸುಮಾರು ಶೇ.76 ಜನರು (ಅಂದರೆ ಸುಮಾರು 58 ಸಾವಿರ ಮಂದಿ) 65 ಅಥವಾ ಹೆಚ್ಚು ವಯಸ್ಸಿನವರಾಗಿದ್ದರು. ಒಂಟಿಯಾಗಿ ಸತ್ತವರಲ್ಲಿ 85 ವರ್ಷ ಅಥವಾ ಹೆಚ್ಚಿನ ವಯಸ್ಸಿನವರೇ ಅಽಕವಾಗಿದ್ದರು. ಸುಮಾರು ಶೇ.40ರಷ್ಟು ಪ್ರಕರಣಗಳಲ್ಲಿ ಮೃತರನ್ನು ಮರಣದ ದಿನವೇ ಅಥವಾ ಅದರ ಮರುದಿನ ಪತ್ತೆ ಹಚ್ಚಲಾಯಿತು.
ಇದನ್ನೂ ಓದಿ: Vishweshwar Bhat Column: ಅವರು ತಮ್ಮ ದೋಷವನ್ನು ಮೀರಿ ನಿಲ್ಲಲು ನಿತ್ಯ ಹೆಣಗುತ್ತಾರೆ !
ಅಂದಾಜು ಶೇ.70ರಷ್ಟು ಪ್ರಕರಣಗಳಲ್ಲಿ ಒಂದು ವಾರದೊಳಗೆ ಮೃತದೇಹಗಳನ್ನೂ ಪತ್ತೆ ಹಚ್ಚ ಲಾಯಿತು. ಗಂಭೀರವಾದ ಅಂಶವೆಂದರೆ, 6945 ಪ್ರಕರಣಗಳಲ್ಲಿ (ಅಂದರೆ ಸುಮಾರು ಶೇ.10ರಷ್ಟು) ಮೃತರನ್ನು ಒಂದು ತಿಂಗಳಿಗಿಂತ ಹೆಚ್ಚು ಕಾಲ ಯಾರೂ ಪತ್ತೆ ಹಚ್ಚಿರಲಿಲ್ಲ. 65ಕ್ಕಿಂತ ಕಡಿಮೆ ವಯಸ್ಸಿನವರು ಒಂಟಿಯಾಗಿ ಸತ್ತ ಸಂದರ್ಭಗಳಲ್ಲಿ, ಅವರ ಮೃತದೇಹ ಪತ್ತೆಯಾಗುವುದರಲ್ಲಿ ಹೆಚ್ಚು ವಿಳಂಬವಾಗುತ್ತದೆ.
ವೃದ್ಧರ ಸಂಬಂಧದಲ್ಲಿ ತಕ್ಷಣ ಗಮನ ಸೆಳೆಯುವ ಕುಟುಂಬ ಅಥವಾ ನೆರೆಹೊರೆಯವರು ಇದ್ದರೂ, ಇತರ ವಯೋಮಾನದವರಿಗೆ ಅದು ಇಲ್ಲದಿರುವ ಸಾಧ್ಯತೆ ಇದೆ. ಈ ಘಟನೆಗಳನ್ನು ನೋಡಿದಾಗ, ಜಪಾನಿನಲ್ಲಿ ಹೆಚ್ಚುತ್ತಿರುವ ‘ಒಂಟಿತನದ ಮರಣ’ (ಇದನ್ನು ಅವರು ಕೊಡೋಕುಶಿ ಎಂದು ಕರೆಯುತ್ತಾರೆ) ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇಡೀ ಜಪಾನಿನಲ್ಲಿ ಮಾನವೀಯ ತೆಗೆ ಸವಾಲಾಗಿರುವ ‘ಒಂಟಿತನದ ಮರಣ’ವನ್ನು ಹೇಗೆ ನಿಭಾಯಿಸುವುದು ಎಂಬುದು ಸರಕಾರಕ್ಕೆ ತಲೆನೋವಾಗಿದೆ.
ಇದು ಕೇವಲ ಆರೋಗ್ಯ ಸಮಸ್ಯೆಯೊಂದೇ ಆಗದೇ, ಮಾನವೀಯತೆ, ಬಾಂಧವ್ಯ ಮತ್ತು ಸಹಬಾಳ್ವೆ ಯ ಕುರಿತು ಗಂಭೀರ ಚಿಂತನೆಗೆ ಗ್ರಾಸವಾಗಿರುವ ಅಂಶವಾಗಿದೆ. ಈ ಸಮಸ್ಯೆ ಮುಂದಿನ ದಶಕಗಳಲ್ಲಿ ಮತ್ತಷ್ಟು ತೀವ್ರವಾಗಿ ಪರಿಣಮಿಸಲಿದೆ. ‘ಜಪಾನ್ ಟೈಮ್ಸ್’ ಪತ್ರಿಕೆಯಲ್ಲಿ ಬಾಕ್ಸ್ ಐಟಮ್ ಆಗಿ ಇನ್ನೊಂದು ಸಂಗತಿ ಪ್ರಕಟವಾಗಿತ್ತು- ಹಿಂದಿನ ವರ್ಷ ಕ್ಯೋಟೋ ನಗರದಿಂದ ಸುಮಾರು 36 ಕಿ.ಮೀ. ದೂರದ ಹಳ್ಳಿಯೊಂದರಲ್ಲಿ 98 ವರ್ಷದ ವೃದ್ಧನೊಬ್ಬ ಒಂಟಿಯಾಗಿ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ.
ಆತ ಕಳೆದ 16 ವರ್ಷಗಳಿಂದ ತನ್ನ ಮನೆಯಲ್ಲಿ ಒಂಟಿಯಾಗಿದ್ದ. ಆತನನ್ನು ನೋಡಲು ಯಾರೂ ಬರುತ್ತಿರಲಿಲ್ಲ. ನಗರ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸುವುದಾಗಿ ಸರಕಾರ ಹೇಳಿದರೂ ಆತ ತನ್ನ ಸ್ವಂತ ಮನೆಯಲ್ಲಿಯೇ ಜೀವಿಸುತ್ತಿದ್ದ. ಒಂದು ದಿನ ಆತ ತೀರಿಕೊಂಡ. ಆದರೆ ಅದು ಹೊರಜಗತ್ತಿಗೆ ಗೊತ್ತಾಗಲು 4 ತಿಂಗಳುಗಳೇ ಹಿಡಿದವು.
ತಮ್ಮ ಕುಟುಂಬ, ಸ್ನೇಹಿತರಿಂದ ದೂರವಾಗಿ ಅಥವಾ ಸಾಮಾಜಿಕ ಸಂಪರ್ಕ ಕಡಿದುಕೊಂಡು ತಮ್ಮ ಮನೆಗಳಲ್ಲಿ ಅನಾಥವಾಗಿ ಸತ್ತು ಹೋಗುವ ಸ್ಥಿತಿಯನ್ನು ಬಿಂಬಿಸುವ ಈ ‘ಒಂಟಿತನದ ಮರಣ’ಗಳು ಜಪಾನಿನ ಸಾಮಾಜಿಕ ವ್ಯವಸ್ಥೆಯ ಇನ್ನೊಂದು ಕರಾಳ ಮುಖವನ್ನು ಅನಾವರಣ ಗೊಳಿಸುತ್ತವೆ. ದೀರ್ಘಾಯುಷ್ಯವೂ ಅಲ್ಲಿನ ಜನರಿಗೆ ಶಾಪವಾಗಿ ಪರಿಣಮಿಸಿದೆ.