Vishweshwar Bhat Column: ಇವರ ಇಂಗ್ಲಿಷ್ ತುಟ್ಟಿಯೇ
ಜಪಾನಿಯರು ಇಂಗ್ಲಿಷ್ ಮಾತನಾಡುವಾಗ ತಪ್ಪಾಗಬಹುದೆಂಬ ಭಯದಿಂದಲೇ ಮಾತನಾಡುವುದು ತಪ್ಪಿಸುತ್ತಾರೆ. ದೋಷವಿಲ್ಲದೆ ಮಾತನಾಡುವುದನ್ನು ಮೊದಲ ಆದ್ಯತೆಯಾಗಿ ಪರಿಗಣಿಸುತ್ತಾರೆ. ಇದರಿಂದಾಗಿ ಭಾಷೆ ಕಲಿಯುವಲ್ಲಿ ನೈಜ ಸಂವಹನದ ಪ್ರಯತ್ನ ಕಡಿಮೆ ಯಾಗುತ್ತದೆ. ಜಪಾನಿನಲ್ಲಿ ಬೇರೆ ಭಾಷೆಯ ಬಳಕೆಯ ಅಗತ್ಯ ಕಡಿಮೆ


ಸಂಪಾದಕರ ಸದ್ಯಶೋಧನೆ
ಜಪಾನ್ ಜಗತ್ತಿನಲ್ಲಿ ಮುಂದುವರಿದ ಮತ್ತು ಅತ್ಯಂತ ಪ್ರಭಾವಿ ದೇಶ. ಆದರೆ ಇಂಗ್ಲಿಷ್ ಭಾಷೆಯ ವಿಷಯದಲ್ಲಿ ಜಪಾನಿಯರು ಹಿಂದುಳಿದವರು. ಜಪಾನಿಯರಿಗೆ ಇಂಗ್ಲಿಷ್ ಭಾಷೆಯೇನಾದರೂ ಕೈಹಿಡಿದಿದ್ದರೆ ಜಗತ್ತನ್ನೇ ಆಳಿ ಬಿಡುತ್ತಿದ್ದರು. ಆದರೆ ಅವರ ಇಂಗ್ಲಿಷ್ ಜ್ಞಾನ ಮಾತ್ರ ತುಸು ತುಟ್ಟಿ. ತಂತ್ರಜ್ಞಾನ, ಆರ್ಥಿಕತೆ ಮತ್ತು ಇನ್ನಿತರ ಎಲ್ಲ ರಂಗಗಳಲ್ಲಿಯೂ ಜಪಾನ್ ಪ್ರಗತಿಪಥದಲ್ಲಿದೆ. ಆದರೂ, ಜಪಾನಿಯರ ಇಂಗ್ಲಿಷ್ ಭಾಷಾ ಪ್ರಾವೀಣ್ಯದ ಮಟ್ಟ ಮಾತ್ರ ಸಮರ್ಪಕವಾಗಿ ಅಭಿವೃದ್ಧಿ ಯಾಗಿಲ್ಲ ಎನ್ನುವುದು ಸಾಕಷ್ಟು ಅಧ್ಯಯನಗಳಿಂದಲೂ ಸಾಬೀತಾಗಿದೆ. ಜಪಾನಿನ ಶಾಲಾ ಪಠ್ಯ ಕ್ರಮದಲ್ಲಿ ಇಂಗ್ಲಿಷ್ ಭಾಷೆಯನ್ನು ಪ್ರಾಥಮಿಕ ಹಂತದಿಂದಲೇ ಕಲಿಸಲಾಗುತ್ತದೆ.
ಸಾಮಾನ್ಯವಾಗಿ ವಿದ್ಯಾರ್ಥಿಗಳು ಕನಿಷ್ಠ 6 ವರ್ಷದಿಂದ 10 ವರ್ಷಗಳವರೆಗೆ ಇಂಗ್ಲಿಷ್ ಅಧ್ಯಯನ ಮಾಡುತ್ತಾರೆ. ಆದರೆ, ಈ ಪಾಠಗಳು ಹೆಚ್ಚಾಗಿ ವ್ಯಾಕರಣ, ಪದಸಂಪತ್ತು ಮತ್ತು ಪರೀಕ್ಷಾ ದೃಷ್ಟಿ ಕೋನದ ಮೇಲೆ ಕೇಂದ್ರೀಕೃತವಾಗಿರುತ್ತವೆ. ವಿದ್ಯಾರ್ಥಿಗಳು ಇಂಗ್ಲಿಷನ್ನು ಆಡುವ ಭಾಷೆಯಾಗಿ ಬಳಸುವ ಅವಕಾಶ ಬಹಳ ಕಡಿಮೆ. ಇಂಗ್ಲಿಷ್ ಪಾಠಶಾಲೆಗಳಲ್ಲಿಯೂ ಬಹುಮಟ್ಟಿಗೆ ಜಪಾನಿ ಭಾಷೆಯಲ್ಲಿಯೇ ಕಲಿಕೆ ಇರುತ್ತದೆ.
ಇದನ್ನೂ ಓದಿ: Vishweshwar Bhat Column: ಸಾರ್ವಜನಿಕ ಪ್ರಾಮಾಣಿಕತೆ
ಇಂಗ್ಲಿಷ್ ಕಲಿಕೆಯನ್ನು ನೈಜ ಸಂವಹನದ ಬಳಕೆಗಿಂತ ಹೆಚ್ಚಾಗಿ, ಪಾಸ್ ಆಗುವುದಕ್ಕಾಗಿ ಮಾತ್ರ ಉಪಯೋಗಿಸುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ನೈಜ ಭಾಷಾ ಪ್ರಾಯೋಗಿಕತೆಯ ಅಭಾವ ಎದ್ದು ಕಾಣುತ್ತದೆ. ಜಪಾನಿ ಭಾಷೆಗೂ, ಇಂಗ್ಲಿಷ್‌ಗೂ ಭಾರಿ ವ್ಯತ್ಯಾಸ. ಇಂಗ್ಲಿಷ್ ಪದಗಳನ್ನು ಉಚ್ಚರಿಸುವುದು ಜಪಾನಿಯರಿಗೆ ಕಷ್ಟ. ಉದಾಹರಣೆಗೆ, ‘ಎಲ್’ ಮತ್ತು ‘ಆರ್’ ಧ್ವನಿಗಳ ವ್ಯತ್ಯಾಸ, ಅಥವಾ ಥ, ಧ, - ಇತ್ಯಾದಿ ಧ್ವನಿಗಳು ಜಪಾನಿಯಲ್ಲಿ ಇಲ್ಲದ್ದರಿಂದ ಇಂಗ್ಲಿಷ್ ಮಾತನಾಡುವಾಗ ಸರಿಯಾದ ಉಚ್ಚಾರ ಆಗುವುದಿಲ್ಲ.
ಯಾರಾದರೂ ಯಾವುದೇ ಭಾಷೆಯನ್ನು ಓದಲು, ಬರೆಯಲು ಕಷ್ಟಪಟ್ಟರೆ ಅವರು ಆ ಭಾಷೆ ಯನ್ನು ಒಲಿಸಿಕೊಳ್ಳುವ ಯತ್ನವನ್ನು ಕಡಿಮೆ ಮಾಡುವುದು ಸಹಜ. ಏಕೆಂದರೆ ತಪ್ಪು ಉಚ್ಚಾರ ದಿಂದ ಇತರರು ಹಾಸ್ಯ ಮಾಡಬಹುದು ಎಂಬ ಭಯ. ಜಪಾನಿಯರ ಸಂಸ್ಕೃತಿಯಲ್ಲಿ ವಿನಯ, ಶಿಸ್ತು ಮತ್ತು ತಪ್ಪುಮಾಡದ ಚಿಂತನೆ ಪ್ರಮುಖ ಪಾತ್ರವಹಿಸುತ್ತವೆ.
ಈ ದೃಷ್ಟಿಯಿಂದ, ಜಪಾನಿಯರು ಇಂಗ್ಲಿಷ್ ಮಾತನಾಡುವಾಗ ತಪ್ಪಾಗಬಹುದೆಂಬ ಭಯದಿಂದಲೇ ಮಾತನಾಡುವುದು ತಪ್ಪಿಸುತ್ತಾರೆ. ದೋಷವಿಲ್ಲದೆ ಮಾತನಾಡುವುದನ್ನು ಮೊದಲ ಆದ್ಯತೆಯಾಗಿ ಪರಿಗಣಿಸುತ್ತಾರೆ. ಇದರಿಂದಾಗಿ ಭಾಷೆ ಕಲಿಯುವಲ್ಲಿ ನೈಜ ಸಂವಹನದ ಪ್ರಯತ್ನ ಕಡಿಮೆ ಯಾಗುತ್ತದೆ. ಜಪಾನಿನಲ್ಲಿ ಬೇರೆ ಭಾಷೆಯ ಬಳಕೆಯ ಅಗತ್ಯ ಕಡಿಮೆ.
ಬಹುತೇಕರು ಜಪಾನಿ ಭಾಷೆಯಲ್ಲಿಯೇ ತಮ್ಮ ಎಲ್ಲ ದೈನಂದಿನ ಚಟುವಟಿಕೆಗಳನ್ನು ನಡೆಸ ಬಲ್ಲರು. ಹೀಗಾಗಿ ಇಂಗ್ಲಿಷ್ ಬಳಸುವ ಸಂದರ್ಭಗಳು ವಿರಳ. ಇದು ಭಾಷಾ ನೈಪುಣ್ಯ ಹೆಚ್ಚಿಸಲು ದೊಡ್ಡ ಹಿನ್ನಡೆ. ಜಪಾನ್ ಸದಾ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ದೇಶ. ಗೂಗಲ್ ಅನುವಾದ, ಮಶೀನ್ ಲರ್ನಿಂಗ್, ಎಐ ಸಾಧನಗಳು ಹಾಗೂ ಇಂಗ್ಲಿಷ್ ರಹಿತ ಪ್ಲಾಟ್ ಫಾ-ರ್ಮ್‌ಗಳು ಹೆಚ್ಚು ಉಪಯೋಗವಾಗುತ್ತಿವೆ. ಈ ತಂತ್ರಜ್ಞಾನಗಳ ಮೇಲೆ ಹೆಚ್ಚಾದ ಅವಲಂಬನೆ ಭಾಷೆಯ ನೈಜ ಶಿಕ್ಷಣಕ್ಕೆ ಅಡ್ಡಿಯಾಗಬಹುದು.
‘ನಾನು ಮಾತಾಡಬೇಕಾಗಿಲ್ಲ, ಅನುವಾದಿಸುವ ಸಾಧನ ಇದೆ’ ಎಂಬ ಮನೋಭಾವನೆ ಕೆಲವೊಮ್ಮೆ ಭಾಷಾ ಕಲಿಕೆಗೆ ತೊಡಕಾಗಬಹುದು. ಇಂಗ್ಲಿಷ್ ಕೌಶಲ ಸೂಚ್ಯಂಕ ಪ್ರಕಾರ, ಜಪಾನ್ ಇಂಗ್ಲಿಷ್ ಪ್ರಾವೀಣ್ಯ ಕ್ರಮಾಂಕದಲ್ಲಿ ಮಧ್ಯಮ ಅಥವಾ ಕೆಳ ಮಟ್ಟದಲ್ಲಿದೆ. 2023ರ ವರದಿಯ ಪ್ರಕಾರ, ಜಪಾನ್ 87 ದೇಶಗಳ ಪೈಕಿ, 80ನೇ ಸ್ಥಾನದಲ್ಲಿತ್ತು. ಹೋಲಿಕೆಗೆ ದಕ್ಷಿಣ ಕೊರಿಯಾ, ಸಿಂಗಾಪುರ್ ಅಥವಾ ಹಾಂಗ್‌ಕಾಂಗ್ ಮುಂತಾದ ದೇಶಗಳು ಅತ್ಯುತ್ತಮ ಮಟ್ಟದಲ್ಲಿವೆ.
ಇತ್ತೀಚಿನ ವರ್ಷಗಳಲ್ಲಿ ಜಪಾನ್ ಸರಕಾರ ಶಿಕ್ಷಣ ತಂತ್ರವನ್ನು ಪರಿಷ್ಕರಿಸಲು ಪ್ರಯತ್ನಿಸುತ್ತಿದೆ. English Education Reform ಹೆಸರಿನ ಯೋಜನೆಯ ಮೂಲಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹೆಚ್ಚು ಸಂವಹನಾಧಾರಿತ ಇಂಗ್ಲಿಷ್ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದೆ. JET Programme (Japan Exchange and Teaching) ಎಂಬ ಯೋಜನೆಯ ಮೂಲಕ ಇಂಗ್ಲಿಷ್ ಶಿಕ್ಷಕರನ್ನು ಬಾಹ್ಯ ರಾಷ್ಟ್ರಗಳಿಂದ ಕರೆಸಿ, ಸ್ಥಳೀಯ ಶಾಲೆಗಳಲ್ಲಿ ಇಂಗ್ಲಿಷ್ ಬೋಧನೆಗೆ ನೇಮಕ ಮಾಡುತ್ತಿದೆ.
ಇದು ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿ ಮಾತುಕತೆ, ಸಂಸ್ಕೃತಿ ಪರಿಚಯ ಮತ್ತು ಸಾಂಸ್ಕೃತಿಕ ವಿನಿಮಯದ ಅವಕಾಶಗಳನ್ನು ಒದಗಿಸುತ್ತಿದೆ. ಹಾಗೆಯೇ, ಯುವ ಪೀಳಿಗೆ ನೆಟ್‌ಫ್ಲಿಕ್ಸ್, ಯುಟ್ಯೂಬ್ ಇನ್ಸ್ಟಾ ಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳ ವೇದಿಕೆಗಳಿಂದಾಗಿ ಇಂಗ್ಲಿಷ್ ಬಳಕೆಯಲ್ಲಿ ಹೆಚ್ಚು ತೊಡಗಿಕೊಳ್ಳುತ್ತಿರುವುದು ಕಂಡುಬರುತ್ತಿದೆ.